ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಮನುಷ್ಯರು ಶರವೇಗದ ಸಾಧನೆಗೈಯುತ್ತಿದ್ದಾರೆ. ಇದು ಒಂದು ರೀತಿ ಒಳ್ಳೆಯ ಬದಲಾವಣೆಯಾದರೂ, ಮಾಲಿನ್ಯ , ಕಲುಷಿತ ನೀರು ಹಾಗೂ ಆಹಾರ ಇವುಗಳಿಂದ ನಮ್ಮೆಲ್ಲರ ಸಾಧನೆಗಳು ಶೂನ್ಯವಾಗುತ್ತಿದೆ. ಏಕೆಂದರೆ ನಮಗೆ ಉಸಿರಾಡಲು ಶುದ್ಧ ಗಾಳಿ ಇಲ್ಲ, ಶುಚಿಯಾಗಿ ಸಿಗುವ ನೀರು ತುಂಬಾ ವಿರಳ, ಇದೆಲ್ಲದರ ನಡುವೆ ಆಹಾರ ದಿನದಿಂದ ದಿನಕ್ಕೆ ಕಲಬೆರಕೆಯಾಗುತ್ತಿದೆ. ಆಹಾರ ಎನ್ನುವುದು ಮನುಷ್ಯನ ಜೀವಿತ ಅವಧಿಯಲ್ಲಿ ಅತಿ ಮುಖ್ಯ. ಜೊತೆಗೆ ಆರೋಗ್ಯಕರವಾದ ಆಹಾರ ಸೇವೆನೆಯೂ ಕೂಡ ಅಷ್ಟೇ ಅಗತ್ಯವಾಗಿದೆ.
ಜಗತ್ತಿನಲ್ಲಿ ಅದೆಷ್ಟೋ ಮಂದಿ ಒಂದು ಹೊತ್ತಿನ ಊಟವಿಲ್ಲದೆ ಹಸಿವಿನಿಂದ ನರಳುತ್ತಿದ್ದಾರೆ. ಹೀಗಾಗಿ ಜಾಗತಿಕ ಹಸಿವನ್ನು ಪರಿಹರಿಸಲು ಮತ್ತು ವಿಶ್ವದಾದ್ಯಂತ ಹಸಿವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವೆಂದು ಆಚರಿಸಲಾಗುತ್ತಿದೆ. ಈ ದಿನವು ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ ಸ್ಥಾಪನೆಯ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. ಪ್ರಪಂಚದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ.
ಇತಿಹಾಸ
ವಿಶ್ವ ಆಹಾರ ದಿನವನ್ನು 1945ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಸ್ಥಾಪಿಸಿದ ದಿನಾಂಕದ ನೆನಪಿಗಾಗಿ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಎಫ್ಎಒ ವಿಶ್ವಸಂಸ್ಥೆಯ ವಿಶ್ವದಾದ್ಯಂತ ಪೌಷ್ಠಿಕಾಂಶ ಮತ್ತು ಆಹಾರ ಭದ್ರತೆಯನ್ನು ಕಾಪಾಡುವ ಕೆಲಸವನ್ನು ನಿರ್ವಹಿಸುತ್ತದೆ.
1979ರ ನವೆಂಬರ್ ನಲ್ಲಿ ಹಂಗೇರಿಯಾದ ಆಹಾರ ಮತ್ತು ಕೃಷಿಯ ಮಾಜಿ ಮಂತ್ರಿ ಡಾ.ಪಾಲ್ ರೋಮನಿ ಅವರು ವಿಶ್ವ ಆಹಾರ ದಿನವನ್ನು ಆರಂಭಿಸಿದರು. ನಂತರದಲ್ಲಿ ವಿಶ್ವದಾದ್ಯಂತ ಇದು ಪಸರಿಸಿ, ಹಸಿವು, ಪೌಷ್ಠಿಕಾಂಶದ ಕೊರತೆ, ಆಹಾರ ಉತ್ಪಾದನೆ ಮೊದಲಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ದಿನವಾಗಿ ಇದು ಬದಲಾಯಿತು. ಈ ದಿನವನ್ನು 150 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತದೆ.
ಮಹತ್ವ
• ಇಂದಿನ ದಿನಗಳಲ್ಲಿ ಸಾಕಷ್ಟು ಬಡ ಜನರು ತಿನ್ನುವುದಕ್ಕೆ ಅನ್ನವಿಲ್ಲದೆ ಹಸಿವಿನಿಂದ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಅದರಲ್ಲೂ ಅಪೌಷ್ಟಿಕ ಆಹಾರದಿಂದ ಹೆಣಗಾಡುತ್ತಿದ್ದು, ಜೀವನದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ ಸಹಾಯಕವಾಗಿದೆ.
• ಅಪೌಷ್ಟಿಕತೆ ಮತ್ತು ಸ್ಥೂಲಕಾಯತೆಯ ಬಗ್ಗೆ ಜನರಿಗೆ ಶಿಕ್ಷಣದ ಮೂಲಕ ತಿಳಿಸಲು ಈ ದಿನ ಸೂಕ್ತವಾಗಿದೆ.
• ವಿಶ್ವದಲ್ಲಿ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟು, ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಈ ದಿನ ವೇದಿಕೆಯಾಗಿ ಕಲ್ಪಿಸಲಾಗುತ್ತದೆ.
• ಪ್ರತಿಯೊಬ್ಬರಿಗೂ ಸಾಕಷ್ಟು ಪೌಷ್ಟಿಕ ಆಹಾರದ ಲಭ್ಯತೆಯನ್ನು ಪಡೆದುಕೊಳ್ಳುವ ಬಗ್ಗೆ ಅವರಿಗೆ ಸಹಾಯವಾಗುವ ರೀತಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
• ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಮೂಲಕ ರೈತರನ್ನು ಪ್ರೋತ್ಸಾಹಿಸುವ ಕುರಿತು ಕಾರ್ಯಕ್ರಮಗಳ ಆಯೋಜನೆ.
• ರೈತರಿಗೆ ಆಹಾರ ಬೆಳೆಯ ಉತ್ಪಾದನೆಗೆ ಹೆಚ್ಚು ಬಂಡವಾಳ ಕುರಿತು ಮಾಹಿತಿ ನೀಡಲು ಸಹಾಯಕವಾಗಿದೆ.