ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಅವರ ಪತ್ರಿಕಾಗೋಷ್ಠಿ.
ಪಾರ್ಕಮ್, ಮಥುರಾ: ಅಕ್ಟೋಬರ್ 25 ಮತ್ತು 26 ರಂದು ಮಥುರಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಭೆ ಆಯೋಜನೆಯಾಗಿದ್ದು ಇದು ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಪ್ರಮುಖ ಸಭೆಯಾಗಿದೆ. ವಿಜಯದಶಮಿ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೀಡಿದ ಸಂದೇಶಗಳನ್ನು ಮುಂದುವರಿಸಿಕಡು ಹೋಗುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ಅವರು ಅಕ್ಟೋಬರ್ 25ರಂದು ನಡೆಯಲಿರುವ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್ ನಿಮಿತ್ತ ಇಂದು ಮಥುರಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು. ಹಾಗೆಯೇ 2024ರ ಮಾರ್ಚ್ ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿಯೋಜಿತ ವಾರ್ಷಿಕ ಯೋಜನೆಯ ಕುರಿತು ಹಾಗೂ ಸಂಘಕಾರ್ಯ ವಿಸ್ತಾರದ ಕುರಿತು ಮಾಹಿತಿ ನೀಡಲಾಗುವುದು. ಬೈಠಕ್‌ನಲ್ಲಿ ವಿಶೇಷವಾಗಿ ಸಂಘಶತಾಬ್ದಿಯ ನಿಮಿತ್ತ ಸುನಿಶ್ಚಿತಗೊಂಡ ಗುರಿಗಳನ್ನು 2025ರ ವಿಜಯದಶಮಿಯ ಒಳಗೆ ಪೂರ್ಣಗೊಳಿಸುವ ಕುರಿತು ವಿಚಾರ ವಿಮರ್ಶೆ ನಡೆಯಲಿದೆ.
ಈ ಬಾರಿಯ ವಿಜಯದಶಮಿಯಂದು, ಸರಸಂಘಚಾಲಕ್ ಅವರು ತಮ್ಮ ಭಾಷಣದಲ್ಲಿ ಅನೇಕ ವಿಷಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮಕ್ಕಳಲ್ಲಿ ಅಂತರ್ಜಾಲದ ಋಣಾತ್ಮಕ ಪರಿಣಾಮ ಮತ್ತು ಸರ್ಕಾರದಿಂದ ಸಾಧ್ಯವಿರುವ ನಿಯಂತ್ರಣದ ಬಗ್ಗೆಯೂ ಚರ್ಚಿಸಿದ್ದರು. ಸಮಾಜದಲ್ಲಿ ಶಾಂತಿಪ್ರಜ್ಞೆ, ಪರಸ್ಪರ ಸೌಹಾರ್ದತೆ ಮತ್ತು ಮುಂದೆ ಸಂಘದ ಕಾರ್ಯವ್ಯಾಪ್ತಿ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಇದರ ಹೊರತಾಗಿ ಮಹರ್ಷಿ ದಯಾನಂದ ಸರಸ್ವತಿ, ಭಗವಾನ್ ಬಿರ್ಸಾ ಮುಂಡಾ, ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್, ರಾಣಿ ದುರ್ಗಾವತಿ ಮತ್ತು ಜಾರ್ಖಂಡ್‌ನಲ್ಲಿ ಅನುಕುಲ್ ಚಂದ್ ಠಾಕೂರ್ ಅವರ “ಸತ್ಸಂಗ” ಅಭಿಯಾನದಂತಹ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಆರ್ ಎಸ್ ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಪಂಚ ಪರಿವರ್ತನೆಯನ್ನು (ಕುಟುಂಬ ಪ್ರಬೋಧನ್, ಸಾಮಾಜಿಕ ಸಾಮರಸ್ಯ, ಪರಿಸರ, ‘ಸ್ವ’ ಆಧಾರಿತ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ) ಸಮಾಜಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚಿಸಿದ್ದಾರೆ, ಸಂಘವು ಅದನ್ನು ಸಮಾಜಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತದೆ ಎಂದರು.
ದೇಶದಲ್ಲಿ ಯಾವುದೇ ತುರ್ತು ಸ್ಥಿತಿ ಎದುರಾದಾಗ ಸಂಘದ ಕಾರ್ಯಕರ್ತರು ನೆರವಿಗಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ, ಗುಜರಾತ್ ಹಾಗೂ ಒಡಿಸಾದ ಪ್ರವಾಹ ಪರಿಸ್ಥಿತಿಯೂ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಂಘದ ಕಾರ್ಯಕರ್ತರು ಕಾರ್ಯ ನಿರ್ವಹಿಸಿದ್ದರ ಕುರಿತೂ ಪ್ರಸ್ತಾಪವಾಗಲಿದೆ. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪ್ರಭಾವಕಾರಿಯಾಗಿ ನಿರ್ವಹುಸುವ ಬಗ್ಗೆಯೂ ವಿಚಾರ ಮಾಡಲಾಗುವುದು ಎಂದರು.
ಸಮಾಜದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಸಮಾಜವು ಸಂಘಟಿತವಾಗಿ ಬಲಿಷ್ಠಗೊಳ್ಳಬೇಕಿದೆ. ನಮ್ಮ ಸಂವಿಧಾನಕ್ಕೂ 75 ವರ್ಷಗಳು ಪೂರ್ಣಗೊಂಡ ವಿಷಯಗಳ ಬಗ್ಗೆಯೂ ಸಭೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗುವುದು. ಈ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತದ 40 ವರ್ಷ ವಯೋಮಿತಿ ಮೀರಿದ ಸಂಘದ ಕಾರ್ಯಕರ್ತರಿಗಾಗಿ 25 ದಿನಗಳ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸುನೀಲ್ ಅಂಬೇಕರ್ ತಿಳಿಸಿದರು.
ಪ್ರತಿವರ್ಷ ನಡೆಯುವ ಈ ಸಭೆಯು ಸಂಘದ ಚಟುವಟಿಕೆಗಳ ದೃಷ್ಟಿಯಿಂದ ಮಹತ್ವವನ್ನು ಪಡೆದಿದೆ. ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹರಾದ ಡಾ. ಕೃಷ್ಣ ಗೋಪಾಲ್, ಸಿ.ಎ. ಮುಕುಂದ, ಅರುಣ್ ಕುಮಾರ್, ರಾಮದತ್ತ್ ಚಕ್ರಧರ್, ಅಲೋಕ್ ಕುಮಾರ್ ಮತ್ತು ಅತುಲ್ ಲಿಮಾಯೆ ಅವರು ಉಪಸ್ಥಿತರಿರಲಿದ್ದಾರೆ. ಮತ್ತು ಎಲ್ಲಾ ಕಾರ್ಯವಿಭಾಗಗಳ ಪ್ರಮುಖರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಸೇರಿದಂತೆ 393 ಮಂದಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಸಂಘಚಾಲಕ ಸೂರ್ಯಪ್ರಕಾಶ ತೋಂಕ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.