ಇಂದು ಜಯಂತಿ
ಅನ್ನಿಬೆಸೆಂಟ್‌ ಅವರು ಮಹಿಳಾ ಪರ ಹೋರಾಟಗಾರ್ತಿ, ಥಿಯೋಸಾಫಿಸ್ಟ್, ಅದ್ಭುತ ವಾಗ್ಮಿ ಮತ್ತು ಬರಹಗಾರ್ತಿ. ಇವರು ಸಾಮಾಜಿಕ ಕಾರ್ಯಕರ್ತೆಯಾಗಿ ಭಾರತೀಯರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲಿಸಿದರು. ಹೋಂ ರೂಲ್ ಲೀಗ್ ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಂಡಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದವರು. ಇಂದು ಅವರ ಜಯಂತಿ.


ಪರಿಚಯ
ಅನ್ನಿಬೆಸೆಂಟ್‌ ಅವರು ಅಕ್ಟೋಬರ್ 1, 1847ರಂದು ಲಂಡನ್‌ ನಲ್ಲಿ ಜನಿಸಿದರು. ಅವರ ತಂದೆ ವಿಲಿಯಂ ಬರ್ಟನ್ ಪರ್ಸೆ ವುಡ್ ಹಾಗೂ ಅವರ ತಾಯಿ ಎಮಿಲಿ ರೋಚೆ ಮೋರಿಸ್. ಅವರು ಐದು ವರ್ಷದವರಾಗಿದ್ದಾಗ ತಂದೆ ನಿಧನರಾದರು. ಅನ್ನಿಬೆಸೆಂಟ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಂಡನ್‌ ನಲ್ಲಿ ಮುಗಿಸಿದರು. ನಂತರ ಡಬ್ಲಿನ್ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ನಂತರ ಅವರು 2೦ ವರ್ಷದಲ್ಲಿದ್ದಾಗ ವಿವಾಹವಾಯಿತು. ಅವರು ಬಿರ್ಕ್‌ಬೆಕ್ ಸಾಹಿತ್ಯ ಮತ್ತು ವೈಜ್ಞಾನಿಕ ಸಂಸ್ಥೆಯಲ್ಲಿ ಅರೆಕಾಲಿಕ ಅಧ್ಯಯನ ಮಾಡಲು ಪ್ರಾರಂಭಿಸಿದರು. ಈ ವೇಳೆ ಅವರಿಗೆ ನ್ಯಾಷನಲ್ ಸೆಕ್ಯುಲರ್ ಸೊಸೈಟಿ ಸ್ಥಾಪಕರಾಗಿದ್ದ ಚಾರ್ಲ್ಸ್ ಬ್ರಾಡ್ಲಾಗ್ ಅವರ ಪರಿಚಯವಾಗಿ ಅವರೊಂದಿಗೆ ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡರು.


1888ರಲ್ಲಿ ಲಂಡನ್‌ ನ ಮಹಿಳೆಯರು ವೇತನ ಹಾಗೂ ವಿವಿಧ ಬೇಡಿಕೆ ಕುರಿತು ಮುಷ್ಕರ ಮಾಡುತ್ತಿದ್ದರು. ಇದರಲ್ಲಿ ಅನ್ನಿಬೆಸೆಂಟ್‌ ಕೂಡ ಭಾಗವಹಿಸಿದ್ದರು. ಮಹಿಳೆಯರ ಕಷ್ಟಗಳನ್ನು ಗಮನಿಸಿದ ಅವರು ಮಹಿಳಾ ಸಮಿತಿಯನ್ನು ಸ್ಥಾಪಿಸಿದರು.


ಅವರು ಥಿಯೋಸಾಫಿ ಸಂಬಂಧಿತ ಕಾರ್ಯಕ್ಕಾಗಿ ಭಾರತಕ್ಕೆ ಆಗಮಿಸಿದರು. ನಂತರ ಅವರು ಅಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1898ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಬಳಿಕ 1907ರಲ್ಲಿ ಇವರು ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷೆಯಾದರು. ಇದರ ಪ್ರಮುಖ ಕಚೇರಿ ಚೆನ್ನೈನ ಆಡ್ಯಾರ್ ನಲ್ಲಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳವ ಮೂಲಕ ಭಾರತದ ರಾಜಕೀಯ ರಂಗ ಪ್ರವೇಶ ಮಾಡಿದರು.


1916ರಲ್ಲಿ ಲೋಕಮಾನ್ಯ ತಿಲಕ್ ಜೊತೆಗೆ ಅವರು ಹೋಮ್ ರೂಲ್ ಲೀಗ್ ಅನ್ನು ಪ್ರಾರಂಭಿಸಿದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು. ಹೈದರಾಬಾದ್ ನ್ಯಾಷನಲ್ ಕಾಲೇಜಿಯೇಟ್ ಬೋರ್ಡ್ ಅನ್ನು ಸ್ಥಾಪಿಸಿದರು.


ಭಾರತ ಸ್ವಾತಂತ್ರ್ಯ ಚಳವಳಿ
ಅನ್ನಿಬೆಸೆಂಟ್ ಅವರು ಭಾರತದಲ್ಲಿ ಶಿಕ್ಷಣ ಪದ್ಧತಿಯನ್ನ ಸುಧಾರಿಸುವ ಸಲುವಾಗಿ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದರು.
ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವ ಅಭಿಯಾನವನ್ನು ಶುರು ಮಾಡಿದರು. ಅವರು ಭಾರತದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅನೇಕ ಗಮನಾರ್ಹ ಪ್ರಯತ್ನಗಳನ್ನು ಮಾಡಿದರು. ಭಾರತದಲ್ಲಿ ಪ್ರಜಾಪ್ರಭುತ್ವದ ಹಿತಕ್ಕಾಗಿ ಹೋಮ್ ರೂಲ್ ಚಳವಳಿಯನ್ನು ನಡೆಸುವಲ್ಲಿ ಅವರು ಸಹಾಯ ಮಾಡಿದರು. ಅವರು 1917ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವೇಳೆ ಅವರು ಭಾರತದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿವುದು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಗುರಿಯನ್ನು ಹೊಂದಿದ್ದರು.


ಸಮಾಜ ಸುಧಾರಕಿ
ಅನ್ನಿಬೆಸೆಂಟ್‌ ಅವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ಅವರು ಇಂಗ್ಲೆಂಡ್ ಮತ್ತು ಭಾರತ ಎರಡಕ್ಕೂ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಅವರು ಜನರಿಗೆ ಸಾಮಾಜಿಕ ವಿಷಯಗಳ ಕುರಿತು ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಅನ್ನಿಬೆಸೆಂಟ್‌ ಅವರು ವಾರಣಾಸಿಯಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಲು ಸಹಾಯ ಮಾಡಿದರು. ಮಹಿಳೆಯರ ಹಕ್ಕುಗಳು, ಕಾರ್ಮಿಕರ ಹಕ್ಕುಗಳ ಜಾತ್ಯತೀತತೆ, ಜನನ ನಿಯಂತ್ರಣ ಅಭಿಯಾನ ಮುಂತಾದ ಕಾರಣಗಳಿಗಾಗಿ ಅವರು ಭಾರತದಲ್ಲಿ ಹೋರಾಡಿದರು. ಅವರು ಭಾರತೀಯ ಸ್ಕೌಟ್ ಚಳುವಳಿಯನ್ನು ಸ್ಥಾಪಿಸಿದರು. ಅವರು ಜಾತಿ ತಾರತಮ್ಯ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಾ ರಾಷ್ಟ್ರೀಯ ಜಾಗೃತಿಯನ್ನು ಪ್ರೋತ್ಸಾಹಿಸಿದರು.


ಸಾಹಿತ್ಯ ಕ್ಷೇತ್ರ
ಅನ್ನಿಬೆಸೆಂಟ್‌ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ದಿ ಪೊಲಿಟಿಕಲ್ ಸ್ಟೇಟಸ್ ಅಫ್ ವಿಮೆನ್, ಮೈ ಪಾಥ್ ಟು ಅಥೆಸಿಮ್, ದಿ ಲಾ ಅಫ್ ಪಾಪ್ಯುಲೆಷನ್‌ ಹಾಗೂ “ವೈ ಐ ಬಿಕೇಮ್ ಎ ಥಿಯೊಸೊಫಿಸ್ಟ್ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಅನ್ನಿಬೆಸೆಂಟ್‌ ಅವರು ಸೆಪ್ಟೆಂಬರ್ 20, 1933ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ಅಡ್ಯಾರ್ ಎಂಬಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.