ಪ್ರತಿಯೊಬ್ಬರ ಜೀವನದಲ್ಲೂ ಕುಟುಂಬ ಪ್ರಮುಖ ಪಾತ್ರವಹಿಸುತ್ತದೆ. ಕೂಡು ಕುಟುಂಬ ಇದ್ದರಂತೂ ಜೀವನದ ಪಾಠವನ್ನು ಕಲಿಸುವ ಶಾಲೆ ಮನೆಯೇ ಆಗುತ್ತದೆ. ಮನೆಯಲ್ಲಿ ತುಂಬಿದ ಸದಸ್ಯರ ಪ್ರೀತಿ, ವಾತ್ಸಲ್ಯ, ಕಾಳಜಿಯನ್ನು ಪಡೆಯುತ್ತೇವೆ. ಕಷ್ಟಕಾಲದಲ್ಲಿ ಜೊತೆಗೆ ನಿಲ್ಲುವ ಸಂಬಂಧವನ್ನು ಅರಿಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಕಲಹಗಳು ಹೆಚ್ಚಾಗಿ ಸಂಬಂಧಗಳ ಮೌಲ್ಯ ಕ್ಷೀಣಿಸುತ್ತಿದೆ. ಮನೆಗಳು ವಿಭಜಿತ ಮನೆಗಳಾಗುತ್ತಿವೆ. ಕೆಲಸ ಅರಸಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕುಟುಂಬಗಳ ನಡುವೆ ಮೊದಲಿನಿಂತೆ ಸಂಬಂಧ ಉಳಿಯುತ್ತಿಲ್ಲ. ಈ ಕಾರಣಕ್ಕಾಗಿ ಕುಟುಂಬದ ಸಂಬಂಧ ಬೆಸೆಯುವ ಹಾಗೂ ಅದರ ಪ್ರಾಮುಖ್ಯತೆಯನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಮೇ 15 ರಂದು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ನಮ್ಮ ಸಮಾಜದಲ್ಲಿ ಕುಟುಂಬಗಳು ವಹಿಸುವ ಪ್ರಮುಖ ಪಾತ್ರವನ್ನು ಕೇಂದ್ರೀಕರಿಸುತ್ತದೆ. ಮತ್ತು ಅವ್ಯವಸ್ಥಿತ ಕುಟುಂಬದ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಈ ವರ್ಷದ ಅಂತಾರಾಷ್ಟ್ರೀಯ ಕುಟುಂಬ ದಿನದ ಥೀಮ್‌ “Families and Climate Change”.


ಇತಿಹಾಸ
1989ರಲ್ಲಿ ವಿಶ್ವಸಂಸ್ಥೆಯು ಸಾಮಾನ್ಯ ಸಭೆ ನಡೆಸಿತ್ತು. 1993ರಲ್ಲಿ ಕುಟುಂಬದ ಸಮಸ್ಯೆಗಳನ್ನು ಉತ್ತೇಜಿಸುವ ಹಾಗೂ ಅದರ ಪ್ರಾಮುಖ್ಯತೆಯನ್ನು ಗುರುತಿಸುವ ಸಲುವಾಗಿ ಮೇ 15 ರಂದು ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಕುಟುಂಬಗಳ ದಿನ ಎಂದು ಸ್ಥಾಪಿಸಲಾಯಿತು. ಈ ದಿನವನ್ನು ಕುಟುಂಬದ ಹಕ್ಕುಗಳ ರಕ್ಷಣೆಗೆ ಒತ್ತು ನೀಡುವ ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ.


ಸಮಾಜದಲ್ಲಿ ಕುಟುಂಬದ ಮೂಲಭೂತ ಪಾತ್ರ ಹಾಗೂ ಅದರ ಬೆಂಬಲದ ಅಗತ್ಯವನ್ನು ಕೇಂದ್ರೀಕರಿಸಿ 1994ರಲ್ಲಿ ವಿಶ್ವಸಂಸ್ಥೆ ಅಂತರಾಷ್ಟ್ರೀಯ ಕುಟುಂಬ ದಿನವನ್ನಾಗಿ ಘೋಷಿಸಿತು.
ಕುಟುಂಬ ಸಂಬಂಧಿತ ವಿಷಯಗಳ ಬಗ್ಗೆ ವಿಚಾರಗಳ ವಿನಿಮಯವನ್ನು ಮಾಡಿಕೊಳ್ಳಲು 150ಕ್ಕೂ ಹೆಚ್ಚು ದೇಶಗಳಲ್ಲಿ ಅಂತರರಾಷ್ಟ್ರೀಯ ಕುಟುಂಬಗಳ ದಿನವನ್ನು ಆಚರಿಸಲಾಗುತ್ತದೆ.


ಮಹತ್ವ
• ಬಡತನ, ಹಿಂಸಾಚಾರದಿಂದ ವಲಸೆ ಮತ್ತು ಹವಾಮಾನ ಬದಲಾವಣೆಯಿಂದ ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಸಹಕಾರಿಯಾಗಿದೆ.
• ಕುಟುಂಬಗಳನ್ನು ಬಲಪಡಿಸಲು ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲು ಈ ದಿನ ಸಹಾಯವಾಗಿದೆ.
• ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಟುಂಬ ಸ್ನೇಹಿ ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಈ ದಿನ ಪ್ರೋತ್ಸಾಹಿಸುತ್ತದೆ.
• ಕುಟುಂಬಗಳ ಬಂಧಗಳ ಮಹತ್ವವನ್ನು ತಿಳಿಸುವುದಕ್ಕಾಗಿ ಸಮುದಾಯವನ್ನು ಬಲಪಡಿಸಲು ಈ ದಿನ ಸಹಾಯಕವಾಗಿದೆ.
•  ಆಧುನಿಕ ಕುಟುಂಬಗಳು ಎದುರಿಸುತ್ತಿರುವ ಅಸಮಾನತೆಯಂತಹ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ.

Leave a Reply

Your email address will not be published.

This site uses Akismet to reduce spam. Learn how your comment data is processed.