ಬೆಂಗಳೂರು: ವೇದ ಕಾಲದಿಂದಲೂ ನಾವು ಭೂಮಿಗೆ ತಾಯಿಯ ಸ್ಥಾನ ನೀಡಿದ್ದೇವೆ. ಪ್ರಭು ಶ್ರೀ ರಾಮಚಂದ್ರನೇ ನುಡಿದಂತೆ ‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೆ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬುದು ಈ ನಾಡಿನ ಜನರ ಭಾವನೆ. ಭೂಮಿಯನ್ನು ಜಗಜನನಿ, ಜನ್ಮಭೂಮಿ ಎಂದು ಕರೆದವರು ನಾವು. ಇದನ್ನೇ ಮೂಲಮಂತ್ರವಾಗಿಸಿಕೊಂಡ ಬಂಕಿಮಚಂದ್ರ ಚಟರ್ಜಿ ವಂದೇಮಾತರಂ ಕವಿತೆಯೂ ಸ್ವಾತಂತ್ರ್ಯ ಹೋರಾಟದ ವಿಜಯದಲ್ಲಿ ರಣಮಂತ್ರವನ್ನಾಗಿ ಪರಿಣಮಿಸಿತು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕ ಹೊಯ್ಸಳ ಪ್ರಾಂತದ ಕಾರ್ಯವಾಹಿಕ ವಸಂತಾಸ್ವಾಮಿ ಅವರು ಹೇಳಿದರು.

ರಾಷ್ಟ್ರ ಸೇವಿಕಾ ಸಮಿತಿ, ಬೆಂಗಳೂರು ದಕ್ಷಿಣ ವಿಭಾಗದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಮಾರತಹಳ್ಳಿಯಲ್ಲಿ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಕುಂದಲಹಳ್ಳಿಯ ರಾಷ್ಟ್ರೋತ್ಥಾನ ಅರೋಗ್ಯ ಸಂಕೀರ್ಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣವನ್ನು ಮಾಡಿದರು.

ತಾಯಿ ಭಾರತಿಯನ್ನು ವಂದೇ ಮಾತರಂ ಗೀತೆಯಲ್ಲಿ ದಶಪ್ರಹರಿಣಿಯಾದ ದುರ್ಗೆಯಾಗಿ, ಲಕ್ಷ್ಮೀಯಾಗಿ, ಸರಸ್ವತಿಯಾಗಿ ಕಾಣುತ್ತೇವೆ. ಮೇಡಂ ಕಾಮ, ಸೋದರಿ ನಿವೇದಿತಾರಂತಹ ಸ್ತ್ರೀ ಸ್ವಾತಂತ್ರ್ಯ ಹೋರಾಟಗಾರರೂ ಇದರಿಂದ ಪ್ರೇರಣೆಪಡೆದಿದ್ದಾರೆ. ಪ್ರಸ್ತುತ ಸಮಯದಲ್ಲೂ ಭಾರತದಲ್ಲಿ ದೇಶ ಒಡೆಯುವ ಪಿತೂರಿ ನಡೆಯುತ್ತಿದೆ ಅದಕ್ಕಾಗಿ ನಾವು ಈ ರಣಮಂತ್ರದಿಂದ ಪ್ರೇರಣೆ ಪಡೆದು ಜಾಗೃತರಾಗಬೇಕು, ಸಂಘಟಿತರಾಗಬೇಕು. ಯಾವ ಉದ್ದೇಶದಿಂದ ಈ ರಣಮಂತ್ರ ರಚನೆಯಾಯಿತೋ ಅದಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದು ನುಡಿದರು.

ಸಭಾ ಕಾರ್ಯಕ್ರಮದ ನಂತರ ಕುಂದನಹಳ್ಳಿಯ ಆಯ್ದ ಕೆಲವು ರಸ್ತೆಗಳಲ್ಲಿ ಸಮಿತಿಯ ಸೇವಿಕೆಯರಿಂದ ಆಕರ್ಷಕ ಪಥಸಂಚಲನ ನಡೆಯಿತು. 300 ಗಣವೇಷಧಾರಿ ಸ್ವಯಂಸೇವಿಕೆಯರು ಪಥಸಂಚಲನದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಪ್ರಾಂತ ಸೇವಾ ಪ್ರಮುಖ್ ಜಯಾ ಭಟ್, ಪ್ರಾಂತ ತರುಣಿ ಪ್ರಮುಖ್ ಸುಮಂಗಲ ಬಾಪಟ್, ಪ್ರಾಂತ ಪ್ರಚಾರ ಪ್ರಮುಖ್ ಮೇಘಾ ಪ್ರಮೋದ್, ಪ್ರಾಂತ ಮಾರ್ಗದರ್ಶಕ ಮಂಡಳಿ ಸದಸ್ಯರಾದ ಸುಧಾಮೂರ್ತಿ ಹಾಗೂ ಶಾರದಾ ವಿ. ಮೂರ್ತಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗ ಕಾರ್ಯವಾಹಿಕಾ ಛಾಯಾ ರಂಗನಾಥ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.