ಇಂದು ಜಯಂತಿ
ಬಿ.ವಿ ಕಾರಂತ ಅವರು ಪ್ರಸಿದ್ಧ ನಾಟಕಕಾರ, ಚಿತ್ರ ನಿರ್ದೇಶಕ, ನಟ, ಚಿತ್ರಕಥೆಗಾರರಾಗಿ ಕಾರ್ಯನಿರ್ವಹಿಸಿದವರು. ಅವರು ತಮ್ಮ ಇಡೀ ಜೀವನವನ್ನೇ ರಂಗಭೂಮಿ ಏಳಿಗೆಗಾಗಿ ಹಗಲಿರುಳು ಶ್ರಮವಹಿಸಿದವರು. ಪ್ಯಾರಲಲ್ ಸಿನಿಮಾದ ಪ್ರವರ್ತಕರಲ್ಲಿ ಒಬ್ಬರಾಗಿದ್ದ ಬಿ.ವಿ ಕಾರಂತರು ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ
ಬಾಬುಕೋಡಿ ವೆಂಕಟರಮಣ ಕಾರಂತರು ಸೆಪ್ಟೆಂಬರ್ 19, 1929 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ತಂದೆ ಬಾಬುಕೋಡಿ ನಾರಾಯಣಪ್ಪ ಹಾಗೂ ತಾಯಿ ಲಕ್ಷ್ಮಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಕ್ಕಜೆಯಲ್ಲಿ ಮುಗಿಸಿದರು. ನಂತರ ಬಿ.ಎ ಪದವಿ ಪಡೆದು, ಬನಾಸರ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಬಿ.ವಿ ಕಾರಂತವರು ಬಾಲ್ಯದಿಂದಲೂ ರಂಗಭೂಮಿ ಕಡೆ ಹೆಚ್ಚು ಒಲವು ಹೊಂದಿದ್ದರು. ಹೀಗಾಗಿ ಅವರು ಪಿಕೆ ನಾರಾಯಣ ನಿರ್ದೇಶಿಸಿದ ‘ನನ್ನ ಗೋಪಾಲ’ ನಾಟಕದಲ್ಲಿ ನಟಿಸಿದರು. ನಂತರ ಅವರು ಮನೆಯನ್ನು ತೊರೆದು ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿದರು. ಅಲ್ಲಿ ಅವರು ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದರು. ಗುಬ್ಬಿ ವೀರಣ್ಣ ಅವರು ಕಾರಂತರನ್ನು ನಾಟಕದ ಬಗ್ಗೆ ಅಧ್ಯಯನ ಮಾಡಲು ಬನಾರಸ್‌ ಗೆ ಕಳುಹಿಸಿದರು. ಅಲ್ಲಿ ಅವರು ಗುರು ಓಂಕಾರನಾಥ ಠಾಕೂರ್ ಅವರಲ್ಲಿ ಹಿಂದೂಸ್ತಾನಿ ಸಂಗೀತದ ತರಬೇತಿಯನ್ನ ಪಡೆದರು. ಬೆಂಗಳೂರಿನ ಅತ್ಯಂತ ಹಳೆಯ ನಾಟಕ ತಂಡಗಳಲ್ಲಿ ಒಂದಾದ ʼಬೆನಕʼ ಅನ್ನು ಸ್ಥಾಪಿಸಿದರು. 1962ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಪದವಿ ಪಡೆದರು. ಅವರು ನವದೆಹಲಿಯ ಸರ್ದಾರ್‌ ಪಟೇಲ್‌ ವಿದ್ಯಾಲಯದಲ್ಲಿ ನಾಟಕ ಬೋಧಕರಾಗಿ ಕೆಲಸ ಮಾಡಿದರು. ಕೆಲ ಸಮಯದ ನಂತರ ಕಾರಂತರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಇಲ್ಲಿ ಅವರು ಕೆಲವು ಸಿನಿಮಾ ಮತ್ತು ಸಂಗೀತದಲ್ಲಿ ತೊಡಗಿಸಿಕೊಂಡರು.


1977ರಲ್ಲಿ ಕಾರಂತರು ಎನ್‌ ಎಸ್‌ ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ನಿರ್ದೇಶಕರಾಗಿ ರಂಗಭೂಮಿಯನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ದರು. 1981 ಮತ್ತು 1986ರ ನಡುವೆ ಮಧ್ಯಪ್ರದೇಶದಲ್ಲಿ ರಂಗಭೂಮಿಗೆ ಉತ್ತಮ ಸೇವೆ ಸಲ್ಲಿಸಿದ ನಂತರ ಕಾರಂತರು ಕರ್ನಾಟಕಕ್ಕೆ ಮರಳಿದರು. 1989ರಲ್ಲಿ ಕರ್ನಾಟಕ ಸರ್ಕಾರವು ಮೈಸೂರಿನಲ್ಲಿ ಒಂದು ರೆಪರ್ಟರಿಯನ್ನು ಸ್ಥಾಪಿಸಲು ಅವರನ್ನು ಆಹ್ವಾನಿಸಲಾಗಿತ್ತು. ಅದಕ್ಕೆ ಅವರು ರಂಗಾಯಣ ಎಂದು ಹೆಸರಿಟ್ಟಿದ್ದರು. ನಂತರ ಅವರು 1995ವರೆಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.


ಬಿ.ವಿ ಕಾರಂತ ಅವರ ನಾಟಕಗಳು
ಕಾರಂತರು ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಇಂಗ್ಲಿಷ್, ತೆಲುಗು , ಮಲಯಾಳಂ , ತಮಿಳು , ಪಂಜಾಬಿ , ಉರ್ದು , ಸಂಸ್ಕೃತ ಮತ್ತು ಗುಜರಾತಿ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ . ಅದರಲ್ಲಿ ಹಯವದನ, ಕತ್ತಲೆಬೆಳಕು, ಹುಚ್ಚು ಕುದುರೆ, ಏವಂ ಇಂದ್ರಜಿತ್‌ , ಈಡಿಪಸ್‌ , ಸಂಕ್ರಾಂತಿ , ಜೋಕುಮಾರಸ್ವಾಮಿ, ಸತ್ತವರ ನೆರಳು ಮತ್ತು ಗೋಕುಲ ನಿರ್ಗಮನ ಸೇರಿಂದತೆ ಇತರೆ ಕನ್ನಡ ನಾಟಕಗಳು ಹೆಚ್ಚು ಜನಪ್ರಿಯಗೊಂಡಿದ್ದವು.
ಮ್ಯಾಕ್‌ಬೆತ್ ,ಕಿಂಗ್ ಲಿಯರ್, ಚಂದ್ರಹಾಸ, ಹಯವದನ, ಘಾಸಿರಾಮ್ ಕೊತ್ವಾಲ್, ಮೃಚ್ಛಾ ಕಟಿಕ, ಮುದ್ರಾ ರಾಕ್ಷಸ ಮತ್ತು ಮಾಳವಿಕಾಗ್ನಿ ಮಿತ್ರ ಕೆಲವು ಹೆಚ್ಚು ಜನಪ್ರಿಯವಾಗಿವೆ. ಅಷ್ಟೇ ಅಲ್ಲದೆ ಅವರು ಪಂಜರ ಶಾಲೆ , ನೀಲಿ ಕುದುರೆ , ಹೆಡ್ಡಯಾನ , ಅಳಿಲು ರಾಮಾಯಣ ಸೇರಿದಂತೆ ಹಲವಾರು ಮಕ್ಕಳ ನಾಟಕಗಳನ್ನು ಸಹ ನಿರ್ದೇಶಿಸಿದ್ದರು .


ಚಲನಚಿತ್ರ
ಬಿ.ವಿ ಕಾರಂತರು 26 ಚಿತ್ರಗಳಿಗೆ ಸಂಗೀತ ನೀಡುವುದರ ಜೊತೆಗೆ ನಾಲ್ಕು ಚಲನಚಿತ್ರಗಳು ಮತ್ತು ನಾಲ್ಕು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಗಿರೀಶ್ ಕಾರ್ನಾಡ್ ಅವರೊಂದಿಗೆ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೇ ಮುಂತಾದ ಚಿತ್ರಗಳನ್ನು ಸಹ-ನಿರ್ದೇಶನ ಮಾಡಿದ್ದರು.


ಪ್ರಶಸ್ತಿ
ಬಿ.ವಿ ಕಾರಂತರಿಗೆ 1976ರಲ್ಲಿ ಕಾಳಿದಾಸ್‌ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ವರ್ಷ ಕರ್ನಾಟಕ ಸರ್ಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1981ರಲ್ಲಿ ಭಾರತ ಸರ್ಕಾರದಿಂದ ಕಾರಂತರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಬಿ.ವಿ ಕಾರಂತರು ಸೆಪ್ಟೆಂಬರ್ 1, 2002 ರಂದು ಕ್ಯಾನ್ಸರ್‌ ನಿಂದ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.