ಇಂದು ಜಯಂತಿ
ಭಾರತೀಯ ಕ್ರಿಕೆಟ್‌ ಪಿತಾಮಹ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದವರು ಲಾಲಾ ಅಮರನಾಥ್‌. ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕವನ್ನು ಗಳಿಸಿದವರು. ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಟೆಸ್ಟ್ ಸರಣಿಯ ಗೆಲುವಿನಲ್ಲಿ ಭಾರತವನ್ನು ಮುನ್ನಡೆಸಿದರು. ಇಂದು ಅವರ ಜಯಂತಿ.


ಪರಿಚಯ
ಲಾಲಾ ಅಮರ್ ನಾಥ್‌ ಅವರು ಸೆಪ್ಟೆಂಬರ್ 11, 1911 ರಂದು ಪಂಜಾಬಿನ ಕಪುರ್ತಲಾದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಪುರ್ತಲಾದ ರಣಧೀರ್‌ ಹೈಸ್ಕೂಲ್‌ ನಲ್ಲಿ ಮುಗಿಸಿದರು. ನಂತರ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.


ವೃತ್ತಿ ಜೀವನ

1933ರಲ್ಲಿ ದಕ್ಷಿಣ ಬಾಂಬೆಯ ಜಿಮ್ಖಾನಾ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. ಬ್ಯಾಟ್ಸ್‌ಮನ್ ಆಗಿದ್ದಲ್ಲದೆ, ಲಾಲಾ ಅಮರನಾಥ್ ಉತ್ತಮ ಬೌಲರ್ ಕೂಡ ಆಗಿದ್ದರು, ಡೊನಾಲ್ಡ್ ಬ್ರಾಡ್‌ಮನ್ ಹಿಟ್ ವಿಕೆಟ್‌ನಲ್ಲಿ ಔಟ್ ಮಾಡಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸರಣಿಯಲ್ಲಿ ಅವರು  ಭಾರತದ ಬ್ಯಾಟ್ಸ್‌ಮನ್‌ ಆಗಿ ಟೆಸ್ಟ್ ನಲ್ಲಿ 100 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಲ್ಲದೇ, ಈ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

1936ರಲ್ಲಿ ಅಮರನಾಥ್‌ ಇಂಗ್ಲೆಂಡ್‌ ಪ್ರವಾಸದ ವೇಳೆ ಶಿಸ್ತನ್ನು ಪಾಲಿಸದ ಕಾರಣ ನೀಡಿ ತಮಡದ ನಾಯಕನಾಗಿದ್ದ ವಿಜಯನಗರದ ಮಹಾರಾಜ್‌ ಕುಮಾರ್‌ (ವಿಜ್ಜಿ) ಅವರು  ಅಮರನಾಥ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಈ ಸಂದರ್ಭದಲ್ಲಿ ಅಮರನಾಥ್‌ ಅವರು ಇದಕ್ಕೆ ರಾಜಕೀಯ ಕಾರಣವೆಂದು ಆರೋಪಿಸಿದ್ದರು. 1936ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕರನ್ನಾಗಿ ವಿಜ್ಜಿ ಅವರನ್ನು ನೇಮಿಸಲಾಯಿತು. ಲಾಲಾ ಅಮರನಾಥ್, ಸಿಕೆ ನಾಯುಡು ಮತ್ತು ವಿಜಯ್ ಮರ್ಚೆಂಟ್ ಸೇರಿದಂತೆ ತಂಡದ ಕೆಲವು ಹಿರಿಯ ಆಟಗಾರರು ವಿಜ್ಜಿ ಅವರ ಆಟದ ಸಾಮರ್ಥ್ಯ ಮತ್ತು ನಾಯಕತ್ವವನ್ನು ಕಟುವಾಗಿ ಟೀಕಿಸಿದರು. ಇದರಿಂದ ಕೆಲವು ಸಮಯ ತಂಡದಲ್ಲಿ ಮನಸ್ಥಾಪ ಮನೆಮಾಡಿತು. ಲಾರ್ಡ್ಸ್‌ನಲ್ಲಿ ಮೈನರ್ ಕೌಂಟಿಗಳ ವಿರುದ್ಧ ಭಾರತದ ಪಂದ್ಯದ ವೇಳೆ ಲಾಲಾ ಅಮರನಾಥ್ ಅವರು ಆಟದ ಸಮಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು. ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿಜ್ಜಿ ಇದನ್ನೇ ಬಳಸಿಕೊಂಡು ಲಾಲಾ ಅಮರನಾಥ್ ಅವರನ್ನು ಮೊದಲ ಟೆಸ್ಟ್ ಪಂದ್ಯವಾಡದೆ ಪ್ರವಾಸದಿಂದ ಹಿಂದಕ್ಕೆ ಕಳುಹಿಸಲು ತಂಡದ ಮ್ಯಾನೇಜರ್ ಮೇಜರ್ ಜಾಕ್ ಬ್ರಿಟನ್-ಜೋನ್ಸ್ ಅವರೊಂದಿಗೆ ಸಂಚು ರೂಪಿಸಿದರು. ಅಷ್ಟೇ ಅಲ್ಲದೇ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಜಯ್ ಮರ್ಚೆಂಟ್ ಅನ್ನು ರನ್ ಔಟ್ ಮಾಡಲು ವಿಜ್ಜಿ ಮುಷ್ತಾಕ್ ಅಲಿಗೆ ಚಿನ್ನದ ಗಡಿಯಾರವನ್ನು ನೀಡಿದರು ಎಂದು ಆರೋಪಿಸಲಾಗಿದೆ.

ಭಾರತದ 1947-48ರ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಸಂದರ್ಭದಲ್ಲಿ ಅನೇಕ ರಾಜಕೀಯ ತಲ್ಲಣಗಳ ಕಾರಣ ಭಾರತ ವಿಭಜನೆಗೆ ಒಳಪಟ್ಟಿತು‌. ಈ ಸಂದರ್ಭದಲ್ಲಿ ಲಾಲಾ ಅಮರನಾಥ ಅವರ ಕುಟುಂಬ ಮುಸ್ಲಿಂ ಮತಾಂಧರ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಊರನ್ನು ಬಿಟ್ಟುಬರಬೇಕಾಯಿತು. ಈ ಬದಲಾವಣೆಗಳ ನಡುವೆಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು 144, 171 ಮತ್ತು ಅಜೇಯ 228 ರ ಇನ್ನಿಂಗ್ಸ್‌ಗಳನ್ನು ಒಳಗೊಂಡಂತೆ 58.1 ಸರಾಸರಿಯಲ್ಲಿ 1,162 ರನ್ ಗಳಿಸಿದರು. ಅವರು 1952ರಲ್ಲಿ ಪಾಕಿಸ್ತಾನದ ಭಾರತ ಪ್ರವಾಸದ ಪಂದ್ಯಗಳಿಗೆ ನಾಯಕರಾದರು. ಅವರ ಅಡಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಟೆಸ್ಟ್ ನಲ್ಲಿ ಗೆದ್ದಿತು. ಪಾಕಿಸ್ತಾನದ ವಿರುದ್ಧದ ಪಂದ್ಯಗಳ ಸಂದರ್ಭದಲ್ಲಿ ರಾಜಕೀಯ ಸ್ಥಿತ್ಯಂತರಗಳ ಕಾರಣಕ್ಕಾಗಿ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಮೂಡಿದ್ದ ಬಿರುಕನ್ನು ಜೋಡಿಸುವಲ್ಲಿ ಲಾಲಾ ಅಮರನಾಥ ಅವರು ಕೈಗೊಂಡ ಕಾರ್ಯಗಳು ಅವರ ಮೇಲಿನ ಗೌರವ ದುಪ್ಪಟ್ಟಾಗುವಂತೆ ಮಾಡಿದೆ‌.


1954ರಲ್ಲಿ ಭಾರತ ಪಾಕಿಸ್ತಾನ ಪ್ರವಾಸ ಮಾಡಿದಾಗ ಅಮರನಾಥ ಭಾರತ ತಂಡದ ಮ್ಯಾನೇಜರ್ ಆಗಿದ್ದರು. 1955ರಲ್ಲಿ ಅವರು ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಪಿಚ್‌ಗಳನ್ನು ತಿಳಿದುಕೊಳ್ಳುವುದರಲ್ಲಿ ನಿಪುಣರಾಗಿದ್ದರು.


ಲಾಲಾ ಅಮರನಾಥ್‌ ಅವರು ಆಗಸ್ಟ್ 5, 2000 ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.