ಇಂದು ಪುಣ್ಯಸ್ಮರಣೆ
ಭಾರತ ಸ್ವಾತಂತ್ರ್ಯ ಹೋರಾಟದ ಕೆಚ್ಚು ಹೆಚ್ಚಿಸಿದ ಘಟನೆ ‘ಜಲಿಯನ್ ವಾಲಾಬಾಗ್’ ಹತ್ಯಾಕಾಂಡ. ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತೀಯ ಜನರ ಮೇಲೆ ಮಾಡಿದ ದೌರ್ಜನ್ಯದ ಸಂಕೇತವಾಗಿ ಉಳಿದಿದೆ. ಇದು ಭಾರತದಲ್ಲಿ ನಡೆದ ಅತ್ಯಂತ ಘೋರ ಹಾಗೂ ಅಮಾನವೀಯ ದುರಂತ ಘಟನೆಗಳಲ್ಲೊಂದು.

ಆ ದಿನ ಅಮೃತಸರ್‌ ನ ಮೈದಾನದಲ್ಲಿ ಜನರೆಲ್ಲ ಬೈಸಾಕಿ ಎಂಬ ಹಬ್ಬದ ಸಂಭ್ರಮದಲ್ಲಿದ್ದಾಗ. ಕ್ರೂರ ಬ್ರಿಟಿಷ್ ಸೇನಾಧಿಕಾರಿಗಳು ಹಾರಿಸಿದ ಗುಂಡಿನ ದಾಳಿಗೆ ತುತ್ತಾಗಿ ಜನರ ರಕ್ತಪಾತವೇ ಹರಿದಿತ್ತು. ಬ್ರಿಟಿಷರ ಈ ಅಮಾನವೀಯ ನರಮೇಧಕ್ಕೆ ಎರಡು ದಶಕಗಳ ನಂತರ ಪ್ರತಿಕಾರವನ್ನು ತೆಗೆದುಕೊಳ್ಳಲಾಯಿತು. ಬ್ರಿಟಿಷ್‌ ಅಧಿಕಾರಿ ಡಯರ್‌ ನನ್ನು ಕೊಂದು ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು ಕ್ರಾಂತಿಕಾರಿ ಉಧಮ್‌ ಸಿಂಗ್‌

ಜಲಿಯನ್ ವಾಲಾ ಬಾಗ್ ಹಿನ್ನೆಲೆ
1919 ರಲ್ಲಿ ಬ್ರಿಟಿಷ್‌ ಸರ್ಕಾರ ರೌಲತ್‌ ಕಾಯ್ದೆ ಜಾರಿಗೆ ತಂದಿತ್ತು. ರಾಜಕೀಯ ಚಟುವಟಿಕೆಗಳನ್ನು ನಿಗ್ರಹಿಸಲು ಸರ್ಕಾರಕ್ಕೆ ಅಧಿಕಾರ ನೀಡಿತ್ತು. ‌ಬ್ರಿಟಿಷರಿಗೆ ಯಾವುದೇ ವ್ಯಕ್ತಿಗಳ ಅನುಮಾನ ಬಂದಲ್ಲಿ ವಿಚಾರಣೆಯಿಲ್ಲದೆ ಬಂಧಿಸಲು ಅವಕಾಶ ನೀಡಿತ್ತು. ಏಪ್ರಿಲ್‌ 13, 1919 ರಲ್ಲಿ ಪಂಜಾಬ್‌ ಪ್ರಾಂತದ ಅಮೃತ್‌ ಸರ್‌ ನ ಬಳಿ ಜಲಿಯನ್‌ ವಾಲಾ ಬಾಗ್‌ ಎಂಬ ಮೈದಾನದಲ್ಲಿ ಬ್ರಿಟಿಷ್‌ ಸರ್ಕಾರ ಜಾರಿಗೆ ತಂದ ರೌಲಟ್ ಕಾಯ್ದೆ ವಿರುದ್ಧ ಸಾವಿರಾರು ಜನರು ಶಾಂತಿಯುತ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅದರ ಜೊತೆಗೆ ಸುತ್ತಲೂ ಎತ್ತರದ ಗೋಡೆಯಿಂದ ಆವೃತ್ತಗೊಂಡಿದ್ದ ಒಂದೇ ಪ್ರವೇಶದ್ವಾರವನ್ನು ಹೊಂದಿದ್ದ ಈ ಮೈದಾನದಲ್ಲಿ ಅಮೃತಸರ್‌ ನ ಸುತ್ತಮುತ್ತಲಿನ ಜನರು ಬೈಸಾಕಿ ಹಬ್ಬದಲ್ಲಿ ತೊಡಗಿಕೊಂಡಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಬಂದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಹೊರಹೋಗಲಿದ್ದ ಒಂದೇ ಒಂದು ನಿರ್ಗಮನದ ದ್ವಾರವನ್ನು ಅಡ್ಡಗಟ್ಟಿ ಅಲ್ಲಿದ್ದ ಸಾವಿರಾರು ಜನರ ಮೇಲೆ ಗುಂಡಿಟ್ಟು ಕೊಲ್ಲಲು ತನ್ನ ಸೇನೆಗೆ ಸೂಚನೆ ನೀಡಿದ್ದರು. ನೋಡು ನೋಡುತ್ತಿದ್ದಂತೆ ಜನರಲ್ ಡಯರ್ ಎನ್ನುವ ಅಧಿಕಾರಿ ನಡೆಸಿದ ಗುಂಡಿನ ದಾಳಿಯಲ್ಲಿ ನೂರಾರು ಜನ ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನುಳಿದವರು ಕಾಲ್ತುಳಿತಕ್ಕೆ ತುತ್ತಾದರು. ಸಾವಿರಾರು ಜನ ಗಾಯಗೊಂಡರು, ಇದರಿಂದ ಹಿರಿಯರು, ಹೆಂಗಸರು ಮಕ್ಕಳೆಲ್ಲರ ಆಕ್ರಂದನ ಮುಗಿಲು ಮುಟ್ಟಿತು. ಅನೇಕರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲಿದ್ದ ಬಾವಿಗೂ ಹಾರಿದರು. ಈ ಘಟನೆಯನ್ನು ಅಮೃತಸರ ಹತ್ಯಾಕಾಂಡ ಅಥವಾ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.


ಉಧಮ್‌ ಸಿಂಗ್‌ ಪರಿಚಯ
ಉಧಮ್‌ ಸಿಂಗ್‌ ಅವರು ಡಿಸೆಂಬರ್ 26, 1899ರಲ್ಲಿ ಪಂಜಾಬಿನ ಸಂಗ್ರೂರ್ ಜಿಲ್ಲೆಯ ಸುನಮ್ ಗ್ರಾಮದಲ್ಲಿ ಜನಿಸಿದರು. ಇವರು ಬಾಲ್ಯದಲ್ಲೇ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದರು. ನಂತರ ಉಧಮ್‌ ಮತ್ತು ಅವರ ಸಹೋದರ ಅಮೃತಸರದ ಅನಾಥ ಆಶ್ರಮದಲ್ಲಿ ಬೆಳೆದರು.

ತಮ್ಮ ಯೌವನದಲ್ಲಿ ಜಲಿಯನ್ ವಾಲಾಭಾಗ್ ನ ಪ್ರತ್ಯಕ್ಷದರ್ಶಿಯಾಗಿದ್ದ ಉಧಮ್ ಸಿಂಗ್ ತನ್ನ ಕಣ್ಣೆದುರೇ ತನ್ನ ತಾಯ್ನಾಡಿನ ಮೇಲಾಗುತ್ತಿರುವ ಶೋಷಣೆಯನ್ನು ಕಂಡು ದಿಗ್ಭ್ರಮೆಗೊಂಡರು. ಇದಕ್ಕೆ ಪ್ರತಿಕಾರವನ್ನು ತೆಗೆದುಕೊಳ್ಳಲೇ ಬೇಕೆಂದು ಅಂದೇ ಶಪಥ ಮಾಡಿದರು. ಕೇವಲ ಉದ್ವೇಗದ ಶಪಥ ಅದಾಗಿರದೇ 21 ವರ್ಷಗಳ ಕಾಲ ದೀರ್ಘ ನಿರಂತರವಾಗಿ ಆ ಶಪಥಕ್ಕಾಗಿ ಶ್ರಮಿಸಿ ಪೂರ್ಣಗೊಳಿಸಿದ ಶಪಥ ಅದಾಗಿತ್ತು.

ಭಗತ್ ಸಿಂಗ್ ಮತ್ತವರ ಕ್ರಾಂತಿಕಾರಿ ಗುಂಪಿನಿಂದ ಉಧಮ್ ಸಿಂಗ್ ಆಳವಾಗಿ ಪ್ರಭಾವಿತರಾಗಿದ್ದರು . 1924ರಲ್ಲಿ ಸಾಗರೋತ್ತರ ಭಾರತೀಯರನ್ನು ಸಂಘಟಿಸುವ ಗದರ್ ಪಾರ್ಟಿ ಸೇರಿದರು . 1927ರಲ್ಲಿ ಭಾರತಕ್ಕೆ ಮರಳಿದ ಅವರು ರಿವಾಲ್ವಾರ್ಗಳು ಮತ್ತು ಮದ್ದುಗುಂಡುಗಳನ್ನು ತಂದರು. ಇದರಿಂದಾಗಿ ಮುಂದೆ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು.

ಮಾರ್ಚ್‌ 11, 1940 ರಂದು ಲಂಡನ್ ನ ಕಾಕ್ಸ್‌ಟನ್ ಹಾಲ್ ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷಿಯನ್ ಸೊಸೈಟಿಯ ಜಂಟಿ ಸಭೆ ನಡೆದಿತ್ತು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿಗಳಲ್ಲಿ ಒಬ್ಬನಾಗಿದ್ದ ಮೈಕಲ್‌ ಓ ಡಯರ್‌ ಅಲ್ಲಿ ಭಾರತದಲ್ಲಿ ಗವರ್ನರ್‌ ಜನರಲ್‌ ಆಗಿದ್ದ ವೇಳೆ ತಾನು ಮಾಡಿದ ಸಾಧನೆಗಳನ್ನು ಆ ಸಮಯದಲ್ಲಿ ಹೇಳುತ್ತಿದ್ದನು. ಅವನ ಭಾಷಣ ಮುಗಿದ ನಂತರ ಸನ್ಮಾನ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉಧಮ್‌ ಸಿಂಗ್‌ ಸಭಾಂಗಣಕ್ಕೆ ಬಂದು ಡಯರ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಕೊಂದನು. ನಂತರ ಉಧಮ್‌ ಸಿಂಗ್‌ ನನ್ನು ಬ್ರಿಕ್ಸ್‌ ಟನ್‌ ಜೈಲಿಗೆ ಹಾಕಲಾಯಿತು. ಸುಮಾರು 20 ವರ್ಷಗಳ ಹಿಂದೆ ಮದನ್‌ ಲಾಲ್‌ ದಿಂಗ್ರಾರನ್ನು ಗಲ್ಲಿಗೇರಿಸಿದ್ದ ಪೆಂಟೋವಿನಲ್ಲೇ ಉಧಮ್‌ ಸಿಂಗ್‌ ರವರನ್ನೂ ಜುಲೈ 31, 1940 ರಲ್ಲಿ ಗಲ್ಲಿಗೇರಿಸಲಾಯಿತು.

1974ರಲ್ಲಿ ಉಧಮ್‌ ಸಿಂಗ್‌ ಅವರ ಚಿತಾಭಸ್ಮವನ್ನು ಅವರ ಜನ್ಮಸ್ಥಳವಾದ ಸುನಮ್‌ ಗ್ರಾಮಕ್ಕೆ ತರಲಾಯಿತು. ಉಧಮ್ ಸಿಂಗ್‌ಗೆ ಮೀಸಲಾದ ವಸ್ತುಸಂಗ್ರಹಾಲಯವು ಜಲಿಯನ್‌ವಾಲಾ ಬಾಗ್‌ನ ಸಮೀಪ ಅಮೃತಸರದಲ್ಲಿದೆ. ಸುನಮ್‌ನಲ್ಲಿರುವ ಸಿಂಗ್ ಅವರ ಪೂರ್ವಜರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ಉಧಮ್ ಸಿಂಗ್ ರ ಪೂರ್ವಜರ ಪಟ್ಟಣವಾದ ಸುನಮ್‌ನ ಅಧಿಕೃತ ಹೆಸರನ್ನು ‘ಸುನಮ್ ಉಧಮ್ ಸಿಂಗ್ ವಾಲಾ’ ಎಂದು ಬದಲಾಯಿಸಲಾಗಿದೆ. ಜಲಿಯನ್ ವಾಲಾ ಬಾಗ್ (1977), ಶಹೀದ್ ಉಧಮ್ ಸಿಂಗ್ (1977), ಶಹೀದ್ ಉಧಮ್ ಸಿಂಗ್ (2000) ಮತ್ತು ಸರ್ದಾರ್ ಉಧಮ್ (2021) ಎಂಬ ಅವರ ಜೀವನಾಧಾರಿತ ಸಿನೆಮಾಗಳು ರಚನೆಗೊಂಡಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.