ಇಂದು ಪುಣ್ಯಸ್ಮರಣೆ
ಆಧುನಿಕ ಮೀರಾ ಎಂದೇ ಗುರುತಿಸಿಕೊಂಡಿದ್ದ ಮಹಾದೇವಿ ವರ್ಮಾ ಅವರು ಪ್ರಸಿದ್ಧ ಹಿಂದಿ ಕವಯತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು. ಅವರು ತಮ್ಮ ಜೀವನವನ್ನು ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗೆ ಮುಡಿಪಾಗಿಟ್ಟರು. ವರ್ಮಾ ಅವರನ್ನು ಹಿಂದಿ ಸಾಹಿತ್ಯದಲ್ಲಿ ಛಾಯಾವಾದ್ ಚಳವಳಿಯ ಮೂಲ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು.ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಮಹಾದೇವಿ ವರ್ಮಾ ಅವರು ಮಾರ್ಚ್ 26 ರಂದು 1907ರಲ್ಲಿ ಉತ್ತರಪ್ರದೇಶದದ ಫಾರುಖಾಬಾದ್ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೇ ಸಾಹಿತ್ಯ , ಚಿತ್ರಕಲೆ, ಸಂಗೀತ ಮತ್ತು ಕಾವ್ಯದತ್ತ ಆಸಕ್ತಿ ಹೊಂದಿದ್ದರು. ಇವರು ಅಲಹಾಬಾದ್‌ನ ಕ್ರಾಸ್ಟ್‌ವೈಟ್ ಗರ್ಲ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ಅವರು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎ ಪದವಿ ಪಡೆದರು. 1933ರಲ್ಲಿ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದರು. ನಂತರ ಅವರು ಪ್ರಯಾಗ್ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದರು. ಜೊತೆಗೆ ಅಲಹಾಬಾದ್ ನಿಂದ ಪ್ರಕಟವಾಗುತ್ತಿದ್ದ ‘ಚಾಂದ್’ ಮಾಸಪತ್ರಿಕೆಯ ಸಂಪಾದಕರಾಗಿಯೂ ಇದ್ದರು. ಅವರು ಪ್ರಯಾಗ್ ನಲ್ಲಿ ಸಾಹಿತ್ಯ ಸಂಸದ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮಹಾದೇವಿ ವರ್ಮಾ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು.
ಅಲಹಾಬಾದಿನ ಹಳ್ಳಿಗಳಲ್ಲಿ ಇವರು ಪಾಠ ಮಾಡಲಾರಂಭಿಸಿದರು. ರಾಜನೀತಿಕ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಇವರು ಭಾಗವಹಿಸದಿದ್ದರೂ, ಇವರು ಗಾಂಧಿ ತತ್ವಗಳನ್ನು ಅನುಸರಿಸತೊಡಗಿದರು. ಇದರ ಅನುಸಾರ ಮಹಾದೇವಿಯವರು ಇಂಗ್ಲೀಷಿನಲ್ಲಿ ಮಾತಾಡುವುದನ್ನು ನಿಲ್ಲಿಸಿದರು ಹಾಗು ಖಾದಿ ಬಟ್ಟೆಗಳನ್ನು ಮಾತ್ರ ಉಪಯೋಗಿಸತೊಡಗಿದರು.
ಅಲಹಾಬಾದಿನ ಮಹಿಳಾ ವಿದ್ಯಾಪೀಠದ ಮುಖ್ಯೋಪಾಧ್ಯಾಯಕಿಯಾಗಿ ಇವರ ನೇಮಕವಾಯಿತು. ಈ ವಿದ್ಯಾಪೀಠವನ್ನು ಹುಡುಗಿಯರಲ್ಲಿ ಸಾಂಸ್ಕೃತಿಕ ಹಾಗೂ ಸಾಸಿತ್ಯಕ ಶಿಕ್ಷಣವನ್ನು ಹಿಂದಿ ಮಾಧ್ಯಮದ ಮೂಲಕ ಕಲಿಸಲು ಸ್ಥಾಪಿಸಲಾಗಿತ್ತು. ನಂತರ ಇದೇ ವಿದ್ಯಾಪೀಠದ ಕುಲಪತಿಯಾಗಿ ಸಹ ಕಾರ್ಯ ನಿರ್ವಹಿಸಿದರು. ಪ್ರಯಾಗ ಮಹಿಳಾ ಪೀಠದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಮಹಾದೇವಿಯವರು ಹಲವು ಕವಿ ಸಮ್ಮೇಳನಗಳನ್ನು ಹಾಗು ಸಣ್ಣ ಕಥೆಗಳ ಬರಹಗಾರರ ಸಮ್ಮೇಳನಗಳನ್ನು ನೆಡೆಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಮಹಾದೇವಿ ವರ್ಮ ಅವರು ಸಾಹಿತ್ಯದಲ್ಲಿ ಹೆಚ್ಚು ಜ್ಞಾನವುಳ್ಳವರಾಗಿದ್ದರು. ಹೀಗಾಗಿ ಅವರು ಪ್ರೌಢಶಿಕ್ಷಣ ಪಡೆಯುತ್ತಿದ್ದಾಗಲೇ ಅನೇಕ ಕವನಗಳನ್ನು ರಚಿಸಿದ್ದರು. 1930ರಲ್ಲಿ ‘ನೀಹಾರ’ ಎಂಬ ಇವರ ಮೊದಲ ಕೃತಿಯನ್ನು ರಚಿಸಿದ್ದಾರೆ. 1932ರಲ್ಲಿ ರಶಿಮ , 1934ರಲ್ಲಿ ನೀರಜಾ , 1936ರಲ್ಲಿ ‘ಸಾಂಧ್ಯಗೀತ’ ಮತ್ತು 1939ರಲ್ಲಿ ‘ಯಾಮ’ ಹಾಗೂ 1942 ರಲ್ಲಿ ‘ದೀಪಶಿಖಾ’ ಎಂಬ ಕವನಸಂಕಲನಗಳನ್ನು ರಚಿಸಿದ್ದಾರೆ. ಇವರ ಗದ್ಯಕೃತಿಗಳು ಸಮಾಜ ಕೇಂದ್ರಿತವಾಗಿದ್ದವು. ರೇಖಾಚಿತ್ರಗಳನ್ನು ‘ಗತಕಾಲದ ಚಲನಚಿತ್ರಗಳು’ ಮತ್ತು ‘ಲೈನ್ಸ್ ಆಫ್ ಮೆಮೊರಿ’ ಎಂದು ಸಂಗ್ರಹಿಸಲಾಗಿದೆ. ‘ಲಿಂಕ್ಸ್ ಸರಪಳಿ’ ವಿಮರ್ಶಾತ್ಮಕ ಗದ್ಯ ಹಾಗೂ ‘ಸಂಕಲ್ಪಪೀಠ’, ‘ಹಿಮಾಲಯ’, ‘ಕ್ಷದಾ’ ಅವರ ಪ್ರಬಂಧಗಳ ಸಂಕಲನಗಳಾಗಿವೆ. ತಮ್ಮ ಜೀವನದಲ್ಲಿ ನೋವು ಮತ್ತು ಸಂತೋಷವನ್ನು ಒಪ್ಪಿಕೊಂಡ ಕವಯಿತ್ರಿ ಮೀರಾ ಅವರಂತೆ ಆಧುನಿಕ ಕಾಲದ ಮೀರಾ ಎಂಬ ಪ್ರಸಿದ್ಧಿ ಹೊಂದಿದ್ದ ಮಹಾದೇವಿ ವರ್ಮಾ ಅವರ ಕೃತಿಗಳು ಹೆಚ್ಚು ಪ್ರಚಲಿತವಾಗಿದ್ದವು.
ಮಹಾದೇವಿ ವರ್ಮಾ ಅವರು ಭಾರತದಲ್ಲಿ ಮೊದಲ ಮಹಿಳಾ ಕವಿ ಸಮ್ಮೇಳನವನ್ನು ಆಯೋಜಿಸಿದರು. ಬೌದ್ಧ ಧರ್ಮವು ಮಹಾದೇವಿಯ ಮೇಲೆ ಗಮನಾರ್ಹ ಪ್ರಭಾವ ಬೀರಿತು. ಅವರು ಮಹಾತ್ಮ ಗಾಂಧಿಯವರ ಪ್ರೇರಣೆಯಿಂದ ಸಾರ್ವಜನಿಕ ಸೇವೆಯನ್ನು ಕೈಗೊಂಡರು. ಜೊತೆಗೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಮಹಿಳಾ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಅವಿರತವಾಗಿ ಶ್ರಮಿಸಿದರು.
ಪ್ರಶಸ್ತಿ
1956ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 1982ರಲ್ಲಿ ಅವರ ‘ಯಾಮಾ’ ಕವನ ಸಂಕಲಕ್ಕೆ ಜ್ಞಾನಪೀಠ ಪ್ರಶಸ್ತಿ 1988ರಲ್ಲಿ ಪದ್ಮವಿಭೂಷಣ ಗೌರವ ಸಂದಿದೆ.
ಮಹಾದೇವಿ ವರ್ಮಾ ಅವರು ಸೆಪ್ಟೆಂಬರ್ 11, 1987ರಲ್ಲಿ ನಿಧನರಾದರು