ಆರ್ ಎಸ್ ಎಸ್ ಅಖಿಲ ಭಾರತೀಯ ಸಮನ್ವಯ ಬೈಠಕ್ ಸಂಪನ್ನ
ಪಾಲಕ್ಕಾಡ್, ಕೇರಳ: ಆಗಸ್ಟ್ 31 ರಿಂದ ಸೆಪ್ಟೆಂಬರ್ 2ರವರೆಗೆ ಕೇರಳದ ಪಾಲಕ್ಕಾಡಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ ಸಂಪನ್ನಗೊಂಡಿದೆ. ಬೈಠಕ್ ನ ಕೊನೆಯ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅಖಿಲ ಭಾರತೀಯ ಸಮನ್ವಯ ಬೈಠಕ್ ಕುರಿತು ಪಾಲಕ್ಕಾಡಿನ ಅಹಲ್ಯಾ ಕ್ಯಾಂಪಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಅವರ 300ನೇ ಜಯಂತಿಯ ಪ್ರಯುಕ್ತ ರಾಷ್ಟ್ರಾದ್ಯಂತ ಆಯೋಜಿಸಲಾದ ಮಹಿಳಾ ಸಮ್ಮೇಳನಗಳ ಕುರಿತು ಅಧಿಕೃತ ಮಾಹಿತಿ ಸಭೆಯಲ್ಲಿ ದೊರಕಿತು. ದೇಶಾದ್ಯಂತ ಒಟ್ಟು 472 ಮಹಿಳಾ ಸಮ್ಮೇಳನಗಳು ನಡೆದಿದ್ದು, 5,75,740 ಮಹಿಳೆಯರು ಭಾಗವಹಿಸಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ, ಮಹಿಳಾ ಕೇಂದ್ರಿತ ಸವಾಲುಗಳಿಗೆ ಪರಿಹಾರಗಳು, ಸ್ಥಾನೀಯ ಸವಾಲುಗಳು, ಭಾರತೀಯ ಚಿಂತನೆಯಲ್ಲಿ ಮಹಿಳೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು. ಹಾಗೆಯೇ ಅಹಲ್ಯಾದೇವಿ ಹೋಳ್ಕರ್ ಅವರ ತ್ರಿಶತಾಬ್ದಿ ಜಯಂತಿಯ ಪ್ರಯುಕ್ತ ವಿವಿಧ ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವನವಾಸಿ ಕಲ್ಯಾಣಾಶ್ರಮದ ನೇತೃತ್ವದಲ್ಲಿ ರಾಣಿ ದುರ್ಗಾವತಿಯ 500ನೇ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ನುಡಿದರು.
ಬೈಠಕ್ ನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರವನ್ನು ಖಂಡಿಸಿ ಐದು ವಿಧದಲ್ಲಿ ಇಂತಹ ಘಟನೆಗಳನ್ನು ಎದುರಿಸಲು ತೀರ್ಮಾನಿಸಲಾಗಿದೆ. ಕಾನೂನಾತ್ಮಕ ಹೋರಾಟ, ಜಾಗೃತಿ ಕಾರ್ಯಕ್ರಮಗಳು, ಕುಟುಂಬಗಳಲ್ಲಿ ಸಂಸ್ಕಾರ ಪ್ರದಾನ, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಮೂಲಕ ಜಾಗೃತಿ, ಶಾಲಾ, ಕಾಲೇಜು ಮತ್ತು ಕೆಲಸದ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿಗಳನ್ನು ನೀಡುವ ವ್ಯವಸ್ಥೆಯನ್ನು ರೂಪಿಸುವುದರ ಮೂಲಕ ಇಂತಹ ಆಘಾತಕಾರಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಘ ಮತ್ತು ಸಂಘ ಪ್ರೇರಿತ ಸಂಘಟನೆಗಳ ಮೂಲಕ ಇದರ ಕುರಿತು ಕಾರ್ಯನಿರ್ವಹಿಸಲಾಗುತ್ತದೆ ಎಂದರು.
ಹಿಂದೂ ಸಮಾಜಕ್ಕೆ ಜಾತಿ ಸಂಬಂಧಿತ ಅಂಶಗಳು ಸೂಕ್ಷ್ಮವಿಚಾರಗಳು. ಹಿಂದುಳಿದ ನಿರ್ದಿಷ್ಟ ಸಮುದಾಯ ಅಥವಾ ಜಾತಿಗಳ ಏಳಿಗೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರಕಾರಕ್ಕೆ ದತ್ತಾಂಶಗಳ ಅಗತ್ಯವಿದೆ. ಈ ಜಾತಿ ಗಣತಿಯ ದತ್ತಾಂಶಗಳು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೇ ಹೊರತು ಚುನಾವಣೆ ಲಾಭಕ್ಕೆ ದುರ್ಬಳಕೆಯಾಗಬಾರದು. ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಇದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮೂರು ದಿನಗಳ ಕಾಲ ನಡೆದ ಈ ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಆರು ಮಂದಿ ಸಹಸರಕಾರ್ಯವಾಹರುಗಳು ಮತ್ತು ಎಲ್ಲಾ ಕಾರ್ಯವಿಭಾಗಗಳ ಪ್ರಮುಖರು ಸೇರಿದಂತೆ 300 ಮಂದಿ ಪ್ರಮುಖರು ಭಾಗವಹಿಸಿದರು.