‘ಆರೋಗ್ಯವೇ ಭಾಗ್ಯ’ ಎಂಬ ಸಾರ್ವಕಾಲಿಕ ಸತ್ಯವನ್ನು ಸಾರುವ ನಾಣ್ಣುಡಿಯನ್ನು ನಾವು ಸದಾ ಕೇಳುತ್ತಿರುತ್ತೇವೆ. ಒಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಏನುಬೇಕಾದರೂ ಸಾಧಿಸಬಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಜೀವನಶೈಲಿಗಳಿಂದ ಆರೋಗ್ಯದ ಸಮಸ್ಯೆಯನ್ನು ಹೆಚ್ಚಿನವರು ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಬೇಕೆಂದರೆ ಉತ್ತಮ ಜೀವನಶೈಲಿ ಇರಬೇಕು. ಹಾಗಿದ್ದಲ್ಲಿ ಮಾತ್ರ ಕೊನೆಯವರೆಗೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ರಕ್ತದ ಪಾತ್ರವೂ ಹೆಚ್ಚು. ಒಬ್ಬ ವ್ಯಕ್ತಿಗೆ ಯಾವುದಾದರೂ ಕಾಯಿಲೆ, ಶಸ್ತ್ರಚಿಕಿತ್ಸೆ ಅಪಘಾತಗಳಂತಹ ಘಟನೆಗಳಲ್ಲಿ ರಕ್ತ ಹೋಗುವ ಸಾಧ್ಯತೆಗಳಿರುತ್ತವೆ. ಈ ಸಂದರ್ಭದಲ್ಲಿ ಆತನಿಗೆ ರಕ್ತ ನೀಡುವ ಅವಶ್ಯಕತೆ ತುಂಬಾ ಇರುತ್ತದೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಆರೋಗ್ಯವಾಗಿರುವ ವ್ಯಕ್ತಿಗಳು ದಾನ ಮಾಡಿದ ರಕ್ತವನ್ನು ಸಮಸ್ಯೆಗಳಿಂದ ಬಾಧಿತ ವ್ಯಕ್ತಿಗಳಿಗೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗುತ್ತದೆ.

ಆದರೆ ಎಲ್ಲಾ ಸಮಯಗಳಲ್ಲೂ ರಕ್ತದ ಲಭ್ಯತೆ ಇರುವುದಿಲ್ಲ ಮತ್ತು ರಕ್ತವನ್ನು ದಾನ ಮಾಡಬೇಕೆಂಬ ಸಾಮಾಜಿಕ ಕಳಕಳಿಯ ವ್ಯಕ್ತಿಗಳು ಸಿಗುವುದಿಲ್ಲ. ಈ ಕಾರಣಕ್ಕಾಗಿ ಸಾರ್ವಜನಿಕರಿಗೆ ರಕ್ತದ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ರಕ್ತದಾನದ ಮಹತ್ವವನ್ನು ಸಾರುವ ಸಲುವಾಗಿ ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ರಕ್ತದಾನಕ್ಕೆ ಪ್ರೇರಣೆ ನೀಡಲು ಮತ್ತು ರಕ್ತದಾನಿಗಳಿಗೆ ಗೌರವ ಸಲ್ಲಿಸಲು ಮೀಸಲಿಡಲಾಗಿದೆ. ಈ ಬಾರಿಯ ವಿಶ್ವ ರಕ್ತದಾನಿಗಳ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಾದ್ಯಂತ “20 ವರ್ಷಗಳ ಸಂಭ್ರಮಾಚರಣೆ: ರಕ್ತದಾನಿಗಳಿಗೆ ಧನ್ಯವಾದಗಳು!” ಎಂಬ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ‌.


ಇತಿಹಾಸ
1940ರಲ್ಲಿ ರಿಚರ್ಡ್ ಲೋವರ್ ಎಂಬ ಜೀವಶಾಸ್ತ್ರಜ್ಞ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ಮುನ್ನೆಚ್ಚರಿಕೆಯಿಂದ ಎರಡು ಶ್ವಾನಗಳ ನಡುವೆ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ರಕ್ತವನ್ನು ವರ್ಗಾಯಿಸಿದರು. ನಂತರ ಈ ಪ್ರಗತಿಯು ರಕ್ತ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತ್ತು. 

ವಿಶ್ವ ಆರೋಗ್ಯ ಸಂಸ್ಥೆ, ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ ಸಂಘಟನೆಗಳು 2004ರ ಜೂನ್ 14ರಂದು ಸ್ವಯಂಪ್ರೇರಣೆಯಿಂದ ಮತ್ತು ಸುರಕ್ಷಿತ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಗುರಿಯೊಂದಿಗೆ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು. 2005ರಲ್ಲಿ ನಡೆದ 58ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ತನ್ನ 192 ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಜೂನ್ 14 ರಂದು ಔಪಚಾರಿಕವಾಗಿ ಆಚರಿಸಲು ಪ್ರಾರಂಭಿಸಿತು. ಜನರ ಜೀವಗಳನ್ನು ಉಳಿಸುವಲ್ಲಿ ತಮ್ಮ ಅಮೂಲ್ಯ ಕೊಡುಗೆಗಳಿಗಾಗಿ ರಕ್ತದಾನಿಗಳನ್ನು ಗೌರವಿಸಲು ವಿಶ್ವದಾದ್ಯಂತ ಎಲ್ಲಾ ದೇಶಗಳನ್ನು ಪ್ರೇರೇಪಿಸುತ್ತದೆ.

ಮಹತ್ವ
ಸ್ವಯಂಪ್ರೇರಿತ ರಕ್ತದಾನದ ನಿರ್ಣಾಯಕ ಪಾತ್ರ ಮತ್ತು ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆಗಳ ಮೇಲೆ ಅದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶ್ವ ರಕ್ತದಾನಿಗಳ ದಿನವು ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ.
• ಸ್ವಯಂಪ್ರೇರಿತ ರಕ್ತದಾನ ನೀಡುವಂತೆ ಈ ದಿನ ಉತ್ತೇಜಿಸಲಾಗುತ್ತದೆ.
• ರಕ್ತದಾನಿಗಳನ್ನು ಗುರುತಿಸಿ ಮತ್ತು ಪ್ರಶಂಸಿಸಲು ಸೂಕ್ತವಾಗಿದೆ
• ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ
• ನಿಯಮಿತ ರಕ್ತದಾನವನ್ನು ಪ್ರೋತ್ಸಾಹಿಸುತ್ತದೆ.
• ರಾಷ್ಟ್ರೀಯ ರಕ್ತ ಸೇವೆಗಳು ಮತ್ತು ಕಾರ್ಯಕ್ರಮಗಳನ್ನು ಬಲಪಡಿಸುತ್ತದೆ.

ಯಾರು ರಕ್ತದಾನವನ್ನು ಮಾಡಬಹುದು?

  • ನೀವು 18-65 ವರ್ಷದೊಳಗಿನವರಾಗಬೇಕು. (ಕೆಲವು ದೇಶಗಳಲ್ಲಿ ಭಿನ್ನವಿದೆ)
  • ರಕ್ತದಾನ ನೀಡುವವರು 50ಕೆಜಿ ತೂಕ ಇರಲೇಬೇಕು. (ಕೆಲವು ದೇಶಗಳಲ್ಲಿ ಭಿನ್ನವಿದೆ)
  • ರಕ್ತದಾನ ನೀಡುವ ಸಮಯದಲ್ಲಿ ಆರೋಗ್ಯ ಉತ್ತಮವಾಗಿರಬೇಕು.

ಹೆಚ್ಚಿನ ಮಾಹಿತಿಗಾಗಿ: https://www.who.int/campaigns/world-blood-donor-day/2018/who-can-give-blood

Leave a Reply

Your email address will not be published.

This site uses Akismet to reduce spam. Learn how your comment data is processed.