ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಅಬಲಾಶ್ರಮದ ವತಿಯಿಂದ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವ ಗೊಂಬೆ ಉತ್ಸವ ಈ ಬಾರಿ ಅಕ್ಟೋಬರ್‌ 15, ಭಾನುವಾರ ಆಶ್ವಯುಜ ಶುದ್ಧ ಪಾಡ್ಯದಂದು ಪ್ರಾರಂಭವಾಗಿ ಅಕ್ಟೋಬರ್ 24 ಮಂಗಳವಾರ ದಶಮಿಯವರೆಗೆ ಡಾ. ಡಿ ವಿ ಜಿ ರಸ್ತೆಯಲ್ಲಿರುವ ಚಕ್ರವರ್ತಿ ವೆಂಕಟವರದ ಅಯ್ಯಂಗಾರ್ ಸಭಾಂಗಣದಲ್ಲಿ ನಡೆಯಲಿದೆ.

.ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಗೊಂಬೆಗಳ ಸಂಸ್ಕೃತಿ ಪ್ರಾರಂಭವಾಯಿತು. ನಂತರ ಹಳೇ ಮೈಸೂರು ಸಂಸ್ಥಾನದ ಪರಂಪರೆಯಲ್ಲಿ ಮನೆ ಮನೆಗಳಲ್ಲಿ ಪಟ್ಟದ ಗೊಂಬೆಯ ಜೊತೆಗೆ ಚಾರಿತ್ರಿಕ, ಸಾಂಸ್ಕೃತಿಕ, ಪೌರಾಣಿಕ, ಸಾಮಾಜಿಕ, ಸಾಮಯಿಕ ವಿಷಯಗಳನ್ನು ಪರಿಚಯಿಸಲು ಗೊಂಬೆಗಳನ್ನು ಶಾಸ್ತ್ರೋಕ್ತವಾಗಿ ಬಳಸಲಾಗುತ್ತಿತ್ತು.

ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಬೊಂಬೆಗಳನ್ನು ಕೂರಿಸುವುದರಲ್ಲಿ ದೇವ-ದೇವತೆಗಳಿಂದ ಹಿಡಿದು ಸಾಧು-ಸಂತರು, ಸತ್ಪುರುಷರು, ಸಾಮಾನ್ಯ ಜನರು, ಅವರ ಜೀವನಶೈಲಿ, ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ, ಪಶು-ಪಕ್ಷಿಗಳು ಹೀಗೆ ಸಕಲವೂ ದೇವರ ಅನುಗ್ರಹವಾಗಿದ್ದು, ಯಾವುದನ್ನೂ ತುಚ್ಛವಾಗಿ ನೋಡಬಾರದು. ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವವೂ ಮುಖ್ಯವೇ ಎಂದು ಬೊಂಬೆಗಳ ಸಂದೇಶ ಸಾರುತ್ತವೆ. ಬೊಂಬೆಗಳನ್ನು ಮನೆಗಳಲ್ಲಿ ಇಟ್ಟ ಬಳಿಕ ಪ್ರತಿ ನಿತ್ಯ ಅದಕ್ಕೆ ಪೂಜೆ, ನೈವೇದ್ಯ ಮಾಡಿ ಸಂಜೆ ವೇಳೆ ಆರತಿ ಮಾಡುವುದು, ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹಮ್ಮಿಕೊಂಡು ಸುತ್ತಮುತ್ತಲಿನ ಜನರನ್ನು ಕರೆದು ಅರಿಶಿನ ಕುಂಕುಮ, ಪ್ರಸಾದ ವಿನಿಯೋಗ ಮಾಡುವ ಪದ್ಧತಿಯೂ ಇದೆ.

ಮನೆಗಳಲ್ಲಿ ಇಟ್ಟ ಬೊಂಬೆಗಳನ್ನು ನೋಡಲು ಬಂದ ಜನರು ಪರಸ್ಪರ ಭೇಟಿ ಮಾಡುವುದು ಸಾಮಾನ್ಯ. ಇದರೊಂದಿಗೆ ಸಂಬಂಧಿಗಳು, ಸ್ನೇಹಿತರು, ಪರಿಚಯಸ್ಥರು, ನೆಂಟರು ಇಷ್ಟರು ಒಂದೆಡೆ ಸೇರಲು ಒಂದು ಸಂದರ್ಭ ಸೃಷ್ಟಿಯಾಗುತ್ತದೆ.

ಗೊಂಬೆಗಳು ನಮ್ಮ ಜೀವನಕ್ಕೆ ಹಲವು ಪಾಠಗಳನ್ನು ಹೇಳಿಕೊಡುತ್ತವೆ. ದೇವರ ದೃಷ್ಟಿಯಲ್ಲಿ ನಾವೂ ಬೊಂಬೆಗಳೇ, ಅವನ ಆದೇಶದಂತೆ, ಅವರ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ ಎನ್ನುವುದನ್ನು ಇದು ಸಾರುತ್ತದೆ.

ನಾವು ಅಬಲಾಶ್ರಮದಲ್ಲಿ ಹತ್ತು ವರ್ಷಗಳ ಹಿಂದೆ ಏಳೆಂಟು ಬೊಂಬೆಗಳಿಂದ ಆರಂಭವಾದ ದಸರಾ ಗೊಂಬೆ ಉತ್ಸವ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಇದೇ ಪರಂಪರೆಯಲ್ಲಿ ಸಮಾಜದ ಇತರರ ಜೊತೆಗೆ ಆಶ್ರಮವು ಕೈಜೋಡಿಸಿ ಗೊಂಬೆ ಉತ್ಸವವನ್ನು ಮುಂದುವರೆಸಿದೆ. ಹಲವಾರು ದಾನಿಗಳು ತಮ್ಮ ಸಂಗ್ರಹದ ಗೊಂಬೆಗಳನ್ನೂ ನಮಗೆ ನೀಡಿ ನಮ್ಮ ಸಂಗ್ರಹವನ್ನು ಇನ್ನೂ ಸುಂದರವಾಗಿಸಲು ಕೈ ಜೋಡಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.