ಇಂದು ಜಯಂತಿ
ಸರ್ ಮಿರ್ಜಾ ಇಸ್ಮಾಯಿಲ್ ಅವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮೈಸೂರು, ಜೈಪುರ ಮತ್ತು ಹೈದರಾಬಾದ್ನ ದಿವಾನ್ ಆಗಿ ಸೇವೆ ಸಲ್ಲಿಸಿದವರು. ಮೈಸೂರು ಸಂಸ್ಥಾನದಲ್ಲಿ ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರಮುಖ ಕಾರಣಕರ್ತರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಜಯಂತಿ ಇಂದು.
ಪರಿಚಯ
ಸರ್ ಮಿರ್ಜಾ ಇಸ್ಮಾಯಿಲ್ ಅವರು ಅಕ್ಟೋಬರ್ 24, 1883 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಪರ್ಷಿಯಾದಿಂದ ಮೈಸೂರು ರಾಜ್ಯಕ್ಕೆ ವಲಸೆ ಬಂದ ವರ್ತಕ ಹಾಗೂ ರಾಜ ಮನೆತನಕ್ಕೆ ನಿಷ್ಠರಾಗಿದ್ದ ಅಲಿ ಆಸ್ಕರ್ ಅವರ ಮೊಮ್ಮಗ. ತಮ್ಮ 16ನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಮಿರ್ಜಾರವರ ತಂದೆ ಆಗಾಖಾನ್ ಅವರು ಚಾಮರಾಜ ಒಡೆಯರ ಅಂಗರಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.
ಮಿರ್ಜಾ ಇಸ್ಮಾಯಿಲ್ ಅವರು ಸೆಂಟ್ ಪ್ಯಾಟ್ರಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ವೆಸ್ಲಿಯನ್ ಮಿಶನ್ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ನಂತರ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನ ಪದವಿ ಪಡೆದರು. ನಂತರ ಅವರು ಪೊಲೀಸ್ ಇಲಾಖೆಯ ಸಹಾಯಕ ಅಧಿಕಾರಿಯಾಗಿ ಕೆಲಸ ಮಾಡಿದರು. ಮಹಾರಾಜರು ಮಿರ್ಜಾ ಇಸ್ಮಾಯಿಲ್ ರವರನ್ನು, ಡೆಪ್ಯುಟಿ ಕಾರ್ಯದರ್ಶಿಯಾಗಿ ನೇಮಿಸಿದರು. ಆಡಳಿತದಲ್ಲಿದ್ದ ವೇಳೆ ಮಿರ್ಜಾ ಅವರ ಶ್ರದ್ಧೆ, ಸಾಮರ್ಥ್ಯವನ್ನ ಕಂಡು ಮಹಾರಾಜರಿಗೆ ಅವರನ್ನು ಕಂಡರೆ ಅಪಾರ ಅಭಿಮಾನ. ಆಗಿನ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಮಿರ್ಜಾ ಇಸ್ಮಾಯಿಲ್ ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಿದರು.
1926ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಸಲಹೆಯ ಮೇರೆಗೆ ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಮೈಸೂರಿನ ದಿವಾನರನ್ನಾಗಿ ನೇಮಿಸಿದರು. ರಾಜಾಶ್ರಯದಲ್ಲಿ ಒಟ್ಟು 43 ವರ್ಷ ಕೆಲಸಮಾಡಿದರು.
ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಿಡಿಲು ಹೊಡೆದು ಕೆಲ ಕಾಲ ಕಾರ್ಯ ನಿಷ್ಕ್ರಿಯಗೊಂಡಿತ್ತು. 1926ರಲ್ಲಿ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಿಗೆ ವಿದ್ಯುತ್ ಪೂರೈಕೆಯಾಯಿತು. 1940ರಲ್ಲಿ ಮೈಸೂರು ರಾಜ್ಯದ ಸುಮಾರು 180 ಹಳ್ಳಿಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಪ್ರತಿಯೊಂದು ಹಳ್ಳಿಯಲ್ಲೂ ಮೂಲಭೂತ ಸೌಲಭ್ಯವನ್ನು ನೀಡಿದರು. ಉದ್ಯಾನವನ, ವೈವಿಧ್ಯದ ನೀರಿನ ಕಾರಂಜಿಗಳು, ವಿದ್ಯುದ್ಧೀಕರಣಗಳ ಸೊಬಗು ಮತ್ತಷ್ಟು ಹೆಚ್ಚಿಸಿದರು.
ಮಿರ್ಜಾ ಇಸ್ಮಾಯಿಲ್ ಅವರು ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮತ್ತು ಕಾಗದದ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ಬೆಂಗಳೂರು ನಗರಕ್ಕೆ ಆಧುನೀಕರಣದ ಸಕಲ ಸೌಭಾಗ್ಯಗಳನ್ನು ಕಲ್ಪಿಸುವುದರಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರು ಸಾಕಷ್ಟು ಶ್ರಮವಹಿಸಿದರು. 1940ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪ್ರಾರಂಭಿಸಿದರು.
ಭಾರತೀಯ ವಿಜ್ಞಾನದಲ್ಲಿ ಪ್ರಮುಖ ಹೆಸರಾದ ರಾಮನ್ ಇನ್ಸ್ಟಿಟ್ಯೂಟ್ ನಿರ್ಮಾಣಕ್ಕಾಗಿ ಭಾರತೀಯ ವಿಜ್ಞಾನ ಅಕಾಡೆಮಿಗೆ ಹನ್ನೆರಡು ಎಕರೆಗಳ ಭೂಮಿಯನ್ನು ಮಹಾರಾಜರಿಂದ ಒದಗುವಂತೆ ಮಾಡಿದರು. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು, 100 ಶಾಲೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1940ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಧನರಾದ ಕಾರಣ 1941ರಲ್ಲಿ ಜೈಪುರ ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಸರ್ ಮಿರ್ಜಾ ಇಸ್ಮಾಯಿಲ್ ಅವರು, ಅಲ್ಲಿಯೂ ತಮ್ಮ ದಕ್ಷತೆಯ ಪ್ರಭಾವ ಬೀರಿದರು. ಇದರಿಂದಾಗಿ ಜಯಪುರ ನಗರ ಕೈಗಾರಿಕೋದ್ಯಮದ ಹೊಸ ಶಕೆಯನ್ನು ಕಂಡಿತು. 1945ರಲ್ಲಿ ಬಿರ್ಲಾ ಅವರ ನೇತೃತ್ವದಲ್ಲಿ ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್ ಸ್ಥಾಪನೆಯಾಗಿತ್ತು. ಪಿಲಾನಿಯಲ್ಲಿರುವ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡ ಮಿರ್ಜಾ ಇಸ್ಮಾಯಿಲ್ ಅವರ ಸಲಹೆಯ ಮೇರೆಗೆ ನಿರ್ಮಿತಗೊಂಡಿತ್ತು. ನಂತರ ಸರ್ ಮಿರ್ಜಾ ಇಸ್ಮಾಯಿಲ್ ಅವರು ಬೆಂಗಳೂರಿಗೆ ಬಂದು ನೆಲೆಸಿದರು.
ಮಿರ್ಜಾ ಇಸ್ಮಾಯಿಲ್ ಅವರು 1959ರ ಜನವರಿ 8ರಂದು ನಿಧನರಾದರು.