ಪ್ರತಿಯೊಬ್ಬ ವ್ಯಕ್ತಿಯ ಜನ್ಮ ಮತ್ತು ಜೀವನದ ರೂವಾರಿ ತಾಯಿ. ಅಮ್ಮ ಎಂಬ ಪದವೇ ನಮ್ಮ ಬದುಕಿನ ಜೀವಸೆಲೆಯಾಗಿ ಪರಿಣಾಮ ಬೀರುತ್ತದೆ. ತಾಯಿ ಜನ್ಮದಾತೆ ಹಾಗೂ ಪ್ರತಿ ಮಗುವಿಗೂ ಆಕೆಯೆ ಮೊದಲ ಗುರು. ಹಾಗಾಗಿಯೇ ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು’ ಎಂಬ ನಾಣ್ಣುಡಿ ಬಳಕೆಯಲ್ಲಿದೆ. ಮಗುವನ್ನು ಜಗತ್ತಿಗೆ ತರುವ ಮತ್ತು ಪ್ರೀತಿ ಹಾಗೂ ಕಾಳಜಿಯಿಂದ ಪೋಷಿಸುವ ತಾಯಿಯ ನಿಸ್ವಾರ್ಥ ಪ್ರೀತಿಗೆ ಪರ್ಯಾಯವೇ ಇಲ್ಲ. ಮಗುವಿನ ವರ್ತನೆಯನ್ನು ನಿರ್ಧರಿಸುವಲ್ಲಿ ತಾಯಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ಕಾರಣಕ್ಕಾಗಿ ತಾಯಿಯ ಅಸ್ತಿತ್ವವನ್ನು ಗೌರವಿಸಲು ಮತ್ತು ಪ್ರಶಂಸಿಸುವ ಸಲುವಾಗಿ ವಿಶ್ವದ್ಯಾದಂತ ಮೇ 12 ರಂದು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಮಾತೃತ್ವ, ತಾಯಿಯ ಮಮತೆ ಮತ್ತು ಸಮಾಜದಲ್ಲಿ ತಾಯಂದಿರ ಪ್ರಭಾವವನ್ನು ಅಂಗೀಕರಿಸಲು ಈ ದಿನ ಮೀಸಲಿಡಲಾಗಿದೆ.
ಭಾರತದಲ್ಲಿ ಮಾತೃತ್ವಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಾನವನ್ನು ನೀಡಿದ್ದೇವೆ. ಈ ನಾಡಿನಲ್ಲಿ ಶ್ರೇಷ್ಠವೆಂದೆನಿಸಿಕೊಳ್ಳುವ ಅನೇಕ ಸಂಗತಿಗಳಿಗೆ ಮಾತೆ ಎಂದೇ ಸಂಬೋಧಿಸಿದ್ದೇವೆ. ಉದಾ: ಗೋ ಮಾತೆ, ಗಂಗಾ ಮಾತೆ, ಭಾರತ ಮಾತೆ ಇತ್ಯಾದಿ. ಅದಕ್ಕೆ ತಕ್ಕಂತೆ ಕಾಲಕಾಲಕ್ಕೆ ಈ ನಾಡಿನಲ್ಲಿ ಸಾರ್ವಕಾಲಿಕವಾಗಿ ಆದರ್ಶವಾಗಿನಿಲ್ಲಬಲ್ಲ ತಾಯಿ ಮತ್ತು ಮಕ್ಕಳ ಬಾಂಧವ್ಯದ ನಿದರ್ಶನಗಳು ಬೆಳೆಯುತ್ತಾ ಬಂದವು. ಕೌಸಲ್ಯೆ-ರಾಮ, ಯಶೋದಾ – ಕೃಷ್ಣ, ಜೀಜಾಬಾಯಿ – ಶಿವಾಜಿ, ಭುವನೇಶ್ವರಿದೇವಿ – ವಿವೇಕಾನಂದ ಇತ್ಯಾದಿ.
ಇತಿಹಾಸ
1908ರಲ್ಲಿ ಮೊದಲು ಅಮೆರಿಕಾದಲ್ಲಿ ತಾಯಂದಿರ ದಿನವನ್ನಾಗಿ ಆಚರಿಸಲಾಯಿತು. ನಂತರ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಘೋಷಿಸಿದರು. ಹೀಗಾಗಿ ಭಾರತ ಸೇರಿದಂತೆ ಎಲ್ಲ ಕಡೆ ಮೇ ತಿಂಗಳಲ್ಲಿ ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮಹತ್ವ
ತಾಯಿ ಪ್ರತಿಯೊಬ್ಬರ ಜೀವನದಲ್ಲಿ ಸಾರ್ವಕಾಲಿಕವಾಗಿ ಸ್ಮರಣೆಗೆ ಅರ್ಹಳು. ಆದರೆ ನಮ್ಮ ಜೀವನವನ್ನು ಮೌಲ್ಯಯುತವಾಗಿ ರೂಪಿಸುವ ಮತ್ತು ಬೆಳವಣಿಗೆಯನ್ನು ಪೋಷಿಸುವ ತಾಯಂದಿರಿಗೆ ಗೌರವ ಸಲ್ಲಿಸುವುದಕ್ಕೆ ಔಪಚಾರಿಕವಾಗಿ ಒಂದು ದಿನ ಮೀಸಲಿಟ್ಟು ಆಕೆಯ ಮಹತ್ವವನ್ನು ನೆನಪಿಸಿಕೊಳ್ಳುವುದಕ್ಕೆ ಸಹಾಯಕವಾಗಿದೆ.
ಪ್ರತಿಯೊಂದು ಹೆಣ್ಣು, ಆಕೆಯ ಕುಟುಂಬದ ಪ್ರೀತಿ ಮತ್ತು ಮೆಚ್ಚುಗೆಯ ಅಭಿವ್ಯಕ್ತಿಯನ್ನು ಈ ದಿನ ಪ್ರೋತ್ಸಾಹಿಸಲು ಸಹಕಾರಿಯಾಗಿದೆ.
ಜೀವಮಾನವಿಡಿ ತಮ್ಮ ಮಕ್ಕಳ ಸಂತೋಷವನ್ನೇ ಬಯಸುವ ತಾಯಿಯ ಮಹತ್ವವನ್ನು ಈ ದಿನ ತಿಳಿಸುತ್ತದೆ.
ತಾಯಂದಿರ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಸೂಕ್ತವಾಗಿದೆ.