ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ABGP – ಕರ್ನಾಟಕ ಪ್ರಾಂತ ಬೈಠಕ್ ನಲ್ಲಿ ಅಭಿಮತ
ಬೆಂಗಳೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕರ್ನಾಟಕ ಪ್ರಾಂತ ಬೈಠಕ್ ಜುಲೈ 16, 2023 ರಂದು ಬೆಂಗಳೂರು ಮಹಾನಗರದ ಯಾದವ ಸ್ಮೃತಿ ಯಲ್ಲಿ ನಡೆಯಿತು. ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ರಾಷ್ಟ್ರೀಯ ಸಂಘಟನಾ ಮಂತ್ರಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ದಿನಕರ್ ಸಬ್ನಿಸ್ ಅವರು ಪ್ರಾಂತ ಬೈಠಕ್ ನಲ್ಲಿ ಭಾಗವಹಿಸಿದ್ದರು.
ಮೊದಲನೆಯ ಅವಧಿಯಲ್ಲಿ ಗ್ರಾಹಕ ಪಂಚಾಯತ್ ನಲ್ಲಿ ಮಹಿಳೆಯರ ಸಹಭಾಗಿತ್ವದ ಅವಶ್ಯಕತೆಯನ್ನು ಚರ್ಚಿಸಲಾಯಿತು. ಬೈಠಕ್ನಲ್ಲಿ ಗ್ರಾಹಕರಲ್ಲಿ ಜಾಗೃತಿಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತಾ, ಗ್ರಾಹಕಳಾಗಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲಾಯಿತು. ನೊಂದ ಶೋಷಿತ ಮಹಿಳೆಯರು ಗ್ರಾಹಕರಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಿಳಾ ಕಾರ್ಯಕರ್ತರು ಸಮಾಜದ ಮಹಿಳೆಯರ ನಡುವೆ ಸೇವೆ ಸಲ್ಲಿಸಬೇಕಾಗಿದೆ. ಮಹಿಳೆಯರು ಮನೆಯ ಆರ್ಥಿಕ ಸ್ಥಿತಿಗತಿ ನಿಭಾಯಿಸುವುದರಲ್ಲಿ ಸಮರ್ಥರು. ಆದರೂ ವ್ಯಾಪಾರಿಶಾಹಿಗಳ ಮೋಸಕ್ಕೆ ಅರಿವಿಲ್ಲದೆ ಬೀಳುವಂತ ಪರಿಸ್ಥಿತಿ ಇದೆ. ಅದಕ್ಕಾಗಿ ಅವರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಗ್ರಾಹಕ ಪಂಚಾಯಿತಿನ ಮಹಿಳಾ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಮಹಿಳಾ ಕಾರ್ಯಕರ್ತರು ಪ್ರಶಿಕ್ಷಣವನ್ನು ಪಡೆದು ಮಹಿಳಾ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾಂತ, ಜಿಲ್ಲಾ ಹಾಗೂ ತಾಲೂಕು ಹೋಬಳಿಗಳಲ್ಲಿ ನಡೆಸಬೇಕು. ಅಲ್ಲದೆ ಮಹಿಳೆಯರು ಮಕ್ಕಳಲ್ಲಿ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣದ ಜೊತೆಗೆ ಗ್ರಾಹಕ ಜಾಗೃತಿಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿಯನ್ನು ಹೊತ್ತು ವಿದ್ಯಾರ್ಥಿ ವೇದಿಕೆಗಳನ್ನು ತೆರೆಯಬೇಕಾಗಿ ಕರೆ ನೀಡಿದರು.
ಎರಡನೆಯ ಅವಧಿಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಗೆ ಬರುವ ಸಪ್ಟೆಂಬರ್ ಗೆ 50 ವರ್ಷಗಳು ತುಂಬಲಿದ್ದು, ಅಲ್ಲಿಂದ ಒಂದು ವರ್ಷವನ್ನು ಸ್ವರ್ಣ ಜಯಂತಿ ವರ್ಷವನ್ನಾಗಿ ಆಚರಿಸುತ್ತೇವೆ. ಅದಕ್ಕಾಗಿ ಕರ್ನಾಟಕ ಪ್ರಾಂತದ ಎಲ್ಲಾ ಜಿಲ್ಲೆಗಳಲ್ಲೂ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ಘಟಕಗಳು, ಶಾಖೆಗಳು ಇದ್ದು ಅದರ ಚಟುವಟಿಕೆಗಳ ಮೂಲಕ ಕಾರ್ಯ ವಿಸ್ತಾರವನ್ನು ಮಾಡಲು ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಾಗಿ ಕೇಳಿಕೊಂಡರು. ಗ್ರಾಹಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಕ್ತವಾದ ಮಾರ್ಗದರ್ಶನವನ್ನು ಪಡೆಯಲು ಕಾರ್ಯಕರ್ತರು ಗ್ರಾಹಕ ಮಾರ್ಗದರ್ಶನ ಸೇವಾ ಕೇಂದ್ರಗಳನ್ನು ತೆರೆಯಬೇಕಾಗಿ ಕರೆ ನೀಡಿದರು.
ಮೂರನೆಯ ಅವಧಿಯಲ್ಲಿ ಗ್ರಾಹಕ ಪಂಚಾಯತ್ ಸ್ವರ್ಣ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 9 ರಂದು ನಡೆಯಲಿದ್ದು ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಉದ್ಘಾಟಿಸಲಿದ್ದಾರೆ. ಅದರ ನೇರ ಪ್ರಸಾರವನ್ನು ಪಂಚಾಯತಿನ ಎಲ್ಲಾ ಘಟಕದ ಸ್ಥಳಗಳಲ್ಲಿ ಆಗಲಿದ್ದು ಸ್ವರ್ಣ ಜಯಂತಿ ಉತ್ಸವವನ್ನು ಎಬಿಜಿಪಿ ಘಟಕಗಳಲ್ಲಿ ಸಿಹಿ ಹಂಚುವುದರ ಜೊತೆಗೆ ಆಚರಿಸಬೇಕಾಗಿ ತಿಳಿಸಿದರು. ಕಳೆದ 50 ವರ್ಷಗಳಿಂದ ಗ್ರಾಹಕ ಪಂಚಾಯತ್ ಎಲೆಮರೆಯಕಾಯಿಯಂತೆ ಶೋಷಣೆ ಮುಕ್ತ ಸಮಾಜಕ್ಕಾಗಿ ರಾಷ್ಟ್ರೀಯ ಸಂಘಟನೆಯಾಗಿ ಸೇವೆ ಸಲ್ಲಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಚಾರ ಪ್ರಸಾರದ ಅವಶ್ಯಕತೆಯೂ ಇದೆ. ಹಲವಾರು ಕಾರ್ಯಗಳನ್ನು ಸಮರ್ಥವಾಗಿ ಸಮಾಜದಲ್ಲಿ ನಿಭಾಯಿಸಿದರೂ, ಕರ್ನಾಟಕದಲ್ಲಿ ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಪ್ರಸಿದ್ಧಿಗೆ ಬರಲಾಗಿಲ್ಲ. ಆದರೆ ಇನ್ನು ಮುಂದೆ ಗ್ರಾಹಕ ಜಾಗೃತಿ ಯನ್ನು ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳನ್ನು ಸಮರ್ಥವಾಗಿ ಉಪಯೋಗಿಸಿ ಹೆಚ್ಚು ಗ್ರಾಹಕರನ್ನು ತಲುಪಿ, ನಮ್ಮ ಗ್ರಾಹಕ ಆಂದೋಲನವನ್ನು ಜನಾಂದೋಲನವನ್ನಾಗಿ ಮಾಡಬೇಕೆಂದು ನುಡಿದರು.
ಸಭೆಯಲ್ಲಿ ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್ ನ ನೂತನ ಪ್ರಾಂತ ಅಧ್ಯಕ್ಷ ನರಸಿಂಹ ನಕ್ಷತ್ರಿ ಅವರನ್ನು ಸನ್ಮಾನಿಸಿ ಅಭಿನಂದನೆಗಳನ್ನು ತಿಳಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹ ನಕ್ಷತ್ರಿ ಅವರು ಗ್ರಾಹಕ ಪಂಚಾಯತ್ ನ ಕರ್ನಾಟಕ ಪ್ರಾಂತದ ಕಾರ್ಯಕರ್ತರೆಲ್ಲರೂ ಜೊತೆಗೂಡಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತಾ ಬರುವ ಸ್ವರ್ಣ ಜಯಂತಿ ವರ್ಷದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ತಲುಪಲು ಪ್ರಯತ್ನಿಸಿ ಹಾಗೂ ನಮ್ಮ ಗ್ರಾಹಕ ಆಂದೋಲನವನ್ನು ಜನಾಂದೋಲನವನ್ನಾಗಿ ಮಾಡುವಲ್ಲಿ ಕಾರ್ಯನಿರತರಾಗೋಣ ಎಂದರು.
ಸಭೆಯಲ್ಲಿ ನರಸಿಂಹ ನಕ್ಷತ್ರಿ ಅವರ ಅಧ್ಯಕ್ಷತೆಯಲ್ಲಿ ಪ್ರಾಂತ ಕಾರ್ಯಕಾರಿಣಿಯನ್ನು ರಚಿಸಲಾಯಿತು. ಪ್ರಾಂತ ಕಾರ್ಯದರ್ಶಿಯಾಗಿ ಗಾಯತ್ರಿ ನಾಡಿಗ್, ಕೋಶಾಧ್ಯಕ್ಷರಾಗಿ ಶ್ರೀಲಕ್ಷ್ಮಿ, ಸಹ ಸಂಘಟನಾ ಮಂತ್ರಿಯಾಗಿ ರಂಗನಗೌಡ ದಂಡನ್ನವರ್, ಮಹಿಳಾ ಪ್ರಮುಖ್ ಆಗಿ ಸುಭದ್ರ, ಪ್ರಾಂತ ಲೀಗಲ್ ಅಡ್ವೈಸರ್ಗಳಾಗಿ ಹೈಕೋರ್ಟ್ ಲಾಯರ್ ಮಹಾಬಲೇಶ್ವರ ಮತ್ತು ಅಡ್ವಕೇಟ್ ವಿಜಯಲಕ್ಷ್ಮಿ ಪಾಸೋಡಿಯವರು ಹಾಗೂ ಮತ್ತಿತರಿಗೆ ಜವಾಬ್ದಾರಿಗಳನ್ನು ನಿಯುಕ್ತಿ ಮಾಡಲಾಯಿತು. ಹಾಗೆಯೇ ಸಭೆಯಲ್ಲಿ ಬೆಂಗಳೂರು ಮಹಾನಗರ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ಕಾರ್ಯಕಾರಿಣಿಯ ಜವಾಬ್ದಾರಿಗಳನ್ನು ಘೋಷಿಸಲಾಯಿತು.
ಬೈಠಕ್ನಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಂದ ಎಬಿಜಿಪಿಯ 40ಕ್ಕೂ ಹೆಚ್ಚು ಪದಾಧಿಕಾರಿ ಕಾರ್ಯಕರ್ತರು ಭಾಗವಹಿಸಿದ್ದರು. ಇದರಲ್ಲಿ 15 ಮಂದಿ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.