ಇಂದು ಜಯಂತಿ
ಪಿಂಗಲಿ ವೆಂಕಯ್ಯ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ತ್ರಿವರ್ಣ ಧ್ವಜ ವಿನ್ಯಾಸಕರು. ಪಿಂಗಲಿ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಉಪನ್ಯಾಸಕ, ಲೇಖಕ , ಭೂವಿಜ್ಞಾನಿ, ಶಿಕ್ಷಣತಜ್ಞ , ಕೃಷಿಕರೂ ಆಗಿದ್ದರು. ಇಂದು ಅವರ ಜಯಂತಿ.
ಪರಿಚಯ
ಪಿಂಗಲಿ ವೆಂಕಯ್ಯ ಅವರು ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ ಭಟ್ಲ ಪೆನುಮಾರು ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಹನುಮಂತರಾಯಡು, ತಾಯಿ ವೆಂಕಟರತ್ಮಮ್ಮ. ಪಿಂಗಲಿ ಅವರು ಚೆನ್ನೈನಲ್ಲಿ ಆರಂಭಿಕ ಶಿಕ್ಷಣ ಮುಗಿಸಿದರು. ನಂತರ ಇಂಗ್ಲೆಂಡ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ವೆಂಕಯ್ಯ ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಪದವಿ ಪಡೆದರು.
ಪಿಂಗಲಿ ವೆಂಕಯ್ಯ ಅವರು ಮಚಲಿಪಟ್ಟಣಂನ ಆಂಧ್ರನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. 1924ರಲ್ಲಿ ಅವರು ನೆಲ್ಲೂರಿನಲ್ಲಿ ಮೈಕಾ ಕುರಿತಾದ ಸಂಶೋಧನೆ ಕೈಗೊಂಡರು.
ಆಂಗ್ಲೋ ಬೋಯರ್ ಯುದ್ಧದ ಸಮಯದಲ್ಲಿ ಪಿಂಗಲಿ ವೆಂಕಯ್ಯ ದಕ್ಷಿಣ ಆಫ್ರಿಕಾದಲ್ಲಿ ವಾಸ್ತವ್ಯ ಹೂಡಿದ್ದಾಗ ಮೊದಲ ಬಾರಿಗೆ ಮಹಾತ್ಮ ಗಾಂಧಿಯನ್ನು ಭೇಟಿಯಾದರು. ಮಹಾತ್ಮ ಗಾಂಧಿಯವರ ಆದರ್ಶಗಳು ಪಿಂಗಲಿ ವೆಂಕಯ್ಯ ಅವರನ್ನು ಪ್ರೇರೇಪಿಸಿತು. ಅವರು ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಚಳವಳಿಯಲ್ಲಿ ಭಾಗವಹಿಸಿದರು. ಪಿಂಗಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾದರು. ಉಪ್ಪಿನ ಸತ್ಯಾಗ್ರಹ ಚಳವಳಿ ಸೇರಿದಂತೆ ವಿವಿಧ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹೀಗಾಗಿ ಪಿಂಗಲಿ ಅವರು ಅನೇಕ ಬಾರಿ ಸೆರೆಮನೆ ವಾಸವನ್ನೂ ಅನುಭವಿಸಬೇಕಾಯಿತು.
ಪಿಂಗಲಿ ವೆಂಕಯ್ಯ ಅವರು ಕೃಷಿಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ತಮ್ಮ ಹೆಚ್ಚಿನ ಸಮಯವನ್ನು ಹತ್ತಿಯ ಪ್ರಧಾನ ಪ್ರಭೇದಗಳ ಸಂಶೋಧನೆಗೆ ಮೀಸಲಿಟ್ಟರು. ಕಾಂಬೋಡಿಯಾ ಕಾಟನ್ ಎಂಬ ವೈವಿಧ್ಯದ ಬಗ್ಗೆ ಅಳವಾಗಿ ಅಧ್ಯಯನ ನಡೆಸಿದರು.
ರಾಷ್ಟ್ರಧ್ವಜ ವಿನ್ಯಾಸ
ವೆಂಕಯ್ಯ ಅವರು 1921ರಲ್ಲಿ ಬೆಜವಾಡದಲ್ಲಿ (ಇಂದಿನ ವಿಜಯವಾಡ) ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಧ್ವಜದ ವಿನ್ಯಾಸವನ್ನು ಪ್ರಸ್ತಾಪಿಸಿದರು. ವೆಂಕಯ್ಯ ಅವರು ಭಾರತಕ್ಕೆ ರಾಷ್ಟ್ರೀಯ ಕರೆನ್ಸಿ ಮತ್ತು ರಾಷ್ಟ್ರೀಯ ಭಾಷೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು. ಅವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಮೂರು ಪಟ್ಟೆಗಳನ್ನು ಬಳಸಿದರು, ಮಧ್ಯದಲ್ಲಿ ನೂಲುವ ಚಕ್ರವನ್ನು ಹೊಂದಿದ್ದರು. ನಂತರ ಅವರು ತಿರುಗುವ ಚಕ್ರವನ್ನು ಅಶೋಕ ಚಕ್ರಕ್ಕೆ ಬದಲಾಯಿಸಿದರು.
ವಿಜಯವಾಡದಲ್ಲಿ ತುಂಬಾ ವರ್ಷಗಳ ಕಾಲ ಪಿಂಗಲಿ ಅವರು ವಾಸವಿದ್ದರು. ಈ ಸಮಯದಲ್ಲಿ ಸಮಾಜ ಸೇವೆಯಲ್ಲೂ ಸಹ ತೊಡಗಿಕೊಂಡಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಶಾಸಕಾಂಗ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಬಹುಭಾಷಾ ಪಟುವಾದ ಅವರು ಜಪಾನೀಸ್ ಮತ್ತು ಉರ್ದು ಮುಂತಾದ ಭಾಷೆಗಳಲ್ಲಿ ಮಾತನಾಡುತ್ತಿದ್ದರು.
ಪ್ರಶಸ್ತಿ
ಪಿಂಗಲಿ ವೆಂಕಯ್ಯ ಅವರಿಗೆ 1955 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2009ರಲ್ಲಿ ಅವರ ಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು. ವಿಜಯವಾಡದ ಪ್ರಮುಖ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ. ವೆಂಕಯ್ಯ ಅವರ ಜನ್ಮಸ್ಥಳದಲ್ಲಿ ಅವರ ಗೌರವಾರ್ಥ ಸ್ಮಾರಕವನ್ನು ಸ್ಥಾಪಿಸಲಾಗಿದೆ.
ಪಿಂಗಲಿ ವೆಂಕಯ್ಯ ಅವರು ಜುಲೈ 4, 1963 ರಂದು ನಿಧನರಾದರು.