ಬಸವಣ್ಣ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಬಸವೇಶ್ವರರು 12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕ ಹಾಗೂ ಕಾಯಕ ಕ್ರಾಂತಿಗೆ ಮುನ್ನಡಿ ಬರೆದ ಪ್ರವರ್ತಕ. ವಚನಗಳ ಮೂಲಕವೇ ಜಾತಿ-ಮತ, ಮೇಲು-ಕೀಳು, ಅಕ್ಷರಸ್ಥ – ಅನಕ್ಷರಸ್ಥ, ಗಂಡು – ಹೆಣ್ಣು ಎಂಬ ಭೇದ ಭಾವವನ್ನು ನಿರ್ಮೂಲನೆ ಮಾಡಿ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಇವರು ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೂ ಕೊಡುಗೆ ನೀಡಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ ಮೇ 10 ರಂದು ಬಸವೇಶ್ವರ ಜಯಂತಿಯನ್ನು ಆಚರಿಸಲಾಗುತ್ತಿದೆ.
ಪರಿಚಯ
ಬಸವಣ್ಣನವರು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ( ಪ್ರಸ್ತುತ ಬಸವನಬಾಗೇವಾಡಿ ಎಂದು ಕರೆಯಲಾಗುತ್ತದೆ) ಸಾಮಾನ್ಯ ಶಕ ವರ್ಷ 1105ರಲ್ಲಿ ಜನಿಸಿದರು. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವಣ್ಣ ನವರು ತಮ್ಮ ಬಾಲ್ಯವನ್ನು ಕೂಡಲಸಂಗಮದಲ್ಲಿ ಕಳೆದರು. ಬಾಲ್ಯದಿಂದಲೇ ಬಸವಣ್ಣ ಶಿವನ ಆರಾಧಕರಾಗಿದ್ದರು. ಅವರು ಕೂಡಲಸಂಗಮದಲ್ಲಿ ವೇದಗಳನ್ನು ಅಧ್ಯಯನ ಮಾಡಿದರು. ನಂತರ ಬಸವಣ್ಣ ಅವರು ಕಳಚುರಿಯ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಆದರೆ ಸಮಾಜದಲ್ಲಿದ್ದ ತಾರತಮ್ಯಗಳನ್ನು ಕಂಡು ಇವುಗಳನ್ನು ಬದಲಿಸಬೇಕೆಂದು ನಿರ್ಧರಿಸಿ ವೃತ್ತಿಯನ್ನು ತೊರೆದರು. ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಸಾರಿ ಎಲ್ಲಾ ಕೆಲಸಗಳು ಪವಿತ್ರವೆಂದು ಪ್ರತಿಪಾದಿಸಿದರು. ಬಸವಣ್ಣನವರು ಶರಣ ಸಮುದಾಯವನ್ನು ಕಟ್ಟಿ ಗುರು, ಲಿಂಗ ಮತ್ತು ಜಂಗಮ ಎಂಬ ತತ್ತ್ವಗಳ ಮೂಲಕ ಸಮಾನತೆಯನ್ನು ಸಾರಿದರು.
ಸಮಾಜದ ಕೊಡುಗೆ
ಮಾದಾರ ಚನ್ನಯ್ಯ ಅವರು ಶುರು ಮಾಡಿದ ಭಕ್ತಿ ಆಂದೋಲನವನ್ನು ಬಸವಣ್ಣನವರು ಮುಂದುವರಿಸಿಕೊಂಡು ಹೋದರು. ಈ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದರು. ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ತಿಳಿಸಿಕೊಟ್ಟವರು. ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದರು. ಅವರ ನಂಬಿಕೆಗಳು ಮತ್ತು ಬೋಧನೆಗಳು ಸಮಾಜದ ಮೇಲೆ ಬಹಳ ಪ್ರಭಾವ ಬೀರಿದವು.ಬಸವಣ್ಣನವರು ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದರು.
ವಚನ ಸಾಹಿತ್ಯ
ಬಸವಣ್ಣನವರು ಸಮಾಜ ಸುಧಾರಣೆಗೆ ಸಾಹಿತ್ಯ ಕ್ಷೇತ್ರದ ಮೂಲಕ ಮುಂದಾದವರು. ಸುಮಾರು 1500 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಎಲ್ಲರೂ ಸಮಾನರು, ಯಾವ ಜಾತಿ-ಮತಗಳ ಭೇದವಿಲ್ಲ”, ಭಾರತೀಯ ಸನಾತನ ಧರ್ಮ ಹೇಳಿದ್ದ “ಭಗವಂತ ನಿನ್ನಲ್ಲೇ ಇದ್ದಾನೆ” ಎಂಬುದನ್ನು ಬಸವಣ್ಣನವರು ದೇಹವೇ ದೇಗುಲ, ಶಿರವೇ ಹೊನ್ನ ಕಲಶ ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು.
ಭಾಷೆಯ ಬೆಳವಣಿಗೆಯ ದೃಷ್ಟಿಯಿಂದಲೂ ವಚನ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಜನಸಾಮಾನ್ಯರೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬಹುದು, ಸಾಮಾನ್ಯರೂ ಅರ್ಥೈಸಿಕೊಳ್ಳಬಲ್ಲ ಸಾಹಿತ್ಯದ ರಚನೆ ಮಾಡಬಹುದು ಎನ್ನುವುದನ್ನು ವಚನ ಚಳವಳಿ ತಿಳಿಸಿಕೊಟ್ಟಿತು.
ಗೌರವ
ಬಸವಣ್ಣ ಅವರ ಪ್ರತಿಮೆಯನ್ನು ಅವರ ಗೌರವಾರ್ಥವಾಗಿ ಲಂಡನ್ ನ ಥೇಮ್ಸ್ ನದಿಯ ದಂಡೆಯ ಮೇಲೆ ಸ್ಥಾಪಿಸಲಾಗಿದೆ. ದುಬೈನಲ್ಲೂ ಸಹ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಬಸವಣ್ಣನವರು ಕ್ರಿ.ಶ. 1196 ರಲ್ಲಿ ಕೂಡಲಸಂಗಮದಲ್ಲಿ ಲಿಂಗಕೈರಾದರು.