ಉಡುಪಿ, ಕರ್ನಾಟಕ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿದ್ದ, ನಾಗಾಲ್ಯಾಂಡ್, ತ್ರಿಪುರ, ಅಸ್ಸಾಂ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಇಂದು ನವೆಂಬರ್ 10, 2023 ಮುಂಬೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಪರಿಚಯ:
ಅಕ್ಟೋಬರ್ 8, 1931ರಂದು ಕರ್ನಾಟಕದ ಉಡುಪಿಯಲ್ಲಿ ಜನಿಸಿದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ಉಡುಪಿಯ ಎಂಜಿಎಂ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ತಮ್ಮ ಪದವಿ ವಿದ್ಯಾಭ್ಯಾಸದ ನಂತರ ಮುಂಬೈ ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಕಾರ್ಯನಿರ್ವಹಿಸಿದರು. ಮುಂಬೈ ವಿಶ್ವವಿದ್ಯಾನಿಲಯದ ಮೂಲಕ ಕಾನೂನು ಪದವಿಯನ್ನೂ ಪಡೆದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು 1948ರಲ್ಲಿ ಸಂಘದ ಮೇಲೆ ನಿಷೇಧಾಜ್ಞೆಯನ್ನು ಸರ್ಕಾರ ಹೇರಿದ್ದಾಗ 6 ತಿಂಗಳುಗಳ ಕಾಲ ಸೆರೆಮನೆವಾಸವನ್ನೂ ಅನುಭವಿಸಿದ್ದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದ ಇವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ 1991ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಈಶಾನ್ಯ ರಾಜ್ಯಗಳ ಉಸ್ತುವಾರಿಯಾದರು. 1995-2005ರವರೆಗೆ ಭಾರತೀಯ ಜನತಾ ಪಕ್ಷದ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿಯಾಗಿದ್ದರು. ಎಸ್ ಸಿ/ ಎಸ್ ಟಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ, ಈಶಾನ್ಯ ಭಾರತ ಸಂಪರ್ಕ ಘಟಕದ ಅಖಿಲ ಭಾರತೀಯ ಪ್ರಭಾರಿಯಾಗಿ, ವಿದೇಶದಲ್ಲಿರುವ ಬಿಜೆಪಿ ಗೆಳೆಯರ ಘಟಕ ಸಹ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.
ಶ್ರೀ ಆಚಾರ್ಯ ಅವರು 14 ಜುಲೈ 2014 ರಿಂದ 31 ಜುಲೈ 2019ರವರೆಗೆ ನಾಗಲ್ಯಾಂಡ್ ರಾಜ್ಯಪಾಲರಾಗಿ, 21 ಜುಲೈ 2014ರಿಂದ 19 ಮೇ 2015ರವರೆಗೆ ತ್ರಿಪುರ ರಾಜ್ಯಪಾಲರಾಗಿ, 12 ಡಿಸೆಂಬರ್ 2014 ರಿಂದ 17 ಡಿಸೆಂಬರ್ 2016ರವರೆಗೆ ಅಸ್ಸಾಂ ರಾಜ್ಯಪಾಲರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಮತ್ತು ಹೆಚ್ಚುವರಿ ಉಸ್ತುವಾರಿ ರಾಜ್ಯಪಾಲರಾಗಿ ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲೂ ಸೇವೆ ಸಲ್ಲಿಸಿದ್ದಾರೆ. ಶ್ರೀ ಪಿ ಬಿ ಆಚಾರ್ಯ ಅವರು ಕರಾವಳಿ ಭಾಗದಿಂದ ರಾಜ್ಯಪಾಲರಾದ ಎರಡನೇಯವರಾಗಿದ್ದರು.
ಆರ್ ಎಸ್ ಎಸ್ ಸಂತಾಪ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ತಮ್ಮ ಸಂತಾಪ ಸಂದೇಶದಲ್ಲಿ “ನಾಗಾಲ್ಯಾಂಡ್ ಮತ್ತು ಅಸ್ಸಾಂನ ಮಾಜಿ ರಾಜ್ಯಪಾಲರಾದ ಶ್ರೀ ಪದ್ಮನಾಭ ಬಿ. ಆಚಾರ್ಯ ಅವರ ದುಃಖಪೂರ್ಣ ನಿಧನವು ಸಾರ್ವಜನಿಕ ಜೀವನದಲ್ಲಿ ಒಂದು ಉಜ್ವಲ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಶ್ರೀ ಆಚಾರ್ಯರವರನ್ನು ಅಗಲಿದ ಕುಟುಂಬಕ್ಕೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಶ್ರೀ ಪದ್ಮನಾಭ ಜಿ ಉತ್ಸಾಹಿ ಸ್ವಯಂಸೇವಕ ಮತ್ತು ಆಳವಾದ ಬದ್ಧತೆಯಿದ್ದ ಸಾರ್ವಜನಿಕ ಕಾರ್ಯಕರ್ತರಾಗಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ, ಅವರು ಅನೇಕ ನವೀನ ಚಟುವಟಿಕೆಗಳನ್ನು ಪ್ರಾರಂಭಿಸಿದರು ಮತ್ತು ಮುಂಬೈ ವಿಶ್ವವಿದ್ಯಾಲಯದ ಸೆನೆಟ್ನಲ್ಲಿ ಸೇವೆ ಸಲ್ಲಿಸಿದರು. ಶ್ರೀ ಆಚಾರ್ಯ ಜೀ ಅವರು ಶಿಕ್ಷಣ, ರಾಷ್ಟ್ರೀಯ ಏಕಾತ್ಮತೆ, ಸಂಸ್ಕೃತಿ, ಸೇವೆ ಮತ್ತು ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅವರು ರಾಷ್ಟ್ರೀಯತಾವಾದಿ ಕಾರಣಕ್ಕಾಗಿ, ವಿಶೇಷವಾಗಿ ಈಶಾನ್ಯ ಪ್ರದೇಶದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ವ್ಯಾಪಕ ಸಂಪರ್ಕಗಳನ್ನು ಮಾಡಿದರು. ಈಶಾನ್ಯ ಪ್ರದೇಶ – ಅಲ್ಲಿನ ಜನರು, ಸಮಾಜ, ಭೂಮಿ, ಸಂಸ್ಕೃತಿ ಮತ್ತು ಆರ್ಥಿಕತೆ ಇತ್ಯಾದಿ – ಅವರಿಗೆ ತುಂಬಾ ಪ್ರಿಯವಾಗಿತ್ತು. ಇವೆಲ್ಲದರ ಶ್ರೇಯೋಭಿವೃದ್ಧಿಗೆ ಅವರು ಅವಿರತವಾಗಿ ಶ್ರಮಿಸಿದರು. ರಾಜ್ಯಪಾಲರಾಗಿ ಅವರ ಪಾತ್ರವನ್ನು ಜನರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಅವರ ಸ್ಮೃತಿಗೆ ನಾವು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಮತ್ತು ಅವರ ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಓಂ ಶಾಂತಿಃ.” ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.