ಆರ್ ಎಸ್ ಎಸ್ ಜ್ಯೇಷ್ಠ ಪ್ರಚಾರಕ, ಲೇಖಕ, ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ರಂಗಾಹರಿ (93) ದೈವಾಧೀನರಾಗಿದ್ದಾರೆ. ಅವರು ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಬೆಳಗ್ಗೆ ಸುಮಾರು 7:00 ಗಂಟೆಗೆ ಅಸುನೀಗಿದ್ದಾರೆ.
ನಿಧನರಾದ ಶ್ರೀ ರಂಗಾಹರಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ ಡಾ.ಮನಮೋಹನ್ ವೈದ್ಯ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಂತಿಮ ಸಂಸ್ಕಾರ:
ಅಕ್ಟೋಬರ್ 30, 2023 ರಂದು ಬೆಳಗ್ಗೆ 11ಕ್ಕೆ ಐವರ್ ಮಡೋಮ್ ನಲ್ಲಿ ನಡೆಯಲಿದೆ. ನಾಳೆ ಬೆಳಗ್ಗೆ 6:00 ಗಂಟೆಯವರೆಗೂ ಆರ್ ಎಸ್ ಎಸ್ ಪ್ರಾಂತ ಕಾರ್ಯಾಲಯ ಮಾಧವನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಂತರ ಬೆಳಗ್ಗೆ 11 ಗಂಟೆಯವರೆಗೆ ಮಯನ್ನೂರಿನ ಥಾನಾಲ್ ಬಾಲಾಶ್ರಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶ್ರೀ ರಂಗಾಹರಿ ಅವರ ಪರಿಚಯ:
ಸಾವಿರಾರು ಮಂದಿಯಲ್ಲಿ ಆದರ್ಶವಾದದ ಬೆಳಕನ್ನು, ಅವರ ಜೀವನದಲ್ಲಿ ಸನಾತನ ರಾಷ್ಟ್ರೀಯತೆಯನ್ನು ತುಂಬಿದವರು ಕರ್ಮಯೋಗಿ, ಸಂಘ ಋಷಿ ಶ್ರೀ ರಂಗಾಹರಿ ಅವರು.
ಕೊಚ್ಚಿಯ ತಿರುಮಲ ದೇವಾಲಯದ ಅಂಗಳದಿಂದ ಸಂಘದರ್ಶನದ ಧ್ವಜವನ್ನು ಹಿಡಿದು ವಿಶ್ವದಾದ್ಯಂತ ಸಂಚರಿಸಿದವರು ಶ್ರೀ ರಂಗಾಹರಿ ಅವರು. ಅವರ ಸಂಘ ಜೀವನ 13ನೇ ವಯಸ್ಸಿನಿಂದ ಪ್ರಾರಂಭವಾಯಿತು.
ಸಂಘದ ಸಂದೇಶವನ್ನು ಹಿಡಿದುಕೊಂಡು ಒಟ್ಟು ಐದು ಖಂಡಗಳನ್ನು ಪ್ರಯಾಣ ಮಾಡಿದ ಅವರು ಗುರೂಜಿ ಗೋಳ, ಮಧುಕರ ದತ್ತಾತ್ರೇಯ ದೇವರಸ್, ಪ್ರೊ.ರಾಜೇಂದ್ರ ಸಿಂಗ್, ಕೆ.ಎಸ್. ಸುದರ್ಶನ್, ಡಾ.ಮೋಹನ್ ಭಾಗವತ್ ಒಟ್ಟು 5 ಮಂದಿ ಸರಸಂಘಚಾಲಕರೊಂದಿಗೆ ಕಾರ್ಯನಿರ್ವಹಿಸಿದ್ದಾರೆ.
ಜನನ ಮತ್ತು ವಿದ್ಯಾಭ್ಯಾಸ:
ಶ್ರೀ ರಂಗಾಹರಿಯವರು ಡಿಸೆಂಬರ್ 5, 1930 ರಂದು ರಂಗಾ ಶೆಣೈ ಮತ್ತು ಪದ್ಮಾವತಿ ದಂಪತಿಗಳಿಗೆ ಜನಿಸಿದರು. ಕೇರಳದ ತ್ರಿಪುಣಿಥುರ ಇವರ ಹುಟ್ಟೂರು. ರಂಗಾ ಹರಿಯವರು ತಮ್ಮ ತಂದೆ ತಾಯಿಗೆ ಇರುವ ಎಂಟು ಮಂದಿ ಮಕ್ಕಳಲ್ಲಿ ಎರಡನೇಯವರಾಗಿದ್ದರು. ಮೂರು ಮಂದಿ ಸಹೋದರರು ಮತ್ತು 4 ಮಂದಿ ಸಹೋದರಿಯರು.
ತಮ್ಮ ಶಾಲಾ ಶಿಕ್ಷಣವನ್ನು ಸೆಂಟ್ ಅಲ್ಬೆರ್ಟ್ಸ್ ಪ್ರೌಢಶಾಲೆಯಲ್ಲಿ ಮಾಡಿ, ಕೊಚ್ಚಿಯ ಮಹಾರಾಜಾಸ್ ಕಾಲೇಜಿನಿಂದ ಪದವಿ ಪಡೆದರು. ನಂತರ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದರು ಜೊತೆಗೆ ಸಂಸ್ಕೃತವನ್ನೂ ಕಲಿತರು. ಗಾಂಧಿ ಹತ್ಯೆಯ ಆರೋಪದಲ್ಲಿ 1948ರ ಡಿಸೆಂಬರ್ ನಿಂದ 1949 ಎಪ್ರಿಲ್ ನವರೆಗೂ ಸಂಘದ ಮೇಲೆ ನಿಷೇಧವಿದ್ದಾಗ ರಂಗಾಹರಿಯವರು ಕಣ್ಣೂರಿನಲ್ಲಿ ಸೆರೆವಾಸದಲ್ಲಿದ್ದರು.
ತಮ್ಮ ಉನ್ನತ ಶಿಕ್ಷಣದ ಬಳಿಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ರಂಗಾಹರಿಯವರು ಕೊಚ್ಚಿಯ ಉತ್ತರ ಪರವೂರ್ ನಲ್ಲಿ ಪ್ರಚಾರಕ್ ಆಗಿ ಸಂಘಕಾರ್ಯವನ್ನು ಪ್ರಾರಂಭಿಸಿದರು.ನಂತರದ ದಿನಗಳಲ್ಲಿ ಅವರಿಗೆ ಸಂಘದ ಹಲವು ಕೆಲಸಗಳು ಬಂದವು. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗೌಪ್ಯವಾಗಿದ್ದುಕೊಂಡು ಅನೇಕ ಕಾರ್ಯಗಳಲ್ಲಿ ನಿರತರಾಗಿದ್ದರು.
1983 ರಿಂದ 1993 ಕೇರಳ ಪ್ರಾಂತ ಪ್ರಚಾರಕರಾಗಿ, 1990ರಲ್ಲಿ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖರಾಗಿ, 1991ರಿಂದ 2005ರವರೆಗೆ ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖರಾಗಿ, ಏಷಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಪರ್ಕ ಕಾರ್ಯಕರ್ತರಾಗಿ, 2005ರಿಂದ 2006ರವರೆಗೆ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಂಸ್ಕೃತ, ಕೊಂಕಣಿ, ಮಲಯಾಳಂ, ಹಿಂದಿ, ಮರಾಠಿ, ತಮಿಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸುಮಾರು 50 ಕೃತಿಗಳನ್ನು ರಚಿಸಿದ್ದಾರೆ. ಅವರು ಗುಜರಾತಿ, ಬೆಂಗಾಲಿ, ಅಸ್ಸಾಮಿ ಭಾಷೆಯನ್ನೂ ಬಲ್ಲವರಾಗಿದ್ದರು. ಅವರು ಹನ್ನೆರಡು ಸಂಪುಟಗಳ ಗುರೂಜಿ ಸಮಗ್ರವನ್ನು ಸಂಪಾದಿಸಿ, ಸಂಕಲಿಸಿದ್ದಾರೆ. ಅವರ ಕೊನೆಯ ಕೃತಿ ಪೃಥ್ವಿ ಸೂಕ್ತವನ್ನು ಈಗಿನ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು.