-ದಿವ್ಯಾ ಹೆಗಡೆ ಕಬ್ಬಿನಗದ್ದೆ, ಉಪಸಂಪಾದಕಿ, ವಿಕ್ರಮ ವಾರಪತ್ರಿಕೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಕಾಶ್ಮೀರ ಭೇಟಿ ದೇಶಾದ್ಯಂತ ಹೊಸ ಅಲೆಯೊಂದನ್ನು ಹುಟ್ಟುಹಾಕಿತು. ಪ್ರಧಾನಿಗಳ ಭಾಷಣ, ರ್ಯಾಲಿ, ಜನರೊಡನೆ ಸಂವಹನ, ಅಭಿವೃದ್ಧಿ ಯೋಜನೆಗಳ ಘೋಷಣೆ ಇತ್ಯಾದಿಗಳ ಮೇಲೆ ಜನ ಕುತೂಹಲದ ಕಣ್ಣು ನೆಟ್ಟಿದ್ದರು. ಏಕೆಂದರೆ ಐತಿಹಾಸಿಕ ಆರ್ಟಿಕಲ್ 370 ರದ್ದತಿಯ ಬಳಿಕ ಮೊದಲ ಬಾರಿ ಪ್ರಧಾನಿಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು! ನಿರೀಕ್ಷೆಯಂತೆಯೇ ರ್ಯಾಲಿಯಲ್ಲಿ ದಾಖಲೆಯ 2 ಲಕ್ಷಕ್ಕೂ ಅಧಿಕ ಜನ ಜಮಾಯಿಸಿದ್ದರು. ಮೋದಿಯವರು ಸುಮಾರು 6,400 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಶ್ರೀನಗರದ ಕ್ರೀಡಾಂಗಣದಲ್ಲಿ ನಡೆದ ‘ವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರೊಡನೆ ಬೆರೆತರು; ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡ ಯುವಕನನ್ನು ಮಾತಾಡಿಸಿ ಸೆಲ್ಫಿ ತೆಗೆಸಿಕೊಂಡರು. ‘ಪ್ರಧಾನಿ ಮೋದಿ ಈ ಬಾರಿ ಕಾಶ್ಮೀರದಿಂದಲೇ ಚುನಾವಣೆಗೆ ಸ್ಫರ್ಧಿಸಬೇಕು. ಅವರು ಎಲ್ಲೇ ನಿಂತರೂ ಜಯ ಗಳಿಸುತ್ತಾರೆ. ಆದರೆ ಕಾಶ್ಮೀರದಲ್ಲಿ ಸ್ಪರ್ಧಿಸಿದರೆ ವಿಪಕ್ಷಗಳ ಬಾಯಿಗೆ ಬೀಗ ಬೀಳುತ್ತದೆ’ ಎಂದು ಕಾಶ್ಮೀರದ ಜನರೇ ತಮ್ಮ ಬಯಕೆಯನ್ನು ಹೊರಹಾಕಿದರು.
ಪ್ರಧಾನಿಗಳಂತೂ ನವ ಜಮ್ಮು ಕಾಶ್ಮೀರವನ್ನು ಕಂಡು ಎಲ್ಲಿಲ್ಲದ ಹಿಗ್ಗಿನಲ್ಲಿದ್ದರು. ಆ ಹಿಗ್ಗು ಸಹಜವಾಗಿ ಅವರ ಭಾಷಣದಲ್ಲೂ ವ್ಯಕ್ತವಾಯಿತು. ‘ಹಲವು ದಶಕಗಳಿಂದ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 370ನೇ ವಿಧಿಯ ಹೆಸರಿನಲ್ಲಿ ಜನರ ದಾರಿ ತಪ್ಪಿಸಿದ್ದವು. ಆದರೆ ಇಂದು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ದೊರಕುತ್ತಿವೆ. ಜನರಿಗೆ ಸತ್ಯ ಗೊತ್ತಿದೆ. ಇಂದು ಕಾಶ್ಮೀರದ ಪರಿಸ್ಥಿತಿ ಮೊದಲಿನಂತಿಲ್ಲ. ಇದು ನಾವೆಲ್ಲರೂ ಕಾಯುತ್ತಿದ್ದ ನವ ಜಮ್ಮು ಕಾಶ್ಮೀರ’ ಎಂದು ಕಾಶ್ಮೀರದ ಬಣ್ಣನೆ ಮಾಡಿದರು. ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಪ್ರತಿಪಕ್ಷಗಳು ಮುಗಿಬಿದ್ದವು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೋದಿ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಆರ್ಟಿಕಲ್ 370 ರದ್ದತಿಯ ಬಳಿಕವೇ ಕಾಶ್ಮೀರಕ್ಕೆ ಸಂಕಷ್ಟ ಎದುರಾಗಿದೆ, ತಮ್ಮ ಆಡಳಿತಕಾಲದಲ್ಲಿ ಜಮ್ಮು ಕಾಶ್ಮೀರ ಅಭಿವೃದ್ಧಿಯ ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಎಂದು ಹೇಳಿಕೆ ನೀಡಿದರು! ಆದರೆ ಮೋದಿಯವರ ಭೇಟಿಯಿಂದ ಪುಳಕಿತಗೊಂಡ ಜನರೇ ಈ ಇಬ್ಬರು ನಾಯಕರಲ್ಲಿ ಸತ್ಯ ಯಾರ ಕಡೆಯಿದೆ ಎಂಬುದನ್ನು ತೋರಿಸಿಕೊಟ್ಟರು. ಅವರ ಮೊಗದಲ್ಲಿ ಮೂಡಿದ್ದ ಹರ್ಷ, ನೆಮ್ಮದಿಗಳೇ ಮೋದಿಯವರ ಸಾಧನೆಯನ್ನು ಎತ್ತಿ ತೋರಿಸಿದ್ದವು.
ಹಾಗಾದರೆ ಮೋದಿಯವರಂದಂತೆ ಆರ್ಟಿಕಲ್ 370 ರದ್ದತಿ ದೇಶಕ್ಕೆ ಅಷ್ಟು ಲಾಭವನ್ನು ತಂದುಕೊಟ್ಟಿತೇ? ಅದರ ರದ್ದತಿಗೂ ಮೊದಲು ಜಮ್ಮು ಕಾಶ್ಮೀರದ ಪರಿಸ್ಥಿತಿ ಹೇಗಿತ್ತು? ಅಂದು ಆಡಳಿತವನ್ನು ನಡೆಸುತ್ತಿದ್ದವರ ನಡೆಗಳು ಹೇಗಿದ್ದವು? ಫಾರೂಕ್ ಅಬ್ದುಲ್ಲಾ ಹೇಳಿದಂತೆ ನಿಜಕ್ಕೂ ಕಾಶ್ಮೀರದ ಅಭಿವೃದ್ಧಿ ಆಗಿತ್ತೇ? ಇತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಇವುಗಳಿಗೆ ಉತ್ತರ ಬೇಕೆಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ ‘ಆರ್ಟಿಕಲ್ 370′ ಸಿನೆಮಾವನ್ನು ನೋಡಲೇಬೇಕು!
ಸ್ವಾತಂತ್ರ್ಯಾನಂತರ ಭಾರತ-ಪಾಕಿಸ್ತಾನದ ನಡುವೆ ಕಾಶ್ಮೀರ ಸಮಸ್ಯೆ ಉದ್ಭವವಾಯಿತು. ಅಖಂಡ ಭಾರತವನ್ನು ತುಂಡರಿಸಿ ಮುಸಲ್ಮಾನರಿಗಾಗಿಯೇ ಪ್ರತ್ಯೇಕ ದೇಶವೊಂದನ್ನು ನಿರ್ಮಿಸಿಕೊಟ್ಟ ಭಾರತದ ನಾಯಕರು ಅವರ ಓಲೈಕೆಗಾಗಿ ಏನನ್ನೂ ಮಾಡಲು ಸಿದ್ಧರಿದ್ದರು. ಭಾರತ ನಮ್ಮ ತಾಯಿ, ಆಕೆಯ ಅಖಂಡತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬುದು ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ’ ಗಾಂಧಿ, ನೆಹರೂ ಮೊದಲಾದ ನಾಯಕರಿಗೆ ಮರೆತೇ ಹೋಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದೆಂದರೆ ಕೇವಲ ರಾಜಕೀಯ ಹಸ್ತಾಂತರವಲ್ಲ; ಭಾರತವನ್ನು ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ ನೆಲೆಗಟ್ಟಿನಲ್ಲೂ ಪರಿಪೂರ್ಣವಾಗಿಸುವುದು, ಅದರ ಅಸ್ಮಿತೆಯನ್ನು ಯಥಾವತ್ತು ಪರಿಪಾಲಿಸುವುದು ಎಂಬ ಕಲ್ಪನೆಯೂ ಅವರಿಗೆ ಇದ್ದಂತಿರಲಿಲ್ಲ. ಹಾಗಾಗಿ ದೇಶವಿಭಜನೆಯ ದಳ್ಳುರಿಯ ನಂತರವೂ ಭಾರತದ ಮುಕುಟಮಣಿ ಕಾಶ್ಮೀರ ಪಾಕಿಗಳ ಕೆಂಗಣ್ಣಿಗೆ ಗುರಿಯಾಯಿತು. ಅದನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ನೆಹರೂ ‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬ ಶತಮಾನದ ಸವಾಲಿಗೆ ದೇಶವನ್ನು ಒಡ್ಡಿಬಿಟ್ಟರು.
ಕಾಶ್ಮೀರ ತಮ್ಮದೆನ್ನುವ ಪಾಕಿಸ್ತಾನಿಗಳ ಪ್ರಲೋಭನೆ, ಕೇವಲ ದೆಹಲಿ ಕೇಂದ್ರಿತವಾಗಿ ನಡೆಯುತ್ತಿದ್ದ ಭಾರತದ ಆಡಳಿತ, ಮೇರೆ ಮೀರಿದ ಪ್ರಧಾನಿ ನೆಹರೂ ಮುಸ್ಲಿಂ ತುಷ್ಟೀಕರಣ, ಕಾಶ್ಮೀರದ ನಿರ್ಲಕ್ಷ್ಯ ಮೊದಲಾದ ಕಾರಣಗಳಿಂದ ಸ್ವಾತಂತ್ರ್ಯಾನಂತರವೂ ಕಾಶ್ಮೀರದ ಜನತೆ ನೆಮ್ಮದಿಯನ್ನು ಅನುಭವಿಸಲೇ ಇಲ್ಲ. ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370ಯ ಮೂಲಕ ವಿಶೇಷ ಸ್ಥಾನಮಾನ ನೀಡಲಾಯಿತು. ಇಡೀ ದೇಶಕ್ಕೆ ಭಾರತದ ಸಂವಿಧಾನ ಅನ್ವಯವಾದರೆ ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ಸಂವಿಧಾನ! ಕೇಂದ್ರ ಸರ್ಕಾರದ ನೀತಿ-ನಿರ್ಣಯಗಳೆಲ್ಲ ಕಾಶ್ಮೀರದಲ್ಲಿ ಜಾರಿಯಾಗಬೇಕೆಂದರೆ ಅದಕ್ಕೆ ಅಲ್ಲಿನ ಸರ್ಕಾರದ ಅನುಮತಿ ಬೇಕು. ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ, ಪ್ರತ್ಯೇಕ ಮಂತ್ರಿಮಂಡಲ.. ಹೀಗೆ ಜಮ್ಮು ಕಾಶ್ಮೀರ ಭಾರತದ ಅಂಗಗಳಾದರೂ ಅವನ್ನು ಭಾರತದಿಂದ ದೂರವಾಗಿಸುವ ತಂತ್ರಗಾರಿಕೆಗೆ ಆರ್ಟಿಕಲ್ 370 ನೀರೆರೆದು ಪೋಷಿಸಿಕೊಂಡು ಬಂದಿತು. ಪರಿಣಾಮವಾಗಿ ಕಾಶ್ಮೀರ ಭಯೋತ್ಪಾದಕರ, ಪ್ರತ್ಯೇಕತಾವಾದಿಗಳ, ಪಾಕ್ ಪ್ರೇಮಿಗಳ ಗೂಡಾಯಿತು. ಹಿಂದೂಗಳ ಮೇಲೆ ದಶಕಗಳ ಕಾಲ ಎಲ್ಲಿಲ್ಲದ ದೌರ್ಜನ್ಯ ನಡೆಯಿತು. ಕಲ್ಲೆಸೆತ, ಭಯೋತ್ಪಾದನೆ, ಹಗಲು ದರೋಡೆಗಳು ಕಾಶ್ಮೀರದಲ್ಲಿ ಸಾಮಾನ್ಯವಾಗಿಬಿಟ್ಟವು.
ಆರ್ಟಿಕಲ್ 370ಯ ರಕ್ಷಣೆಯಿಂದಾಗಿ, ಪಾಕಿಸ್ತಾನದ ಮೇಲೆ ವಿಶೇಷ ಪ್ರೇಮವುಳ್ಳ ಜನಪ್ರತಿನಿಧಿಗಳು ಜಮ್ಮು ಕಾಶ್ಮೀರದಲ್ಲಿ ಅಧಿಕಾರ ಹಿಡಿದರು. ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದ ನಾಯಕರು ಕಾಶ್ಮೀರ ಸಮಸ್ಯೆಯನ್ನು ಹಾಗೆಯೇ ಉಳಿಸಿ ಇತ್ತ ಮಜಾ ಮಾಡುತ್ತಿದ್ದರು. ಇಂಥ ಪರಿಸ್ಥಿತಿ 70 ವರ್ಷಗಳ ಕಾಲ ಕಾಶ್ಮೀರವನ್ನು ಹುಣ್ಣಿನಂತೆ ಕಾಡಿತು. ಆದರೆ ಮೋದಿ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರಿಗೆ ಕಾಶ್ಮೀರ ಆದ್ಯತೆಯಾಯಿತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲೇಬೇಕೆಂದು ಪಣ ತೊಟ್ಟು ಕೆಲಸ ಆರಂಭಿಸಿತು. ದೇಶದ ಉಳಿದ ರಾಜ್ಯಗಳಂತೆಯೇ ಜಮ್ಮು ಕಾಶ್ಮೀರವೂ ಸುಖವಾಗಿ ಬಾಳಬೇಕೆಂದರೆ ಆರ್ಟಿಕಲ್ 370ಯನ್ನು ರದ್ದುಪಡಿಸಲೇಬೇಕಿತ್ತು. ಆದರೆ ಅದಕ್ಕೆ ಹಲವಾರು ಅಡೆತಡೆಗಳಿದ್ದವು. ಪ್ರತಿಪಕ್ಷ ನಾಯಕರನ್ನು, ಕಾಶ್ಮೀರದ ಜನಪ್ರತಿನಿಧಿಗಳನ್ನು ಎದುರಿಸಬೇಕಿತ್ತು. ದೇಶದುದ್ದಕ್ಕೂ ಭದ್ರತೆಯ ಸವಾಲುಗಳಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳೂ ಇದ್ದವು. ಆದರೆ ಕೇಂದ್ರ ಸರ್ಕಾರ ಇವೆಲ್ಲವನ್ನೂ ಚಾಣಾಕ್ಷತನದಿಂದ ಎದುರಿಸಿತು. ದೇಶದಲ್ಲಿ ಯಾವುದೇ ದಂಗೆ, ಹಿಂಸಾಚಾರಗಳು ನಡೆಯದಂತೆ ಎಲ್ಲವೂ ನಡೆದುಹೋಯಿತು. ಯಾವ ಸಮಸ್ಯೆ 70 ವರ್ಷಗಳಿಂದ ‘ಜಟಿಲ’ ಎನಿಸಿಕೊಂಡಿತ್ತೋ ಅದನ್ನು ನೀರು ಕುಡಿದಂತೆ ಪರಿಹರಿಸಿ ಮೋದಿ ನಿಟ್ಟುಸಿರು ಬಿಟ್ಟರು.
ಹೀಗೆ 2019ರ ಆಗಸ್ಟ್ 05ರಂದು ಆರ್ಟಿಕಲ್ 370 ರದ್ದಾಗಿ ದೇಶ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಆ ಬಳಿಕ ಕಳೆದ ಐದು ವರ್ಷಗಳಲ್ಲಿ ಕಾಶ್ಮೀರ ಜನತೆ ಅಭಿವೃದ್ಧಿಯ ಮಹಾಪರ್ವಕ್ಕೆ ತಮ್ಮನ್ನು ತೆರೆದುಕೊಂಡಿದ್ದಾರೆ. ಸ್ವಾತಂತ್ರ್ಯಾನಂತರ ಅನುಭವಿಸಿದ ಹಿಂಸೆ, ಅಭದ್ರತೆ, ಕಡೆಗಣನೆಗಳಿಂದ ಹೊರಬಂದು ನವ ಜಮ್ಮು ಕಾಶ್ಮೀರ ನಿರ್ಮಾಣದ ಕನಸಿನಲ್ಲಿ ಭಾಗಿಯಾಗಿದ್ದಾರೆ. ಆದರೆ ಆರ್ಟಿಕಲ್ 370 ರದ್ದುಪಡಿಸುವ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಸರ್ಕಾರ ಪರಿಹರಿಸಿದ ಸಂಗತಿಗಳು ದೇಶದ ಜನತೆಗೆ ಅಜ್ಞಾತವಾಗಿಯೇ ಉಳಿದಿವೆ. ಅವೆಲ್ಲವನ್ನೂ ಜನರೆದೆಗೆ ಮುಟ್ಟಿಸುವಲ್ಲಿ ‘ಆರ್ಟಿಕಲ್ 370′ ಸಿನೆಮಾ ಯಶಸ್ವಿಯಾಗಿದೆ. ಐತಿಹಾಸಿಕ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಐತಿಹಾಸಿಕ ಕಥೆಯ ಮೂಲಕ ದೇಶಭಕ್ತರ ಮೈನವಿರೇಳಿಸುವಲ್ಲಿ ಗೆಲುವು ಕಂಡಿದ್ದಾರೆ.
ಚಿತ್ರ ಮಹಾರಾಜ ಹರಿಸಿಂಗ್ರ ನಡೆ, ನೆಹರೂ ಪ್ರಮಾದಗಳು, ಕಾಶ್ಮೀರದ ಹಿಂದಿನ ಸ್ಥಿತಿಗತಿ ಮೊದಲಾದ ಸತ್ಯ ಘಟನೆಗಳೊಂದಿಗೆ ಕೆಲ ಕಾಲ್ಪನಿಕ ಘಟನೆಗಳನ್ನೂ ಒಳಗೊಂಡಿದ್ದು ಅತ್ತ ಡಾಕ್ಯುಮೆಂಟರಿಯಾಗುವ ಅಪಾಯದಿಂದಲೂ, ಇತ್ತ ಕಾಲ್ಪನಿಕ ಚಿತ್ರವಾಗುವ ಸವಾಲಿನಿಂದಲೂ ಹೊರಬಂದಿದೆ. ಆರ್ಟಿಕಲ್ 370 ರದ್ದತಿಯ ಸಂದರ್ಭದಲ್ಲಿ ಸೈನಿಕರ ಬದ್ಧತೆ, ಗುಪ್ತಚರ ಇಲಾಖೆಯ ಬುದ್ಧಿವಂತಿಕೆ, ಅಧಿಕಾರಿಗಳ ಶ್ರಮ ಮತ್ತು ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ತೋರಿದ ವಿವೇಕವನ್ನು ಚಿತ್ರ ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಇನ್ನೊಂದೆಡೆ ಕಾಶ್ಮೀರದ ರಾಜಕಾರಣಿಗಳು ಮಾಡಿದ ಕುತಂತ್ರ, ಉಗ್ರಗಾಮಿಗಳಿಂದ ನಡೆದ ಕಲ್ಲುತೂರಾಟ, ದಂಗೆ ಮೊದಲಾದವನ್ನೂ ಅಷ್ಟೇ ಮನಮುಟ್ಟುವಂತೆ ಚಿತ್ರಿಸಿದೆ. ಉರಿ ಚಿತ್ರದಂತೆಯೇ ಆರ್ಟಿಕಲ್ 370 ಚಿತ್ರವೂ ಪ್ರಭಾವಶಾಲಿಯಾದ ಸಂಭಾಷಣೆ, ಸಾಹಸ ದೃಶ್ಯಗಳು ಮತ್ತು ನುರಿತ ಕಲಾವಿದರ ನಟನೆಗಳಿಂದ ವೃತ್ತಿಪರವಾಗಿ ನಿರ್ಮಾಣವಾಗಿದೆ.
ಕಾಶ್ಮೀರಿ ಪಂಡಿತ್ ಆಗಿ ಕಾಣಿಸಿಕೊಂಡಿರುವ ಯಾಮಿ ಗೌತಮ್ ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ಭಾವನಾತ್ಮಕತೆ ಮತ್ತು ವೃತ್ತಿಪರತೆ ಎರಡನ್ನೂ ನಿಭಾಯಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಹಿರಿಯ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಮಣಿ ತಮ್ಮ ಪ್ರಬುದ್ಧ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಬುರ್ಹಾನ್ ವಾನಿಯ ಎನ್ಕೌಂಟರ್ನಿಂದ ಹಿಡಿದು ಪುಲ್ವಾಮಾ ದಾಳಿ, ಬಾಲಾಕೋಟ್ ಸ್ಟ್ರೈಕ್ ಮತ್ತು ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್ ಮೊದಲಾದವರ ಪ್ರತಿರೋಧಗಳನ್ನೂ ಚಿತ್ರ ಯಶಸ್ವಿಯಾಗಿ ಕಟ್ಟಿಕೊಟ್ಟಿದೆ. ಒಟ್ಟಾರೆ ಆರ್ಟಿಕಲ್ 370 ರದ್ದತಿಯ ಸುತ್ತಮುತ್ತಲಿನ ಅನೇಕ ರಹಸ್ಯಗಳನ್ನು, ರೋಚಕ ಕಥಾನಕಗಳನ್ನು ಅದರ ಐತಿಹಾಸಿಕ ಸತ್ಯಗಳಿಗೆ ಧಕ್ಕೆಯಾಗದಂತೆ ಸಿನಿಮೀಯವಾಗಿ ನಿರೂಪಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಕಾಶ್ಮೀರದಲ್ಲಾದ ಪರಿವರ್ತನೆಯನ್ನು ಸ್ವತಃ ಪ್ರಧಾನಮಂತ್ರಿಗಳೇ ಕಾಶ್ಮೀರ ಭೇಟಿಯ ಸಂದರ್ಭದಲ್ಲಿ ಪರಿಚಯಿಸಿದ್ದಾರೆ. ಆದರೆ ಈ ಪರಿವರ್ತನೆಯ ಹಿಂದಿನ ಎಲ್ಲ ಮೈಲುಗಲ್ಲುಗಳನ್ನು ಅರಿಯಲು, ಮೋದಿ ಸರ್ಕಾರದ ‘ಶತಮಾನದ ಸಾಧನೆ’ಯನ್ನು ತಿಳಿಯಲು ‘ಆರ್ಟಿಕಲ್ 370’ ಸಿನೆಮಾವನ್ನು ನೋಡಲೇಬೇಕು!