ಪ್ರತಿ ರಾಷ್ಟ್ರದ ಬೆನ್ನೆಲುಬು ಆ ನಾಡಿನ ನಾಗರಿಕರು. ಯಾವುದೇ ದೇಶದಲ್ಲಿ ಮಾನವ ನಿರ್ಮಿತ ಮತ್ತು ಪ್ರಾಕೃತಿಕ ವಿಕೋಪಗಳು ಉಂಟಾದಾಗ ಆ ನಾಡಿನ ನಾಗರಿಕರ ರಕ್ಷಣೆ ಮತ್ತು ವಿಪತ್ತಿನ ಸಂದರ್ಭದ ಸನ್ನದ್ಧತೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 1 ರಂದು ಜಗತ್ತಿನಾದ್ಯಂತ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಲ್ಲಿ ನಾಗರಿಕ ರಕ್ಷಣಾ ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಈ ದಿನ ಎತ್ತಿಹಿಡಿಯಲಾಗುತ್ತದೆ. ಈ ವರ್ಷ ವಿಶ್ವ ನಾಗರಿಕ ರಕ್ಷಣಾ ದಿನದ ಥೀಮ್ ‘ವೀರರನ್ನು ಗೌರವಿಸಿ ಮತ್ತು ಸುರಕ್ಷತಾ ಕೌಶಲ್ಯಗಳನ್ನು ಉತ್ತೇಜಿಸಿ’ ಎಂಬ ಅಂಶವನ್ನು ಒಳಗೊಂಡಿದೆ.
ಇತಿಹಾಸ
1931 ರಲ್ಲಿ ಫ್ರೆಂಚ್ ಸರ್ಜನ್ ಜನರಲ್ ಜಾರ್ಜ್ ಸೇಂಟ್ ಪೌಲ್ ಅವರು ಸಾಮಾನ್ಯ ಜನರ ಮೇಲೆ ಯುದ್ಧದ ಪರಿಣಾಮಗಳನ್ನು ವೀಕ್ಷಿಸಿದ ನಂತರ ಸುರಕ್ಷಿತ ವಲಯಗಳನ್ನು ನಿರ್ಮಿಸಲು ಉದ್ದೇಶಿಸಿ ‘ಜಿನೀವಾ ವಲಯಗಳ ಸಂಘ’ವನ್ನು ಸ್ಥಾಪಿಸಿದರು. 1935 ರಲ್ಲಿ ಈ ಸಂಘವನ್ನು ಫ್ರೆಂಚ್ ಚೇಂಬರ್ ಆಫ್ ಡೆಪ್ಯೂಟೀಸ್ ಗುರುತಿಸಿತ್ತು. ಸೇಂಟ್-ಪೌಲ್ ಅವರ ಮನವಿಯ ಮೇರೆಗೆ ಈ ಸಂಘವನ್ನು ಜಿನೀವಾಗೆ ವರ್ಗಾಯಿಸಲಾಯಿತು. ನಂತರ “The International Association for the Protection of Civilian Populations and Historic Buildings in Wartime” ಆಗಿ ಮಾರ್ಪಟ್ಟಿತ್ತು.1958 ರಲ್ಲಿ International Civil Defence Organisation (ICDO) ಎಂಬ ಸರ್ಕಾರೇತರ ಸಂಸ್ಥೆಯ ರೂಪು ಪಡೆಯುತ್ತದೆ. 1972 ರಲ್ಲಿ ಸಂಸ್ಥೆಯು ತನ್ನದೇಯಾದ ಸಂವಿಧಾನವನ್ನು ತನ್ನ ಸದಸ್ಯ ರಾಜ್ಯಗಳ ಅನುಮೋದನೆಯ ಮೂಲಕ ರಚಿಸಿದ ಸಂಸ್ಥೆ ಅದೇ ವರ್ಷ ಮಾರ್ಚ್ 1 ರಂದು ಜಾರಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಮಾರ್ಚ್ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರಸ್ತುತ 60 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡಿದೆ.
ಮಹತ್ವ
ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ, ಕಟ್ಟಡ ದುರಂತದಂತಹ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಸ್ಪಂದಿಸುವಲ್ಲಿ ನಾಗರಿಕ ರಕ್ಷಣಾ ತಂಡ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಾಗರಿಕರಿಗೆ ಕಲಿಸುವುದು, ರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವುದು, ಜನಸಂಖ್ಯಾ ಸಂರಕ್ಷಣಾ ವಿಷಯಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳುವುದು, ವಿಪತ್ತುಗಳ ವಿರುದ್ಧದ ಹೋರಾಟಕ್ಕೆ ಕಾರಣವಾದ ರಾಷ್ಟ್ರೀಯ ಸೇವೆಗಳ ಪ್ರಯತ್ನಗಳಿಗೆ ಗೌರವ ಸಲ್ಲಿಸುವುದು ಇದರ ಮುಖ್ಯ ಕಾರ್ಯ.
ಸನ್ನದ್ಧತೆಯನ್ನು ಉತ್ತೇಜಿಸುವುದು: ಅಪಘಾತಗಳು ಅಥವಾ ವಿಪತ್ತುಗಳ ಸಮಯದಲ್ಲಿ ಜೀವಗಳನ್ನು ರಕ್ಷಿಸಲು ಲಭ್ಯವಿರುವ ಸಾಧನಗಳು ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ತುರ್ತು ಸನ್ನದ್ಧತೆಗೆ ಆದ್ಯತೆ ನೀಡಲು ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಗಳನ್ನು ಈ ದಿನ ಪ್ರೋತ್ಸಾಹಿಸುತ್ತದೆ.
ಸಹಯೋಗವನ್ನು ಉತ್ತೇಜಿಸುವುದು: ವಿಶ್ವ ನಾಗರಿಕ ರಕ್ಷಣಾ ದಿನವು ಸರ್ಕಾರಿ ಸಂಸ್ಥೆಗಳು, ನಾಗರಿಕ ರಕ್ಷಣಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಸೇರಿದಂತೆ ತುರ್ತು ನಿರ್ವಹಣೆಯಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ನಡುವೆ ಸಹಯೋಗವನ್ನು ಉತ್ತೇಜಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಸಂಪನ್ಮೂಲ ನಿಯೋಜನೆ ಮತ್ತು ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಈ ಸಹಕಾರವು ನಿರ್ಣಾಯಕವಾಗಿದೆ.
ನಾಗರಿಕ ರಕ್ಷಣಾ ವೀರರನ್ನು ಗೌರವಿಸುವುದು: ಬಿಕ್ಕಟ್ಟಿನ ಸಮಯದಲ್ಲಿ ಜೀವಗಳನ್ನು ಉಳಿಸುವ ಮತ್ತು ಆಸ್ತಿಯನ್ನು ರಕ್ಷಿಸುವ ಬದ್ಧತೆಯನ್ನು ನಿರಂತರವಾಗಿ ಪ್ರದರ್ಶಿಸಿದ ನಾಗರಿಕ ರಕ್ಷಣಾ ಸಿಬ್ಬಂದಿಯ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ವಿಶ್ವ ನಾಗರಿಕ ರಕ್ಷಣಾ ದಿನದ ಪ್ರಯುಕ್ತ ಗುರುತಿಸಲಾಗುತ್ತದೆ.