ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ನೂತನ ಸಂಘಚಾಲಕರಾಗಿ ಬಸವರಾಜ ಡಂಬಳ ಅವರು ಪ್ರಾಂತ ಬೈಠಕ್ ನಲ್ಲಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ.
ಬಸವರಾಜ ಡಂಬಳ ಅವರು ಪ್ರತಿಷ್ಠಿತ ಅಂದಿನ ಕೆ.ಆರ್.ಇ.ಸಿ ಇಂದಿನ ಎನ್.ಐ.ಟಿ.ಕೆ ತಾಂತ್ರಿಕ ವಿದ್ಯಾ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಬೆಂಗಳೂರಿನ ವಿಶ್ವ ವಿಖ್ಯಾತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎಮ್.ಇ. ಪದವಿ ಪಡೆದು ಕೆಲಕಾಲ ಒರಿಸ್ಸಾದಲ್ಲಿ ಕೆಲಸ ಮಾಡಿದ್ದಾರೆ. ಕೊಪ್ಪಳದಲ್ಲಿ ಧರಣಿ ಪೈಪ್ಸ್ ಎಂಬ ಸ್ವಂತ ಪೈಪ್ ಉದ್ಯಮ ಪ್ರಾರಂಭಿಸಿದರು. ವಿದ್ಯಾರ್ಥಿ ದೆಸೆಯಿಂದ ಸಂಘದ ಸ್ವಯಂಸೇವಕರಾಗಿ ತುರ್ತು ಪರಿಸ್ಥಿತಿ ಸರ್ವಾಧಿಕಾರದ ವಿರುದ್ಧ ಭೂಗತ ಕಾರ್ಯ ನಡೆಸಿದವರು.
ಸೇವಾ ಭಾರತಿ, ಹಿಂದು ಸೇವಾ ಪ್ರತಿಷ್ಠಾನ ಮುಂತಾದ ಹಲವು ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರೆ. ಯಶಸ್ವಿ ಕೈಗಾರಿಕೋದ್ಯಮಿಯಾಗಿ 1980ರ ಕಾಲದಿಂದ ಕಲ್ಯಾಣ ಕರ್ನಾಟಕ ಭಾಗದ ಉದ್ಯಮಿಗಳಿಗೆ ಮಾರ್ಗದರ್ಶಕರಾಗಿ ಸಹಾಯ ಮಾಡಿದ್ದಾರೆ. ಅವರ ವೃತ್ತಿ ನೈಪುಣ್ಯತೆಗಾಗಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. 2017ರ ಮಧ್ಯಪ್ರದೇಶ ಸರ್ಕಾರದಿಂದ ಅತ್ಯುತ್ತಮ ಕೈಗಾರಿಕೋದ್ಯಮಿ ಪ್ರಶಸ್ತಿ ಪಡೆದಿದ್ದಾರೆ.
ಬಸವರಾಜ ಡಂಬಳ ಅವರು ಕೊಪ್ಪಳ ನಿವಾಸಿಗಳಾಗಿದ್ದು, 5 ದಶಕಗಳಿಂದ ಸ್ವಯಂಸೇವಕರು. ಈವರೆಗೆ ಬಳ್ಳಾರಿ ವಿಭಾಗದ ಸಂಘಚಾಲಕರಾಗಿದ್ದರು. ಇನ್ನು ಮುಂದೆ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾಗಿ ಸಂಘದ ಕಾರ್ಯಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.