ಬೆಂಗಳೂರು: ಸನಾತನ ಪರಂಪರೆಯಲ್ಲಿ ನಾರಿ ಸೃಷ್ಟಿಯ ಕರ್ತೃ. ನಾರಿಯ ಬಗೆಗೆ ಭಾರತೀಯ ಕಲ್ಪನೆ ಅತ್ಯುತ್ತಮವಾದದ್ದು. ಗಾರ್ಗಿ, ಮೈತ್ರೇಯಿ, ಋಗ್ವೇದದ ಸೂಕ್ತ ರಚಿಸಿದವರು. ಅಕ್ಕಮಹಾದೇವಿ ವಿಶ್ವ ಮಾನ್ಯತೆ ಪಡೆದ ಹೆಣ್ಣು, ತನ್ನ ಯೌವನದ ಕಾಲದಲ್ಲಿ ಸಂಸಾರದ ಬಂಧನವನ್ನು ತೊರೆದು ಆಧ್ಯಾತ್ಮದ ಅರಿವನ್ನು ಅರಸಿ ಹೊರಟ ನಾರಿ, ಐತಿಹಾಸಿಕ ಪ್ರಜ್ಞೆಯುಳ್ಳ ಜನತೆಗೆ ಇದು ಅರ್ಥವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ | ಜ್ಯೋತಿಶಂಕರ್ ಹೇಳಿದರು.
ಯಾದವ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರು ಉತ್ತರ ವಿಭಾಗದ ಇಬಿಸು ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಬೃಹತ್ ನಾರೀಶಕ್ತಿ ಸಂಗಮದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಜಸ್ಟಿಸ್ ಮಂಜುಳಾ ಚೆಲ್ಲೂರ್ ರವರು ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಮತಿ. ಎಸ್. ಜಿ. ಸುಶೀಲಮ್ಮ, ಸಿದ್ದಾರೂಢ ಆಶ್ರಮದ ಮಾತಾಜಿ ಉಮಾ ಭಾರತಿ ಹಾಗೂ ಡಾ | ಜ್ಯೋತಿಶಂಕರ್ ರವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನೊಳಗೊಂಡ ಕಾರ್ಯಕ್ರಮದಲ್ಲಿ 2350 ಜನ ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ “ಭಾರತದಲ್ಲಿ ಮಹಿಳೆಯ ಸ್ಥಿತಿ ಗತಿಗಳು ಮತ್ತು ಮಹಿಳೆಯರು ಎದುರಿಸುತ್ತಿರುವ ಸವಾಲುಗಳ” ಬಗ್ಗೆ ಚರ್ಚೆ ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾ ಭಾರತ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಕಾರ್ಯದರ್ಶಿ ರೇಖಾ ರಾಮಚಂದ್ರನ್ ರವರು ದುರ್ಗಾ ಸಪ್ತಶತಿಯಲ್ಲಿ ಅಪರಾಜಿತ ಸ್ತೋತ್ರದಲ್ಲಿ ಮಾತೆಯನ್ನು ವಿದ್ಯಾ ರೂಪೇಣ, ಶಕ್ತಿ ರೂಪೇಣ, ದಯಾ ರೂಪೇಣ ಎಂದು ಸ್ತುತಿಸುವ ಗುಣಗಳೇ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೂ ಆದರ್ಶ. ಭೂ ಮಾತಾ, ಗಂಗಾ ಮಾತಾ, ಭಾರತ ಮಾತಾ ಎಂದು ಎಲ್ಲವನ್ನು ಮಾತೆಗೆ ಹೋಲಿಸುತ್ತೇವೆ.
ಈಗ ದೇಶವನ್ನು ಒಡೆಯಲು ಷಡ್ಯಂತ್ರಗಳು ನಡೆಯುತ್ತಿವೆ. ಧಾರವಾಹಿಗಳು, ಸಿನಿಮಾ, ಮಾರುಕಟ್ಟೆಯ ಪ್ರವೃತ್ತಿ ನಮ್ಮ ಸಂಸ್ಕೃತಿ ಯನ್ನು ನಮಗರಿವಿಲ್ಲದೆ ನಾಶಗೊಳಿಸುತ್ತಿವೆ. ಇಂತಹ ಸಮಯದಲ್ಲಿ “ನಾನೇನು ಮಾಡಬಲ್ಲೆ?” ಎಂದು ಚಿಂತನೆ ನಡೆಸುವ ಸಮಯ. ನಾವೆಲ್ಲರೂ ಸನಾತನ ಧರ್ಮದ ರಾಯಭಾರಿಗಳು ಸ್ವಾಮಿ ವಿವೇಕಾನಂದರು ಸದಾ ಹೇಳುತ್ತಿದ್ದರು, “ಒಂದು ಕೈಯಲ್ಲಿ ಸನಾತನ ಧರ್ಮ ಇನ್ನೊಂದು ಕೈಯಲ್ಲಿ ವಿಜ್ಞಾನ”ವನ್ನು ನಾವು ಹೊಂದಬೇಕು. ಸನಾತನ ಧರ್ಮ ವೈಜ್ಞಾನಿಕವಾಗಿದೆ ಇಂತಹ ಧರ್ಮದ ರಾಯಭಾರಿ ನಾವೆಲ್ಲರೂ ಆಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಂದ್ರಯಾನ ಯಶಸ್ವಿ ಉಡಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಇಸ್ರೋ ಸಂಸ್ಥೆಯ ಮಹಿಳಾ ವಿಜ್ಞಾನಿಗಳಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮ ವಂದೇಮಾತರಂ ನೊಂದಿಗೆ ಮುಕ್ತಾಯವಾಯಿತು.