ಲೇಖನ: ದು. ಗು. ಲಕ್ಷ್ಮಣ್, ಹಿರಿಯ ಪತ್ರಕರ್ತರು
ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೋಚಾಲಕರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್ ತಯಾರಿಸಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆ ಫ್ಲೆಕ್ಸ್‌ನಲ್ಲಿ ಅಪ್ಪಿತಪ್ಪಿ ಕೂಡ ಆಟೋ ಚಾಲಕರು ತಮ್ಮ ಭಾವಚಿತ್ರ ಛಾಪಿಸಿಕೊಂಡಿರಲಿಲ್ಲ. ಅದರಲ್ಲಿದ್ದಿದ್ದು ನಿಧನರಾದ ಆ ಮಹಾನುಭಾವನ ಚಿತ್ರ ಮಾತ್ರ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ನಿಧನರಾದಾಗ (ನಿಧನ: ೨೭ ಜುಲೈ ೨೦೧೫; ಜನನ: ೧೫ ಅಕ್ಟೋಬರ್ ೧೯೩೧) ಇಡೀ ದೇಶಾದ್ಯಂತ ಕಂಡುಬಂದ ದೃಶ್ಯಗಳಿವು. ಬಹುಶಃ ಇದುವರೆಗೆ ಯಾವ ರಾಷ್ಟ್ರಪತಿಗೂ ಇಷ್ಟೊಂದು ಅಭೂತಪೂರ್ವ ಶ್ರದ್ಧಾಂಜಲಿ ಸಲ್ಲಿಸಿದ ನಿದರ್ಶನವಿಲ್ಲ. ಜವಾಹರಲಾಲ್ ನೆಹರು ಅವರನ್ನು ʼಮಕ್ಕಳ ಚಾಚಾʼ ಎನ್ನುವುದುಂಟು. ಆದರೆ ನೆಹರು ಸತ್ತಾಗಲೂ ದೇಶದ ಮಕ್ಕಳು ಈ ಪರಿ ಕಣ್ಣೀರು ಸುರಿಸಿರಲಿಕ್ಕಿಲ್ಲ. ಚೆನ್ನೈಯಲ್ಲಿ ಮುಂಬತ್ತಿ ಹಚ್ಚಿ ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಿದ ಶಾಲಾ-ಕಾಲೇಜು ಮಕ್ಕಳ ಕಣ್ಣಲ್ಲಿ ತಮ್ಮ ಕುಟುಂಬದ ಹಿರಿಯರೊಬ್ಬರನ್ನು ಕಳೆದುಕೊಂಡ ದುಃಖ. ಮಕ್ಕಳ ಹೃದಯದಲ್ಲಿ ಡಾ.ಕಲಾಂ ಆ ಪರಿಯಾಗಿ ಆವರಿಸಿಕೊಂಡಿದ್ದರು. ತಮ್ಮ ಮನೆಯ ಪ್ರೀತಿಯ ತಾತನೋ, ದೊಡ್ಡಪ್ಪನೋ ತೀರಿ ಹೋದಾಗ ಆಗುವಂತಹ ಸಂಕಟ ಅದು.
ಕಲಾಂ ತೀರಿಕೊಂಡ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ತಲೆಬರಹಗಳೇ ಅವರೆಷ್ಟು ಜನಪ್ರಿಯ, ಜನಮನ ಗೆದ್ದ ಮಾಜಿ ರಾಷ್ಟ್ರಪತಿ ಎಂಬುದು ಶೃತಪಟ್ಟಿತ್ತು. ʼಜನರ ರಾಷ್ಟ್ರಪತಿ ಇನ್ನಿಲ್ಲʼ, ‘Dies doing what he did best; Igniting minds’, ‘People’s President passes away’, ‘A hospitable President’— ಇಂತಹ ಅದೆಷ್ಟೋ ಮನ ಮಿಡಿಯುವ ಶೀರ್ಷಿಕೆಗಳು. ಮಾಧ್ಯಮ ಮಿತ್ರರು ಕಲಾಂ ಅವರನ್ನು ಹೊಗಳಲೆಂದು ಕೊಟ್ಟ ಶೀರ್ಷಿಕೆಗಳಾಗಿರಲಿಲ್ಲ ಅವು. ಅವೆಲ್ಲ ಮಾಧ್ಯಮ ಮಿತ್ರರ ಮನದಾಳದಿಂದ ಹೊಮ್ಮಿದ ಶೀರ್ಷಿಕೆಗಳು. ಕಲಾಂ ಅವರನ್ನು ಹೊಗಳುವುದರಿಂದ ಮಾಧ್ಯಮ ಮಿತ್ರರಿಗೆ ಯಾವ ಬಗೆಯ ʼಲಾಭʼವೂ ಇರಲಿಲ್ಲ. ಮಹಾನ್ ವ್ಯಕ್ತಿಗೆ ಆತ ತೀರಿಕೊಂಡ ದಿನವಾದರೂ ಮನ ಮಿಡಿಯುವ, ಶ್ರೇಷ್ಠ ಅಕ್ಷರ ಪೂಜೆ ಸಲ್ಲಿಸುವ ಕಾಳಜಿಯ ಪ್ರತೀಕ ಅದಾಗಿತ್ತು.
ದಿಗ್ವಿಜಯ ಸಿಂಗ್ ಮನದಾಳದ ಮಾತು
“ಇಬ್ಬರು ಭಾರತೀಯ ಮುಸ್ಲಿಮರ ಅಂತ್ಯಕ್ರಿಯೆ ಒಂದೇ ದಿನ ನಡೆದಿರುವುದು ಎಂತಹ ಕಾಕತಾಳೀಯ! ಒಬ್ಬ ರು ತಮ್ಮ ಸಾದನೆಯ ಮೂಲಕ ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಹ ಸಾಧನೆ ಮಾಡಿದ ಡಾ.ಕಲಾಂ, ಮತ್ತೊಬ್ಬ ದೇಶದ್ರೋಹದಿಂದ ಇಡೀ ಸಮುದಾಯ ತಲೆತಗ್ಗಿಸುವಂತೆ ಮಾಡಿದ ಮೆಮನ್” – ಇದು ಪ್ರಗತಿಪರರ, ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೆಂದೇ ಬಿಂಬಿತವಾಗಿರುವ ಪ್ರಜಾವಾಣಿಯ ಮುಖಪುಟದಲ್ಲಿ ಕಲಾಂ ಅಂತ್ಯಕ್ರಿಯೆ ನಡೆದ ದಿನ ಪ್ರಕಟವಾದ ಬಾಕ್ಸ್ ಐಟಂ. ಅಂದಹಾಗೆ ಈ ಹೇಳಿಕೆಯನ್ನು ನೀಡಿದವರು ಬಿಜೆಪಿ ಅಥವಾ ಆರೆಸ್ಸೆಸ್‌ನ ಪ್ರಮುಖರಲ್ಲ. ಬಜರಂಗದಳದವರಂತೂ ಖಂಡಿತ ಅಲ್ಲ. ಈ ಹೇಳಿಕೆ ನೀಡಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್! ದಿಗ್ವಿಜಯಸಿಂಗ್ ಅವರ ಮನದಾಳದಿಂದ ಹೊಮ್ಮಿದ ಭಾವನೆ ಅದಾಗಿತ್ತು. ಅವರು ಸಾರ್ವಜನಿಕವಾಗಿ ಹಲವು ಬಾರಿ ಯಡವಟ್ಟಿನ, ಎಗ್ಗಿಲ್ಲದ ಏನೇನೋ ಹೇಳಿಕೆಗಳನ್ನು ಕೊಟ್ಟು ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ಈ ಹೇಳಿಕೆ ಮಾತ್ರ ಎಡವಟ್ಟಿನದಾಗಿರಲಿಲ್ಲ. ʼಹೆಮ್ಮೆಯ ಕಲಾಂ, ದೇಶದ್ರೋಹಿ ಮೆಮನ್ʼ ಎಂಬ ವಿಶ್ಲೇಷಣೆ ದಿಗ್ವಿಜಯ ಸಿಂಗ್ ಅವರ ಮನದಾಳದ ಮಾತಾಗಿತ್ತು.
ಕ್ಷಿಪಣಿಗಳಿಗೆ ಭಾರತೀಯ ಹೆಸರು
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ (ಎಪಿಜೆ ಅಬ್ದುಲ್ ಕಲಾಂ) ಹುಟ್ಟಿದ್ದು ಮುಸಲ್ಮಾನನಾಗಿ. ಆದರೆ ಬೆಳೆದಿದ್ದು ಮಾತ್ರ ಅಪ್ಪಟ ಭಾರತೀಯನಾಗಿ. ಅವರೆಂದೂ ಜಾತಿ, ಮತ, ಪಂಥ, ಪಕ್ಷ ಮುಂತಾದ ಸಂಕುಚಿತ, ಮತಾಂಧ ಗೋಡೆಗಳನ್ನು ತಮ್ಮ ಸುತ್ತ ಕಟ್ಟಿಕೊಂಡಿರಲಿಲ್ಲ. ಇಂತಹ ಯಾವುದೇ ಗೋಡೆಗಳಿಲ್ಲದ ಆಲಯದಲ್ಲಿರಲು ಅವರು ಇಷ್ಟಪಡುತ್ತಿದ್ದರು. ತಾನು ಹುಟ್ಟಿದ್ದು ಭಾರತದ ಮಣ್ಣಿನಲ್ಲಿ. ಹುಟ್ಟಿದ ನೆಲಕ್ಕೆ ಋಣಿಯಾಗಿರಬೇಕು, ಇಲ್ಲಿನ ಸಂಸ್ಕೃತಿ, ಪರಂಪರೆಗೆ ಗೌರವ ಸದಾ ಸಲ್ಲಿಸಬೇಕು ಎಂಬ ಎಚ್ಚರ ಅವರಲ್ಲಿ ಕೊನೆಯುಸಿರಿನವರೆಗೂ ಇತ್ತು. ಅವರು ಡಿಆರ್‌ಡಿಓದಲ್ಲಿ ಕ್ಷಿಪಣಿ ವಿಜ್ಞಾನಿಯಾಗಿ, ಅವುಗಳ ತಯಾರಿಕೆಯಲ್ಲಿ ನಿರತರಾಗಿದ್ದಾಗಲೂ ಈ ಎಚ್ಚರ ಅವರಲ್ಲಿತ್ತು. ಹಾಗೆಂದೇ ತಾವು ಸಂಶೋಧಿಸಿ ತಯಾರಿಸಿದ ಕ್ಷಿಪಣಿಗಳಿಗೆ ಅವರಿಟ್ಟ ಹೆಸರುಗಳು: ಹಿಂದು ಪುರಾಣ ಮೂಲದ ಆಕಾಶ್, ಅಗ್ನಿ, ಪೃಥ್ವಿ, ತ್ರಿಶೂಲ್, ಬ್ರಹ್ಮೋಸ್, ಪ್ರಹಾರ್, ಅಮೋಘ, ಸಾಗರಿಕಾ ಇತ್ಯಾದಿ. ಮುಸ್ಲಿಮರಲ್ಲಿ ಸಹಜವಾಗಿರುವ ಮತಾಂಧತೆ ಅವರೊಳಗಿದ್ದಿದ್ದರೆ ಆ ಕ್ಷಿಪಣಿಗಳಿಗೆ ಘೋರಿ, ಘಜನಿ, ಔರಂಗಜೇಬ್, ಅಕ್ಬರ್… ಮುಂತಾದ ಹೆಸರುಗಳನ್ನು ಇಡುತ್ತಿದ್ದರೇನೋ! ಅಸಲಿಗೆ ಕಲಾಂ ಅವರನ್ನು ಕೊನೆಯವರೆಗೂ ಅಂತಹ ಮತಾಂಧತೆ ಕಾಡಲೇ ಇಲ್ಲ. ಈ ದೇಶದ ಸಂಸ್ಕೃತಿ, ಪರಂಪರೆ ಯಾವುದೆಂಬುದರ ಸ್ಪಷ್ಟ ಅರಿವು ಅವರಿಗಿತ್ತು. ಕುರಾನ್ ಬಗ್ಗೆ ಇದ್ದಷ್ಟೇ ಶ್ರದ್ಧೆ ಭಗವದ್ಗೀತೆ, ರಾಮಾಯಣದ ಬಗ್ಗೆಯೂ ಇತ್ತು. ಮುಸಲ್ಮಾನರಾಗಿದ್ದರೂ ಅವರು ಮಸೀದಿಗಳಿಗೆ ತೆರಳಿದ್ದು ತೀರಾ ಕಡಿಮೆ. ಹಿಂದು ಮಠ-ಮಂದಿರಗಳಿಗೆ, ದೇವಾಲಯಗಳಿಗೆ ಹೋಗಿದ್ದೇ ಹೆಚ್ಚು. ಕರ್ನಾಟಕದ ಪ್ರವಾಸ ಸಂದರ್ಭದಲ್ಲಿ ಸಿದ್ಧಗಂಗಾ, ಆದಿಚುಂಚನಗಿರಿ, ಧರ್ಮಸ್ಥಳ, ಶೃಂಗೇರಿ ಮೊದಲಾದ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಅಲ್ಲೆಲ್ಲ ಪಂಚೆಯುಟ್ಟು, ಶಾಲು ಹೊದೆದು ಶ್ರದ್ಧಾ ಭಕ್ತಿಗಳನ್ನು ಪ್ರಕಟಿಸಿದ್ದರು.
ಅಪ್ಪಟ ಸ್ವದೇಶಾಭಿಮಾನಿ
ಹಾಗೆ ನೋಡಿದರೆ ದೇಗುಲಗಳ ನಗರ ರಾಮೇಶ್ವರಂನಲ್ಲಿ ಅವರು ಹುಟ್ಟಿ ಬೆಳೆದದ್ದೇ ಹಿಂದು ಪರಿಸರದಲ್ಲಿ. ಭಾರತೀಯ ಚಿಂತನೆ, ಸ್ವಭಾವ ಮೈಗೂಡಿದ್ದು, ಮನದಾಳದಲ್ಲಿ ಬೇರೂರಿದ್ದು ಅದೇ ಕಾರಣದಿಂದಿರಬಹುದು. ವಿಜ್ಞಾನಿಯಾಗಿದ್ದಾಗ, ರಾಷ್ಟ್ರಪತಿಯಾಗಿದ್ದಾಗ ಅಥವಾ ಮಾಜಿ ರಾಷ್ಟ್ರಪತಿಯಾಗಿದ್ದಾಗ ಅವರು ತಲೆಯ ಮೇಲೆ ಮುಸ್ಲಿಂ ಟೋಪಿ ಹಾಕಿರುವ ಯಾವುದೇ ಭಾವಚಿತ್ರಗಳು ಸಿಗುವುದಿಲ್ಲ. ಆದರೆ ಹಿಂದುಗಳಂತೆ ಲಕ್ಷಣವಾಗಿ ಧೋತಿಯುಟ್ಟು ಶಲ್ಯ ಹೊದೆದ ಭಾವಚಿತ್ರಗಳು ಸಾಕಷ್ಟು ಲಭ್ಯವಿದೆ. ಸಂಗೀತದ ಬಗ್ಗೆ ಅಪಾರ ಒಲವಿದ್ದ ಕಲಾಂ ರುದ್ರವೀಣೆ ನುಡಿಸುತ್ತಿದ್ದರು. ರುದ್ರವೀಣೆ ನುಡಿಸುವಾಗ ಅವರ ಡ್ರೆಸ್‌ಕೋಡ್ ಮತ್ತದೇ ಬಿಳಿಯ ಪಂಚೆ ಹಾಗೂ ಶಲ್ಯ.
ಅವರೊಬ್ಬ ಅಪ್ಪಟ ಸ್ವದೇಶಾಭಿಮಾನಿ ಎನ್ನುವುದಕ್ಕೆ ಸ್ವದೇಶಿ ತಂತ್ರಜ್ಞಾನದ ಮೂಲಕವೇ ಭಾರತದ ಮೊಟ್ಟಮೊದಲ ಪರಮಾಣು ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿದರ್ಶನ. ಅಮೆರಿಕದ ಹದ್ದುಗಣ್ಣು ತಪ್ಪಿಸಿ ಪೋಖ್ರಾನ್‌ನಲ್ಲಿ ಪರಮಾಣು ಬಾಂಬ್‌ನ ಯಶಸ್ವಿ ಸ್ಫೋಟ ನಡೆಸಿದ್ದರ ಹಿಂದೆ ಕಲಾಂ ಅವರ ಅದ್ಭುತ ಬುದ್ಧಿಮತ್ತೆ ಹಾಗೂ ಕೌಶಲ್ಯ ಅಡಗಿತ್ತು, ಎಂಬುದನ್ನು ಮರೆಯುವಂತಿಲ್ಲ. ವಾಜಪೇಯಿ ಸರ್ಕಾರದ ಹೆಮ್ಮೆಯ ಸಾಧನೆ ಅದೆಂದು ಬಿಂಬಿತವಾದರೂ ಅದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು ಕಲಾಂ ಅವರಿಗೇ. ಆದರೆ ಅವರೆಂದೂ ಅದು ತನ್ನ ಸಾಧನೆ ಎಂದು ಎದೆ ತಟ್ಟಿಕೊಳ್ಳಲಿಲ್ಲ. It is a team work ಎಂದಷ್ಟೇ ತಣ್ಣಗೆ ಹೇಳಿದ್ದರು. ಭಾರತ ಸಶಕ್ತ, ಸದೃಢ ದೇಶವಾಗಿ ಹೊಮ್ಮಬೇಕಾದರೆ, ಸ್ವಾವಲಂಬಿಯಾಗಿ ತಲೆಯೆತ್ತಬೇಕಾದರೆ ಅದು ತನ್ನದೇ ಪರಮಾಣು ಬಾಂಬ್ ಹೊಂದಿರಬೇಕು ಎಂಬುದಷ್ಟೇ ಕಲಾಂ ಅವರ ಕಾಳಜಿಯಾಗಿತ್ತು.
ಅನುಭವ ಜೀವನಪಾಠ
ಕಲಾಂ ಅವರ ತಂದೆ ಯಾಂತ್ರೀಕೃತ ಬೋಟ್‌ವೊಂದರ ಮಾಲಿಕರಾಗಿದ್ದರು. ಒಮ್ಮೆ ಸಮುದ್ರದ ನಡುವೆ ಸುನಾಮಿಗೆ ಸಿಲುಕಿ ಆ ಬೋಟ್ ನುಚ್ಚುನೂರಾಯಿತು. ಜೀವನ ನಿರ್ವಹಣೆಯ ಆಧಾರಸ್ತಂಭವೇ ಕಳಚಿಹೋದಂತಾಗಿತ್ತು. ಆದರೆ ಅವರ ತಂದೆ ಕಂಗಾಲಾಗಿ ಸುಮ್ಮನೆ ಕುಳಿತಿರಲಿಲ್ಲ. ಹೇಗೋ ಸಾಲ ಮಾಡಿ ಮತ್ತೊಂದು ಬೋಟ್ ಖರೀದಿಸಿ ವ್ಯವಹಾರ ಮುಂದುವರಿಸಿದ್ದರು. ಕಲಾಂ ಅವರಿಗೆ ಈ ಘಟನೆ ಒಂದು ಅನುಭವದ ಜೀವನ ಪಾಠ ಆಗಿತ್ತು. ಹಾಗಾಗಿಯೇ ಅವರು ಇಸ್ರೋದ ಪಿಎಸ್‌ಎಲ್‌ವಿ ಉಪಗ್ರಹಗಳು ಮೊದಮೊದಲು ವಿಫಲಗೊಂಡಾಗ ಅಧೀರರಾಗಿರಲಿಲ್ಲ. ಮರಳಿ ಯತ್ನವನ್ನು ಮಾಡಿ ಎಂದು ವಿಜ್ಞಾನಿಗಳನ್ನು ಹುರಿದುಂಬಿಸುತ್ತಿದ್ದರು. ಉಪಗ್ರಹ ಉಡಾವಣೆ ಯಶಸ್ವಿಯಾದಾಗ ಸಂತಸಪಟ್ಟು, ಅದರ ಕ್ರೆಡಿಟ್‌ಅನ್ನು ತಮ್ಮ ತಂಡದವರಿಗೆ ಹಂಚುತ್ತಿದ್ದರು. ಸೋಲುಂಟಾದಾಗ ಕುಗ್ಗಲಿಲ್ಲ. ಗೆಲುವು ದೊರೆತಾಗ ಹಿರಿಹಿರಿ ಹಿಗ್ಗಿ ಕರ್ತವ್ಯ ಮರೆಯಲಿಲ್ಲ.
ಯುವಪೀಳಿಗೆ ಮೇಲೆಯೇ ಕಲಾಂ ಕಣ್ಣು
ಯುವಶಕ್ತಿ ದೇಶದ ಆಸ್ತಿ ಎಂಬ ವಿವೇಕಾನಂದರ ವಿಚಾರವೇ ಕಲಾಂ ಅವರ ವಿಚಾರವೂ ಆಗಿತ್ತು. ಬದುಕಿನ ಕೊನೆಯುಸಿರಿನವರೆಗೆ ಅವರು ಪ್ರೀತಿಸಿದ್ದು ಮಕ್ಕಳಿಗೆ, ಯುವಕ-ಯುವತಿಯರಿಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ವಿಸ್ಮಯದ ಬಗ್ಗೆ ಪಾಠ ಹೇಳುವುದನ್ನು. ೨೦೧೫ರ ಜುಲೈ ೨೭ರಂದು ಶಿಲಾಂಗ್‌ನಲ್ಲಿ ಕೊನೆಯುಸಿರೆಳೆಯುವ ಮುನ್ನ ಅವರು ಐಐಎಂ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದರು. ಪಾಠ ಮಾಡುತ್ತಲೇ ವೇದಿಕೆಯಲ್ಲಿ ಕುಸಿದಿದ್ದರು.
ಭುವನೇಶ್ವರಕ್ಕೆ ಒಮ್ಮೆ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮಕ್ಕೆ ಬಂದಿದ್ದಾಗಿನ ಘಟನೆ. ಸಭೆಯ ಮುಂಭಾಗದ ಸಾಲುಗಳಲ್ಲಿ ಗಣ್ಯಾತಿಗಣ್ಯರು. ಹಿಂಬದಿಯ ಸಾಲುಗಳಲ್ಲಿ ಪದವಿ ವಿದ್ಯಾರ್ಥಿಗಳು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಲಾಂ ಗಣ್ಯರನ್ನು ಗಮನಿಸದೆ, ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ ಅವರೊಡನೆ ಹರಟೆ ಹೊಡೆದರು. ತಮಾಷೆ ಮಾಡಿದರು. ವಿದ್ಯಾರ್ಥಿಗಳ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದರು. ಇನ್ನು ಮುಂದೆ ವಿದ್ಯಾರ್ಥಿಗಳನ್ನು ಸಭೆಯ ಮುಂಭಾಗದ ಸಾಲುಗಳಲ್ಲಿ ಕೂರಿಸಿ, ಗಣ್ಯರನ್ನು ಹಿಂಬದಿ ಸಾಲುಗಳಲ್ಲಿ ಕೂರಿಸಿ ಎಂದು ಅಲ್ಲಿದ್ದ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು. ಅದಾದ ಬಳಿಕ ಕಲಾಂ ತಿಳಿಸಿದಂತೆಯೇ ಸಭೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಒಡಿಶಾದ ಮಾಜಿ ರಾಜ್ಯಪಾಲ ಎಂ.ಎಂ.ರಾಜೇಂದ್ರನ್ ನೆನಪಿಸಿಕೊಳ್ಳುತ್ತಾರೆ.
ಸರಳತೆಯ ಸಾಕಾರಮೂರ್ತಿ
ಕಲಾಂ ವಿಜ್ಞಾನಿಯಾಗಿದ್ದಾಗ ಎಂದೂ ಕೋಟು, ಟೈ ಧರಿಸಿದವರಲ್ಲ. ಸರಳ ಉಡುಗೆ, ಸರಳವಾದ ಸಸ್ಯಾಹಾರವೇ ಅವರಿಗಿಷ್ಟ. ಮೊಸರನ್ನ, ಉಪ್ಪಿನಕಾಯಿ ಇದ್ದರಂತೂ ಅವರಿಗದೇ ಮೃಷ್ಟಾನ್ನ ಭೋಜನ. ರಾಷ್ಟ್ರಪತಿಯಾದ ಮೇಲೆ ಕೋಟು ಹಾಕಬೇಕೆಂದು ಪ್ರಧಾನಿ ವಾಜಪೇಯಿಯವರೇ ಆಗ್ರಹಿಸಿದಾಗ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು.
ಕಲಾಂ ಜನರ ರಾಷ್ಟ್ರಪತಿಯಾಗಿದ್ದರು. ರಾಷ್ಟ್ರಪತಿ ಭವನವೆಂಬ ಇರುವೆಯೂ ನುಸುಳಲು ಸಾದ್ಯವಾಗದ ಭದ್ರಕೋಟೆಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟರು. ರಾಷ್ಟ್ರಪತಿ ಒಬ್ಬ ಸರಳ ವ್ಯಕ್ತಿಯಾಗಿಯೂ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟರು. ಅಪ್ಪಟ ಸಸ್ಯಾಹಾರಿಯಾಗಿದ್ದ ಕಲಾಂ ಇತರರು ಹಾಗೇ ಇರಬೇಕೆಂದು ಬಯಸಿದವರಲ್ಲ. ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಮಾವೇಶ ನಡೆದಾಗಲೆಲ್ಲ ಮಾಂಸಾಹಾರಿಗಳಿಗೆ ಅತ್ಯುತ್ತಮ ಮಾಂಸಾಹಾರದ ಅಡುಗೆ ಇರುವಂತೆ ಅವರೇ ಗಮನ ಹರಿಸುತ್ತಿದ್ದರು. ಮೆನು ಯಾವುದಿರಬೇಕೆಂದು ಅವರೇ ಸೂಚಿಸುತ್ತಿದ್ದರು! ಅಂತಹ ಔದಾರ್ಯದ ಆತಿಥ್ಯ ಅವರದು.
ರಾಷ್ಟ್ರಪತಿ ಭವನಕ್ಕೆ ಹೋಗುವಾಗ ಕಲಾಂ ಅವರು ತೆಗೆದುಕೊಂಡು ಹೋಗಿದ್ದು ಸ್ವಂತದ ಸಾಮಗ್ರಿಗಳ ಒಂದೆರಡು ಸೂಟ್‌ಕೇಸ್‌ಗಳು. ನಿವೃತ್ತರಾಗಿ ಅಲ್ಲಿಂದ ನಿರ್ಗಮಿಸುವಾಗಲೂ ಅವರು ವಾಪಸ್ ತಂದಿದ್ದು ಅಷ್ಟೇ ಲಗೇಜು. ಇವರ ನಂತರ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್, ಇವರಿಗಿಂತ ಹಿಂದೆ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಮುಂತಾದವರು ನಿವೃತ್ತಿಯ ಬಳಿಕ ರಾಷ್ಟ್ರಪತಿ ಭವನದಿಂದ ಟ್ರಕ್‌ಗಟ್ಟಲೆ ಸಾಮಾನುಗಳನ್ನು ಸಾಗಿಸಿದ್ದರು. ತಾನು ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದ ವೆಚ್ಚವನ್ನೂ ಸರ್ಕಾರವೇ ಭರಿಸಬೇಕೆಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಒಮ್ಮೆ ಕ್ಯಾತೆ ತೆಗೆದಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂಥವರ ನಡುವೆ ಕಲಾಂ ಸರಳತೆಯ ಸಾಕಾರಮೂರ್ತಿಯಾಗಿ, ಮಾಣಿಕ್ಯದಂತೆ ಮಿನುಗಿದ್ದರು.
ಚೆಕ್ ಪಾವತಿಸಿ ಗ್ರೈಂಡರ್ ಖರೀದಿ
ಕಲಾಂ ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ತಮಿಳುನಾಡಿನ ಈರೋಡ್‌ಗೆ ಒಂದು ಸಮಾರಂಭಕ್ಕೆ ಬಂದಿದ್ದರು. ಆ ಸಮಾರಂಭವನ್ನು ಪ್ರಾಯೋಜಿಸಿದ್ದು ಸೌಭಾಗ್ಯ ವೆಟ್‌ಗ್ರೈಂಡರ್ ಸಂಸ್ಥೆ. ಸಮಾರಂಭದಲ್ಲಿ ಸಂಸ್ಥೆಯ ಎಂ.ಡಿ.ಯಾಗಿದ್ದ ವಿ.ಆದಿಕೇಶವನ್ ಕಲಾಂ ಅವರಿಗೆ ಗ್ರೈಂಡರ್ ಒಂದನ್ನು ಉಡುಗೊರೆಯಾಗಿ ನೀಡಿದಾಗ ಮೊದಲು ಕಲಾಂ ಅದನ್ನು ನಿರಾಕರಿಸಿದರು. ಆದರೆ ತೀರಾ ಒತ್ತಾಯಿಸಿದಾಗ ಆ ಉಡುಗೊರೆ ಸ್ವೀಕರಿಸಿದರು.
ಮರುದಿನ ಕಲಾಂ ಮಾರುಕಟ್ಟೆಗೆ ತಮ್ಮ ಸಹಾಯಕನನ್ನು ಕಳಿಸಿ, ಗ್ರೈಂಡರ್‌ನ ನಿಖರವಾದ ಬೆಲೆ ಖಚಿತಪಡಿಸಿಕೊಂಡರು. ತಮ್ಮ ಸ್ವಂತ ಖಾತೆಯಿಂದ ಆ ಹಣವನ್ನು ಚೆಕ್ ಮೂಲಕ ಕಂಪನಿಗೆ ಕಳಿಸಿಕೊಟ್ಟರು. ಆದರೆ ಆ ಚೆಕ್ ಅನ್ನು ನಗದೀಕರಿಸದಿರಲು ಕಂಪನಿ ನಿರ್ಧರಿಸಿತ್ತು.
ಆದರೆ ಕಲಾಂ ಅಷ್ಟಕ್ಕೇ ಬಿಡಲಿಲ್ಲ. ತನ್ನ ಖಾತೆಯಿಂದ ಹಣ ಕಡಿತವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಲೇ ಇದ್ದರು. ನಿಗದಿತ ವೇಳೆಯಲ್ಲಿ ಕಡಿತವಾಗದಿದ್ದಾಗ ಕಂಪೆನಿಗೆ ಫೋನ್ ಮಾಡಿ, ತಕ್ಷಣ ಚೆಕ್ ನಗದೀಕರಿಸಬೇಕು, ಇಲ್ಲದಿದ್ದರೆ ಗ್ರೈಂಡರ್ ವಾಪಾಸು ಕಳಿಸುವೆ ಎಂದು ಖಡಕ್ಕಾಗಿ ಹೇಳಿದರು. ಅನಂತರವೇ ಆದಿಕೇಶವನ್ ಆ ಚೆಕ್‌ನ ಫೋಟೋಕಾಪಿ ತೆಗೆದು ಅದನ್ನು ತನ್ನ ಕಚೇರಿಯಲ್ಲಿ ಪ್ರದರ್ಶಿಸಿದರು ( ಚಿತ್ರದಲ್ಲಿರುವುದು ಅದೇ ಫೋಟೋ ಕಾಪಿ) ಚೆಕ್ ನಗದೀಕರಣವಾಗಿದ್ದು ತಿಳಿಯುತ್ತಿದ್ದಂತೆ ಕಲಾಂ ಆದೆಕೇಶವನ್ ರ ಕಚೇರಿಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದ್ದರಂತೆ!
ಸಾರ್ವಜನಿಕ ಕ್ಷೇತ್ರದಲ್ಲಿರುವ ಎಷ್ಟು ಮಂದಿ ಉನ್ನತ ಹುದ್ದೆಯ ವ್ಯಕ್ತಿಗಳು ಇಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಪರಿಪಾಲಿಸುತ್ತಾರೆ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ!
೩೦ ವಿ.ವಿ.ಗಳ ಗೌರವ ಡಾಕ್ಟರೇಟ್ ಪದವಿಗಳು
ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ ಎಂಬ ಕಾರಣಕ್ಕೆ ೩೦ಕ್ಕೂ ಹೆಚ್ಚು ದೇಶ-ವಿದೇಶಗಳ ವಿ.ವಿ.ಗೌರವ ಡಾಕ್ಟರೇಟ್ ಪದವಿಗಳು ಅವರನ್ನರಸಿ ಬಂದಿದ್ದವು. ಅವರಂತೂ ಯಾವುದಕ್ಕೂ ಅರ್ಜಿ ಹಾಕಿರಲಿಲ್ಲ. ತನ್ನ ಹೆಸರಿನ ಹಿಂದೆ ಅವರೆಂದೂ ʼಡಾ:ʼ ಎಂಬ ವಿಶೇಷಣವನ್ನು ಸೇರಿಸಿಕೊಂಡು ಸಂತಸಪಡಲಿಲ್ಲ. ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬದುಕಿದರು. ದೇಶ ಮೊದಲು, ಅನಂತರ ನಾವೆಲ್ಲ ಎಂಬುದು ಅವರ ಬದುಕಿನ ಸೂತ್ರವಾಗಿತ್ತು. ʼಮಾ ತುಝೇ ಸಲಾಂʼ ಎಂದು ಭಾರತಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನೂ ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ. ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ.