ಮೈಸೂರು: ಮೈಸೂರಿನ ಸಂಘ ಕಾರ್ಯದ ಮೊದಲ ಪೀಳಿಗೆಯ ಕಾರ್ಯಕರ್ತ, ಶ್ರೀ ಜನಜಾಗರಣ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ
ಸುದೀರ್ಘ ಸೇವೆ ಸಲ್ಲಿಸಿದ್ದ ತಿಲಕ ನಗರದ ಶ್ರೀ ವಿಠ್ಠಲರಾಯರು (96) ಗುರುವಾರ ನಿಧನ ಹೊಂದಿದರು.
ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟಿದ್ದ ಅವರು ಮೂವರು ಪುತ್ರಿಯರು, ಸಾವಿರಾರು ಕಾರ್ಯಕರ್ತರ ಕುಟುಂಬವನ್ನು ಅಗಲಿದ್ದಾರೆ. ಅವರ ದೇಹವನ್ನು ನಗರದ ಜೆ ಎಸ್ ಎಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಭಾರತ ಮಾತೆಯ ಸೇವೆಗಾಗಿ ಈ ದೇಹ ಮುಡಿಪು ಎನ್ನುವ ಮಾತಿಗೆ ಅನ್ವರ್ಥ ಎಂಬಂತೆ ಬಾಳಿ, ಬೆಳಗಿದ ವಿಠಲರಾವ್ ಅವರು
ಅವರ ಮಗಳೆ ಹೇಳುವಂತೆ ಇಚ್ಛಾ ಮರಣಿ. ಮೊನ್ನೆ ಇನ್ನು ಎರಡು ದಿನ ಬದುಕುತ್ತೇನೆ ಎಂದು ಹೇಳಿ ಶುಕ್ರವಾರ ಒಂದು ದೀರ್ಘ ಉಸಿರಾಟದೊಂದಿಗೆ ತಮ್ಮ ಭೌತಿಕ ದೇಹ ತೊರೆದು ಹೊರಟು ಹೋದರು.
ವಿಠ್ಠಲರಾಯರು ಬದುಕು ಎಂದರೆ ಅದೊಂದು ಆದರ್ಶ. ಕೈ ಗಡಿಯಾರ ವ್ಯಾಪಾರಸ್ಥರಾಗಿದ್ದ ಅವರ ಸಂಪರ್ಕ ಈ ಪೀಳಿಗೆಯ ಕಾರ್ಯಕರ್ತರಿಗೆ ದೊರೆತಾಗ ಅವರ ದೇಹಕ್ಕೆ ಸರ್ಕಾರಿ ಭಾಷೆಯಲ್ಲಿ ನಿವೃತ್ತ ವಯಸ್ಸು ಬಂದಾಗಿತ್ತು. ಆದರೆ ಅವರ ಮನಸ್ಸು ಇನ್ನು ಹೊಸದನ್ನು ಕಲಿಯುವ ಮತ್ತು ಸಮಾಜಕ್ಕೆ ಇನ್ನಷ್ಟನ್ನು ಕೊಡುವ ತವಕದಲ್ಲಿತ್ತು. ವಿಠ್ಠಲರಾಯರಿಂದ ದೇಶಸೇವೆಯ ಪ್ರೇರಣೆ ಪಡೆದ
ಕಾರ್ಯಕರ್ತರ ಸಂಖ್ಯೆ ದೊಡ್ಡದು.
ಸದಾ ಗಂಭೀರ ವದನ ಹಾಗೂ ಮುಂದೆ ಏನು ಮಾಡುವುದು ಎಂಬ ಯೋಚನೆಯಲ್ಲಿ ತಲ್ಲೀನರಾಗಿರುತ್ತಿದ ಕರ್ಮಯೋಗಿ ಶ್ರೀ ವಿಠ್ಠಲರಾಯರು. ಎಷ್ಟು ಗಂಭೀರ ಎಂದರೆ ಸ್ವಲ್ಪ ಹತ್ತಿರವಾಗುವವರೆಗೂ ಅವರಿಗೆ ನಗಲು ಬರುತ್ತದೆ ಎಂದರೆ ನಾವೆಲ್ಲರೂ ನಂಬುತ್ತಲೇ ಇರಲಿಲ್ಲ. ಕ್ರಮೇಣ ಹತ್ತಿರವಾದಾಗ ಅವರ ಮಾತೃ ಹೃದಯದ ಪ್ರೀತಿಯ ಭಾವದಿಂದ ನಾವೆಲ್ಲರೂ ಧನ್ಯರಾಗುತ್ತಿದ್ದೆವು.
ಯಾರು ಬರಲಿ, ಬಾರದೆ ಇರಲಿ, ಸಮಯಕ್ಕೆ ಸರಿಯಾಗಿ ತಿಲಕ್ ನಗರದ ಸಾಂಘಿಕ್ ನಲ್ಲಿ ಅವರು ಪ್ರತ್ಯಕ್ಷ. ಶಾಖೆ ಮತ್ತು ಉತ್ಸವಗಳು ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಬೇಕು ಎಂಬ ಆಗ್ರಹ ಮತ್ತು ತಪ್ಪಿದಾಗ ಸಾತ್ವಿಕ ಕೋಪ ಅವರ ಸಹಜ ಗುಣ. ನಾವು ಅವರಿಂದ ಪ್ರಭಾವಿತವಾದ ಅದೆಷ್ಟೋ ಸಂದರ್ಭಗಳು. ಇವೇ ಅದರಲ್ಲಿ
ಕೆಲವು ಅಚ್ಚಳಿಯದೆ ಇರುವ ಕೆಲವು ಸನ್ನಿವೇಶ ಮತ್ತು ಮಾತುಗಳು ಇಂದು ನೆನಪಾಗುತ್ತಿದೆ.
ಒಮ್ಮೆ ಶಾಖೆಯಲ್ಲಿ ನಮ್ಮ ಜಿಲ್ಲಾ ಪ್ರಚಾರಕರು “ನಾವು ಶಾಖೆಗೆ ಯಾಕೆ ಬರುತ್ತೇವೆ?” ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಕಿರಿಯರ ಉತ್ತರಗಳ ಸರದಿ ಮುಗಿದ ಮೇಲೆ ವಿಠ್ಠಲರಾಯರ ಸರದಿ. ಅವರು ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ. ಆ ಪ್ರಶ್ನೆಗೆ ಅವರ ಉತ್ತರ ಸರಳವಾಗಿದ್ದರೂ ತುಂಬಾ ಗಹನವಾಗಿತ್ತು, ಅವರು ” ದೇಶದ ಕೆಲಸ ಮಾಡಲು ಇದಕ್ಕಿಂತ ಸುಲಭದ ದಾರಿ ಇನ್ನೊಂದು ಸಿಕ್ಕಿಲ್ಲ ಅದಕ್ಕೆ ಸಂಘದ ಕೆಲಸ ಮಾಡುತ್ತೇನೆ” ಎಂದಿದ್ದರು.
ಒಮ್ಮೆ ವಿಜಯದಶಮಿ ಸಂಚಲನ ಮೈಸೂರಿನಲ್ಲಿ ನಡೆದಾಗ ಧ್ವಜ ಮತ್ತು ತೋರಣ ಕಟ್ಟುವ ಕೆಲಸ ನಮ್ಮ ನಗರದ ಕಾರ್ಯಕರ್ತರದಾಗಿತ್ತು, ಹಿರಿಯಜ್ಜ ವಿಠ್ಠಲರಾಯರು ಅವರ ವಯಸ್ಸಿನ ಕಾರಣಕ್ಕೆ ಬರುವುದು ಬೇಡವೆಂಬುದು ತರುಣ ಕಾರ್ಯಕರ್ತರ ವಾದ. ಆದರೆ ಅವರು ಕೇಳಬೇಕಲ್ಲ. ಅಲಂಕಾರ ಮಾಡಿದಷ್ಟೂ ದಿನ ಬೆಳ್ಳಿಗೆಯಿಂದ ರಾತ್ರಿವರೆಗೂ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿಗೆ ಸಮಯ ಕೊಟ್ಟಿದ್ದರು. ಅಷ್ಟು ಮಾತ್ರವಲ್ಲ ಯಶಸ್ವಿ ಸಂಚಲನದ ನಂತರ ಒದ್ದಾಡಿದ ಕಾರ್ಯಕರ್ತರಿಗೆ ಅವರೆ ಹಣ್ಣು ಹಂಪಲು ತಂದು ಅವರೆ ಅದನ್ನು ಎಲ್ಲರಿಗೂ ಹಂಚಿದ್ದರು.
2002 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮರಸತಾ ಸಂಗಮಕ್ಕೆ ನಮ್ಮ ನಗರದಿಂದ ಹೋದವರಲ್ಲಿ 75 ವರ್ಷದ ತರುಣ ವಿಠ್ಠಲರಾಯರೂ ಒಬ್ಬರು. ಸಮರಸತಾ ಸಂಗಮದಲ್ಲಿ ಪಾಲ್ಗೊಂಡವರು ಒಪ್ಪುವ ಮಾತು ಎಂದರೆ ಅಲ್ಲಿ ಎಲ್ಲರಿಗೂ ಸಿಕ್ಕಿದು ಬೆಟ್ಟದಷ್ಟು ಪ್ರೇರಣೆ ಮತ್ತು ಗಣವೇಷವೆಲ್ಲ ಕೊಳೆಯಾಗುವಂತೆ ಮಾಡಿದ ಹಿಡಿಯಷ್ಟು ಧೂಳು. ಮನೆಗೆ ಬಂದೊಡನೆ ಗಣವೇಷ ಒಗೆಯುವವರಿಗೂ ಯಾರಿಗೂ ಸಮಾಧಾನವಿಲ್ಲ. ಸಮರಸತಾ ಸಂಗಮದ ಮುಂದಿನ ಭಾನುವಾರ ಎಂದಿನಂತೆ ಸಾಂಘಿಕ. ಆದರೆ ಸದಾ ಇಸ್ತ್ರಿ ಹಾಕಿದ ಶುಭ್ರವೇಷ ತೊಟ್ಟು ಕಾಣಿಸುತ್ತಿದ್ದ ವಿಠಲರಾಯರು ಮಾತ್ರ ಧೂಳು ತುಂಬಿದ ಗಣವೇಷದಲ್ಲಿ ಸಾಂಘಿಕ್ಗೆ ಬಂದಿದ್ದರು. ಎಲ್ಲರಿಗೂ ಆಶ್ಚರ್ಯ. ಒಬ್ಬ ಸ್ವಯಂಸೇವಕರು ಕುತೂಹಲ ತಾಳಲಾರದೆ ಅವರನ್ನು ಹೀಗೆ ಯಾಕೆ ಬಂದಿರಿ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅವರು ಕೊಟ್ಟ ಉತ್ತರ ನಾವೆಲ್ಲರು ಎಂದೂ ಮರೆಯುವುದಿಲ್ಲ. ಅವರು ಹೇಳಿದ್ದಿಷ್ಟು: “ಅಷ್ಟು ಜನ ಪ್ರಚಾರಕರು ಮತ್ತು ಹಿರಿಯ ಸ್ವಯಂಸೇವಕರು ಸೇರಿದ್ದ ಜಾಗ ಅದು ನಮಗೆ ಪುಣ್ಯ ಭೂಮಿ ಮತ್ತು ಪ್ರತಿ ಧೂಳಿನ ಕಣವೂ ಪುಣ್ಯ ಪ್ರದಾಯಿನಿ. ಮನೆಯಲ್ಲಿ ಸ್ವಲ್ಪ ಧೂಳು ಬೀಳುವಂತೆ ಮಾಡಿ ಸ್ವಲ್ಪ ಸಂಘಸ್ಥಾನದಲ್ಲೂ ಬಿದ್ದರೆ ಮುಂದೆ ಮೈಸೂರಿನ ಸಂಘ ಕಾರ್ಯವೂ ಹೆಚ್ಚಾಗುವುದು ಎಂಬ ಆಸೆ. ಅದಕ್ಕೆ ತೊಳೆಯದ ಗಣವೇಷ ಧರಿಸಿ ಬಂದೆ” ಎಂದಿದ್ದರು. ಸಂಘದ ಪ್ರಚಾರಕರು ಮತ್ತು ಹಿರಿಯ ಸ್ವಯಂಸೇವಕರ ಬಗ್ಗೆ ಅವರಿಗಿದ್ದ ಶ್ರದ್ಧೆ ಅಂತದ್ದು.
ಬದುಕಿದ್ದಾಗ ಸಮಾಜಕ್ಕೆ ಪೂರಕ ಜೀವನ ನಡೆಸಿ, ದೇಹಾಂತ್ಯದ ಬಳಿಕ ದೇಹದಾನ ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕ್ಯ ಕಂಡುಕೊಂಡಿದ್ದಾರೆ ನಮ್ಮೆಲ್ಲರ ಹಿರಿಯಜ್ಜ ಶ್ರೀ ವಿಠ್ಠಲರಾಯರು. ಆ ಮೂಲಕ ಅವರು ನಮಗೆ ಸಾರ್ಥಕವಾಗಿ ಬದುಕುವುದು ಮತ್ತು ಸಾವನ್ನು ಯೋಗಿಯಂತೆ ಸ್ವೀಕರಿಸುವುದನ್ನು ಕಲಿಸಿ ಹೋಗಿದ್ದಾರೆ .
ಲೇಖನ: ತಿಲಕ ಕುಮಾರ್, ವಿಭಾಗ ಕಾರ್ಯವಾಹ, ಮೈಸೂರು.