ವಿಶಿಷ್ಠ ‘ಅನ್ನದ ಅರಿವು’ ಕಾರ್ಯಕ್ರಮ
ತೀರ್ಥಹಳ್ಳಿ ಜು.22 : ’ಬದುಕಿಗೆ ಆಧಾರವಾಗುವ ಕೃಷಿಯ ಶಿಕ್ಷಣವನ್ನು ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ನೀಡುವುದು ಅತ್ಯಂತ ಪ್ರೇರಣಾದಾಯಿ. ಇಂದು ಹಳ್ಳಿಯಿಂಧ ಪೇಟೆಗೆ ಉದ್ಯೋಗಕ್ಕಾಗಿ ಬರುವವರ ಸಂಖ್ಯೆ ಚಿಂತೆ ಹುಟ್ಟಿಸುವಷ್ಟು ಜಾಸ್ತಿಯಾಗಿದೆ. ಇಂಜಿನಿಯರ್, ವೈದ್ಯ, ವಕೀಲ, ಉಪನ್ಯಾಸಕ, ಪ್ರಬಂಧಕ, ಗುಮಾಸ್ತ, ಮೇಸ್ತ್ರಿ, ಬಡಗಿ ಇತ್ಯಾದಿ ಕೆಲಸಗಳಿಗೆ ಪೇಟೆಗೆ ಬರುವವರ ಸಂಖ್ಯೆ ಜಾಸ್ತಿಯಾಗಿ ಹಳ್ಳಿಯಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾವಂತರು ಮತ್ತೆ ಹಳ್ಳಿಗೆ ಹೋಗಿ ದುಡಿಯಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ’ಅನ್ನದ ಅರಿವು’ನಂತಹ ಕಾರ್ಯಕ್ರಮ ಅತ್ಯಂತ ಪ್ರಸ್ತುತ’, ಎಂದು ಶ್ರೀ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು. ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಜುಲೈ 22ರಂದು ತೀರ್ಥಹಳ್ಳಿಯ ಕೃಷಿನಿವಾಸದಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
”ಕೃಷಿ ಋಷಿ’ಪುರುಷೋತ್ತಮರಾಯರು ಕೃಷಿಕನೆಂದರೆ ತನ್ನ ಜಮೀನಿನಲ್ಲಿರುವ ಎಲ್ಲಾ ಗಿಡಗಳನ್ನು ಮಾತನಾಡಿಸಬೇಕು. ಜಮೀನಿನ ಪೂರ್ತಿ ಬರಿಗಾಲಲ್ಲಿ ನಡೆದಾಡಬೇಕೆಂದು ಹೇಳುತ್ತಿದ್ದರು. ಇಂದು ಮಕ್ಕಳಿಗೆ ಇಲ್ಲಿ ಈ ರೀತಿಯ ಶಿಕ್ಷಣ ಕೊಡುವ ಪ್ರಯತ್ನ ಮಾಡಿದ್ದೇವೆ’, ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನ ಕಾರ್ಯದರ್ಶಿ ಶ್ರೀ ವರದಾಚಾರ್ ಹೇಳಿದರು.
ಪ್ರಜ್ಞಾಭಾರತಿ ಪ್ರೌಧಶಾಲೆ, ಸೇವಾಭಾರತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುರುವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬತ್ತದ ಗದ್ದೆಯಲ್ಲಿ ಬತ್ತದ ಸಸಿಗಳನ್ನು ನಾಟಿ ಮಾಡಿದರು. ಅತ್ಯಂತ ಆನಂದದಿಂದ, ಉತ್ಸಾಹದಿಂದ ಭಾಗವಹಿಸಿದ್ದ ಮಕ್ಕಳಿಗೆ ಪ್ರಾರಂಭದಲ್ಲಿ ಕೃಷಿಯ ಬಗ್ಗೆ ಅದರಲ್ಲೂ ವಿಶೇಷವಾಗಿ ಬತ್ತದ ಕೃಷಿಯ ಬಗ್ಗೆ ಶ್ರೀ ಸರು ದಿನೇಶ್ ಮಾಹಿತಿ ನೀಡಿದರು. ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತರಾದ ಶ್ರೀ ಅರುಣ ಕುಮಾರ ಮಾತನಾಡಿ ಈ ಕಾರ್ಯಕ್ರಮವನ್ನು ತೀರ್ಥಹಳ್ಳಿ ತಾಲೂಕಿನ ಎಲ್ಲಾ ಪ್ರೌಧಶಾಲೆಗಳಲ್ಲಿ ಶಿಕ್ಷಣ ಇಲಾಖೆ ಹಾಗೂ ಸಾವಯವ ರೈತರ ಸಹಕಾರದೊಂದಿಗೆ ನಡೆಸಲಾಗುವುದು ಎಂದರು.
ಸೇವಾಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದರು ಮಾತನಾಡಿ ನಾಲ್ಕು ಗೋಡೆಯ ಮಧ್ಯೆ ಶಿಕ್ಷಣ ಪಡೆಯುತ್ತಿದ್ದ ನಾವು ಇಂದು ಪರಿಸರದ ನಡುವೆ ಅನುಭವದ ಆಧಾರದ ಮೇಲೆ ಶಿಕ್ಷಣ ಪಡೆಯುತ್ತಿದ್ದೇವೆ ಎಂದರು. ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷರಾದ ಶ್ರೀ ಮರಗಳಲೆ ನರಸಿಂಹಮೂರ್ತಿ, ಪ್ರಜ್ಞಾಭಾರತಿಯ ಮುಖ್ಯೋಪಾಧ್ಯಾಯರಾದ ಶ್ರೀ ನಾಗರಾಜ ಅಡಿಗ, ಕುರುವಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೈಲಶ್ರೀ ಅತಿಥಿಗಳಾಗಿ ಭಾಗವಹಿಸಿದ್ದರು. ಕು. ವೈಷ್ಣವಿ, ಕು. ನಿಶಾಲ್ ನಾಡ ರೈತಗೀತೆ ಹಾಡಿದರು. ಶ್ರೀ ಶ್ರೀದತ್ತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಬೇಡನಬೈಲು ವಂದಿಸಿದರು.