ಇಂದು ಪುಣ್ಯಸ್ಮರಣೆ
ಜಯಚಾಮರಾಜೇಂದ್ರ ಒಡೆಯರ್‌ ಅವರು ಮೈಸೂರು ಸಂಸ್ಥಾನದ 25ನೇ ಮಹಾರಾಜರು. ಇವರು ತತ್ತ್ವಜ್ಞಾನಿ, ಸಂಗೀತಜ್ಞ, ಸಂಯೋಜಕರು ಆಗಿದ್ದ ಅಪರೂಪದ ರಾಜರಲ್ಲಿ ಒಬ್ಬರು. ಇವರು ಮೈಸೂರು ಸಂಸ್ಥಾನಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಪುಣ್ಯಸ್ಮರಣೆ.

ಪರಿಚಯ
ಜಯಚಾಮರಾಜೇಂದ್ರ ಒಡೆಯರ್‌ ಅವರು ಜುಲೈ 18, 1919ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್, ತಾಯಿ ಯುವರಾಣಿ ಕೆಂಪು ಚೆಲುವಾಜ ಅಮ್ಮಣ್ಣಿ. ಒಡೆಯರ್‌ ಅವರು ಆರಂಭಿಕ ಶಿಕ್ಷಣವನ್ನು ಮೈಸೂರಿನ ರಾಜಮನೆತನದ ವಿಶೇಷ ಶಾಲೆಯಲ್ಲಿ ಮುಗಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಗೆ ಮಕ್ಕಳಿಲ್ಲದ ಕಾರಣದಿಂದ ತಮ್ಮ ಕಿರಿಯ ಸಹೋದರ ನರಸಿಂಹರಾಜ ಒಡೆಯರ್‌ ಪುತ್ರನನ್ನು ಪಟ್ಟಕ್ಕೇರಿಸುವ ಸಲುವಾಗಿ ಜಯಚಾಮರಾಜ ಒಡೆಯರ್‌ 15-16 ವರ್ಷ ವಯಸ್ಸಿದ್ದಾಗಲೇ ಮೈಸೂರಿನ ಲೋಕರಂಜನ ಮಹಲ್ ನಲ್ಲಿ ಒಂದು ವಿಶೇಷ ಶಾಲೆ ಏರ್ಪಡಿಸಿ ಶಿಕ್ಷಣವನ್ನು ಕೊಡಿಸಿದರು. ನಂತರ 1938 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಅವರು ಅದೇ ವರ್ಷ 15 ಮೇ 1938 ರಂದು ಅರಮನೆಯಲ್ಲಿ ಮಹಾರಾಣಿ ಸತ್ಯ ಪ್ರೇಮ ಕುಮಾರಿ ಅವರನ್ನು ವಿವಾಹವಾದರು. ನಂತರ ಒಡೆಯರ್‌ 1939 ರಲ್ಲಿ ಯುರೋಪ್‌ ಪ್ರವಾಸ ಕೈಗೊಂಡಿದ್ದಾಗ ಅನೇಕ ಕಲಾವಿದರು ಮತ್ತು ವಿದ್ವಾಂಸರು ಭೇಟಿ ಮಾಡಿದರು. ಮೈಸೂರು ರಾಜರು ಕಲೆ ಮತ್ತು ಸಂಗೀತದ ಮಹಾನ್ ಪೋಷಕರಾಗಿದ್ದರು. ಅವರ ಆಸ್ಥಾನದಲ್ಲಿ ಭಾರತದಾದ್ಯಂತ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಾರರಿದ್ದರು.

ಆಳ್ವಿಕೆ
1940ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ತಮ್ಮ ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರನ್ನು ಕಳೆದುಕೊಂಡರು. ಐದು ತಿಂಗಳ ನಂತರ ಅವರ ಚಿಕ್ಕಪ್ಪ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸಹ ನಿಧನರಾದರು. ನಂತರ ಜಯಚಾಮರಾಜ ಒಡೆಯರ್‌ ಅವರು ಸೆಪ್ಟೆಂಬರ್‌ 8, 1940ರಲ್ಲಿ ಮೈಸೂರು ಸಾಮ್ರಾಜ್ಯದ ಸಿಂಹಾಸನವನ್ನು ಏರಿದರು.
1947ರಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಅವರು ಭಾರತದ ಸ್ವಾತಂತ್ರ್ಯದ ನಂತರ ಭಾರತೀಯ ಒಕ್ಕೂಟದೊಂದಿಗೆ ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿಕೊಂಡು ಪತ್ರಕ್ಕೆ ಸಹಿ ಹಾಕಿದರು. ಈ ನಡುವೆ ದೇಶಕ್ಕೆ ಸಂವಿಧಾನದ ಕರಡು ರಚನೆಯಿಂದಾಗಿ ಕಾರ್ಯರೂಪಕ್ಕೆ ಬರಲು ಮೂರು ವರ್ಷಗಳು ಬೇಕಾಯಿತು.
ಮೈಸೂರು ಸಾಮ್ರಾಜ್ಯವನ್ನು ಜನವರಿ 26, 1950 ರಂದು ಗಣರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು. ಅದೇ ವರ್ಷ ಒಡೆಯರ್‌ ಅವರನ್ನು ಮೈಸೂರು ರಾಜ್ಯದ ಪ್ರಮುಖರಾಜರಾನ್ನಾಗಿ ಮಾಡಲಾಯಿತು. ನವೆಂಬರ್‌ 1 ರಿಂದ ಮರುಸಂಘಟಿತ ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾದರು. ಮೇ 4 , 1964 ರಿಂದ ಜೂನ್‌ 28, 1966 ರವರೆಗೆ ಮದ್ರಾಸ್‌ ಗವರ್ನರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಸಾಹಿತ್ಯ ಕ್ಷೇತ್ರದ ಕೊಡುಗೆ
ಜಯಚಾಮರಾಜೇಂದ್ರ ಒಡೆಯರ್ ಅವರು ಸಂಸ್ಕೃತದಲ್ಲಿ ಸುಮಾರು 90 ಕೃತಿಗಳನ್ನು ರಚಿಸಿದ್ದಾರೆ. ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್, ದಿ ಗೀತಾ ಅಂಡ್ ಇಂಡಿಯಾನ್ ಕಲ್ಚರ್, ಭಾರತೀಯ ಸೌಂದರ್ಯಶಾಸ್ತ್ರದ ಹಲವು ಮುಖಗಳು, ದಿ ರಿಲಿಜನ್ ಅಂಡ್ ದಿ ಮ್ಯಾನ್, ಆತ್ಮ ಮತ್ತು ಬ್ರಹ್ಮ ಸೇರಿದಂತೆ ಹೀಗೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಗೌರವ
ಬನಾರಸ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಾ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪಡೆದಿದ್ದಾರೆ. ಅವರು 1945ರಲ್ಲಿ ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನ ಗೌರವ ಫೆಲೋ ಆಗಿದ್ದರು. ಆಸ್ಟ್ರೇಲಿಯದ ಕ್ವೀನ್ಸ್ ಲೆಂಡ್ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿ ನೀಡಿ ಗೌರವಿಸಲಾಗಿದೆ.

ಜಯಚಾಮರಾಜೇಂದ್ರ ಒಡೆಯರ್‌ ಅವರು ಸೆಪ್ಟೆಂಬರ್ 23, 1974ರಂದು ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.