ಬಾಬಾರಾವ್ ಸಾವರ್ಕರ್ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಗಣೇಶ್‌ ದಾಮೋದರ್‌ ಸಾವರ್ಕರ್‌ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರು ತಮ್ಮ ಸಹೋದರ ವಿನಾಯಕ ಸಾವರ್ಕರ್‌ ಜತೆ ಅಭಿನವ್‌ ಭಾರತ್‌ ಸೊಸೈಟಿಯನ್ನು ಸ್ಥಾಪಿಸಿದವರು. ಇಂದು ಅವರ ಜಯಂತಿ.


ಪರಿಚಯ
ಗಣೇಶ್‌ ದಾಮೋದರ್‌ ಸಾವರ್ಕರ್‌ ಅವರು ಜೂನ್‌ 13, 1879 ರಂದು ಮಹಾರಾಷ್ಟ್ರದ ಭಾಗೂರ್‌ ನಲ್ಲಿ ಜನಿಸಿದರು. ಇವರ ತಂದೆ ದಾಮೋದರಪಂತ್‌ ಸಾವರ್ಕರ್‌ ಮತ್ತು ತಾಯಿ ರಾಧಾಬಾಯಿ ಸಾವರ್ಕರ್‌. ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಭಾಗೂರ್‌ ನಲ್ಲಿ ಮುಗಿಸಿದರು. ನಂತರ ಮರಾಠಿ ಶಿಕ್ಷಣವನ್ನು ಪೂರೈಸಿ ತಕ್ಷಣ ಉನ್ನತ ವಿದ್ಯಾಭ್ಯಾಸಕ್ಕಾಗಿ ನಾಸಿಕ್ ಗೆ ತೆರಳಿದರು.


ಗಣೇಶ್ ಸಾವರ್ಕರ್ ಅವರು ಬಾಲ್ಯದಿಂದಲೇ ರಾಮವಿಜಯ, ಹರಿವಿಜಯ, ಶಿವಲೀಲಾಮೃತ ಮತ್ತು ಜೈಮನಿ ಅಶ್ವಮೇಧ ಇತ್ಯಾದಿ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಸ್ವಾಮಿ ವಿವೇಕಾನಂದ ಮತ್ತು ರಾಮತೀರ್ಥರ ವಿಚಾರಧಾರೆಗಳಿಂದ ಪ್ರಭಾವಿತರಾದರು. ಅವರು ಇಪ್ಪತ್ತು ವರ್ಷದವರಾಗಿದ್ದಾಗ ಅವರ ಹೆತ್ತವರು ಮರಣಹೊಂದಿದ್ದರು. ಹೀಗಾಗಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು.

ಗಣೇಶ್‌ ದಾಮೋದರ್‌ ಸಾವರ್ಕರ್‌ ಅವರು 1909ರಲ್ಲಿ ನಾಸಿಕ್‌ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಮೋದರ್‌ ಅವರನ್ನು ಎರಡು ವರ್ಷಗಳ ಕಾಲ ಕಠಿಣ ಶಿಕ್ಷೆಯ ಜೊತೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂಡಮಾನ್ ನ ಸೆಲ್ಯುಲಾರ್‌ ಜೈಲಿಗೆ ಕಳುಹಿಸಲಾಯಿತು. ಅದೇ ಜೈಲಿಗೆ ಎರೆಡೆರಡು ಜೀವಾವಧಿ ಶಿಕ್ಷೆಯನ್ನು ಪಡೆದು ಬಂದ ಅವರ ಸಹೋದರ ವಿನಾಯಕ್‌ ಸಾರ್ವಕರ್‌ ಅವರನ್ನು ಭೇಟಿ ಮಾಡಲು ಕೆಲವು ವರ್ಷಗಳೇ ಬೇಕಾದವು. ಜುಲೈ 4, 1911 ರಂದು ಇಬ್ಬರೂ ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು.  1919ರಲ್ಲಿ ಗಣೇಶ್ ದಾಮೋದರ್ ಸಾವರ್ಕರರಿಗೆ ಜೈಲಿನಲ್ಲಿ ನೀಡಿದ ಕಿರುಕುಳದಿಂದಾಗಿ ತೀವ್ರ ಅಸ್ವಸ್ಥರಾದರು. 1921ರಲ್ಲಿ ಸಾರ್ವಜನಿಕ ಒತ್ತಡ ಮತ್ತು ತಿಲಕ್, ಸುರೇಂದ್ರನಾಥ ಬ್ಯಾನರ್ಜಿ ಮೊದಲಾದವರ ಮನವಿಯ ಮೇರೆಗೆ ಸಾವರ್ಕರ್ ಸಹೋದರರನ್ನು ಅಂಡಮಾನ್ ಸೆಲ್ಯುಲರ್ ಜೈಲಿನಿಂದ ಬಿಡುಗಡೆಗೊಳಿಸಲಾಯಿತು. 1922ರಲ್ಲಿ ಸಬರಮತಿ ಜೈಲಿಗೆ ಗಣೇಶ್ ಸಾವರ್ಕರ್ ಅವರನ್ನು ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಅಫ್ಘಾನಿಸ್ತಾನದ ಅಮೀರ್‌ -ಅಮಾನುಲ್ಲಾ ಅವರನ್ನು ಭಾರತದ ಮೇಲೆ ಆಕ್ರಮಣ ಮಾಡಲು ಆಹ್ವಾನಿಸಲು ಯೋಜಿಸುತ್ತಿದ್ದ ಇಸ್ಲಾಮಿಸ್ಟ್ ಪಿತೂರಿ ಬಗ್ಗೆ ತಿಳಿದುಕೊಂಡರು. ಈ ಮಾಹಿತಿಯನ್ನು ಭಾರತೀಯ ಕ್ರಾಂತಿಕಾರಿಗಳಿಗೆ ತಿಳಿಸಬಯಸಿದರು. ಹಾಗಾಗಿ ಅನ್ಯ ನೆಪ ಹೇಳಿ ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷ್‌ ಸರ್ಕಾರವನ್ನು ಕೇಳಿಕೊಂಡರು. ಆದರೆ ಅವರಿಗೆ ಅನಾರೋಗ್ಯ ಸಮಸ್ಯೆ ಇದ್ದಿದ್ದರಿಂದ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಾಗಲಿಲ್ಲ. ನಂತರ ತಮ್ಮ ಕಿರಿಯ ಸಹೋದರ ನಾರಾಯಣ ಸಾವರ್ಕರ್‌ ಅವರ ಮನವಿಯ ಮೇರೆಗೆ ಹದಿಮೂರು ವರ್ಷಗಳ ಸೆರೆವಾಸದಿಂದ ಬಿಡುಗಡೆಗೊಳಿಸಿದರು.

ಜೈಲಿನಿಂದ ಹೊರಗೆ ಬಂದ ಗಣೇಶ್ ಸಾವರ್ಕರ್ ಅವರು ಹಿಂದೂ ಸಮಾಜಕ್ಕಾಗಿ ಅವಿರತವಾಗಿ ಶ್ರಮಿಸಿದರು. 1923ರಲ್ಲಿ ಗಣೇಶ್‌ ದಾಮೋದರ್‌ ಸಾವರ್ಕರ್‌ ಅವರು ಹಿಂದೂ ಮಹಾಸಭಾ ಆರಂಭಿಸಿದ ‘ತರುಣ್‌ ಹಿಂದೂ ಮಹಾಸಭಾ’ದ ಸದಸ್ಯರಾದರು. ಈ ಸಂಘಟನೆಯ ಬಗ್ಗೆ ಪ್ರಚಾರ ಮಾಡಲು ಭಾರತದಾದ್ಯಂತ ಸಂಚರಿಸಿದರು. ಹಿಂದುಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಶುದ್ಧಿ ಆಂದೋಲನದಲ್ಲಿ ಭಾಗವಹಿಸಲು ಇಚ್ಛಿಸುವ 16-40 ವರ್ಷದೊಳಗಿ‌ನವರಿಗೆ ಮಾತ್ರ ಇದರೊಳಗಡೆ ಪ್ರವೇಶ ಪಡೆಯಬಹುದಾಗಿತ್ತು. 1924ರಲ್ಲಿ ಡಾ. ಕೇಶವ ಬಲಿರಾಮ್‌ ಹೆಡಗೇವಾರ್‌ ಅವರನ್ನು ಗಣೇಶ್ ಸಾವರ್ಕರ್‌ ಭೇಟಿಯಾದರು. ಹಿಂದುಗಳನ್ನು ಒಗ್ಗೂಡಿಸುವ ಹೆಡಗೇವಾರ್‌ ಅವರ ಉತ್ಸಾಹದಿಂದ ಗಣೇಶ್‌ ಪ್ರಭಾವಿತರಾಗಿದ್ದರು. ತರುಣ್‌ ಹಿಂದೂ ಸಭಾದ ಜವಾಬ್ದಾರಿಯನ್ನು ಡಾ. ಕೇಶವ ಬಲಿರಾಮ್‌ ಹೆಡಗೇವಾರ್‌ ಅವರಿಗೆ ವಹಿಸಿದರು. 1925ರಲ್ಲಿ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರೇ ಸ್ವತಃ ಹಿಂದೂ ಸಂಘಟನೆಯೊಂದನ್ನು ಆರಂಭಿಸುತ್ತಾರೆ. ಅದುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್).

ಗಣೇಶ್‌ ದಾಮೋದರ್‌ ಸಾವರ್ಕರ್‌ ಅವರು ಮಾರ್ಚ್ 16, 1945ರಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.