ಅಕ್ಟೋಬರ್ 12, 2024, ನಾಗಪುರ ಶ್ರೀ ವಿಜಯದಶಮಿ ಯುಗಾಬ್ದ 5126

ಇಂದಿನ ಕಾರ್ಯಕ್ರಮದ ಪ್ರಮುಖ ಅತಿಥಿಯಾದ ಆದರಣೀಯ ಡಾ. ಕೋಪಿಲ್ಲಿಲ್ ರಾಧಾಕೃಷ್ಣ ಅವರೇ, ವೇದಿಕೆಯ ಮೇಲೆ ಉಪಸ್ಥಿತರಿರುವ ವಿದರ್ಭ ಪ್ರಾಂತದ ಮಾನ್ಯ ಸಂಘಚಾಲಕ, ಮಾನ್ಯ ಸಹ ಸಂಘಚಾಲಕ, ನಾಗಪುರ ಮಹಾನಗರದ ಮಾನ್ಯ ಸಂಘಚಾಲಕ, ಅನ್ಯ ಅಧಿಕಾರಿಗಳೇ, ನಾಗರಿಕ ಸಜ್ಜನರೆ, ಮಾತಾ ಭಗಿನಿಯರೇ ಮತ್ತು ಸ್ವಯಂಸೇವಕ ಬಂಧುಗಳೇ,
ಶ್ರೀ ವಿಜಯದಶಮಿ ಯುಗಾಬ್ದ 5126ರ ಪುಣ್ಯಪರ್ವ ಕಾಲದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಕಾರ್ಯದ 100ನೇ ವರ್ಷಕ್ಕೆ ಪ್ರವೇಶ ಮಾಡುತ್ತಿದೆ.


ಪುಣ್ಯಸ್ಮರಣೆ
ಹಿಂದಿನ ವರ್ಷ ಈ ಪರ್ವ ಕಾಲದಲ್ಲಿ ನಾವು ಮಹಾರಾಣಿ ದುರ್ಗಾವತಿಯ ತೇಜಸ್ವೀ ಜೀವನಯಜ್ಞವನ್ನು ಅವರ 500ನೇ ವರ್ಷದ ಜನ್ಮಜಯಂತಿಯ ನಿಮಿತ್ತ ಸ್ಮರಿಸಿದ್ದೆವು. ಈ ವರ್ಷ ಪುಣ್ಯಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ಅವರ 300ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ದೇವಿ ಅಹಲ್ಯಾಬಾಯಿ ಓರ್ವ ಕುಶಲ ರಾಜ್ಯ ಆಡಳಿತಗಾರ್ತಿ, ಪ್ರಜಾಹಿತದಕ್ಷ ಕರ್ತವ್ಯನಿಷ್ಠ ರಾಣಿ, ಧರ್ಮ, ಸಂಸ್ಕೃತಿ ಮತ್ತು ದೇಶದ ಅಭಿಮಾನಿ, ಶೀಲಸಂಪನ್ನತೆಯ ಉತ್ತಮ ಆದರ್ಶ ಹಾಗೆಯೇ ರಣನೀತಿಯನ್ನು ಉತ್ಕೃಷ್ಟವಾಗಿ ನಿರ್ಮಿಸುವ ನಿಪುಣೆ ರಾಣಿಯಾಗಿದ್ದರು. ಅತ್ಯಂತ ವಿರೋಧದ ಪರಿಸ್ಥಿತಿಯಲ್ಲೂ ಅದ್ಭುತ ಕ್ಷಮತೆಯನ್ನು ಪರಿಚಯಿಸುತ್ತಾ ಮನೆಯನ್ನು, ರಾಜ್ಯವನ್ನು ತನ್ನಲ್ಲಿದ್ದ ಅಖಿಲ ಭಾರತೀಯ ದೃಷ್ಟಿಯ ಕಾರಣದಿಂದ ಅವರ ರಾಜ್ಯಸೀಮೆಯ ಹೊರತಾಗಿಯೂ ತೀರ್ಥಕ್ಷೇತ್ರಗಳ ಜೀರ್ಣೋದ್ದಾರ ಮತ್ತು ದೇವಸ್ಥಾನಗಳ ನಿರ್ಮಾಣದ ಮೂಲಕ ಸಮಾಜದ ಸಾಮರಸ್ಯವನ್ನು ಮತ್ತು ಸಮಾಜದಲ್ಲಿ ಸಂಸ್ಕೃತಿಯನ್ನು ಯಾವ ರೀತಿಯಲ್ಲಿ ಸಂಭಾಳಿಸಬಹುದೆನ್ನುವುದನ್ನು ಇಂದಿನ ಮಾತೃಶಕ್ತಿಯ ಸಹಿತವಾಗಿ ಎಲ್ಲರಿಗೂ ಅನುಕರಣೀಯ ಉದಾಹರಣೆ. ಅದರ ಜೊತೆಗೆ ಭಾರತದ ಮಾತೃಶಕ್ತಿಯ ಕರ್ತೃತ್ವ ಮತ್ತು ನೇತೃತ್ವದ ದೇದೀಪ್ಯಮಾನ ಪರಂಪರೆಯ ಉಜ್ವಲ ಪ್ರತೀಕವೂ ಆಗಿದ್ದಾರೆ.


ಆರ್ಯ ಸಮಾಜದ ಸಂಸ್ಥಾಪಕ ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ವರ್ಷದ ಜನ್ಮಜಯಂತಿಯನ್ನೂ ಇದೇ ವರ್ಷ ಆಚರಿಸಲಾಗುತ್ತಿದೆ. ಪರಾಧೀನತೆಯಿಂದ ಮುಕ್ತರಾಗಿ ಕಾಲದ ಪ್ರವಾಹದಲ್ಲಿ ಆಚಾರ ಧರ್ಮ ಮತ್ತು ಸಾಮಾಜಿಕ ರೀತಿರಿವಾಜುಗಳಲ್ಲಿ ಬಂದಂತಹ ವಿಕೃತಿಗಳನ್ನು ದೂರಗೊಳಿಸಿ, ಸಮಾಜಕ್ಕೆ ತನ್ನ ಮೂಲ ಶಾಶ್ವತ ಮೌಲ್ಯಗಳ ಮೇಲೆ ನಿಲ್ಲುವಂತೆ ಮಾಡಲು ಪ್ರಚಂಡ ಪ್ರಯತ್ನವನ್ನು ಅವರು ಮಾಡಿದರು. ಭರತವರ್ಷದ ನವೋತ್ಥಾನದ ಪ್ರೇರಕಶಕ್ತಿಗಳಲ್ಲಿ ಅವರ ಹೆಸರು ಪ್ರಮುಖವಾಗಿದೆ.
ರಾಮರಾಜ್ಯ ಸದೃಶ ವಾತಾವರಣ ನಿರ್ಮಾಣವಾಗುವುದಕ್ಕಾಗಿ ಪ್ರಜೆಗಳ ಗುಣಮಟ್ಟ ಮತ್ತು ಚಾರಿತ್ರ್ಯ ಹಾಗೂ ದೃಢತೆ ಹೇಗಿರುವುದು ಅನಿವಾರ್ಯವೋ ಆ ರೀತಿ ಸಂಸ್ಕಾರ ಮತ್ತು ಕರ್ತವ್ಯಪ್ರಜ್ಞೆ ಸರ್ವರಲ್ಲೂ ಉತ್ಪತ್ತಿಯಾಗುವಂತೆ ಮಾಡುವ ‘ಸತ್ಸಂಗ’ ಅಭಿಯಾನವನ್ನು ಪರಮಪೂಜ್ಯ ಶ್ರೀ ಶ್ರೀ ಅನುಕೂಲಚಂದ್ರ ಠಾಕೂರ್ ಅವರ ಮೂಲಕ ಚಾಲನೆ ನೀಡಲಾಯಿತು. ಇವತ್ತಿನ ಬಾಂಗ್ಲಾದೇಶ ಮತ್ತು ಆ ಸಮಯದ ಉತ್ತರ ಬಂಗಾಲದ ಪಾಬನಾದಲ್ಲಿ ಜನಿಸಿದ ಶ್ರೀ ಶ್ರೀ ಅನುಕೂಲಚಂದ್ರ ಠಾಕೂರ್ ಅವರು ಹೋಮಿಯೋಪತಿ ಚಿಕಿತ್ಸಕರಾಗಿದ್ದರು. ಹಾಗೆಯೇ ಅವರ ಮಾತೆಯ ಮೂಲಕವೇ ಅಧ್ಯಾತ್ಮ ಸಾಧನೆಯ ದೀಕ್ಷೆಯನ್ನು ಪಡೆದುಕೊಂಡಿದ್ದರು. ವೈಯಕ್ತಿಕ ಸಮಸ್ಯೆಗಳನ್ನು ಹಿಡಿದುಕೊಂಡು ಅವರ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳಲ್ಲಿ ಸಹಜವಾಗಿ ಚಾರಿತ್ರ್ಯದ ವಿಕಾಸ ಮತ್ತು ಸೇವಾ ಭಾವನೆಯ ವಿಕಾಸದ ಈ ಪ್ರಕ್ರಿಯೆಯು ಸತ್ಸಂಗವಾಗಿ ಮಾರ್ಪಟ್ಟಿತು, ಇದು 1925ರಲ್ಲಿ ದತ್ತಿ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. 2024ರಿಂದ 2025ರವರೆಗೆ, ಆ ಕರ್ತೃತ್ವಮಾರ್ಗದ ಶತಮಾನೋತ್ಸವವನ್ನು ಸತ್ಸಂಗದ ಕೇಂದ್ರ ಕಚೇರಿಯಾದ ದೇವ್‌ಘರ್‌ನಲ್ಲಿ (ಜಾರ್ಖಂಡ್) ಆಚರಿಸಲಾಗುವುದು. ಈ ಅಭಿಯಾನವು ಸೇವೆ, ಸಂಸ್ಕಾರ ಮತ್ತು ವಿಕಾಸದ ಅನೇಕ ಉಪಕ್ರಮಗಳೊಂದಿಗೆ ಮುನ್ನಡೆಯುತ್ತಿದೆ.
ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಜಯಂತಿಯ 150ನೇ ವರ್ಷದ ಸಂಭ್ರಮಾಚರಣೆಯು ಇದೇ ನವೆಂಬರ್ 15 ರಿಂದ ಪ್ರಾರಂಭವಾಗಲಿದೆ. ಈ ನೂರೈವತ್ತನೇ ಜಯಂತಿ ಬುಡಕಟ್ಟು ಜನರನ್ನು ಗುಲಾಮಗಿರಿ ಮತ್ತು ಶೋಷಣೆಯಿಂದ, ಸ್ವದೇಶದ ಮೇಲಿರುವ ವಿದೇಶಿ ವರ್ಚಸ್ಸನ್ನು ಮುಕ್ತಗೊಳಿಸಲು, ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸುವ ಜೊತೆಗೆ ಸ್ವಾಭಿಮಾನವನ್ನು ರಕ್ಷಿಸಲು ಭಗವಾನ್ ಬಿರ್ಸಾ ಮುಂಡಾ ಅವರ ಮೂಲಕ ಪ್ರವರ್ತಿತ ಮಹಾಬಂಡಾಯದ (ಉಲ್ಗುಲಾನ್) ಪ್ರೇರಣೆಯ ಸ್ಮರಣೆಯನ್ನು ನಮಗೆ ಮಾಡಿಕೊಡುತ್ತದೆ. ಭಗವಾನ್ ಬಿರ್ಸಾ ಮುಂಡಾ ಅವರ ತೇಜಸ್ವೀ ಜೀವನ ಯಜ್ಞದ ಕಾರಣದಿಂದಾಗಿಯೇ ತಮ್ಮ ಬುಡಕಟ್ಟು ಬಂಧುಗಳ ಸ್ವಾಭಿಮಾನ, ವಿಕಾಸ ಹಾಗೂ ರಾಷ್ಟ್ರೀಯ ಜೀವನದಲ್ಲಿ ಕೊಡುಗೆ ನೀಡಬಲ್ಲ ಸುದೃಢ ಆಧಾರವೊಂದು ಸಿಕ್ಕಿದಂತಾಯಿತು.


ವೈಯಕ್ತಿಕ ಮತ್ತು ರಾಷ್ಟ್ರೀಯ ಚಾರಿತ್ರ್ಯ
ಪ್ರಾಮಾಣಿಕತೆಯಿಂದ, ನಿಸ್ವಾರ್ಥ ಭಾವನೆಯಿಂದ, ಧರ್ಮ, ಸಂಸ್ಕೃತಿ ಮತ್ತು ಸಮಾಜದ ಹಿತದಲ್ಲಿ ಜೀವನವನ್ನು ಮುಡುಪಾಗಿಟ್ಟ ಇಂತಹ ಮಹಾತ್ಮರನ್ನು ನಾವು ಸ್ಮರಿಸುತ್ತೇವೆ. ಅವರು ನಮ್ಮೆಲ್ಲರ ಒಳಿತಿಗಾಗಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೆಯೇ ಅವರು ತಮ್ಮ ಸ್ವಂತ ಜೀವನದ ಮೂಲಕ ನಮಗೆ ಮಾದರಿ ಜೀವನಮೌಲ್ಯಗಳ ಅತ್ಯುತ್ತಮ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ಬೇರೆ ಬೇರೆ ಕಾಲಖಂಡಗಳಲ್ಲಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡಿದ ಇವರೆಲ್ಲರ ಜೀವನ ನಡವಳಿಕೆಯಲ್ಲಿ ಕೆಲವು ಸಾಮಾನ್ಯ ಸಂಗತಿಗಳಿದ್ದವು. ನಿಸ್ಪೃಹತೆ, ನಿರ್ವೈರತೆ (ವೈರತ್ವ ಇಲ್ಲದಿರುವಿಕೆ) ಮತ್ತು ನಿರ್ಭಯತೆ ಅವರ ಸ್ವಭಾವವಾಗಿತ್ತು. ಸಂಘರ್ಷದ ಸಂದರ್ಭದಲ್ಲಿ ಅನಿವಾರ್ಯತೆ ಉಂಟಾದ ಎಲ್ಲ ಸಂದರ್ಭಗಳಲ್ಲಿ ಆಯಾ ಸನ್ನಿವೇಶಕ್ಕೆ ಅಗತ್ಯ ಕಠೋರತೆಗಳನ್ನು ಪ್ರದರ್ಶಿಸುತ್ತ ನಿರ್ವಹಣೆ ಮಾಡಿದರು. ಆದರೆ ಅವರು ಎಂದಿಗೂ ದ್ವೇಷ ಅಥವಾ ಶತ್ರುತ್ವ ಪಾಲಿಸುವವರಾಗಲಿಲ್ಲ. ಉಜ್ವಲ ಶೀಲಸಂಪನ್ನತೆ ಅವರ ಜೀವನದ ವಿಶಿಷ್ಟ ಲಕ್ಷಣವಾಗಿತ್ತು. ಆದ್ದರಿಂದಲೇ ಅವರ ಉಪಸ್ಥಿತಿಯು ದುಷ್ಟರಿಗೆ ಭಯವನ್ನೂ ಮತ್ತು ಸಜ್ಜನರಿಗೆ ಅಭಯವನ್ನೂ ನೀಡುತ್ತಿತ್ತು. ಇಂದು, ಪರಿಸ್ಥಿತಿಯು ನಮ್ಮೆಲ್ಲರಿಂದ ಈ ರೀತಿಯ ಜೀವನ ನಡವಳಿಕೆಯನ್ನು ನಿರೀಕ್ಷಿಸುತ್ತಿದೆ. ಪರಿಸ್ಥಿತಿಯು ಅನುಕೂಲಕರವಾಗಿರಲಿ ಅಥವಾ ಪ್ರತಿಕೂಲವಾಗಿರಲಿ, ಅಂತಹ ವೈಯಕ್ತಿಕ ಮತ್ತು ರಾಷ್ಟ್ರೀಯ ಚಾರಿತ್ರ್ಯದ ದೃಢತೆಯು, ಒಳಿತಿನ ಮತ್ತು ಸಜ್ಜನತೆಯ ವಿಜಯಕ್ಕೆ ಶಕ್ತಿಯ ಆಧಾರವಾಗಬಲ್ಲದು.


ದೇಶದ ಮುಂದಿನಹಾದಿ
ಇಂದಿನ ಯುಗವು ಮಾನವಕುಲದ ತ್ವರಿತಗತಿಯ ಭೌತಿಕ ಪ್ರಗತಿಯ ಯುಗವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಜೀವನವನ್ನು ನಾವು ಸೌಲಭ್ಯಗಳಿಂದ ಪರಿಪೂರ್ಣಗೊಳಿಸಿದ್ದೇವೆ. ಆದರೆ ಮತ್ತೊಂದೆಡೆ, ನಮ್ಮ ಸ್ವಾರ್ಥದ ಕಲಹಗಳು ನಮ್ಮನ್ನು ವಿನಾಶದತ್ತ ತಳ್ಳುತ್ತಿವೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಎಲ್ಲಿಯವರೆಗೆ ಹರಡುತ್ತದೆ ಎನ್ನುವ ಚಿಂತೆ ಎಲ್ಲರಲ್ಲೂ ಕಾಡುತ್ತಿದೆ. ನಮ್ಮ ದೇಶದಲ್ಲಿಯೂ ಭರವಸೆ ಮತ್ತು ಆಕಾಂಕ್ಷೆಗಳ ಜೊತೆಗೆ ಸವಾಲುಗಳು ಮತ್ತು ಸಮಸ್ಯೆಗಳೂ ಇವೆ. ಪರಂಪರೆಯಂತೆ ಈ ಎರಡನ್ನೂ ಸಂಘದ ಈ ವಿಜಯದಶಮಿ ಭಾಷಣದಲ್ಲಿ ಸಾಧ್ಯವಾದಷ್ಟು ವಿವರವಾಗಿ ಚರ್ಚಿಸಲಾಗಿದೆ. ಆದರೆ ಇಂದು ನಾನು ಕೆಲವು ಸವಾಲುಗಳನ್ನು ಮಾತ್ರ ಚರ್ಚಿಸುತ್ತೇನೆ. ಏಕೆಂದರೆ ಆಸೆ ಆಕಾಂಕ್ಷೆಗಳ ಈಡೇರಿಕೆ ಕಡೆಗೆ ದೇಶವು ಯಾವ ವೇಗದಲ್ಲಿ ಮುನ್ನಡೆಯುತ್ತಿದೆಯೋ ಅದಂತೂ ಸಾಗುತ್ತಲೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ಒಂದು ರಾಷ್ಟçವಾಗಿ ಸಶಕ್ತ ಮತ್ತು ಪ್ರತಿಷ್ಠಿತ ಸ್ಥಾನದಲ್ಲಿದೆ ಎನ್ನುವುದು ಎಲ್ಲರ ಅನುಭವಕ್ಕೆ ಬರುತ್ತಿದೆ. ಜಗತ್ತಿನಲ್ಲಿ ಅದರ ಖ್ಯಾತಿ ಹೆಚ್ಚಿದೆ. ಸ್ವಾಭಾವಿಕವಾಗಿ, ನಮ್ಮ ಸಂಪ್ರದಾಯ ಮತ್ತು ಭಾವನೆಯಲ್ಲಿ ಹುದುಗಿರುವ ವಿಚಾರಗಳಿಗೆ ಗೌರವವು ಅನೇಕ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. ನಮ್ಮ ವಿಶ್ವಬಂಧುತ್ವದ ಮನೋಭಾವ, ಪರಿಸರದೆಡೆಗಿನ ನಮ್ಮ ದೃಷ್ಟಿಯ ಸ್ವೀಕೃತಿ, ಯೋಗ ಇತ್ಯಾದಿಗಳನ್ನು ಜಗತ್ತು ನಿಸ್ಸಂಕೋಚವಾಗಿ ಸ್ವೀಕರಿಸುತ್ತಿದೆ. ಸಮಾಜದಲ್ಲಿ ಅದರಲ್ಲೂ ಯುವ ಪೀಳಿಗೆಯಲ್ಲಿ ಸ್ವ (ನಮ್ಮತನದ) ಗೌರವ ಭಾವನೆ ಹೆಚ್ಚುತ್ತಿದೆ. ನಾವು ಕೆಲವು ಕ್ಷೇತ್ರಗಳಲ್ಲಿ ನಿಧಾನವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ದೇಶದ ಯುವಶಕ್ತಿ, ಮಾತೃಶಕ್ತಿ, ಉದ್ಯಮಿಗಳು, ರೈತರು, ಕಾರ್ಮಿಕರು, ಸೈನಿಕರು, ಆಡಳಿತ ಮತ್ತು ಸರ್ಕಾರ ಎಲ್ಲರೂ ತಮ್ಮ ಕೆಲಸಗಳಿಗೆ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ. ಕಳೆದ ಕೆಲವು ವರ್ಷಗಳಲ್ಲಿ, ದೇಶಹಿತದ ಈ ಪ್ರೇರಣೆಯಿಂದ ಇವರೆಲ್ಲರೂ ಮಾಡಿದ ಪ್ರಯತ್ನಗಳಿಂದಾಗಿ ವಿಶ್ವ ವೇದಿಕೆಯಲ್ಲಿ ಭಾರತದ ಚಿತ್ರಣ, ಶಕ್ತಿ, ಕೀರ್ತಿ ಮತ್ತು ಸ್ಥಾನವು ನಿರಂತರವಾಗಿ ಎತ್ತರಕ್ಕೇರುತ್ತಿದೆ. ಆದರೆ ನಮ್ಮೆಲ್ಲರ ದೃಢನಿಶ್ಚಯವನ್ನು ಪರೀಕ್ಷಿಸುವಂತೆೆ, ಕೆಲವು ಮಾಯಾವಿ ಷಡ್ಯಂತ್ರಗಳು ನಮ್ಮ ಮುಂದೆ ಇವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ದೇಶದ ಪ್ರಸ್ತುತ ಸನ್ನಿವೇಶಗಳೆಡೆಗೆ ಕಣ್ಣು ಹಾಯಿಸಿ ಅವಲೋಕಿಸಿದರೆ, ಅಂತಹ ಸವಾಲುಗಳು ನಮ್ಮ ಮುಂದೆ ಸ್ಪಷ್ಟವಾಗಿ ಗೋಚರಿಸುತ್ತವೆ. ದೇಶದ ನಾಲ್ಕೂ ದಿಕ್ಕುಗಳ ಪ್ರದೇಶಗಳನ್ನು ಅಶಾಂತ ಮತ್ತು ಅಸ್ಥಿರಗೊಳಿಸುವ ಪ್ರಯತ್ನಗಳು ವೇಗವನ್ನು ಪಡೆಯುತ್ತಿರುವಂತೆ ತೋರಿಸುತ್ತಿದೆ.


ದೇಶವಿರೋಧಿ ಕುತಂತ್ರಗಳು
ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ಸಿಗುವುದರಿಂದ ಯಾರ ಸ್ವಾರ್ಥ ಹೊಡೆದುರುಳುತ್ತದೆಯೋ ಅಂತಹ ಶಕ್ತಿಗಳು ಭಾರತ ಒಂದು ಚೌಕಟ್ಟಿನೊಳಗೆ ಬೆಳೆಯುವಂತೆ ಮಾಡಲು ನಿರೀಕ್ಷೆಯಂತೆಯೇ ಶ್ರಮಿಸುತ್ತಿದೆ. ತಮ್ಮ ಉದಾರವಾದಿ, ಜನತಾಂತ್ರಿಕ ಸ್ವಭಾವ ಮತ್ತು ವಿಶ್ವಶಾಂತಿಗಾಗಿ ಕಟಿಬದ್ಧರೆನ್ನುವ ದೇಶಗಳ ಕಟಿಬದ್ಧತೆ ಅವರ ಸುರಕ್ಷತೆ ಮತ್ತು ಸ್ವಾರ್ಥದ ಪ್ರಶ್ನೆ ಎದ್ದಾಗ ಅಂತರ್ಧಾನವಾಗುತ್ತಿದೆ. ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದರಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತ ಅಲ್ಲಿನ ಸರ್ಕಾರಗಳನ್ನು ಹಿಂಸಾತ್ಮಕ ಮಾರ್ಗದ ಮೂಲಕ ಕೆಳಗಿಳಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ. ಭಾರತದ ಒಳಗೆ ಮತ್ತು ಹೊರಗೆ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಪ್ರತಿಯೊಬ್ಬರೂ ಈ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು. ಸುಳ್ಳಿನ ಅಥವಾ ಅರ್ಧಸತ್ಯದ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯ ತಾತ್ಕಾಲಿಕ ಮತ್ತು ಸ್ಥಾನೀಯ ಕಾರಣಗಳು ಈ ಘಟನಾಕ್ರಮದ ಒಂದು ಮುಖ ಮಾತ್ರ. ಹಾಗೆಯೆ ಅಲ್ಲಿರುವ ಹಿಂದೂ ಸಮಾಜದ ಮೇಲೆ ಯಾವುದೇ ಕಾರಣವಿಲ್ಲದೇ ನಡೆಯುವ ಅಮಾನವೀಯ ಅತ್ಯಾಚಾರದ ಪರಂಪರೆ ಮತ್ತೆ ಮರುಕಳಿಸಿತು. ಆ ದೌರ್ಜನ್ಯದ ವಿರುದ್ಧ ಅಲ್ಲಿನ ಹಿಂದುಗಳು ಈ ಬಾರಿ ಸಂಘಟಿತರಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಿಂದ ಹೊರಬಂದು ವಿರೋಧಿಸಿದ್ದರಿಂದ ಸ್ವಲ್ಪ ಬಚಾವಾದರು. ಆದರೆ ಎಲ್ಲಿಯವರೆಗೂ ಅಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ, ಅಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಆದ್ದರಿಂದ ಆ ದೇಶದಿಂದ ಭಾರತಕ್ಕೆ ಒಳನುಸುಳುತ್ತಿರುವ ಮತ್ತು ಅದರ ಕಾರಣದಿಂದಾಗಿ ಇಲ್ಲಿ ಉದ್ಭವಿಸುತ್ತಿರುವ ಜನಸಂಖ್ಯಾ ಅಸಮತೋಲನವು ಇಲ್ಲಿನ ಸಾಮಾನ್ಯ ಜನರನ್ನು ಬಾಧಿಸುವ ಚಿಂತೆಯ ವಿಷಯವಾಗಿದೆ. ಪರಸ್ಪರ ಸೌಹಾರ್ದತೆ ಮತ್ತು ದೇಶದ ಸುರಕ್ಷತೆಯ ಮೇಲೂ ಈ ಒಳನುಸುಳುವಿಕೆ ಗಂಭೀರವಾದ ಪ್ರಶ್ನೆಯನ್ನು ಮೂಡಿಸುತ್ತದೆ. ಉದಾರತೆ, ಮಾನವತೆ, ಹಾಗೂ ಸದ್ಭಾವನೆಯ ಪರವಾಗಿರುವ ಎಲ್ಲರ, ವಿಶೇಷವಾಗಿ ಭಾರತ ಸರ್ಕಾರ ಮತ್ತು ವಿಶ್ವಾದ್ಯಂತ ನೆಲೆಸಿರುವ ಹಿಂದೂಗಳ ಸಹಾಯವೊಂದೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಅಗತ್ಯವಿರುವ ವಿಚಾರ. ಅಸಂಘಟಿತವಾಗಿರುವುದು ಅಥವಾ ದುರ್ಬಲರಾಗಿ ಉಳಿಯುವುದು ದುಷ್ಟರಿಂದ ದೌರ್ಜನ್ಯವನ್ನು ಆಹ್ವಾನಿಸುವುದು ಎಂಬ ಪಾಠವನ್ನು ಪ್ರಪಂಚದಾದ್ಯಂತದ ಹಿಂದೂ ಸಮಾಜವೂ ಗ್ರಹಿಸಬೇಕು. ಆದರೆ ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಈಗ ಭಾರತದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದ ಜೊತೆ ಸೇರುವ ಮಾತುಗಳು ಕೇಳಿಬರುತ್ತಿವೆ. ಇಂತಹ ಕಥನ (narrative)ಗಳನ್ನು ಸೃಷ್ಟಿಸಿ, ಸ್ಥಾಪಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯಾವ ದೇಶಗಳು ಬಯಸುತ್ತವೆ ಎಂದು ಹೇಳಬೇಕಾಗಿಲ್ಲ. ಅದಕ್ಕೆ ಸೂಕ್ತ ಉತ್ತರಗಳು ಇಲ್ಲಿನ ಆಡಳಿತಕ್ಕೆ ಸಂಬAಧಿಸಿದ ವಿಷಯವಾಗಿದೆ. ಆದರೆ ಸಮಾಜದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಷ್ಟ-ಭ್ರಷ್ಟಗೊಳಿಸುವ, ವೈವಿಧ್ಯತೆಯನ್ನು ಪ್ರತ್ಯೇಕತೆಯಂತೆ ಬಿಂಬಿಸುವ, ಸಮಸ್ಯೆಗಳಿಂದ ಬಳಲುತ್ತಿರುವ ಗುಂಪುಗಳಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಮೂಡಿಸುವ ಮತ್ತು ಅತೃಪ್ತಿಯನ್ನು ಅರಾಜಕತೆಗೆ ಪರಿವರ್ತಿಸುವ ಪ್ರಯತ್ನಗಳು ಹೆಚ್ಚಾಗಿರುವುದು ಸಮಾಜದಲ್ಲಿರುವ ಸರ್ವಾಧಿಕ ಚಿಂತೆಯ ವಿಷಯವಾಗಿದೆ.


‘ಡೀಪ್ ಸ್ಟೇಟ್’, ‘ವೋಕಿಸಂ’, ‘ಕಲ್ಚರಲ್ ಮಾರ್ಕ್ಸಿಸ್ಟ್’ ಇಂತಹ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ವಾಸ್ತವವಾಗಿ, ಅವರು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳು. ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಯಾವುದನ್ನು ಒಳ್ಳೆಯದು ಅಥವಾ ಮಂಗಳಕರವೆಮದು ಪರಿಗಣಿಸಲಾಗಿದೆಯೋ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಗುಂಪಿನ ಕಾರ್ಯವೈಖರಿಯ ಒಂದು ಭಾಗವಾಗಿದೆ. ಸಮಾಜದ ಮನಸ್ಸನ್ನು ರೂಪಿಸುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು, ಉದಾ. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು, ಸಂವಹನ ಮಾಧ್ಯಮ, ಬೌದ್ಧಿಕ ಸಂವಾದ ಇತ್ಯಾದಿಗಳನ್ನು ತಮ್ಮ ಪ್ರಭಾವಕ್ಕೆ ತಂದು ಅವುಗಳ ಮೂಲಕ ಸಮಾಜದ ವಿಚಾರ, ಸಂಸ್ಕಾರ ಮತ್ತು ನಂಬಿಕೆಗಳನ್ನು ನಾಶಪಡಿಸುವುದು ಅವರ ಕಾರ್ಯವೈಖರಿಯ ಮೊದಲ ಹೆಜ್ಜೆಯಾಗಿದೆ. ಒಟ್ಟಿಗೆ ವಾಸಿಸುವ ಸಮಾಜದಲ್ಲಿ, ಯಾವುದೇ ಘಟಕವು ಅದರ ವಾಸ್ತವಿಕ ಅಥವಾ ಕೃತಕವಾಗಿ ರಚಿಸಲಾದ ಅನನ್ಯತೆ, ಬೇಡಿಕೆ, ಅವಶ್ಯಕತೆ ಅಥವಾ ಸಮಸ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಲು ಪ್ರೇರೇಪಿಸುತ್ತದೆ. ಅವರಲ್ಲಿ ಅನ್ಯಾಯಗ್ರಸ್ಥ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಅವರ ಅತೃಪ್ತಿಯ ವಾತಾವರಣವನ್ನು ಗಮನಿಸಿ, ಆ ಘಟಕವು ಸಮಾಜದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಮತ್ತು ವ್ಯವಸ್ಥೆಯ ವಿರುದ್ಧವಾಗಿ, ಆಕ್ರಮಣಕಾರಿಯಾಗಿಸುತ್ತದೆ. ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಭಾವ್ಯತೆ – ಜಿಚಿuಟಣ ಟiಟಿesಗಳನ್ನೂ ಕಂಡುಹಿಡಿದು ನೇರ ಸಂಘರ್ಷಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತಿದೆ. ವ್ಯವಸ್ಥೆ, ಕಾನೂನು, ಆಡಳಿತ ಇತ್ಯಾದಿಗಳ ಬಗ್ಗೆ ಅಶ್ರದ್ಧೆ ಮತ್ತು ದ್ವೇಷವನ್ನು ತೀವ್ರಗೊಳಿಸುವ ಮೂಲಕ ಅರಾಜಕತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಆ ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಲು ಅನುಕೂಲವಾಗುತ್ತದೆ.


ಬಹುಪಕ್ಷೀಯ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ಪಕ್ಷಗಳು ಅಧಿಕಾರವನ್ನು ಪಡೆಯಲು ಸ್ಪರ್ಧೆ ನಡೆಸುತ್ತವೆ. ಒಂದು ವೇಳೆ ಸಮಾಜದಲ್ಲಿರುವ ಸಣ್ಣ ಸ್ವಾರ್ಥಗಳು, ಪರಸ್ಪರ ಸದ್ಭಾವನೆ ಅಥವಾ ರಾಷ್ಟçದ ಏಕತೆ ಮತ್ತು ಅಖಂಡತೆಗಿAತ ಹೆಚ್ಚು ಮಹತ್ವಪೂರ್ಣ ಎನಿಸಿದರೆ, ಅಥವಾ ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಸಮಾಜದ ಸದ್ಭಾವನೆ ಮತ್ತು ರಾಷ್ಟçದ ಗೌರವ ಮತ್ತು ಏಕಾತ್ಮತೆ ಗೌಣವೆಂದು ಪರಿಗಣಿಸಿದರೆ, ಆಗ ಅಂತಹ ಬಹುಪಕ್ಷೀಯ ರಾಜಕಾರಣದಲ್ಲಿ ಒಂದು ಪಕ್ಷದ ಬೆಂಬಲಕ್ಕೆ ನಿಂತು, ಪರ್ಯಾಯ ರಾಜಕಾರಣದ ಹೆಸರಿನಲ್ಲಿ ತಮ್ಮ ವಿಭಜನಕಾರಿ ಅಜೆಂಡಾವನ್ನು ಮುಂದುವರಿಸುವುದು ಅವರ ಕಾರ್ಯಪದ್ಧತಿ. ಇದು ಕಪೋಲಕಲ್ಪಿತ ಕಥೆಯಲ್ಲ. ಪ್ರಪಂಚದ ಹಲವು ದೇಶಗಳಲ್ಲಿ ನಡೆದಿರುವ ವಾಸ್ತವ. ಪಾಶ್ಚಿಮಾತ್ಯ ಪ್ರಪಂಚದ ಮುಂದುವರಿದ ದೇಶಗಳಲ್ಲಿ ಈ ಮಂತ್ರವಿಪ್ಲವದ ಪರಿಣಾಮವಾಗಿ, ಜೀವನದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯು ಬಿಕ್ಕಟ್ಟಿಗೆ ಸಿಲುಕಿರುವುದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ತಥಾಕಥಿತ “ಅರಬ್ ಸ್ಪ್ರಿಂಗ್” ನಿಂದ ಪ್ರಾರಂಭಿಸಿ ನೆರೆಯ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರವರೆಗೆ ಈ ಪದ್ಧತಿಯು ಕಾರ್ಯನಿರ್ವಹಿಸಿದ್ದನ್ನು ನಾವು ನೋಡಿದ್ದೇವೆ. ಭಾರತದಾದ್ಯಂತ ನಾಲ್ಕೂ ದಿಕ್ಕುಗಳಲ್ಲಿ ವಿಶೇಷವಾಗಿ ಗಡಿಪ್ರದೇಶ ಮತ್ತು ಬುಡಕಟ್ಟು ಜನನಿಬಿಡ ಪ್ರದೇಶಗಳಲ್ಲಿ ಇಂತಹ ದುಷ್ಟ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ.
ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮತೆ ಮತ್ತು ಶ್ರೇಷ್ಠ ನಾಗರಿಕತೆಯ ಸುದೃಢ ಅಡಿಪಾಯದ ಮೇಲೆ ನಿಂತಿದೆ. ನಮ್ಮ ಸಾಮಾಜಿಕ ಜೀವನವು ಉದಾತ್ತ ಜೀವನ ಮೌಲ್ಯಗಳಿಂದ ಪ್ರೇರಿತವಾದದ್ದು ಮತ್ತು ಪೋಷಣೆಯಾದದ್ದು. ನಮ್ಮ ಇಂತಹ ರಾಷ್ಟಿçÃಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಬಹುಮುಂಚಿತವಾಗಿಯೇ ನಿಲ್ಲಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಜಾಗೃತ ಸಮಾಜವೇ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ನಮ್ಮ ಸಂಸ್ಕೃತಿಜನ್ಯ ಜೀವನದರ್ಶನ ಮತ್ತು ಸಂವಿಧಾನದತ್ತ ಮಾರ್ಗದ ಆಧಾರದ ಮೇಲೆ ಪ್ರಜಾತಾಂತ್ರಿಕ ಯೋಜನೆ ರೂಪಿಸಬೇಕು. ವೈಚಾರಿಕ ಮತ್ತು ಸಾಂಸ್ಕೃತಿಕ ಮಾಲಿನ್ಯವನ್ನು ಹರಡುವ ಈ ಷಡ್ಯಂತ್ರಗಳಿAದ ಸಮಾಜವನ್ನು ಸುರಕ್ಷಿತವಾಗಿಡುವುದು ಇಂದಿನ ಅಗತ್ಯವಾಗಿದೆ.


ಸಂಸ್ಕಾರ ಕ್ಷೀಣತೆಯ ದುಷ್ಪರಿಣಾಮ
ವಿಭಿನ್ನ ವ್ಯವಸ್ಥೆಗಳು ಮತ್ತು ಸಂಸ್ಥೆಗಳ ಮೂಲಕ ಹರಡಿರುವ ವಿಕೃತ ಪ್ರಚಾರ ಮತ್ತು ಕೆಟ್ಟ ಮೌಲ್ಯಗಳು ಭಾರತದಲ್ಲಿ, ವಿಶೇಷವಾಗಿ ಹೊಸ ಪೀಳಿಗೆಯ ಮನಸ್ಸು, ಮಾತು ಮತ್ತು ಕ್ರಿಯೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ದೊಡ್ಡವರ ಜೊತೆಗೆ ಮಕ್ಕಳ ಕೈಗೂ ಮೊಬೈಲ್ ಫೋನ್ ಬಂದಿದೆ. ಅಲ್ಲಿ ಏನು ತೋರಿಸಲಾಗುತ್ತದೆ ಮತ್ತು ಮಕ್ಕಳು ಏನು ನೋಡುತ್ತಿದ್ದಾರೆ ಎಂಬುದರ ಮೇಲೆ ಸ್ವಲ್ಪವೂ ನಿಯಂತ್ರಣವಿಲ್ಲ. ಆ ವಿಷಯವನ್ನು (content)ವನ್ನು ಉಲ್ಲೇಖಿಸುವುದೂ ನಮ್ಮ ಸಭ್ಯತೆಯ ಉಲ್ಲಂಘನೆಯಾಗುತ್ತದೆ, ಅದು ತುಂಬಾ ಬೀಭತ್ಸವಾಗಿದೆ. ನಮ್ಮ ಮನೆಗಳಲ್ಲಿ, ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ವಿಕೃತ ದೃಶ್ಯ-ಶ್ರಾವ್ಯ ವಿಷಯಗಳ ಮೇಲೆ ಕಾನೂನು ನಿಯಂತ್ರಣದ ತುರ್ತು ಅವಶ್ಯಕತೆ ಇದೆ ಎಂದೆನಿಸುತ್ತಿದೆ. ಯುವಪೀಳಿಗೆಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಮಾದಕ ವ್ಯಸನವೂ ಸಮಾಜವನ್ನು ಒಳಗೊಳಗೇ ಟೊಳ್ಳು ಮಾಡುತ್ತಿದೆ. ಒಳ್ಳೆಯತನಕ್ಕೆ ಕಾರಣವಾಗುವ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕಿದೆ.
‘ಮಾತೃವತ್ ಪರದಾರೇಷು’ ಎನ್ನುವುದನ್ನು ಆಚರಿಸುತ್ತಿದ್ದ ನಮ್ಮ ದೇಶದಲ್ಲಿ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಸಂಸ್ಕಾರ ಕ್ಷಯವಾಗುತ್ತಿರುವುದೇ ಕಾರಣ. ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆ ಇಡೀ ಸಮಾಜವನ್ನು ಕಳಂಕಿತಕೊಳಿಸುವ ನಾಚಿಕೆಗೇಡಿನ ಘಟನೆಗಳಲ್ಲಿ ಒಂದು. ಆ ಘಟನೆಯ ನಿಷೇಧ ಮತ್ತು ತ್ವರಿತ ಹಾಗೂ ಸಂವೇದನಾಶೀಲ ತನಿಖೆಗೆ ಆಗ್ರಹಿಸಿ ವೈದ್ಯ ಬಂಧುಗಳ ಜೊತೆಗೆ ಇಡೀ ಸಮಾಜ ನಿಂತಿತು. ಇಂತಹ ಹೇಯ ಘಟನೆಯ ನಂತರವೂ ಅಪರಾಧಿಗಳನ್ನು ರಕ್ಷಿಸಲು ಕೆಲವರು ಅಕ್ಷಮ್ಯ ಪ್ರಯತ್ನಗಳನ್ನು ನಡೆಸಿದರು. ಇಲ್ಲಿ ಎಲ್ಲಾ ಅಪರಾಧಗಳು, ರಾಜಕೀಯ ಮತ್ತು ಕೆಟ್ಟ ಸಂಸ್ಕೃತಿಯ ಸುಳಿಗೆ ಸಿಲುಕಿಸಿ ನಮ್ಮನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ.
ಮಹಿಳೆಯರ ಕುರಿತು ನಮ್ಮ ದೃಷ್ಟಿ ‘ಮಾತೃವತ್ ಪರದಾರೇಷು’ ಎಂಬುದು ನಮ್ಮ ಸಾಂಸ್ಕೃತಿಕ ಕೊಡುಗೆಯಾಗಿ ನಮ್ಮ ಸಂಸ್ಕಾರ ಪರಂಪರೆಯಿಮದ ಪ್ರಾಪ್ತವಾಗಿದೆ. ನಮ್ಮ ಮನೆಗಳಲ್ಲಿ, ಸಮಾಜ ಯಾವುದರಿಂದ ಮನೋರಂಜನೆಯ ಜೊತೆಗೆ ತಿಳಿದೋ ತಿಳಿಯದೆಯೋ ಅನೇಕ ಸಂಗತಿಗಳು ಒಳನುಸುಳಿವೆ. ಆ ಮಾಧ್ಯಮಗಳಲ್ಲಿ ಇದರ ಬಗ್ಗೆ ಅರಿವಿಲ್ಲದಿರುವುದು, ಈ ಮೌಲ್ಯಗಳನ್ನು ನಿರ್ಲಕ್ಷಿಸಿರುವುದು ಅಥವಾ ತಿರಸ್ಕರಿಸುವುದು ತುಂಬಾ ದುಬಾರಿಯಾಗಿ ಪರಿಣಮಿಸುತ್ತಿದೆ. ಕುಟುಂಬ, ಸಮಾಜ ಮತ್ತು ಸಮೂಹ ಮಾಧ್ಯಮಗಳ ಮೂಲಕ ಈ ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವ ವ್ಯವಸ್ಥೆಯನ್ನು ನಾವು ಮತ್ತೆ ಜಾಗೃತಗೊಳಿಸಬೇಕಾಗಿದೆ.


ಶಕ್ತಿಯ ಮಹತ್ವ
ಇಂದು ಭಾರತದಲ್ಲಿ ಎಲ್ಲೆಡೆಯೂ ಸಂಸ್ಕಾರದ ಕ್ಷಯ ಮತ್ತು ವಿಭಜನಾಕಾರಿ ತತ್ತ್ವಗಳು ಸಮಾಜವನ್ನು ಒಡೆಯುವ ಆಟದಲ್ಲಿ ನಿರತರಾಗಿರುವ ಪರಿಸ್ಥಿತಿಯನ್ನು ಕಾಣುತ್ತಿದೆ. ಸಾಮಾನ್ಯ ಸಮಾಜವನ್ನು ಜಾತಿ, ಭಾಷೆ, ಪ್ರಾಂತ ಇತ್ಯಾದಿ ಸಣ್ಣ ವಿಷಯಗಳ ಆಧಾರದ ಮೇಲೆ ಪ್ರತ್ಯೇಕಿಸುವ ಮೂಲಕ ಪರಸ್ಪರ ವಿರೋಧವಾಗಿಸುವ ಪ್ರಯತ್ನ ನಡೆಯುತ್ತಿದೆ. ಸಣ್ಣ ಸ್ವಾರ್ಥ ಮತ್ತು ಸಣ್ಣ ಗುರುತಿಸುವಿಕೆಯ ಕಾರಣದಿಂದಾಗಿ ಎಲ್ಲರನ್ನು ವಿಭಜಿಸುವ, ದೂರದಲ್ಲಿ ಸುಳಿಯುತ್ತಿರುವ ಸಮಸ್ಯೆಯನ್ನು ಬಹು ಸಮಯ ಆಗುವವರೆಗೂ ಸಮಾಜಕ್ಕೆ ಅರ್ಥವಾಗದಂತೆ ಮಾಡುವ ವ್ಯವಸ್ಥೆಯೂ ಆಗುತ್ತಿದೆ. ಇದರಿಂದಾಗಿ ಇಂದು ದೇಶದ ವಾಯುವ್ಯ ಗಡಿಯಲ್ಲಿರುವ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಸಮುದ್ರ ಗಡಿಯಲ್ಲಿರುವ ಕೇರಳ, ತಮಿಳುನಾಡು ಮತ್ತು ಬಿಹಾರದಿಂದ ಮಣಿಪುರದವರೆಗಿನ ಸಂಪೂರ್ಣ ಪೂರ್ವಾಂಚಲ ಅಸ್ವಸ್ಥವಾಗಿದೆ. ಈ ಭಾಷಣದ ಪ್ರಾರಂಭದಲ್ಲಿ ಉಲ್ಲೇಖಿಸಿದ ಪರಿಸ್ಥಿತಿಗಳು ಈ ಎಲ್ಲಾ ರಾಜ್ಯಗಳಲ್ಲೂ ಇವೆ.
ದೇಶದಲ್ಲಿ ವಿನಾಕಾರಣ ಮೂಲಭೂತವಾದವನ್ನು ಪ್ರಚೋದಿಸುವ ಘಟನೆಗಳು ಅಚಾನಕ್ ಆಗಿ ವೃದ್ಧಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಪರಿಸ್ಥಿತಿ ಮತ್ತು ನೀತಿಗಳ ಕುರಿತು ಮನದಲ್ಲಿ ಅತೃಪ್ತಿ ಇರಬಹುದು ಆದರೆ ಅದನ್ನು ವ್ಯಕ್ತಪಡಿಸುವುದಕ್ಕೆ ಮತ್ತು ವಿರೋಧಿಸುವುದಕ್ಕೆ ಪ್ರಜಾತಾಂತ್ರಿಕ ಮಾರ್ಗವಿದೆ. ಅದರ ಅವಲಂಬನೆಯನ್ನು ಮಾಡದೆ, ಹಿಂಸೆಯನ್ನು ಆಶ್ರಯಿಸುವುದು, ಸಮಾಜದ ಕೆಲವು ವಿಶಿಷ್ಟ ವರ್ಗದ ಮೇಲೆ ಆಕ್ರಮಣ ಮಾಡುವುದು, ವಿನಾಕಾರಣ ಹಿಂಸೆಯ ಹಿಂದೆ ಹೋಗುವುದು, ಭಯ ಹುಟ್ಟಿಸುವುದಕ್ಕೆ ಪ್ರಯತ್ನಿಸುವುದು – ಇದು ಗೂಂಡಾಗಿರಿ ಎನಿಸುತ್ತದೆ. ಅದನ್ನು ಪ್ರಚೋದಿಸುವ ಪ್ರಯತ್ನವಾಗುತ್ತದೆ ಅಥವಾ ಯೋಜನಾಬದ್ಧ ರೀತಿಯಲ್ಲಿ ಮಾಡಲಾಗುತ್ತದೆ. ಇಂತಹ ಆಚರಣೆಯನ್ನು ಪೂಜ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಅರಾಜಕತೆಯ ವ್ಯಾಕರಣ’ (Grammar of Anarchy) ಎಂದು ಕರೆದಿದ್ದರು. ಇತ್ತೀಚೆಗೆ ಸಂಪನ್ನಗೊಂಡ ಗಣೇಶೋತ್ಸವದ ಸಂದರ್ಭದಲ್ಲಿ ಶ್ರೀಗಣಪತಿ ವಿಸರ್ಜನೆಯ ಶೋಭಾಯಾತ್ರೆಯ ಮೇಲೆ ಕಾರಣವಿಲ್ಲದೇ ಕಲ್ಲುತೂರಾಟದ ಘಟನೆಗಳು ಮತ್ತು ಅದರ ನಂತರ ನಡೆದ ಉದ್ವಿಗ್ನ ಪರಿಸ್ಥಿತಿಯಂತಹ ಘಟನೆಗಳು ಅರಾಜಕತೆಯ ವ್ಯಾಕರಣಕ್ಕೆ ಉದಾಹರಣೆಗಳು. ಇಂತಹ ಘಟನೆಗಳು ಜರುಗುವುದಕ್ಕೆ ಬಿಡಬಾರದು, ಒಂದು ವೇಳೆ ಜರುಗಿದರೆ ತಕ್ಷಣಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸುವುದು, ತಪ್ಪಿತಸ್ಥರಿಗೆ ಶೀಘ್ರವಾಗಿ ದಂಡನೆಯನ್ನು ವಿಧಿಸುವುದು ಆಡಳಿತ ವ್ಯವಸ್ಥೆಯ ಕೆಲಸವಾಗಿದೆ. ಆದರೆ ಅವರು ತಲುಪುವವರೆಗೆ ಸಮಾಜವು ತನ್ನ ಮತ್ತು ತಮ್ಮವರ ಪ್ರಾಣ ಮತ್ತು ಸಂಪತ್ತನ್ನು ರಕ್ಷಿಸಬೇಕಾಗುತ್ತದೆ. ಆದ್ದರಿಂದ ಸಮಾಜವೂ ಸದೈವಪೂರ್ಣ ಜಾಗೃತ ಮತ್ತು ಸನ್ನದ್ಧವಾಗಿರುವುದರ ಜೊತೆಗೆ ಈ ಕುಪ್ರವೃತ್ತಿಗಳು ಮತ್ತು ಅವರಿಗೆ ಸಹಾಯ ಮಾಡುವವರನ್ನು ಗುರುತಿಸುವ ಅವಶ್ಯಕತೆಯೂ ನಿರ್ಮಾಣವಾಗಿದೆ.
ಪರಿಸ್ಥಿತಿಯ ಕುರಿತು ತಿಳಿಸಿರುವ ಈ ಮೇಲಿನ ವಿವರಣೆಯು ಹೆದರಿಸುವುದು, ಬೆದರಿಸುವುದು ಅಥವಾ ಜಗಳವಾಡುವುದು ಅಲ್ಲ. ಅಂತಹ ಪರಿಸ್ಥಿತಿ ಇಂದಿನ ವಿದ್ಯಮಾನ, ಇಲ್ಲಿ ನಾವೆಲ್ಲರೂ ಅದನ್ನು ಅನುಭವಿಸುತ್ತಿದ್ದೇವೆ. ಒಟ್ಟಿಗೆ ಈ ದೇಶವನ್ನು ಏಕಾತ್ಮ, ಸುಖ-ಶಾಂತಿಮಯ, ಸಮೃದ್ಧ ಮತ್ತು ಬಲಸಂಪನ್ನ ಮಾಡುವುದು ಪ್ರತಿಯೊಬ್ಬರ ಇಚ್ಛೆಯಾಗಿದೆ ಮತ್ತು ಸರ್ವರ ಕರ್ತವ್ಯವಾಗಿದೆ. ಇದರಲ್ಲಿ ಹಿಂದೂ ಸಮಾಜಕ್ಕೆ ಹೊಣೆಗಾರಿಕೆ ಹೆಚ್ಚಿದೆÉ. ಆದ್ದರಿಂದ ಸಮಾಜದಲ್ಲಿ ಒಂದು ವಿಶಿಷ್ಟ ಪ್ರಕಾರದ ಸ್ಥಿತಿ, ಜಾಗರೂಕತೆ ಹಾಗೂ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಸಂಘಟಿತ ಪ್ರಯತ್ನವನ್ನು ಮಾಡುವ ಅವಶ್ಯಕತೆಯಿದೆ. ಸಮಾಜವೇ ಸ್ವಯಂಜಾಗೃತಗೊAಡಾಗ, ತನ್ನ ಭಾಗ್ಯವನ್ನು ತನ್ನ ಪುರುಷಾರ್ಥದಿಂದ ಬರೆದುಕೊಂಡಾಗ, ಮಹಾಪುರುಷರು, ಸಂಘಟನೆಗಳು, ಸಂಸ್ಥೆಗಳು, ಆಡಳಿತ ಇತ್ಯಾದಿಗಳೆಲ್ಲವೂ ಸಹಾಯ ಮಾಡುತ್ತವೆ. ದೇಹದ ಆರೋಗ್ಯಕರ ಸ್ಥಿತಿಯಲ್ಲಿ, ಸುಸ್ತು ಮೊದಲು ಬರುತ್ತದೆ ಮತ್ತು ರೋಗಗಳು ನಂತರ ಅದನ್ನು ಸುತ್ತುವರೆದಿರುತ್ತವೆ. ದುರ್ಬಲರನ್ನು ದೇವರೂ ಕೂಡ ಕಾಳಜಿ ಮಾಡುವುದಿಲ್ಲ ಎನ್ನುವುದಕ್ಕೆ ಪ್ರಸಿದ್ಧವಾದ ಸುಭಾಷಿತವೊಂದಿದೆ.
ಅಶ್ವA ನೈವ ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ ಬಲಿಂ ದದ್ಯಾತ್, ದೇವೋ ದುರ್ಬಲ ಘಾತಕಃ||
(ಅರ್ಥ: ಕುದುರೆಯನ್ನು, ಆನೆಯನ್ನು, ಹುಲಿಯನ್ನು ಬಲಿಕೊಡುವುದಿಲ್ಲ. ಮೇಕೆಯನ್ನು ಬಲಿ ಕೊಡುತ್ತಾರೆ. ಆದ್ದರಿಂದ ದುರ್ಬಲ ಪ್ರಾಣಿಯನ್ನೇ ಬಲಿಕೊಡಲು ಆರಿಸುತ್ತಾರೆ.)
ಆದ್ದರಿಂದ ಶತಾಬ್ದಿ ವರ್ಷ ಪೂರ್ಣಗೊಳ್ಳುವ ವೇಳೆಯಲ್ಲಿ ಸಮಾಜ ಕೆಲವು ವಿಷಯಗಳನ್ನು ತೆಗೆದುಕೊಂಡು ಎಲ್ಲಾ ಸಜ್ಜನರ ಸಕ್ರಿಯ ಗೊಳಿಸುವ ವಿಚಾರವನ್ನು ಸಂಘದ ಸ್ವಯಂಸೇವಕ ಮಾಡುತ್ತಾನೆ.


ಸಮರಸತೆ ಮತ್ತು ಸದ್ಭಾವನೆ
ಸಮಾಜದ ಸ್ವಸ್ಥ ಮತ್ತು ಸಬಲ ಸ್ಥಿತಿಯ ಮೊದಲ ಷರತ್ತು ಎಂದರೆ ಸಾಮಾಜಿಕ ಸಮರಸತೆ ಮತ್ತು ಸಮಾಜದ ವಿವಿಧ ವರ್ಗಗಳ ನಡುವಣ ಪರಸ್ಪರ ಸದ್ಭಾವನೆ. ಕೆಲವು ಸಂಕೇತಾತ್ಮಕ ಕಾರ್ಯಕ್ರಮಗಳನ್ನು ಮಾತ್ರ ಮಾಡುವುದರಿಂದ ಈ ಕಾರ್ಯ ಸಾಧ್ಯವಾಗುವುದಿಲ್ಲ. ಸಮಾಜದ ಎಲ್ಲಾ ವರ್ಗ ಮತ್ತು ಸ್ತರಗಳಲ್ಲಿ ವ್ಯಕ್ತಿಗಳ ಮತ್ತು ಕುಟುಂಬಗಳ ಮಿತ್ರತ್ವ ಇರಬೇಕು. ಇದನ್ನು ನಾವು ಮೊದಲು ವ್ಯಕ್ತಿಗತ ಮತ್ತು ಕುಟುಂಬದ ಹಂತದಲ್ಲಿ ಮಾಡಬೇಕು. ಪರಸ್ಪರರ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸಹಭಾಗಿಗಳಾಗಿ ಪೂರ್ಣ ಸಮಾಜದ ಹಬ್ಬವಾಗಿ ಆಚರಿಸಬೇಕು. ಸಾರ್ವಜನಿಕ ಉಪಯೋಗದ ಮತ್ತು ಶ್ರದ್ಧಾ ಸ್ಥಳಗಳಾದ ದೇವಸ್ಥಾನ, ನೀರಿನ ಮೂಲಗಳು, ಸ್ಮಶಾನ ಮುಂತಾದೆಡೆಯಲ್ಲಿ ಸಮಾಜದ ಎಲ್ಲಾ ವರ್ಗಗಳು ಸಹಭಾಗಿಗಳಾಗುವ ವಾತಾವರಣ ಇರಬೇಕು. ಸಮಾಜದ ವಿಭಿನ್ನ ವರ್ಗಗಳ ಅವಶ್ಯಕತೆಗಳು ಎಲ್ಲ ವರ್ಗಗಳ ಅರಿವಿಗೂ ಬರಬೇಕಿದೆ. ಹೇಗೆ ಒಂದು ಕುಟುಂಬದಲ್ಲಿ ಸಮರ್ಥರಾಗಿರುವವರು ದುರ್ಬಲವಾಗಿರುವವರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆಯೋ, ಕೆಲವೊಮ್ಮೆ ತಮ್ಮ ನಷ್ಟವನ್ನೂ ಸಹಿಸಿಕೊಂಡು ಸಹಾಯ ಮಾಡುತ್ತಾರೋ, ಹಾಗೆಯೇ ಸಮಾಜದಲ್ಲಿನ ಎಲ್ಲರೂ ತಮ್ಮವರು ಎಂಬ ದೃಷ್ಟಿಯನ್ನು ಹೊಂದಿ, ಅವಶ್ಯಕತೆಗಳ ಬಗ್ಗೆ ಚರ್ಚೆಯನ್ನು ಮಾಡಬೇಕಾಗಿದೆ.
ಸಮಾಜದಲ್ಲಿ ಅನೇಕ ಜಾತಿ ವರ್ಗಗಳ ಮುನ್ನಡೆಸುವ ಅವರವರ ರಚನೆಗಳು, ಸಂಸ್ಥೆಗಳೂ ಇವೆ. ಅವರವರ ಜಾತಿ, ವರ್ಗದ ಉನ್ನತಿಗಾಗಿ, ಸುಧಾರಣೆಗಾಗಿ ಮತ್ತು ಅವರ ಹಿತಪ್ರಬೋಧನೆಯ ವಿಚಾರ ಈ ರಚನೆಗಳ ನೇತೃತ್ವದ ಮೂಲಕ ಮಾಡಲಾಗುತ್ತದೆ. ಜಾತಿ ಸಮುದಾಯದ ಮುಖಂಡರು ಒಂದೆಡೆ ಕುಳಿತು ಎರಡು ವಿಷಯಗಳ ಬಗ್ಗೆ ನಿತ್ಯ ಚರ್ಚೆ ನಡೆಸಿದರೆ ಸಮಾಜದಲ್ಲಿ ಎಲ್ಲೆಲ್ಲೂ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ಸಮಾಜವನ್ನು ವಿಭಜಿಸುವ ಯಾವುದೇ ಕುತಂತ್ರ ಯಶಸ್ವಿಯಾಗುವುದಿಲ್ಲ. ಮೊದಲ ವಿಷಯವೇನೆಂದರೆ ನಾವೆಲ್ಲರೂ ಬೇರೆ ಬೇರೆ ಜಾತಿ ವರ್ಗದವರು ಒಟ್ಟು ಸೇರಿ ದೇಶ ಹಿತದ ಹಾಗೂ ನಮ್ಮ ಕಾರ್ಯಕ್ಷೇತ್ರದ ಸಂಪೂರ್ಣ ಸಮಾಜದ ಹಿತಕ್ಕಾಗಿ ಯಾವ ಸಂಗತಿಗಳನ್ನು ಮಾಡಬಹುದು? ಎಂಬುದನ್ನು ಚರ್ಚಿಸುವುದು. ಎರಡನೆಯ ವಿಷಯವೇನೆಂದರೆ, ನಮ್ಮಲ್ಲಿರುವ ದುರ್ಬಲ ಜಾತಿಗಳು ಅಥವಾ ವರ್ಗಗಳ ಕಲ್ಯಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಏನು ಮಾಡಬಹುದು? ಎಂಬುದರ ಕುರಿತು ಯೋಜಿಸುವ ಮೂಲಕ ಅವರು ಫಲಿತಾಂಶಗಳಿಗೆ ಕೊಂಡೊಯ್ಯಬೇಕು. ಇಂತಹ ಚಿಂತನೆಗಳು ಮತ್ತು ಕಾರ್ಯಗಳು ನಿರಂತರವಾಗಿ ನಡೆದರೆ, ಸಮಾಜವು ಆರೋಗ್ಯಕರವಾಗಿರುತ್ತದೆ ಮತ್ತು ಸಾಮರಸ್ಯದ ವಾತಾವರಣವೂ ನಿರ್ಮಾಣವಾಗುತ್ತದೆ.


ಪರಿಸರ
ಸುತ್ತಮುತ್ತಲಿನ ವಾತಾವರಣದಲ್ಲಿ ಒಂದು ವಿಶ್ವವ್ಯಾಪಿ ಸಮಸ್ಯೆಯು ಮುಂಬರುವ ವರ್ಷಗಳಲ್ಲಿ ನಮ್ಮ ದೇಶದಲ್ಲೂ ಎದುರಿಸುತ್ತಿರುವಂಥದ್ದು ಎಂದರೆ ಪರಿಸರದ ದುಃಸ್ಥಿತಿ. ಋತುಚಕ್ರವು ಅನಿಯಮಿತವಾಗಿ ಇನ್ನಷ್ಟು ತೀವ್ರಗೊಂಡಿದೆ. ಉಪಭೋಗವಾದಿ ಮತ್ತು ಮೂಲಭೂತವಾದಿ ಅಪೂರ್ಣ ಸೈದ್ಧಾಂತಿಕ ತಳಹದಿಯ ಮೇಲೆ ಚಲಿಸುವ ಮಾನವನ ತಥಾಕಥಿತ ವಿಕಾಸದ ಯಾತ್ರೆ ಆದಷ್ಟು ಬೇಗ ಮಾನವರ ಸಹಿತ ಸಂಪೂರ್ಣ ಸೃಷ್ಟಿಯ ವಿನಾಶದ ಯಾತ್ರೆಯು ರೂಪುಗೊಂಡಿದೆ. ನಮ್ಮ ಭಾರತದ ಪರಂಪರೆಯಿಂದ ಪಡೆದ ಸಂಪೂರ್ಣ, ಸಮಗ್ರ ಮತ್ತು ಏಕಾತ್ಮ ದೃಷ್ಟಿಯ ಆಧಾರದ ಮೇಲೆ ನಾವು ನಮ್ಮ ವಿಕಾಸದ ಪಥವನ್ನು ನಿರ್ಮಿಸಬೇಕಾಗಿತ್ತು, ಆದರೆ ನಾವು ಹಾಗೆ ಮಾಡಲಿಲ್ಲ. ಇದೀಗ ಈ ರೀತಿಯ ಆಲೋಚನೆಗಳು ಸ್ವಲ್ಪ ಕೇಳಿಬರುತ್ತಿವೆ, ಆದರೆ ಮೇಲ್ನೋಟಕ್ಕೆ ಕೆಲವು ವಿಷಯಗಳನ್ನು ಸ್ವೀಕರಿಸಿದ್ದೇವೆ, ಕೆಲವು ವಿಷಯಗಳ ಪರಿವರ್ತನೆಯಾಗಿದೆ. ಇದಕ್ಕಿಂತ ಹೆಚ್ಚಿನ ಕೆಲಸ ನಡೆದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ವಿನಾಶಕ್ಕೆ ಕಾರಣವಾಗುವ ಅಭಿವೃದ್ಧಿಯ ಅಪೂರ್ಣ ಮಾರ್ಗವನ್ನು ಕುರುಡಾಗಿ ಅನುಸರಿಸುವುದರ ಪರಿಣಾಮವನ್ನು ನಾವೂ ಅನುಭವಿಸುತ್ತಿದ್ದೇವೆ. ಬೇಸಿಗೆಯ ಋತು ಸುಡುತ್ತದೆ. ಮಳೆಯು ಕೊಚ್ಚಿಕೊಂಡು ಹೋಗುತ್ತಿದೆ. ಶೀತ ಋತುವು ಜೀವನವನ್ನು ಜಡತ್ವಗೊಳಿಸುತ್ತಿದೆ. ಹಾಗಾಗಿ ಋತುಗಳ ಈ ವಿಕ್ಷಿಪ್ತ ತೀವ್ರತೆಯನ್ನು ನಾವು ಅನುಭವಿಸುತ್ತಿದ್ದೇವೆ. ಕಾಡುಗಳನ್ನು ಕಡಿದದ್ದರಿಂದ ಹಸಿರು ನಾಶವಾಯಿತು. ನದಿಗಳು ಬತ್ತಿಹೋಯಿತು. ರಾಸಾಯನಿಕಗಳು ನಮ್ಮ ಅನ್ನ, ನೀರು, ಗಾಳಿ ಮತ್ತು ಭೂಮಿಯನ್ನು ವಿಷಪೂರಿತಗೊಳಿಸಿದವು. ಪರ್ವತಗಳು ಕರಗಲಾರಂಭಿಸಿದವು. ಭೂಮಿ ಬಿರುಕು ಬಿಡುತ್ತಿದೆ. ಈ ಎಲ್ಲಾ ಅನುಭವಗಳು ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ ನಾವು ಅನುಭವಿಸುತ್ತಿದ್ದೇವೆ. ನಮ್ಮ ವಿಚಾರದ ಆಧಾರದ ಮೇಲೆ, ಈ ಎಲ್ಲಾ ನಷ್ಟಗಳನ್ನು ನಿವಾರಿಸುವ ಮತ್ತು ನಮಗೆ ಧಾರಣಕ್ಷಮತೆಯುಳ್ಳ, ಸಮಗ್ರ ಮತ್ತು ಏಕಾತ್ಮ ವಿಕಾಸವನ್ನು ನೀಡುವ ನಮ್ಮದೇ ಆದ ಮಾರ್ಗವನ್ನು ನಿರ್ಮಿಸಬೇಕಿದೆ. ಅದಕ್ಕೆ ಬೇರೆ ಯಾವುದೇ ಪರ್ಯಾಯ ಇಲ್ಲ. ಸಂಪೂರ್ಣ ದೇಶದಲ್ಲಿ ಒಂದೇ ವೈಚಾರಿಕ ಭೂಮಿಕೆಯನ್ನು ರಚಿಸಿ ದೇಶದ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾನ್ವಯದ ವಿಕೇಂದ್ರೀಕೃತ ಕಲ್ಪನೆ ಇದ್ದಾಗ ಮಾತ್ರ ಸಾಧ್ಯ. ಆದರೆ ನಾವು ಸಾಮಾನ್ಯ ಜನರು ನಮ್ಮ ಮನೆಯಿಂದಲೇ ಮೂರು ಸಣ್ಣ ಸರಳ ಕೆಲಸಗಳನ್ನು ಮಾಡುವ ಮೂಲಕ ಪ್ರಾರಂಭಿಸಬಹುದು. ಮೊದಲನೆಯದು ನೀರಿನ ಕನಿಷ್ಠ ಅವಶ್ಯಕ ಬಳಕೆ ಮತ್ತು ಮಳೆ ನೀರಿನ ಕೊಯ್ಲು. ಎರಡನೆಯದು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರುವುದು. ಇಂಗ್ಲಿಷಿನಲ್ಲಿ Single Use Plastics ಎಂದು ಕರೆಯುವ ಪ್ಲಾಸ್ಟಿಕ್‌ನ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡುವುದು. ಮೂರನೆಯ ವಿಷಯವೆಂದರೆ ನಿಮ್ಮ ಮನೆಯ ಹೊರಗೆ ಹೆಚ್ಚು ಹಸಿರನ್ನು ಬೆಳೆಯುವಂತೆ ನೋಡಿಕೊಳ್ಳುವುದು, ಗಿಡಗಳನ್ನು ನೆಡುವುದು, ನಮ್ಮ ಕಾಡುಗಳಲ್ಲಿ ಮತ್ತು ಪರಂಪರಾನುಗತವಾಗಿ ಸ್ಥಳೀಯವಾಗಿ ಬೆಳೆಯುವ ಮರಗಳ ಗಿಡವನ್ನು ಎಲ್ಲೆಡೆ ನೆಡುವುದರ ಕುರಿತು ಗಮನಹರಿಸಬೇಕು. ಪರಿಸರಕ್ಕೆ ಸಂಬಂಧಿಸಿದ ನಿಯಮಗಳ ಕುರಿತಾದ ಪ್ರಶ್ನೆಗಳನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ನಮ್ಮ ಮನೆಯಿಂದಲೇ ಈ ಸರಳ ಕೆಲಸಗಳನ್ನು ಪ್ರಾರಂಭಿಸಬಹುದು.


ಸಂಸ್ಕಾರ ಜಾಗರಣ
ಸಂಸ್ಕಾರದ ಕ್ಷಯವಾಗುತ್ತಿದೆ. ಸಂಸ್ಕಾರಗಳು ಎಲ್ಲಿಂದ ಲಭಿಸುತ್ತವೆಯೋ ಅಂತಹ ಮೂರು ಸ್ಥಳಗಳಲ್ಲಿ ಸಂಸ್ಕಾರ ಪ್ರಧಾನ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕು ಹಾಗೂ ಅದನ್ನು ಸಮರ್ಥ, ಸಕ್ಷಮಗೊಳಿಸಬೇಕು. ಶಿಕ್ಷಣ ಪದ್ಧತಿಯು ಉದರಪೋಷಣೆಯ ಕೌಶಲ ಕಲಿಸುವ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದ ಕಾರ್ಯವನ್ನೂ ಮಾಡುತ್ತದೆ. ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯವನ್ನು ತಿಳಿಸುವಾಗ ಉದಾಹರಿಸುವ ಪ್ರಸಿದ್ಧ ಸುಭಾಷಿತವೊಂದಿದೆ.
ಮಾತೃವತ್ ಪರದಾರೇಷು, ಪರದ್ರವ್ಯೇಷು ಲೋಷ್ಠವತ್
ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ನ ಪಂಡಿತಃ
ಮಹಿಳೆಯರನ್ನು ಮಾತೃರೂಪದಲ್ಲಿ ನೋಡುವ, ಪರರ ಧನವನ್ನು ಮಣ್ಣಿನ ರೀತಿ ನೋಡುವ, ಸ್ವಂತ ಪರಿಶ್ರಮದಿಂದ ಸನ್ಮಾರ್ಗದಲ್ಲೇ ಧನಾರ್ಜನೆ ಮಾಡುವ, ಬೇರೆಯವರಿಗೆ ದುಃಖ ಹಾಗೂ ಕಷ್ಟವಾಗುವಂತಹ ಕೆಲಸ ಮಾಡದೇ ಇರುವುದು ಮುಖ್ಯ. ಇಂತಹ ಆಚರಣೆಯನ್ನು ಯಾರು ರೂಢಿಸಿಕೊಂಡಿರುತ್ತಾರೆಯೋ ಅವರನ್ನು ನಮ್ಮಲ್ಲಿ ಶಿಕ್ಷಿತರು (ವಿದ್ಯಾವಂತರು) ಎನ್ನಲಾಗುತ್ತದೆ. ಮೊದಲನೆಯ ಅಂಶ ಶಿಕ್ಷಣ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ರೀತಿಯ ಮೌಲ್ಯಯುತ ಶಿಕ್ಷಣ ವ್ಯವಸ್ಥೆ ಹಾಗೂ ಅನುಗುಣವಾದ ಪಠ್ಯಕ್ರಮ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳ ಎದುರು ಶಿಕ್ಷಕರೇ ಉದಾಹರಣೆಯಾಗಿ ನಿಲ್ಲುವವರೆಗೂ ಶಿಕ್ಷಣ ಪರಿಣಾಮಕಾರಿ ಆಗುವುದಿಲ್ಲ. ಹಾಗಾಗಿ ಶಿಕ್ಷಕರ ಪ್ರಶಿಕ್ಷಣಕ್ಕಾಗಿ ಹೊಸ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗಿದೆ. ಎರಡನೆಯ ಅಂಶವೆಂದರೆ ಸಮಾಜದಲ್ಲಿನ ವಾತಾವರಣ. ಸಮಾಜದಲ್ಲಿರುವ ಕೆಲವು ಪ್ರಮುಖರ ಲೋಕಪ್ರಿಯತೆಯ ಕಾರಣದಿಂದಾಗಿ ಅನೇಕ ಜನರು ಅನುಕರಣೆ ಮಾಡುವಂತಹ ಪ್ರಮುಖರ ಜೀವನದ ಆಚರಣೆಯಲ್ಲಿ ಈ ಎಲ್ಲ ಅಂಶಗಳೂ ಕಾಣಸಿಗಬೇಕು. ಈ ವಿಚಾರಗಳನ್ನು ಮೊದಲಿಗೆ ಅಂತಹ ಪ್ರಮುಖರಿಗೆ ತಿಳಿಸಿಕೊಡಬೇಕು. ಅವರ ಪ್ರಭಾವದ ಕಾರಣಕ್ಕೆ ಸಮಾಜದಲ್ಲಿ ಉಂಟಾಗುವ ವಿಭಿನ್ನ ಪರಿಣಾಮದ ಮೂಲಕ ಜಾಗೃತಿ ಮೂಡಿಸಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವ ಎಲ್ಲ ಸಜ್ಜನರೂ ತಮ್ಮ ಸಾಮಾಜಿಕ ಜಾಲತಾಣ ಬಳಕೆಯನ್ನು ಸಮಾಜವನ್ನು ಜೋಡಿಸುವ ಸಲುವಾಗಿ ಬಳಸಬೇಕು. ಸಮಾಜವನ್ನು ಒಡೆಯಲು ಬಳಸಬಾರದು. ಅವರನ್ನು ಸುಸಂಸ್ಕೃತರನ್ನಾಗಿಸುವಂತೆ, ಅಪಸಂಸ್ಕೃತಿಯನ್ನು ಹರಡದೇ ಇರುವಂತೆ ಸಾಮಾಜಿಕ ಜಾಲತಾಣವನ್ನು ಬಳಸಬೇಕು ಎಂಬ ಎಚ್ಚರಿಕೆಯನ್ನು ವಹಿಸಬೇಕು.
ಶಿಕ್ಷಣದ ಮೂಲಾರಂಭ ಹಾಗೂ ಅದರ ಕಾರಣದಿಂದ ಆಗುವ ಸ್ವಭಾವಪ್ರವೃತ್ತಿಯು ೩ರಿಂದ ೧೨ನೇ ವರ್ಷದ ನಡುವೆಯೇ ಮನೆಯಲ್ಲೇ ರೂಪುಗೊಳ್ಳುತ್ತವೆ. ಮನೆಯಲ್ಲಿ ಹಿರಿಯರ ನಡವಳಿಕೆ, ಮನೆಯ ವಾತಾವರಣ ಹಾಗೂ ಮನೆಯಲ್ಲಿ ಉಂಟಾಗುವ ಆತ್ಮೀಯತೆಯುಕ್ತ ಮಾತುಕತೆಗಳ ಮೂಲಕ ಈ ಶಿಕ್ಷಣವು ಪ್ರಾಪ್ತವಾಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಮನೆಯ ಕುರಿತು ಆಲೋಚಿಸುತ್ತಲೇ, ಮನೆಗಳಲ್ಲಿ ಈ ರೀತಿಯ ಚರ್ಚೆಗಳನ್ನು ಆರಂಭಿಸಬೇಕಾಗಿದೆ. ದಿನನಿತ್ಯದ ಜೀವನದಲ್ಲಿ ಸಹಜವಾಗಿ ಈ ರೀತಿಯ ಸಂವಾದ ಸಾಧ್ಯವಾಗದು ಎಂದಾದರೆ ವಾರಕ್ಕೊಮ್ಮೆಯಾದರೂ ಮಾಡಬೇಕು. ಸ್ವ ಗೌರವ, ದೇಶಪ್ರೇಮ, ನೈತಿಕತೆ, ಸನ್ನಡತೆ, ಕರ್ತವ್ಯಪ್ರಜ್ಞೆ ಮುಂತಾದ ಅನೇಕ ಗುಣಗಳು ಇದೇ ಕಾಲಾವಧಿಯಲ್ಲೇ ನಿರ್ಮಾಣವಾಗುತ್ತವೆ. ಈ ವಿಚಾರವನ್ನು ತಿಳಿದುಕೊಂಡು ನಮ್ಮ ಮನೆಗಳಲ್ಲಿ ಆರಂಭಿಸಬೇಕಾಗಿದೆ.


ನಾಗರಿಕ ಕರ್ತವ್ಯ
ಸಂಸ್ಕಾರಗಳ ಅಭಿವ್ಯಕ್ತಿಗೆ ಮತ್ತೊಂದು ಮಾರ್ಗವೆಂದರೆ ನಮ್ಮ ಸಾಮಾಜಿಕ ನಡವಳಿಕೆ. ಸಮಾಜದಲ್ಲಿ ನಾವು ಒಟ್ಟಿಗೆ ವಾಸಿಸುತ್ತೇವೆ. ಒಟ್ಟಿಗೆ ಸುಖದಿಂದ ವಾಸಿಸಲಿ ಎಂಬ ಕಾರಣಕ್ಕೆ ಕೆಲವು ನಿಯಮಗಳು ರೂಪಿತಗೊಂಡಿರುತ್ತವೆ. ದೇಶ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಅವುಗಳಲ್ಲಿ ಪರಿವರ್ತನೆಗಳೂ ಆಗುತ್ತಿರುತ್ತವೆ. ನಾವು ಒಟ್ಟಾಗಿ ಸುಖದಿಂದ ವಾಸಿಸಬೇಕೆಂದರೆ ಆ ನಿಯಮಗಳ ಪಾಲನೆಯು ಅನಿವಾರ್ಯವಾಗುತ್ತದೆ. ಒಟ್ಟಿಗೆ ವಾಸಿಸುತ್ತಿರುವಾಗ ಪರಸ್ಪರರ ನಡವಳಿಕೆಯಲ್ಲಿ ಕೆಲವು ಕರ್ತವ್ಯಗಳು ಹಾಗೂ ಅವುಗಳ ಪಾಲನೆ ನಡೆದುಕೊಂಡುಬರುತ್ತಿರುತ್ತದೆ. ಕಾನೂನು ಹಾಗೂ ಸಂವಿಧಾನವೂ ಒಂದು ರೀತಿಯಲ್ಲಿ ಸಾಮಾಜಿಕ ಅನುಶಾಸನವೇ ಆಗಿದೆ. ಸಮಾಜದಲ್ಲಿ ಎಲ್ಲರೂ ಸುಖದಿಂದ ಇರಲಿ, ಏಳಿಗೆ ಸಾಧಿಸುತ್ತಿರಲಿ, ಪ್ರತ್ಯೇಕವಾಗದಿರಲಿ ಎಂಬ ಕಾರಣಕ್ಕೆ ಅಧಿಷ್ಠಾನ ಅಥವಾ ನಿಯಮಗಳು ರೂಪುಗೊಂಡಿವೆ. ನಾವು ಭಾರತದ ನಾಗರಿಕರು ಈ ಸಂವಿಧಾನದ ಪಾಲನೆ ಕುರಿತು ಬದ್ಧತೆಯನ್ನು ವ್ಯಕ್ತಪಡಿಸಿದ್ದೇವೆ. ಸಂವಿಧಾನದ ಪೀಠಿಕೆಯ ಈ ವಾಕ್ಯವನ್ನು ಮನಸ್ಸಿನಲ್ಲಿರಿಸಿಕೊಂಡು ಸಂವಿಧಾನ ಸೂಚಿಸಿದ ಕರ್ತವ್ಯಗಳು ಹಾಗೂ ಕಾನೂನಿನ ಸೂಕ್ತ ಪಾಲನೆಯನ್ನು ಎಲ್ಲರೂ ಮಾಡಬೇಕು. ಸಣ್ಣದು ದೊಡ್ಡದು ಎಂಬ ಭೇದವಿಲ್ಲದೆ ಎಲ್ಲ ವಿಚಾರಗಳಲ್ಲೂ ನಾವು ಈ ನಿಯಮಗಳ ಪಾಲನೆ ಮಾಡಬೇಕು. ರಸ್ತೆ ನಿಯಮಗಳಿರಬಹುದು, ವಿವಿಧ ರೀತಿಯ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದಿರಬಹುದು, ವೈಯಕ್ತಿಕ ಸಾಮಾಜಿಕ ಮತ್ತು ಆರ್ಥಿಕ ವ್ಯವಹಾರದಲ್ಲಿ ಶುದ್ಧತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಅನುಶಾಸನವೇ ಇರಬಹುದು. ಇಂತಹ ಅನೇಕ ಪ್ರಕಾರದ ನಿಯಮಗಳನ್ನು ಕರ್ತವ್ಯ ಬುದ್ಧಿಯಿಂದ ಪೂರ್ಣಪಾಲನೆ ಮಾಡಬೇಕು. ನಿಯಮ ಹಾಗೂ ಕಾನೂನುಗಳ ಪಾಲನೆಯನ್ನು ಅಕ್ಷರಶಃ ಹಾಗೂ ಭಾವಶಃ ಕೈಗೊಳ್ಳಬೇಕು. ಇದೆಲ್ಲವೂ ಸರಿಯಾದ ರೀತಿಯಲ್ಲಿ ನಡೆಯಲಿ ಎಂಬ ಕಾರಣಕ್ಕೆ ವಿಶೇಷವಾಗಿ ಸಂವಿಧಾನದ ನಾಲ್ಕು ವಿಚಾರಗಳ ಮಾಹಿತಿ – ಸಂವಿಧಾನದ ಪೀಠಿಕೆ, ರಾಜ್ಯನೀತಿಯ ನಿರ್ದೇಶಕ ತತ್ತ್ವಗಳು, ನಾಗರಿಕ ಕರ್ತವ್ಯಗಳು ಹಾಗೂ ನಾಗರಿಕ ಹಕ್ಕುಗಳು – ಇವುಗಳ ಕುರಿತು ಜಾಗೃತಿ ಕಾರ್ಯವು ಎಲ್ಲೆಡೆ ನಡೆಯುತ್ತಿರಬೇಕು. ಕುಟುಂಬದಿಂದ ದೊರಕಿದ ಪರಸ್ಪರ ನಡವಳಿಕೆಗಳ ಅನುಶಾಸನ, ಪರಸ್ಪರ ವ್ಯವಹಾರಗಳಲ್ಲಿ ಶುಭಾಕಾಂಕ್ಷೆ, ಸದ್ಭಾವನೆ, ಭದ್ರತೆ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ದೇಶಭಕ್ತಿ, ಸಮಾಜದ ಕುರಿತು ಆತ್ಮೀಯತೆಯ ಜತೆಗೆ ಕಾನೂನು, ಸಂವಿಧಾನಗಳ ಪಾಲನೆ ಎಲ್ಲವನ್ನೂ ಒಳಗೊಂಡು ವ್ಯಕ್ತಿಯ ವೈಯಕ್ತಿಕ ಹಾಗೂ ರಾಷ್ಟ್ರೀಯ ಚಾರಿತ್ರ‍್ಯ ನಿರ್ಮಾಣವಾಗುತ್ತದೆ. ದೇಶದ ಸುರಕ್ಷತೆ, ಏಕಾತ್ಮತೆ, ಅಖಂಡತೆ ಹಾಗೂ ವಿಕಾಸವನ್ನು ಸಾಧಿಸಲು ಚಾರಿತ್ರ‍್ಯದ ಈ ಎರಡು ಮುಖಗಳು ದೋಷರಹಿತ ಹಾಗೂ ಸಂಪೂರ್ಣವಾಗುವುದು ಅತ್ಯಂತ ಮಹತ್ವಪೂರ್ಣ ವಿಚಾರ. ವೈಯಕ್ತಿಕ ಹಾಗೂ ಸಾಮಾಜಿಕ ಚಾರಿತ್ರ‍್ಯ ಸಾಧನೆಯ ಈ ಮಾರ್ಗದಲ್ಲಿ ನಾವೆಲ್ಲರೂ ಜಾಗ್ರತೆಯಿಂದಿರಬೇಕು ಹಾಗೂ ನಿರಂತರತೆಯನ್ನು ಕಾಯ್ದುಕೊಳ್ಳಬೇಕು.


ಸ್ವ ಗೌರವ
ಇದೆಲ್ಲ ಆಚರಣೆಗಳೂ ಸತತವಾಗಿ ನಡೆಯುತ್ತಿರಲು ಆಂತರ್ಯದಿಂದ ಪ್ರೇರಣೆಯ ಅವಶ್ಯಕತೆಯಿರುತ್ತದೆ, ಅದೇ ʼಸ್ವ ಗೌರವʼದ ಪ್ರೇರಣೆ. ನಾವು ಯಾರು? ನಮ್ಮ ಪರಂಪರೆಯೇನು? ನಮ್ಮ ಗಂತವ್ಯ (ಗುರಿ) ಯಾವುದು? ಭಾರತೀಯರಾದ ನಮ್ಮಲ್ಲಿ ಎಲ್ಲ ವಿವಿಧತೆಗಳ ತರುವಾಯುವೂ ಒಂದು ಬೃಹತ್ತಾದ, ಎಲ್ಲರನ್ನೂ ಒಳಗೊಳ್ಳುವ, ಪ್ರಾಚೀನಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಮಾನವೀಯ ಗುರುತೊಂದು ದೊರಕಿದೆ, ಇದರ ಸ್ಪಷ್ಟ ಸ್ವರೂಪ ಯಾವುದು? ಇದೆಲ್ಲದರ ಕುರಿತು ಅರಿವು ಇರುವುದು ಎಲ್ಲರಿಗೂ ಅಗತ್ಯವಾಗಿದೆ. ಈ ಗುರುತಿನ ಉಜ್ವಲ ಗುಣಗಳನ್ನು ಧಾರಣೆ ಮಾಡುತ್ತಾ ಅದರ ಕುರಿತು ಗೌರವವು ಮನಸ್ಸು ಮತ್ತು ಬುದ್ಧಿಯಲ್ಲಿ ನೆಲೆಗೊಳ್ಳುತ್ತದೆ. ಇದರ ಆಧಾರದಲ್ಲಿ ಸ್ವಾಭಿಮಾನ ಪ್ರಾಪ್ತಿಯಾಗುತ್ತದೆ. ಸ್ವಗೌರವದ ಕುರಿತು ಪ್ರೇರಣೆಯ ಬಲವೇ ಜಗತ್ತಿನಲ್ಲಿ ನಮ್ಮ ಉನ್ನತಿ ಹಾಗೂ ಸ್ವಾವಲಂಬನೆಯ ಕಾರಣವಾಗುವ ನಡವಳಿಕೆಯನ್ನು ರೂಪಿಸುತ್ತದೆ. ಇದನ್ನೇ ನಾವು ‘ಸ್ವದೇಶಿ’ ಎನ್ನುತ್ತೇವೆ. ದೈನಂದಿನ ಸಮಾಜಜೀವನದಲ್ಲಿ ವ್ಯಕ್ತಿಗಳು ಕೈಗೊಳ್ಳುವ ಸ್ವದೇಶಿ ನಡವಳಿಕೆಯ ಆಧಾರದಲ್ಲಿ ರಾಷ್ಟ್ರೀಯ ನೀತಿಯಲ್ಲಿ ಸ್ವದೇಶಿಯ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಇದನ್ನೇ ಸ್ವದೇಶಿ ಆಚರಣೆ ಎನ್ನಲಾಗುತ್ತದೆ. ಮನೆಯಲ್ಲಿ ತಯಾರಾಗುವ ವಸ್ತುಗಳನ್ನು ಹೊರಗಿನಿಂದ ಖರೀದಿಸಬಾರದು. ನಮ್ಮ ದೇಶದಲ್ಲಿ ಉದ್ಯೋಗ ಕ್ಷೇತ್ರವು ಉಳಿದು ಉನ್ನತಿಯಾಗುವಷ್ಟು ಪ್ರಮಾಣದಲ್ಲಿ, ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಮನೆಗೆ ಖರೀದಿಸಬೇಕು. ದೇಶದಲ್ಲೇ ತಯಾರಾಗುವ ಉತ್ಪನ್ನಗಳನ್ನು ವಿದೇಶದಿಂದ ಖರೀದಿಸಬಾರದು. ದೇಶದಲ್ಲಿ ಯಾವ ವಸ್ತು ತಯಾರಾಗುವುದಿಲ್ಲವೋ ಅದರ ಹೊರತಾಗಿಯೇ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಯಾವ ವಸ್ತುವಿನಿಂದ ಜೀವನ ನಿರ್ವಹಣೆಯೇ ಸಾಧ್ಯವಿಲ್ಲವೋ ಅಂತಹ ವಸ್ತುಗಳನ್ನು ಮಾತ್ರ ವಿದೇಶದಿಂದ ಖರೀದಿಸಬೇಕು. ಮನೆಯಲ್ಲಿ ಭಾಷೆ, ಭೂಷಾ (ಉಡುಪು), ಭಜನೆ, ಭವನ, ಭ್ರಮಣ (ಪ್ರವಾಸ) ಹಾಗೂ ಭೋಜನ ಎಲ್ಲವೂ ನಮ್ಮದೇ ಇರಲಿ, ನಮ್ಮ ಪರಂಪರೆಯದ್ದೇ ಇರಲಿ ಎನ್ನುವ ಅರಿವು ಇರಿಸಿಕೊಳ್ಳುವುದನ್ನು ಒಟ್ಟಾರೆಯಾಗಿ ಸ್ವದೇಶಿ ವ್ಯವಹಾರ ಎನ್ನಬಹುದು. ಎಲ್ಲ ಕ್ಷೇತ್ರಗಳಲ್ಲೂ ದೇಶವನ್ನು ಸ್ವಾವಲಂಬಿಯಾಗಿಸುವುದು ಸ್ವದೇಶಿ ವ್ಯವಹಾರವನ್ನು ಸರಳವಾಗಿಸುತ್ತದೆ. ಆದ್ಧರಿಂದಲೇ ಸ್ವತಂತ್ರ ದೇಶದ ನೀತಿಗಳಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ಪರಿಣಾಮಕಾರಿ ಸಾಧನಗಳನ್ನು ಜೋಡಿಸಿಕೊಳ್ಳಬೇಕು ಹಾಗೂ ಜತೆಗೆ ಪ್ರಯತ್ನಪೂರ್ವಕವಾಗಿ ಸ್ವದೇಶಿ ವ್ಯವಹಾರವನ್ನು ಜೀವನ ಹಾಗೂ ಸ್ವಭಾವದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು.


ಮನಸ್ಸು-ಮಾತು-ಕ್ರಿಯೆಯ ವಿವೇಕ
ರಾಷ್ಟ್ರೀಯ ಚಾರಿತ್ರ‍್ಯಕ್ಕೆ ಸಂಬಂಧಿಸಿ ವ್ಯಾವಹಾರಿಕವಾದ ಒಂದು ಮಹತ್ವಪೂರ್ಣ ಅಂಶವೊಂದಿದೆ. ಅದೇನೆಂದರೆ ಯಾವುದೇ ಪ್ರಕಾರದ ಅತಿವಾದ ಹಾಗೂ ಕಾನೂನುಬಾಹಿರ ಪದ್ಧತಿಯಿಂದ ನಾವು ದೂರ ಇರುವುದು. ನಮ್ಮ ದೇಶವು ವಿವಿಧತೆಯಿಂದ ಕೂಡಿದೆ. ಅವುಗಳನ್ನು ನಾವು ಭಿನ್ನತೆ ಎಂದು ಭಾವಿಸುವುದಿಲ್ಲ, ಯಾರೂ ಭಾವಿಸಬಾರದು. ನಮ್ಮ ವಿವಿಧತೆಯು ಸೃಷ್ಟಿಯ ಸ್ವಾಭಾವಿಕ ವಿಶಿಷ್ಟತೆಯಾಗಿದೆ. ಇಷ್ಟೊಂದು ಪ್ರಾಚೀನ ಇತಿಹಾಸವಿರುವ, ವಿಶಾಲ ಭೂಪ್ರದೇಶವಿರುವ ಹಾಗೂ ಅಪಾರ ಜನಸಂಖ್ಯೆಯುಳ್ಳ ದೇಶದಲ್ಲಿ ಇಷ್ಟೊಂದು ವೈಶಿಷ್ಟ್ಯಗಳಿರುವುದು ಅತ್ಯಂತ ಸ್ವಾಭಾವಿಕವಾಗಿದೆ. ತಮ್ಮ ತಮ್ಮ ವಿಶಿಷ್ಟತೆಗಳ ಕುರಿತು ಗೌರವ ಹಾಗೂ ಅವುಗಳ ಕುರಿತು ತಮ್ಮ ತಮ್ಮ ಸಂವೇದನೆಯನ್ನು ಹೊಂದುವುದೂ ಸ್ವಾಭಾವಿಕವೇ ಆಗಿದೆ. ಈ ವಿವಿಧತೆಯ ಆಧಾರಿತವಾಗಿ ಸಮಾಜ ಜೀವನದಲ್ಲಿ ಹಾಗೂ ದೇಶದಲ್ಲಿ ನಡೆಯುವ ಎಲ್ಲ ಆಚರಣೆಗಳು ಹಾಗೂ ಮಾತುಗಳು ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಅನುಕೂಲಕರ ಅಥವಾ ಎಲ್ಲರನ್ನೂ ಸಂತೋಷಗೊಳಿಸುವುದೇ ಆಗಿರುತ್ತವೆ ಎಂದು ಹೇಳಲಾಗುವುದಿಲ್ಲ. ಎಲ್ಲ ವಿವಾದಗಳೂ ಯಾವುದೋ ಒಂದೇ ಸಮಾಜದಿಂದಲೇ ಆಗುತ್ತವೆ ಎನ್ನುವಂತೆಯೂ ಇಲ್ಲ. ಇವುಗಳಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಾನೂನನ್ನು ಗಾಳಿಗೆ ತೂರುತ್ತಾ ಕಾನೂನುಬಾಹಿರ ಹಾಗೂ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿ ತೊಂದರೆಯನ್ನು ಉಂಟುಮಾಡುವುದು, ಸಮಾಜದ ಒಂದು ವರ್ಗವನ್ನು ಘಟನೆಗೆ ಸಂಪೂರ್ಣ ಹೊಣೆಗಾರನನ್ನಾಗಿ ಮಾಡುವುದು, ಮನಸ್ಸು, ಮಾತು ಹಾಗೂ ಕ್ರಿಯೆಯಲ್ಲಿ ಮಿತಿಮೀರಿ ವರ್ತಿಸುವುದು ದೇಶದ ಹಿತದೃಷ್ಟಿಯಿಂದ, ದೇಶದಲ್ಲಿ ವಾಸಿಸುವ ಎಲ್ಲರ ಹಿತದೃಷ್ಟಿಯಿಂದ ಅಪೇಕ್ಷಿತವೂ ಅಲ್ಲ ಹಿತಕಾರಿಯೂ ಅಲ್ಲ. ಸಹಿಷ್ಣುತೆ ಹಾಗೂ ಸದ್ಭಾವನೆಯು ಭಾರತದ ಪರಂಪರೆ. ಅಸಹಿಷ್ಣುತೆ ಹಾಗೂ ದುರ್ಭಾವನೆಯು ಭಾರತ ವಿರೋಧಿ ಹಾಗೂ ಮಾನವ ವಿರೋಧಿ ದುರ್ಗುಣವಾಗಿದೆ. ಆದ್ದರಿಂದ, ಪ್ರಕ್ಷುಬ್ಧತೆ ಯಾವುದೇ ಪ್ರಮಾಣದಲ್ಲಿರಲಿ ಇಂತಹ ಅತಿವರ್ತನೆಗಳಿಂದ ನಮ್ಮನ್ನೂ ಹಾಗೂ ನಮ್ಮವರನ್ನೂ ದೂರವಿರಿಸಿಕೊಳ್ಳಬೇಕಿದೆ. ನಮ್ಮ ಮನಸ್ಸು, ಮಾತು ಹಾಗೂ ಕ್ರಿಯೆಗಳಿಂದ ಯಾರದ್ದೇ ಶ್ರದ್ಧೆಯ, ಶ್ರದ್ಧಾಕೇಂದ್ರಗಳ, ಮಹಾಪುರುಷರ, ಗ್ರಂಥಗಳ, ಅವತಾರಗಳ, ಸಂತರ ಮುಂತಾದ ಅಂಶಗಳ ಅಪಮಾನ ಆಗದೇ ಇರುವಂತೆ ವೈಯಕ್ತಿಕ ಆಚರಣೆಯ ಮೇಲೆ ಜಾಗರೂಕತೆ ವಹಿಸಬೇಕು. ದೌರ್ಭಾಗ್ಯವಶಾತ್ ಬೇರೆ ಯಾರಾದರೂ ಇಂತಹ ಕೃತ್ಯ ಎಸಗಿದರೂ ನಮ್ಮ ಮೇಲೆ ನಿಯಂತ್ರಣವನ್ನು ಹೊಂದಿಯೇ ನಡೆಯಬೇಕು. ಎಲ್ಲ ಮಾತುಗಳನ್ನೂ ಮೀರಿ, ಎಲ್ಲ ಮಾತುಗಳ ಆಚೆಗೂ ಮಹತ್ವದ ವಿಚಾರಗಳೆಂದರೆ ಸಮಾಜದ ಏಕಾತ್ಮಕತೆ, ಸದ್ಭಾವ ಹಾಗೂ ಸದ್‌ವ್ಯವಹಾರಗಳೇ ಆಗಿವೆ. ಇದು ಯಾವುದೇ ಕಾಲದಲ್ಲಾಗಲಿ, ಯಾವುದೇ ರಾಷ್ಟ್ರದಲ್ಲಾಗಲಿ ಪರಮಸತ್ಯ ಹಾಗೂ ಮನುಷ್ಯನ ಸುಖಮಯ ಅಸ್ತಿತ್ವ ಮತ್ತು ಸಹಜೀವನಕ್ಕಾಗಿ ಏಕಮಾತ್ರ ಮಾರ್ಗವಾಗಿದೆ.


ಸಮಗ್ರ ಶಕ್ತಿ ಹಾಗೂ ಶುದ್ಧ ಶೀಲವೇ ಶಾಂತಿ ಹಾಗೂ ಉನ್ನತಿಯ ಆಧಾರ
ಆದರೆ ಆಧುನಿಕ ಜಗತ್ತಿನ ರೀತಿ ಹೇಗಿದೆಯೆಂದರೆ ಸತ್ಯವನ್ನು ಸತ್ಯದ ಮೌಲ್ಯದ ಆಧಾರದಲ್ಲಿ ಸ್ವೀಕರಿಸುವುದಿಲ್ಲ. ಜಗತ್ತು ಶಕ್ತಿಯನ್ನು ಒಪ್ಪುತ್ತದೆ. ಭಾರತವು ಶಕ್ತಿಶಾಲಿಯಾಗುವುದರಿಂದ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಸದ್ಭಾವನೆ ಹಾಗೂ ಸಮತೋಲನ ರೂಪುಗೊಂಡು ಶಾಂತಿ ಮತ್ತು ಬಂಧುತ್ವದ ಕಡೆಗೆ ವಿಶ್ವ ಮುನ್ನಡೆಯುತ್ತದೆ. ಈ ವಿಚಾರವನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಬಲ್ಲವು. ಆದರೂ ತಮ್ಮ ವೈಯಕ್ತಿಕ ಸ್ವಾರ್ಥ ಹಾಗೂ ಅಹಂಕಾರ ಅಥವಾ ಧ್ವೇಷವನ್ನೇ ಮೊದಲುಮಾಡಿಕೊಂಡು ಭಾರತವನ್ನು ಒಂದು ಸೀಮಿತತೆಗೆ ಕಟ್ಟಿಹಾಕುವ ಶಕ್ತಿಶಾಲಿ ದೇಶಗಳ ಕುಚೇಷ್ಟೆಯನ್ನು ನಾವೆಲ್ಲರೂ ಬಲ್ಲೆವು. ಭಾರತವರ್ಷದ ಶಕ್ತಿ ಎಷ್ಟು ಹೆಚ್ಚುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಭಾರತವರ್ಷದ ಸ್ವೀಕಾರಾರ್ಹತೆಯೂ ಉಳಿಯುತ್ತದೆ.


‘ಬಲಹೀನರನ್ನು ಯಾರೂ ಲೆಕ್ಕಿಸುವುದಿಲ್ಲ, ಬಲವಾನರನ್ನೇ ವಿಶ್ವವು ಲಕ್ಷಿಸುತ್ತದೆ’ (ಬಲಹೀನೋಂ ಕೋ ನಹೀ ಪೂಛತಾ ಬಲವಾನೋಂ ಕೋ ವಿಶ್ವ ಪೂಜತಾ) ಎನ್ನುವುದು ಈಗಿನ ಜಗತ್ತಿನ ರೀತಿನೀತಿ. ಆದ್ಧರಿಂದ ಈಗಾಗಲೆ ತಿಳಿಸಿದಂತೆ ಸದ್ಭಾವ ಹಾಗೂ ಸಂಯಮಪೂರ್ಣ ವಾತಾರಣದ ಸ್ಥಾಪನೆಗಾಗಿ ಸಜ್ಜನರು ಶಕ್ತಿಸಂಪನ್ನರಾಗಬೇಕು. ಶಕ್ತಿಯು ಯಾವಾಗ ಶೀಲಸಂಪನ್ನವಾಗುತ್ತದೆಯೋ ಆಗ ಅದು ಶಾಂತಿಯ ಆಧಾರವಾಗುತ್ತದೆ. ದುರ್ಜನರು ಸ್ಚಾರ್ಥಕ್ಕಾಗಿ ಸಂಘಟಿತರಾಗಿರುತ್ತಾರೆ. ಅವರ ನಿಯಂತ್ರಣವನ್ನು ಶಕ್ತಿಶಾಲಿಗಳು ಮಾತ್ರವೇ ಮಾಡಬಲ್ಲರು. ಸಜ್ಜನರು ಎಲ್ಲರಲ್ಲೂ ಸದ್ಭಾವನೆಯನ್ನು ಹೊಂದಿರುತ್ತಾರಾದರೂ ಸಂಘಟಿತರಾಗುವುದನ್ನು ತಿಳಿದಿಲ್ಲ. ಆದ್ದರಿಂದಲೇ ಅವರು ದುರ್ಬಲರಂತೆ ಕಾಣುತ್ತಾರೆ. ಸಜ್ಜನರು ಈ ಸಂಘಟಿತ ಸಾಮರ್ಥ್ಯ ನಿರ್ಮಾಣದ ಕಲೆಯನ್ನು ಕಲಿಯಬೇಕಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಸಮಾಜದ ಇದೇ ಶೀಲಸಂಪನ್ನ ಶಕ್ತಿಸಾಧನೆಯ ಹೆಸರಾಗಿದೆ. ಈ ಭಾಷಣದಲ್ಲಿ ಉಲ್ಲೇಖಿಸಿರುವ ಸದ್‌ವ್ಯವಹಾರಗಳ ಐದು ಅಂಶಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಸಜ್ಜನರನ್ನು ಜೋಡಿಸುವ ಕೆಲಸವನ್ನು ಸಂಘದ ಸ್ವಯಂಸೇವಕರು ಮಾಡುತ್ತಿದ್ದಾರೆ. ಭಾರತದ ಏಳಿಗೆಯನ್ನು ಸಹಿಸದವರು, ತಮ್ಮ ಸ್ವಾರ್ಥಕ್ಕಾಗಿ ಭಾರತ ವಿರೋಧಿಗಳ ಜತೆಗೆ ಕೈಜೋಡಿಸುವವರು ಹಾಗೂ ಸ್ವಭಾವತಃ ವೈರತ್ವ ಮತ್ತು ದ್ವೇಷಸಾಧನೆಯಲ್ಲೇ ಅನಂದವನ್ನು ಹೊಂದುವವರಂತಹ ಶಕ್ತಿಗಳಿಂದ ರಕ್ಷಿಸಿಕೊಂಡು ದೇಶವು ಮುನ್ನಡೆಯಬೇಕಾಗಿದೆ. ಆದ್ದರಿಂದಲೇ ಶೀಲಸಂಪನ್ನ ನಡವಳಿಕೆಯ ಜತೆಗೇ ಶಕ್ತಿಸಾಧನೆಯೂ ಮಹತ್ವಪೂರ್ಣವಾಗಿದೆ. ಆದ್ದರಿಂದಲೇ ಸಂಘದ ಪ್ರಾರ್ಥನೆಯಲ್ಲಿ, ಯಾರೂ ಪರಾಜಯಗೊಳಿಸಲು ಸಾಧ್ಯವಾಗದಂತಹ ಶಕ್ತಿ ಮತ್ತು ವಿಶ್ವವೇ ವಿನಮ್ರವಾಗುವಂತಹ ಶೀಲವನ್ನು ನೀಡು ಎಂದು ಭಗವಂತನಲ್ಲಿ ಕೇಳುತ್ತೇವೆ. ಪರಿಸ್ಥಿತಿ ಎಷ್ಟೇ ಅನುಕೂಲಕರವಾಗಿರಲಿ, ವಿಶ್ವದ ಹಾಗೂ ಮಾನವತೆಯ ಕಲ್ಯಾಣ ಕಾರ್ಯವು ಈ ಎರಡು ಗುಣಗಳಿಲ್ಲದೆ ಈಡೇರುವುದಿಲ್ಲ. ಎಲ್ಲ ದೇವತೆಗಳೂ ಒಂಭತ್ತು ಅಹೋರಾತ್ರಿ ಜಾಗರಣೆ ಮಾಡುತ್ತ ತಮ್ಮ ತಮ್ಮ ಶಕ್ತಿಗಳನ್ನೂ ಸಂಘಟಿತಗೊಳಿಸಿದಾಗಲೇ ಶೀಲಸಂಪನ್ನ ಸಹಿತ ಶಕ್ತಿಯಿಂದ ಚಿನ್ಮಯೀ ಜಗದಂಬೆ ಎಚ್ಚರಗೊಂಡು ದುಷ್ಟರ ಸಂಹಾರವಾಯಿತು, ಸಜ್ಜನರ ರಕ್ಷಣೆಯಾಯಿತು, ವಿಶ್ವದ ಕಲ್ಯಾಣವಾಯಿತು. ಇದೇ ವಿಶ್ವ ಮಂಗಲ ಕಾರ್ಯದಲ್ಲಿ ಮೌನಪೂಜಾರಿಯಾಗಿ ಸಂಘವು ತೊಡಗಿಸಿಕೊಂಡಿದೆ. ಇದೇ ಕಾರ್ಯವು ನಮ್ಮ ಪವಿತ್ರ ಮಾತೃಭೂಮಿಯನ್ನು ಪರಮವೈಭವಸಂಪನ್ನವಾಗಿಸುವ ಶಕ್ತಿ ಹಾಗೂ ಸಫಲತೆಯನ್ನು ನಮಗೆ ನೀಡುತ್ತದೆ. ಇದೇ ಕಾರ್ಯದಿಂದ ವಿಶ್ವದ ಎಲ್ಲ ರಾಷ್ಟçಗಳೂ ತಮ್ಮ ತಮ್ಮ ಏಳಿಗೆಯನ್ನು ಸಾಧಿಸುತ್ತ ಹೊಸ, ಸುಖ-ಶಾಂತಿ ಹಾಗೂ ಸದ್ಭಾವನೆಯುಕ್ತ ವಿಶ್ವವನ್ನು ನಿರ್ಮಿಸಲು ತಮ್ಮ ಕೊಡುಗೆಯನ್ನು ನೀಡಲಿವೆ. ಈ ಕಾರ್ಯಕ್ಕಾಗಿ ನಿಮಗೆಲ್ಲರಿಗೂ ಇದೋ ಆತ್ಮೀಯ ಆಮಂತ್ರಣ.
ಹಿಂದೂ ಭೂಮಿ ಕಾ ಕಣ್ ಕಣ್ ಹೋ ಅಬ್, ಶಕ್ತಿ ಕಾ ಅವತಾರ್ ಉಠೇ,
ಜಲ್ ಥಲ್ ಸೇ ಅಂಬರ್ ಸೇ ಫಿರ್, ಹಿಂದೂ ಕೀ ಜಯ ಜಯ ಕಾರ್ ಉಠೇ,
ಜಗಜನನೀ ಕಾ ಜಯಕಾರ್ ಉಠೇ
(ಹಿಂದೂ ಭೂಮಿಯ ಕಣಕಣದಲ್ಲೂ, ಶಕ್ತಿಯು ಅವತರಿಸಲಿ, ನೆಲ ಜಲ ಆಗಸದಿಂದ, ಹಿಂದೂ ಜಯಘೋಷ ಮೊಳಗಲಿ, ವಿಶ್ವಮಾತೆಯ ಜಯಘೋಷ ಮೊಳಗಲಿ.)

ಭಾರತ್ ಮಾತಾ ಕೀ ಜಯ್

Leave a Reply

Your email address will not be published.

This site uses Akismet to reduce spam. Learn how your comment data is processed.