– ಡಾ.‌ ಅಜಕ್ಕಳ ಗಿರೀಶ ಭಟ್, ಚಿಂತಕರು, ಲೇಖಕರು

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೇ? ಎಂಬ ಅಪ್ರಸ್ತುತ ಪ್ರಶ್ನೆ…

ಸ್ವಾತಂತ್ರ್ಯ ಹೋರಾಟ- ಹಾಗೆಂದರೇನು?

ನಾರಾಯಣ ಶೇವಿರೆ ಮತ್ತು ಎಂ.ಎನ್. ರವೀಂದ್ರ ಅವರು ಬರೆದಿರುವ ‘ಭಾರತೀಯ ಸ್ವಾತಂತ್ರ್ಯ ಸಂಗ್ರಾಮ’ ಎನ್ನುವ ಪುಸ್ತಕ ಇತ್ತೀಚೆಗೆ ಸಿಕ್ಕಿತು. (ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ, ೨೦೨೩). ಪುಸ್ತಕದ ಶೀರ್ಷಿಕೆಯಷ್ಟೇ ಇರುತ್ತಿದ್ದರೆ ನಾನು ಇದನ್ನು ಆದ್ಯತೆಯಲ್ಲಿ ಓದುತ್ತಿದ್ದೆನೋ ಇಲ್ಲವೋ ಹೇಳಲಾರೆ. ಆದರೆ ಪುಸ್ತಕದ ಉಪಶೀರ್ಷಿಕೆ ‘ತಾತ್ತ್ವಿಕ ಭೂಮಿಕೆ; ಸಂಘರ್ಷದ ವಾರಸಿಕೆ’ ನನ್ನ ಗಮನವನ್ನು ಸೆಳೆಯಿತು. ಪುಸ್ತಕವನ್ನು ತಕ್ಷಣವೇ ಓದುವಂತೆ ಮಾಡಿತು. ೧೧೬ ಪುಟಗಳ ಈ ಸಣ್ಣ ಪುಸ್ತಕ ಸ್ವಾತಂತ್ರ್ಯ, ಸ್ವತ್ವ ಮುಂತಾದ ಪರಿಕಲ್ಪನೆಗಳ ಬಗ್ಗೆ ನಮ್ಮಲ್ಲಿ ಸ್ಪಷ್ಟತೆಯನ್ನು ತರುತ್ತದೆ. ಸ್ವಾತಂತ್ರ್ಯಕ್ಕಾಗಿ ನಡೆದ ಸಂಘರ್ಷದ ವಿವಿಧ ನೆಲೆಗಳ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತದೆ.

ಪುಸ್ತಕದ ಮೊದಲ ಭಾಗದಲ್ಲಿ ಸ್ವಾತಂತ್ರ್ಯದ ತಾತ್ತ್ವಿಕ ಭೂಮಿಕೆಯ ಬಗ್ಗೆ ಶೇವಿರೆಯವರ ಬರಹವಿದ್ದರೆ, ಎರಡನೆಯ ಭಾಗದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಸಂಘರ್ಷದ ವಾರಸಿಕೆಯ ಬಗ್ಗೆ ಎಂ. ಎನ್. ರವೀಂದ್ರ ಅವರು ಬರೆದ ಬರಹವಿದೆ. ಮೊದಲ ಭಾಗದಲ್ಲಿ ಹೇಳಿದುದು ನಮಗೆ ಸ್ಪಷ್ಟವಾದರೆ ಎರಡನೆಯ ಭಾಗದಲ್ಲಿ ಹೇಳಲಾದ ಅಂಶಗಳು, ಅಂದರೆ ಯಾರೆಲ್ಲ ಅಂತಹ ಸ್ವತ್ವಕ್ಕಾಗಿ ಸಂಘರ್ಷ ನಡೆಸಿದರು ಎನ್ನುವುದನ್ನು ಗುರುತಿಸುವುದು ಸುಲಭ. ಈ ಪುಸ್ತಕದ ಓದಿನ ಹಿನ್ನೆಲೆಯಲ್ಲಿ ರೂಪುಗೊಂಡ ನನ್ನ ಚಿಂತನೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

‘ಸ್ವಾತಂತ್ರ್ಯ ಹೋರಾಟಗಾರ’ ಎನ್ನುವುದು ಅಕರ್ಷಕ ಪದಪುಂಜ. ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತವ್ಯಾಪಿ ಜಾಗೃತಿ ಉಂಟಾದ ಬಳಿಕ ಅಂದರೆ ನಿಜವಾದ ಅರ್ಥದಲ್ಲಿ ದೇಶವ್ಯಾಪಿಯಾದ ‘ರಾಜಕೀಯ ರಾಷ್ಟ್ರೀಯ ಭಾವನೆ’ಯು ಹುಟ್ಟಿದ ನಂತರದ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯುವುದರ ಬಗ್ಗೆ ಯಾವ ಗೊಂದಲವೂ ಈ ವರ್ತಮಾನ ಕಾಲದಲ್ಲಿ ಇಲ್ಲ.

ರಾಜಕೀಯ ಅಥವಾ ಆಡಳಿತಕ್ಕೆ ಸಂಬಂಧಿಸಿದ ‘ರಾಷ್ಟ್ರೀಯ ಭಾವನೆ’ ಎಂದೆ. ಅದಕ್ಕೆ ಕಾರಣವಿದೆ. ಭಾರತದಲ್ಲಿ ‘ಭಾರತಸಾಮಾನ್ಯ’ವಾದ ‘ರಾಷ್ಟ್ರ’ದ ಕಲ್ಪನೆ ಪ್ರಾಚೀನ ಕಾಲದಿಂದಲೇ ಇತ್ತು. ಅದು ಪಶ್ಚಿಮದ ಸಂಕುಚಿತ ಅರ್ಥದ ‘ನೇಶನ್’ ಎಂಬ ಕಲ್ಪನೆ ಅಲ್ಲ. ಇಂದಿಗೂ ಭಾರತದಲ್ಲಿ ‘ರಾಷ್ಟ್ರೀಯವಾದ’ ಎಂಬುದನ್ನು ‘ನೇಶನಲಿಸಂ’ ಎಂದು ಕರೆಯುವುದು ಸರಿಯಲ್ಲ. ಯಾಕೆಂದರೆ ಭಾರತದ ರಾಷ್ಟ್ರ ಕಲ್ಪನೆಯು ಏಕಸಂಸ್ಕೃತಿಯ ಕಲ್ಪನೆಯದಲ್ಲ. ಅದು ಬಹುಸಂಸ್ಕೃತಿಗಳುಳ್ಳ ಸಾಂಸ್ಕೃತಿಕ ರಾಷ್ಟ್ರದ ಕಲ್ಪನೆ. ಅದು ಬೇರೆಯದೇ ಚರ್ಚೆ. ಇಲ್ಲೀಗ ಮುಂದುವರಿಸುವುದು ಬೇಡ.

ಭಾರತ ಸಾಮಾನ್ಯವಾದ ರಾಜಕೀಯ ಪ್ರಜ್ಞೆ ಅಥವಾ ಆಳುವವರ ನೀತಿಗಳು ಸಮುದಾಯಗಳ ಸ್ವತ್ವ ಅಥವಾ ಸ್ವಾತಂತ್ರ್ಯದ ಮೇಲೆ ಉಂಟುಮಾಡಿದ ಪರಿಣಾಮದ ಬಗೆಗಿನ ಜಾಗೃತಿ ಮತ್ತು ಅದರ ವಿರುದ್ಧ ಹೋರಾಡಬೇಕು ಎನ್ನುವ ಮನೋಭಾವ ಉಂಟಾದ ನಂತರದ್ದನ್ನು ನಾವು ಭಾರತವ್ಯಾಪ್ತಿಯ ‘ರಾಜಕೀಯ ರಾಷ್ಟ್ರೀಯ ಭಾವನೆ’ ಎನ್ನಬಹುದು. ಈ ಭಾರತ ಸಾಮಾನ್ಯವಾದ ‘ರಾಜಕೀಯ ರಾಷ್ಟ್ರೀಯ ಭಾವನೆ’ ಹುಟ್ಟಬೇಕಾದರೆ ಅದರ ಮೂಲದಲ್ಲಿ ಇದ್ದುದು ಭಾರತಸಾಮಾನ್ಯವಾದ ಒಂದು ‘ಸಾಂಸ್ಕೃತಿಕ ರಾಷ್ಟ್ರೀಯ ಭಾವನೆ’ಯೇ.

ಒಟ್ಟಿನಲ್ಲಿ, ‘ಆಳುವವರ ಕಾರಣದಿಂದಾಗಿ ನಾವು ನಮ್ಮ ಸ್ವತ್ವವನ್ನು ಕಳೆದುಕೊಂಡಿದ್ದೇವೆ; ರಾಜ್ಯವನ್ನು ಆಳುವವರ ನೀತಿಗಳ ಕಾರಣದಿಂದಾಗಿ ನಮ್ಮ ಜೀವನಪದ್ಧತಿಗಳನ್ನು, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರಿವಿನೊಂದಿಗೆ ನಮ್ಮತನವನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ನಡೆದ ಹೋರಾಟದ ಹಿಂದೆ ‘ರಾಜಕೀಯ- ಸಾಂಸ್ಕೃತಿಕ ರಾಷ್ಟ್ರೀಯ ಭಾವನೆ’ ಇತ್ತು.

ಸ್ವಾತಂತ್ರ್ಯವನ್ನು ಹೀಗೆ ಅರ್ಥೈಸಿದಾಗ ಬ್ರಿಟಿಷರ ವಿರುದ್ಧ ನಡೆದ ಹೋರಾಟವನ್ನು ಸ್ಥೂಲವಾಗಿ ನಾಲ್ಕು ನೆಲೆಗಳಲ್ಲಿ ಗುರುತಿಸಲು ಸಾಧ್ಯವಿದೆ. ಒಂದು: ರಾಜ ರಾಣಿಯರು ತಮ್ಮ ರಾಜ್ಯಗಳನ್ನು ಅಥವಾ ಅಡಳಿತವನ್ನು ಉಳಿಸಿಕೊಳ್ಳಲು ಅಥವಾ ವಿಸ್ತರಿಸಿಕೊಳ್ಳಲು ಬ್ರಿಟಿಷರ ವಿರುದ್ಧ ತಮ್ಮ ಸೈನ್ಯದೊಂದಿಗೆ ನಡೆಸಿದ ಹೋರಾಟ. ಇದು ಅಖಿಲ ಭಾರತ ವ್ಯಾಪ್ತಿಯದಲ್ಲ. ಸ್ಥಳೀಯವಾದುದು. ಸಾಮಾನ್ಯ ಜನರ ಪಾಲುಗೊಳ್ಳುವಿಕೆ ಇಲ್ಲ. ಎರಡು: ಬ್ರಿಟಿಷರ ನೀತಿಯು ತಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದುಕೊಂಡು ೧೮೫೭ರಲ್ಲಿ ಸೈನಿಕರು ನಡೆಸಿದಂತಹ ಹೋರಾಟ. ಇದೂ ಕೂಡ ಇಡೀ ಭಾರತಕ್ಕೆ ಸಂಬಂಧಿಸಿದ್ದಲ್ಲ. ಸಾಮಾನ್ಯ ಜನರದ್ದೂ ಅಲ್ಲ. ಮೂರು: ೧೮೩೭ರ ಸುಳ್ಯದ ಹೋರಾಟದಂತಹದು. ಇದು ಬ್ರಿಟಿಷರ ನೀತಿಯ ವಿರುದ್ಧ ಸಾಮಾನ್ಯ ಜನರನ್ನು ಒಳಗೊಂಡ ಹೋರಾಟವೇ ಆದರೂ ಸ್ಥಳೀಯವಾದುದು. (ಸ್ವಸಂಸ್ಕೃತಿ ಅಥವಾ ಸ್ವತ್ವದ ಕಲ್ಪನೆಗಿಂತಲೂ ಭೂಕಂದಾಯ ಇತ್ಯಾದಿ ಆಡಳಿತ ಸಂಬಂಧಿ ವಿಚಾರಗಳು ಇದರಲ್ಲಿ ಮುಖ್ಯ ಪಾತ್ರ ವಹಿಸಿರಬೇಕು). ನಾಲ್ಕು: ಜೀವನದ ಎಲ್ಲ ಅಂಶಗಳ ಮೇಲೂ ಆಳುವವರ ನೀತಿಗಳ ಪರಿಣಾಮ ಉಂಟಾಗುವುದು; ಹೊಸ ಕಂದಾಯನೀತಿ ಇತ್ಯಾದಿ ಅಡಳಿತಸಂಬಂಧೀ ಸಂಗತಿಗಳು ಮಾತ್ರ ಅಲ್ಲದೆ ಆಳಿಸಿಕೊಳ್ಳುವವರ ಸಂಸ್ಕೃತಿಯ ಸ್ವತ್ವದ ನಾಶವನ್ನೂ ಆಳುವವರು ಪ್ರಜ್ಞಾಪೂರ್ವಕವಾಗಿ ಮಾಡುವುದು; ಈ ಬಗ್ಗೆ ಉಂಟಾದ ಜಾಗೃತಿಯ ಕಾರಣದಿಂದಾಗಿ ಆಗುವ ಹೋರಾಟ.

ಮೇಲೆ ಹೇಳಿದಂತಹ ಭಾರತವ್ಯಾಪಿ ‘ರಾಜಕೀಯ ರಾಷ್ಟ್ರೀಯ ಭಾವನೆ’ಯು ಹುಟ್ಟುವ ಮೊದಲು ಯುರೋಪಿಯನ್ನರ ವಿರುದ್ಧ ಹೋರಾಡಿದ ರಾಜ-ರಾಣಿಯರನ್ನು ಕೂಡ ದೇಶದ ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು’ ಎಂದು ಕರೆಯುವುದು ಕೂಡ ಇದೆ. ಇದರಲ್ಲಿ ನಮ್ಮ ನಮ್ಮ ಇಷ್ಟಾನಿಷ್ಟದ ಪ್ರಶ್ನೆಯೂ ಇರುತ್ತದೆಯೆನ್ನಿ.

ದೇಶೀಯ ರಾಜ/ ರಾಣಿಯರು ತಮ್ಮ ಆಡಳಿತವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದುದನ್ನೂ ಸ್ವಾತಂತ್ರ್ಯ ಹೋರಾಟ ಎಂದು ಕರೆಯುವುದು ತಾಂತ್ರಿಕವಾಗಿ ತಪ್ಪಲ್ಲ. ಗಣತಂತ್ರ ಮೊದಲಾದ ಪದಗಳಲ್ಲಿ ಇರುವಂತೆ, ತಂತ್ರ ಎಂದರೆ ಆಡಳಿತ, ರೂಲ್ ಎಂಬರ್ಥ ಸಂಸ್ಕೃತದಲ್ಲಿದೆ. ಈ ಅರ್ಥದಲ್ಲಿ ಅಂದಿನ ರಾಜರೆಲ್ಲ ತಮ್ಮ ‘ಸ್ವಂತ’ ‘ತಂತ್ರ’ವನ್ನು ಉಳಿಸಿಕೊಳ್ಳಲು ಹೋರಾಡಿದ್ದು ನಿಜ. ಆದರೆ ಮೇಲೆ ಹೇಳಿದ ನಾಲ್ಕನೇ ನಮೂನೆಯ ಹೋರಾಟದ ಹಿಂದೆ ಒಂದು ವಿಶೇಷವಾದ ‘ಸ್ವ’ ಪ್ರಜ್ಞೆ ಇದೆ. ಅದು ಸಂಸ್ಕೃತಿಯ ಕುರಿತಾದ ಪ್ರಜ್ಞೆ ಕೂಡ ಹೌದು.

೧೮೫೭ರ ಸಂಗ್ರಾಮವನ್ನು ಸ್ವಾತಂತ್ರ ಸಂಗ್ರಾಮವೆಂದು ಮೊದಲ ಬಾರಿಗೆ ಸಾವರ್ಕರರು ಕರೆದುದು ಸರಿಯೇ ಇದೆ. ಆ ಸಂಗ್ರಾಮಕ್ಕೆ ಕಾರಣ ಸೀಮಿತವಾದುದಾದರೂ ಆ ಹೋರಾಟದ ಒಟ್ಟಾರೆ ಪರಿಣಾಮ ಮಹತ್ತ್ವದ್ದೇ. ಅದರ ನಂತರವಷ್ಟೇ ಮೇಲೆ ಹೇಳಿದ ನಾಲ್ಕನೇ ನಮೂನೆಯ, ಬಹುಮಟ್ಟಿಗೆ ಭಾರತವ್ಯಾಪಿಯಾದ ಹೋರಾಟವನ್ನು ನಾವು ಕಾಣುತ್ತೇವೆ. ಭಾರತೀಯರ ಸ್ವತ್ವದ ಅರಿವು ಮೂಡಿಸಿದ ತಿಲಕ್, ವಿವೇಕಾನಂದರಂಥವರ ಕೊಡುಗೆಯೂ ಇಲ್ಲಿ ಗಮನಾರ್ಹ.

ಭಾರತೀಯ ಪರಂಪರೆಯ ಬಗ್ಗೆ ಅಭಿಮಾನದಿಂದ ಮಾತನಾಡುವವರು “ಭಾರತೀಯರು ಬೇರೆಯವರ ಮೇಲೆ ಆಕ್ರಮಣ ಮಾಡಿದುದಿಲ್ಲ” ಎಂದು ಹೇಳುವುದಿದೆ. ಅದೇ ಹೊತ್ತಿಗೆ, ಹೀಗೆ ಅಭಿಮಾನ ಪಡುವುದನ್ನು ಆಕ್ಷೇಪಿಸುವವರು ಭಾರತದ ರಾಜರುಗಳು ಒಬ್ಬರ ಮೇಲೆ ಒಬ್ಬರು ಯುದ್ಧ ಸಾರಿದ್ದಿಲ್ಲವೇ? ದಿಗ್ವಿಜಯ ಮಾಡಿಲ್ಲವೆ?” ಎಂದೆಲ್ಲ ಪ್ರಶ್ನಿಸುವುದೂ ಇದೆ. ಆಕ್ರಮಣ ಮಾಡಿಲ್ಲ ಎನ್ನುವಾಗ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಏನು? ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡು ಅಲ್ಲಿಯ ಸ್ಥಳೀಯ ಅರಸರಿಂದಲೋ ಸಾಮಂತರಿಂದಲೋ ಕಪ್ಪಕಾಣಿಕೆ ಪಡೆಯುವುದು ಬೇರೆ; ಅಲ್ಲಿಯ ಪ್ರಜೆಗಳ ಸಂಸ್ಕೃತಿಯ ಸ್ವತ್ವವನ್ನು ನಾಶ ಮಾಡುವುದು ಬೇರೆ. ಭಾರತೀಯ ಪುರಾಣಗಳಲ್ಲಾಗಲೀ ಇತಿಹಾಸದಲ್ಲಾಗಲೀ ಯಾವ ಗೆದ್ದ ರಾಜರೂ ಆ ಬಗೆಯಲ್ಲಿ ಸ್ಥಳೀಯರ ಸ್ವತ್ವವನ್ನು ನಾಶ ಮಾಡುವುದನ್ನು ಆಡಳಿತ ನೀತಿಯ ಭಾಗವಾಗಿ ಮಾಡಿಕೊಂಡದ್ದು ಇಲ್ಲ.

ಹಿಂದಿನ ಶಕ, ಹೂಣ, ಗ್ರೀಕ್ ಮೊದಲಾದವರ ದಾಳಿಗಿಂತ ಭಿನ್ನವಾಗಿದ್ದ ಇಸ್ಲಾಮಿಕ್ ದಾಳಿ ಮತ್ತು ಐರೋಪ್ಯರ ದಾಳಿಯು ಕೇವಲ ರಾಜ್ಯಾಧಿಕಾರ ಹಿಡಿಯುವ ರಾಜಕೀಯ ಉದ್ದೇಶದಲ್ಲಿ ಮುಕ್ತಾಯವಾಗಲಿಲ್ಲ. ಇಲ್ಲಿಯ ಸಂಸ್ಕೃತಿಯನ್ನು, ಶ್ರದ್ಧೆಯನ್ನು, ಸ್ವತ್ವವನ್ನು ಧ್ವಂಸ ಮಾಡುವುದು ಕೂಡ ಕ್ರಮೇಣ ಆಡಳಿತ ನೀತಿಯ ಭಾಗವಾಯಿತು. ಶೇವಿರೆಯವರು ಸರಿಯಾಗಿಯೇ ಗುರುತಿಸುವಂತೆ, ಅವರ ಕೈಯಲ್ಲಿ ಕುರಾನ್, ಬೈಬಲ್‌ಗಳೂ ಇದ್ದವು. ತಮ್ಮ ರಿಲಿಜನ್ನಿಗೆ ಸೇರದವರನ್ನು (ಸತ್ಯವಿಶ್ವ್ವಾಸಿಗಳಲ್ಲದವರನ್ನು) ಉದ್ಧಾರ ಮಾಡುವ ಸ್ವಪೇರಿತ ಹೊರೆಯೂ ಅವರ ಹೆಗಲ ಮೇಲೆ ಇತ್ತು.

ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೇ ಎಂಬ ವ್ಯರ್ಥ ಚರ್ಚೆಯನ್ನು ಕೆಲವರು ಮಾಡುವುದಿದೆ. ಆತ ಬ್ರಿಟಿಷರ ವಿರುದ್ಧ ಹೋರಾಡಿದ್ದಂತೂ ಸತ್ಯ. ಈಗಾಗಲೇ ನೀಡಿದ ವಿವರಗಳ ಹಿನ್ನೆಲೆಯಲ್ಲಿ ಆ ಹೋರಾಟವನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಆದರೆ ಮುಖ್ಯ ಪ್ರಶ್ನೆ ಅದಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಇತರ ದೇಶೀಯ ರಾಜ/ರಾಣಿಯರಿಗೂ ಟಿಪ್ಪುವಿಗೂ ಇರುವ ವ್ಯತ್ಯಾಸ ಏನು ಎನ್ನುವುದು. ತನ್ನ ಪ್ರಜೆಗಳ ಸಂಸ್ಕೃತಿಯನ್ನು ಅಥವಾ ಸ್ವತ್ವವನ್ನು ನಾಶ ಮಾಡುವುದನ್ನು, ಬಲಾತ್ಕಾರವಾಗಿ ಮತಾಂತರ ಮಾಡುವುದನ್ನು ಆಡಳಿತ ನೀತಿಯ ಭಾಗವಾಗಿ ಮಾಡಿಕೊಂಡವನು ಟಿಪ್ಪು. ಇದಕ್ಕೆ ಬೇಕಾದಷ್ಟು ನಂಬಲರ್ಹ ದಾಖಲೆಗಳಿವೆ. ಇದುವೇ ಇತರ ರಾಜರಿಗೂ ಟಿಪ್ಪುವಿಗೂ ಇರುವ ವ್ಯತ್ಯಾಸ. ಅವನು ದೇವಾಲಯಗಳಿಗೆ ಮತ್ತು ಮಠಗಳಿಗೆ ನೀಡಿದ ದತ್ತಿ ಇತ್ಯಾದಿ ಯಾವುದೂ ಈ ಸತ್ಯವನ್ನು ತೊಡೆದು ಹಾಕಲಾರದು. ಯಾಕೆಂದರೆ ಟಿಪ್ಪುವಿನ ಹೆಗಲ ಮೇಲೆಯೂ ಇತರರನ್ನು ಉದ್ಧರಿಸುವ ಆ ಸ್ವಪೇರಿತ ಹೊರೆ ಇತ್ತು.

ಮತಾಂತರ ಮಾಡುವುದನ್ನು ಆಡಳಿತ ನೀತಿಯ ಭಾಗವಾಗಿ ಮಾಡಿಕೊಂಡ ನಂತರ, ಆಡಳಿತದಲ್ಲಿ ಕೆಲವು ಹಿಂದೂ ನೌಕರರನ್ನು ಇಟ್ಟುಕೊಂಡು, ದೇವಾಲಯಗಳಿಗೆ ಉಂಬಳಿ, ದತ್ತಿ ಕೊಟ್ಟ ಕೂಡಲೇ ಟಿಪ್ಪು ಸುಲ್ತಾನ ನಮ್ಮ ಎಡಪಂಥೀಯ ಇತಿಹಾಸಕಾರರಿಗೆ ಕೋಮುಸೌಹಾರ್ದದ ಆದರ್ಶಪುರುಷನಂತೆ ಕಾಣುತ್ತಾನೆ. ಆದರೆ, ಅದೇ ಎಡಪಂಥೀಯರಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮುಸ್ಲಿಮರ ಅಥವಾ ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಆಡಳಿತ ನೀತಿಯ ಭಾಗವಾಗಿ ಯಾವ ರೀತಿಯಲ್ಲೂ ಮಾಡಿಕೊಳ್ಳದ ಮತ್ತು ಅಲ್ಪಸಂಖ್ಯಾತರ ಖಾತೆ, ವಕ್ಫ್ ಖಾತೆ, ಹಜ್ ಸಬ್ಸಿಡಿ ಇತ್ಯಾದಿ ಮೂಲಕ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಕೊಡುವಂತೆ ಅಡಳಿತ ನಡೆಸುವ ರಾಜಕೀಯ ನಾಯಕರು ಕೂಡ ಕೋಮುವಾದಿಗಳಾಗಿ ಮತ್ತು ಫ್ಯಾಸಿಸ್ಟುಗಳಾಗಿಯೇ ಕಾಣುತ್ತಾರೆ!

Leave a Reply

Your email address will not be published.

This site uses Akismet to reduce spam. Learn how your comment data is processed.