ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ರಾಷ್ಟ್ರೀಯ ಸಿಖ್ ಸಂಗತ್ ನ ಹಿರಿಯ, ಸರ್ದಾರ ಚಿರಂಜೀವಿ ಸಿಂಗ್ ಇಂದು ನವೆಂಬರ್ 20, 2023ರಂದು ದೈವಾಧೀನರಾದರು.
ಪಂಜಾಬ್ ರಾಜ್ಯದಲ್ಲಿ ಸಂಘದ ಕಾರ್ಯ ಬೆಳೆಸುವುದರ ಜೊತೆಗೆ ಪಂಜಾಬನಲ್ಲಿನ ಪ್ರಕ್ಷುಬ್ದ ಸಮಯದಲ್ಲಿ ರಾಷ್ಟ್ರೀಯ ಏಕತೆಗಾಗಿ ಹಗಲಿರುಳು ಶ್ರಮಿಸಿದವರು ಸರ್ದಾರ ಚಿರಂಜೀವಿ ಸಿಂಗ್. 1986ರಲ್ಲಿ ಸರ್ದಾರ ಶಮಶೇರ್ ಸಿಂಗ್ ಅವರಿಂದ ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಸಿಖ್ ಸಂಗತ್ ಅನ್ನು 1990ರಿಂದ ಮುನ್ನಡೆಸಿಕೊಂಡು ಅಷ್ಟೇನೂ ಪೂರಕವಲ್ಲದ ವಾತಾವರಣದಲ್ಲೂ ಸಂಘಟನೆಯನ್ನು ಕಟ್ಟಿ ಬೆಳೆಸಿದ ಛಲಜೀವಿ ಸರ್ದಾರ ಚಿರಂಜೀವಿ ಸಿಂಗ್.
ಸಮಾಜದಲ್ಲಿ ಸಮರಸತೆ ಹಾಗೂ ಶಾಂತಿಯನ್ನು ಸ್ಥಾಪಿಸಲು ಎಲ್ಲಾ ಮಠಾಧೀಶರನ್ನು ಒಳಗೊಂಡ ’ಸಂತ ಯಾತ್ರೆ’ಯನ್ನು ಸರ್ದಾರ ಚಿರಂಜೀವಿ ಸಿಂಗ್ ಅವರು ಆಯೋಜನೆ ಮಾಡಿ, ಎಲ್ಲಾ ಸವಾಲುಗಳ ಮಧ್ಯೆ ಅದನ್ನು ಯಶಸ್ವಿಗೊಳಿಸಿದ್ದರು. ಉತ್ತರಾಖಂಡದಲ್ಲಿನ ಬ್ರಹ್ಮಕುಂಡದಿಂದ ಅಮೃತಸರ್ ವರೆಗಿನ ಈ ಯಾತ್ರೆಯನ್ನು ’ಹರಿ ಕೇ ದ್ವಾರ ಸೇ ಹರಮಂದಿರ ತಕ್’ ಎಂಬ ಅವರ ಕಲ್ಪನೆ ನಿಜಕ್ಕೂ ಅಂದಿನ ಪಂಜಾಬಿಗೆ ಅವಶ್ಯವಿದ್ಧ ಸಾಂತ್ವನವನ್ನು ನೀಡಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ
ಅಗಲಿದ ಜ್ಯೇಷ್ಠ ಪ್ರಚಾರಕ ಸರ್ದಾರ್ ಚಿರಂಜೀವಿ ಸಿಂಗ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ” ಆದರಣೀಯ ಸರ್ದಾರ್ ಚಿರಂಜೀವಿ ಸಿಂಗ್ ಅವರ ದೇಹಾವಸಾನದೊಂದಿಗೆ ರಾಷ್ಟ್ರಕ್ಕಾಗಿ ಸಮರ್ಪಿತ ಒಂದು ಪ್ರೇರಣಾದಾಯಿ ಜೀವನದ ಇಹಲೋಕದ ಯಾತ್ರೆ ಪೂರ್ಣಗೊಂಡಿದೆ. ಆಜೀವಪರ್ಯಂತ ಸಂಘದ ನಿಷ್ಠಾವಂತ ಪ್ರಚಾರಕರಾಗಿದ್ದ ಸರ್ದಾರ್ ಚಿರಂಜೀವಿ ಸಿಂಗ್ ಪಂಜಾಬಿನಲ್ಲಿ ದಶಕಗಳ ಕಾಲ ಸಂಘಕಾರ್ಯವನ್ನು ಮಾಡಿದ್ದರು. ನಂತರದಲ್ಲಿ ರಾಷ್ಟ್ರೀಯ ಸಿಖ್ ಸಂಗತ್ ನ ಮೂಲಕ ಅವರು ಪಂಜಾಬಿನಲ್ಲಿ ಕಠಿಣ ಪರಿಸ್ಥಿತಿಗಳ ಕಾರಣ ಉತ್ಪನ್ನಗೊಂಡ ಪರಸ್ಪರ ಬೇಧ ಹಾಗೂ ಅವಿಶ್ವಾಸವನ್ನು ದೂರಮಾಡಲು, ಸಹಜೀವನ ಮತ್ತು ರಾಷ್ಟ್ರಭಕ್ತಿಯ ಬೆಳಕಿನಲ್ಲಿ ಏಕತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.”
“ಅವರ ಅಗಾಧ ಪರಿಶ್ರಮ, ಪಂಜಾಬಿನ ಗುರಪರಂಪರೆಯ ಕುರಿತು ಗಹನವಾದ ಅಧ್ಯಯನ, ಉತ್ತಮ ಸಂಘಟನಾ ಕೌಶಲ್ಯದ ಮೂಲಕ ಅವರು ಅನೇಕ ಜನರನ್ನು ರಾಷ್ಟ್ರೀಯತೆಯ ಪ್ರವಾಹದಲ್ಲಿ ಜೋಡಿಸಿದರು. ಸರ್ದಾರ್ ಚಿರಂಜೀವಿ ಸಿಂಗ್ ಅವರ ಸ್ನೇಹಯುತ ಹಾಗೂ ಮಧುರ ವ್ಯಕ್ತಿತ್ವ ಸರ್ವರನ್ನೂ ಗೆಲ್ಲುತ್ತಿತ್ತು. ಕೆಲವು ಸಮಯದಿಂದ ಅಸ್ವಸ್ಥತೆಯ ಕಾರಣದಿಂದ ಸಕ್ರಿಯರಾಗಿರದಿದ್ದರೂ ಅವರ ಉತ್ಸಾಹದಲ್ಲಿ ಕೊರತೆಯಿರಲಿಲ್ಲ.”
“ಆದರಣೀಯ ಸರ್ದಾರ್ ಅವರ ನಿಧನದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಪರಿಚಿತರಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಅಗಲಿದ ಆತ್ಮವು ದಿವ್ಯ ಬೆಳಕಿನಲ್ಲಿ ಲೀನವಾಗಲಿ ಎಂದು ಅಕಾಲಪುರುಷನಲ್ಲಿ ಪ್ರಾರ್ಥಿಸುತ್ತೇವೆ.” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.