ಸಾಮಾಜಿಕ ಪರಿವರ್ತನೆಯ ಪ್ರಯತ್ನಗಳ ಕುರಿತಾದ ಚರ್ಚೆ ಅಖಿಲ ಭಾರತೀಯ ಸಮನ್ವಯ ಬೈಠಕ್ ನಲ್ಲಿ ನಡೆಯಲಿದೆ: ಸುನಿಲ್ ಅಂಬೇಕರ್

ಪುಣೆ, ಸೆ.13: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ ಸೆಪ್ಟೆಂಬರ್ 14ರಿಂದ 16ರವರೆಗೆ ಪುಣೆಯಲ್ಲಿ ನಡೆಯಲಿದೆ. ವಿವಿಧ ಕ್ಷೇತ್ರಗಳ 36 ಸಂಘ ಸಂಸ್ಥೆಗಳ 266 ಪ್ರಮುಖರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಬೈಠಕ್ ನಲ್ಲಿ ಪರಿಸರ ಸ್ನೇಹಿ ಜೀವನಶೈಲಿ, ಜೀವನಮೌಲ್ಯಾಧಾರಿತ ಕುಟುಂಬ ವ್ಯವಸ್ಥೆ, ಸಾಮರಸ್ಯಕ್ಕಾಗಿ ಪ್ರಾಧಾನ್ಯತೆ, ಸ್ವದೇಶಿ ನಡವಳಿಕೆ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಕುರಿತಾಗಿ ಬೈಠಕ್ ನಲ್ಲಿ ಚರ್ಚಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರ್ ಎಸ್ ಎಸ್ ಸ್ವಯಂಸೇವಕರು ರಾಷ್ಟ್ರಾದ್ಯಂತ ಶಾಖೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಶಾಖೆ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜೀವನದ ವಿವಿಧ ರಂಗಗಳ ಹಲವು ಚಟುವಟಿಕೆಗಳಲ್ಲಿ ಸ್ವಯಂಸೇವಕರು ನಿರತರಾಗಿದ್ದಾರೆ. ಈ ಎಲ್ಲಾ ಕಾರ್ಯಗಳು ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕೆಲಸ. ಸಮನ್ವಯ ಬೈಠಕ್ ನಲ್ಲಿ ಭಾಗವಹಿಸುವ ಎಲ್ಲಾ ಸಂಸ್ಥೆಗಳು ಸಂಘ ಪ್ರೇರಿತ ಮತ್ತು ಸ್ವಾಯತ್ತತೆಯೊಂದಿಗೆ ಸಾಮಾಜಿಕ ಜೀವನದ ವಿವಿಧ ಸ್ತರಗಳಲ್ಲಿ ಕಾರ್ಯಪ್ರವೃತ್ತವಾಗಿರುವಂತದ್ದು. ಈ ಸಂಸ್ಥೆಗಳು ವರ್ಷಕ್ಕೊಮ್ಮೆ ಜೊತೆಯಾಗಿ ಕಾರ್ಯ, ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕಲಿಕೆಯ ಸದಾವಕಾಶದೊಂದಿಗೆ ಪರಸ್ಪರ ಅರ್ಥಮಾಡಿಕೊಳ್ಳುವ ಅವಕಾಶ ಲಭಿಸುತ್ತದೆ. ಈ ಎಲ್ಲಾ ಸಂಸ್ಥೆಗಳು ಸಮಾನ ಧ್ಯೇಯೋದ್ಧೇಶಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ. ಹಲವು ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಸಂಘಟಿತ ಕೆಲಸಗಳ ಕುರಿತಾಗಿಯೂ ಬೈಠಕ್ ನಲ್ಲಿ ಚರ್ಚಿಸಲಾಗುವುದು ಎಂದರು.

ಬೈಠಕ್ ನ ಧ್ಯೇಯೋದ್ದೇಶ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ, ಅವುಗಳ ಪರಿಹಾರದ ದಿಶೆಯಲ್ಲಿ ರಾಷ್ಟ್ರೀಯ ಭಾವದೊಂದಿಗೆ ಕಾರ್ಯಪ್ರವೃತ್ತರಾಗುವುದರಿಂದ ಸಂಘಕಾರ್ಯದ ವೇಗವನ್ನು ಹೆಚ್ಚಿಸುವುದಾಗಿದೆ. ಜನಮಾನಸದಲ್ಲಿ ಅದಾಗಲೇ ತಮ್ಮ ಕಾರ್ಯದ ಮೂಲಕ ಸ್ಥಾನ ಪಡೆದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ವಿದ್ಯಮಾನಗಳ ಕುರಿತಾಗಿ ವಿವಿಧ ಸಂಘಟನೆಗಳ ನಿಲುವನ್ನು ಪ್ರಸ್ತಾಪಿಸುವುದರ ಜೊತೆಗೆ ಸಂಘಟನೆಗಳ ಭವಿಷ್ಯದ ಯೋಜನೆಗಳ ಕುರಿತಾಗಿಯೂ ಬೈಠಕ್ ನಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂ‍ಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹರಾದ ಡಾ.ಕೃಷ್ಣಗೋಪಾಲ್, ಡಾ.ಮನಮೋಹನ್ ವೈದ್ಯ, ಅರುಣ್ ಕುಮಾರ್, ಮುಕುಂದ, ರಾಮದತ್ತ ಚಕ್ರಧರ್ ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ, ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಾರ್ಟಿ, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬೈಠಕ್ ನಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ನುಡಿದರು. ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಪಶ್ಚಿಮ ಮಹಾರಾಷ್ಟ್ರ ಪ್ರಾಂತ ಕಾರ್ಯವಾಹ ಡಾ.ಪ್ರವೀಣ್ ದಬದ್ಘಾವ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.