ಇಂದು ಜಯಂತಿ
ನಾರಾಯಣ ಗುರು ಅವರು ಭಾರತದಲ್ಲಿ ಒಬ್ಬ ತತ್ವಜ್ಞಾನಿ , ಆಧ್ಯಾತ್ಮಿಕ ಗುರು ಮತ್ತು ಸಮಾಜ ಸುಧಾರಕರು. ಅವರು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಕೇರಳದ ಜಾತಿ-ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸುಧಾರಣಾ ಚಳವಳಿಯನ್ನು ಆರಂಭಿಸಿದರು. ಇಂದು ಅವರ ಜಯಂತಿ.


ಪರಿಚಯ
ನಾರಾಯಣ ಗುರು ಅವರು ಆಗಸ್ಟ್‌ 20, 1856ರಲ್ಲಿ ತಿರುವನಂತಪುರಂ ಬಳಿ ಚೆಂಪಜಂತಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮದನ್‌ ಆಸನ್‌ ಮತ್ತು ತಾಯಿ ಕುಟ್ಟಿಯಮ್ಮ. ನಾರಾಯಣಗುರು ಅವರ ಆರಂಭಿಕ ಶಿಕ್ಷಣವು ಚೆಂಪಜಂತಿ ಮೂತ ಪಿಳ್ಳೈ ಅವರ ಬಳಿ ಗುರುಕುಲ ಅಧ್ಯಯನ ನಡೆಸಿದರು. ನಂತರ ಅವರು 15 ವರ್ಷವಿದ್ದಾಗ ಅವರ ತಾಯಿ ಕುಟ್ಟಿಯಮ್ಮ ನಿಧನರಾದರು. ನಾರಾಯಣ ಗುರು ಅವರು 21ನೇ ವಯಸ್ಸಿನಲ್ಲಿ ಸಂಸ್ಕೃತ ವಿದ್ವಾಂಸರಾದ ರಾಮನ್‌ ಪಿಳ್ಳೈ ಆಸನ್‌ ಅವರಿಂದ ಕಲಿಯಲು ತಿರುವಾಂಕೂರ್‌ ಗೆ ಹೋದರು. ಅವರ ಬಳಿ ವೇದಗಳು, ಉಪನಿಷತ್ತುಗಳು ಮತ್ತು ಸಂಸ್ಕೃತದ ಸಾಹಿತ್ಯ ಹಾಗೂ ತಾರ್ಕಿಕ ವಾಕ್ಚಾತುರ್ಯ ರೂಢಿಸಿಕೊಂಡರು. ಅವರು 1881ರಲ್ಲಿ ತಮ್ಮ ಹಳ್ಳಿಗೆ ಹಿಂದಿರುಗಿದರು. ಅವರ ತಂದೆಗೆ ಅನಾರೋಗ್ಯದ ಕಾರಣದಿಂದಾಗಿ ನಾರಾಯಣ ಗುರು ಅವರು ಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದ್ದು, ಅಲ್ಲಿಯ ಸ್ಥಳೀಯ ಮಕ್ಕಳಿಗೆ ವೇದ, ಸಂಸ್ಕೃತಗಳನ್ನು ಕಲಿಸಿದರು.
ನಾರಾಯಣ ಗುರು ಅವರು ಕೇರಳ ಮತ್ತು ತಮಿಳುನಾಡು ಕಡೆಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರಾದ ಚಟ್ಟಂಪಿ ಸ್ವಾಮಿಕಲ್ ಅವರನ್ನು ಭೇಟಿಯಾದರು. ಅವರು ಧ್ಯಾನ ಮತ್ತು ಯೋಗವನ್ನು ಕಲಿತ ಅಯ್ಯವು ಸ್ವಾಮಿಗಳಿಗೆ ನಾರಾಯಣ ಗುರು ಅವರನ್ನು ಪರಿಚಯಿಸಿದರು.


ಅವರು ಮರುತ್ವಾಮಲದಲ್ಲಿ ಪಿಳ್ಳತಡಮ್ ಗುಹೆಯನ್ನು ತಲುಪುವವರೆಗೂ ತಮ್ಮ ಅಲೆದಾಟವನ್ನು ಮುಂದುವರೆಸಿದರು. ಜೊತೆಗೆ ಅಲ್ಲಿ ಅವರು ಆಶ್ರಮವನ್ನು ಸ್ಥಾಪಿಸಿದ್ದು, ಎಂಟು ವರ್ಷಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿದರು. 1888ರಲ್ಲಿ ಅವರು ಅರುವಿಪ್ಪುರಂಗೆ ಭೇಟಿ ನೀಡಿದರು. ಅಲ್ಲಿ ಅವರು ನೆಯ್ಯರ್ ನದಿಯ ಬಳಿಯ ಗುಹೆಯಲ್ಲಿ ಧ್ಯಾನ ಮಾಡಲು ಶುರು ಮಾಡಿದ್ದರು. ಈ ಬಂಡೆಯನ್ನು ಶಿವನ ವಿಗ್ರಹವಾಗಿ ಸ್ಥಾಪಿಸಲಾಯಿತು ಮತ್ತು ಈ ಸ್ಥಳವನ್ನು ಅರುವಿಪ್ಪುರಂ ಶಿವ ದೇವಾಲಯ ಎಂದು ಕರೆಯಲಾಗುತ್ತದೆ. ಅರುವಿಪುರಂ ಪ್ರತಿಷ್ಠಾ ಎಂದು ಕರೆಯಲ್ಪಟ್ಟ ಈ ಕಾಯಿದೆಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಗುರುವಿನ ಹಕ್ಕನ್ನು ಪ್ರಶ್ನಿಸುವ ಮೇಲ್ವರ್ಗದ ಬ್ರಾಹ್ಮಣರಲ್ಲಿ ಸಾಮಾಜಿಕ ಕೋಲಾಹಲವನ್ನು ಸೃಷ್ಟಿಸಿತು. ಆದರೆ ಅವರು ಇದು ಬ್ರಾಹ್ಮಣರ ಶಿವನಲ್ಲ ಇದು ಈಜವ ಶಿವ ಎಂದು ಸ್ಪಷ್ಟಪಡಿಸಿದರು. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್ ಅನ್ನು ನಾರಾಯಣ ಗುರುಗಳು ಸ್ಥಾಪಿಸಿದರು.
ಗುರುಗಳು 1904ರಲ್ಲಿ ವರ್ಕಲಾ ಬಳಿ ಶಿವಗಿರಿಗೆ ಹೋದರು.ಅಲ್ಲಿ ಅವರು ಸಮಾಜದ ಕೆಳಸ್ತರದ ಮಕ್ಕಳಿಗೆ ಶಾಲೆಯನ್ನು ತೆರೆದರು.ಆದರೆ ಅವರು ಯಾವುದೇ ಜಾತಿ ತಾರತಮ್ಯ ಮಾಡದೆ ಅವರಿಗೆ ಉಚಿತ ಶಿಕ್ಷಣವನ್ನು ನೀಡಿದರು. 1912ರಲ್ಲಿ ನಾರಾಯಣ ಗುರು ಅವರು ಶಾರದ ಮಠವನ್ನು ನಿರ್ಮಿಸಿದರು. ಜೊತೆಗೆ ಅವರು ತ್ರಿಶ್ಶೂರ್ , ಕಣ್ಣೂರು , ಅಂಕುತೆಂಗು , ತಲಸ್ಸೆರಿ , ಕೋಯಿಕ್ಕೋಡ್ ಮುಂತಾದ ಇತರ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದರು.


ಜಾತೀಯತೆಯ ವಿರುದ್ಧ ಹೋರಾಟ
ನಾರಾಯಣ ಗುರುಗಳು ಅವರು 19 ಮತ್ತು 20ನೇ ಶತಮಾನದ ಆರಂಭದಲ್ಲಿ ಕೇರಳದ ಜನರು ನಡೆಸುತ್ತಿರುವ ಜಾತಿಪದ್ಧತಿಯನ್ನು ಅಭ್ಯಾಸ ಮಾಡಲಾಯಿತು. ಹಿಂದೂಳಿದ ಜಾತಿ ಈಜವರು ಮತ್ತು ಇತರ ಅಸ್ಪೃಶ್ಯ ಜಾತಿಗಳೆಂದು ಪರಿಗಣಿಸಲಾಗಿದ್ದ ಪರಯ್ಯರ್, ಆದಿವಾಸಿಗಳು ಹಾಗೂ ಪುಲಯರು ಮೇಲ್ಜಾತಿ ಸಮುದಾಯದಿಂದ ತಾರತಮ್ಯವನ್ನು ಅನುಭವಿಸಬೇಕಾಯಿತು. ಈ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ದ ನಾರಾಯಣ ಗುರುಗಳು ಮೊದಲ ಪ್ರಮುಖ ಸಾರ್ವಜನಿಕ ಕಾರ್ಯವನ್ನು ಮಾಡಿದರು. ಈ ನಿಟ್ಟಿನಲ್ಲಿ ಅವರು ಕೇರಳದಾದ್ಯಂತ ನಲವತ್ತೈದು ದೇವಾಲಯಗಳನ್ನು ಪ್ರತಿಷ್ಠಾಪಿಸಿದರು. ಒಂದು ಜಾತಿ, ಒಂದು ಧರ್ಮ ಮತ್ತು ಎಲ್ಲಾ ಮಾನವರಿಗೆ ಒಂದೇ ದೇವರು ಎಂಬ ಘೋಷವಾಕ್ಯವನ್ನು ನುಡಿದರು.


ಮಹಾತ್ಮ ಗಾಂಧೀಜಿ ಭೇಟಿ
ಮಾರ್ಚ್ 12,1925 ರಂದು, ವೈಕಂ ಸತ್ಯಾಗ್ರಹದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಕೇರಳದ ವರ್ಕಳದ ಶಿವಗಿರಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಾರಾಯಣ ಗುರುಗಳು ಗಾಂಧೀಜಿ ಅವರನ್ನು ಭೇಟಿಯಾದರು. ನಾರಾಯಣ ಗುರುಗಳ ಜಾತಿಯ ಕುರಿತು ತಾರ್ಕಿಕ ವಾದಗಳು ಗಾಂಧಿಯವರ ಮೇಲೆ ಪ್ರಭಾವ ಬೀರಿದ್ದವು. ಗುರುಗಳ ಬೋಧನೆಗಳಿಂದ ಪ್ರೇರಿತರಾದ ಗಾಂಧಿಯವರು ಜಾತಿ ಮತ್ತು ಅಸ್ಪೃಶ್ಯತೆಯ ಬಗೆಗಿನ ತಮ್ಮ ನಿಲುವನ್ನು ಮರು ವ್ಯಾಖ್ಯಾನಕ್ಕೆ ತೆರೆದುಕೊಂಡರು. ಗಾಂಧಿಯವರು ರಾಷ್ಟ್ರೀಯ ಚಳವಳಿಯಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಮತ್ತು ಹರಿಜನರ ಉನ್ನತಿಗಾಗಿ ಗಮನ ಹರಿಸಲು ಪ್ರಾರಂಭಿಸಿದರು.


ಸಾಹಿತ್ಯ
ಗುರುಗಳು ಮಲಯಾಳಂ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ 45 ಕೃತಿಗಳನ್ನು ರಚಿಸಿದರು. ಆತ್ಮೋಪದೇಶ ಶತಕಂ, ದೈವ ದಶಕಂ ಸೇರಿದಂತೆ ಪ್ರಮುಖ ಗ್ರಂಥಗಳನ್ನು ರಚಿಸಿದ್ದಾರೆ.


ನಾರಾಯಣ ಗುರುಗಳು ಅನಾರೋಗ್ಯ ಸಮಸ್ಯೆಯಿಂದ ಸೆಪ್ಟೆಂಬರ್ 20, 1928ರಂದು 72ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.