- 2021ರ ಪುಂಗವ ಪಾಕ್ಷಿಕದಲ್ಲಿ ಪ್ರಕಟಗೊಂಡ ಲೇಖನ
- ಲೇಖಕರು – ಸತ್ಯನಾರಾಯಣ ಶಾನಭಾಗ
ಕರ್ನಾಟಕ ಎಂಬುದೇನು ಹೆಸರೆ ಬರಿ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ ಪಡೆದ ಚಲದ ಚಂಡಿ ಕಣಾ!
ಋಷಿಯ ಕಾಣ್ಬ ಕಣ್ಣಿಗೆ
– ರಾಷ್ಟ್ರಕವಿ ಕುವೆಂಪು
ಎಂದು ರಾಷ್ಟ್ರಕವಿ ಕುವೆಂಪು ತಮ್ಮ ‘ಅಖಂಡ ಕರ್ನಾಟಕ’ ಎನ್ನುವ ಪದ್ಯದಲ್ಲಿ ಬರೆದರು. ಕರ್ನಾಟಕ ಏಕೀಕರಣದ ಆರಂಭದ ದಿನಗಳಲ್ಲಿ ಕುವೆಂಪು ಅವರು ಅಖಂಡ ಕರ್ನಾಟಕ ಸ್ಥಾಪನೆಯ ಕುರಿತು ಮಾತನಾಡಿದ ಕುರಿತು ಅಧಿಕಾರಸ್ಥರು ವಿವರಣೆ ಕೇಳಿ ನೀಡಲಾದ ನೋಟಿಸಿಗೆ ಅವರು ನೀಡಿದ ಉತ್ತರ ಇದು. ಕುವೆಂಪು ಅವರ ದೃಷ್ಟಿಯಲ್ಲಿ ಕರ್ನಾಟಕ ಕೇವಲ ಒಂದು ಭೂಭಾಗ ಅಥವಾ ಅದರ ಹೆಸರಾಗಿಲಿಲ್ಲ. ಕರ್ನಾಟಕದಲ್ಲಿ ಅವರು ತಾಯಿ ಭುವನೇಶ್ವರಿಯನ್ನು ಕಂಡರು, ಕನ್ನಡದಲ್ಲಿ ಮಂತ್ರವನ್ನು ಕಂಡರು, ಶಕ್ತಿಯನ್ನು ಕಂಡರು. ಹಾಗಾಗಿಯೇ ಅವರ ಋಷಿಮನ ‘ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಲು ಸಾಧ್ಯವಾಯಿತು.
ಇಂದು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಒಂದು ರೀತಿಯ ಅಸ್ತಿತ್ವದ ತಳಮಳವನ್ನು ಎದುರಿಸುತ್ತಿವೆ. ಪ್ರಮುಖವಾಗಿ ಇಂಗ್ಲೀಷ್ ಭಾಷೆಯ ಹೊಡೆತ ಮತ್ತು ಭಾಷೆಯ ಮೂಲಕ ವಿದೇಶಿ ಸಂಸ್ಕøತಿ ಸದ್ದಿಲ್ಲದೇ ನಮ್ಮ ಮನೆಯ ಪಡಸಾಲೆಯನ್ನು ಆಕ್ರಮಿಸುತ್ತಿರುವುದು ಎಚ್ಚರಿಕೆ ಸಂದೇಶವನ್ನು ನೀಡುತ್ತಿವೆ. ಹಾಗೆಂದು ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಿಗೆ ಅನಿವಾರ್ಯ ಎನ್ನುವ ಮಿಥ್ಯಾ ಭಾವನೆಯನ್ನು ಮೂಡಿಸಿರುವ ಜಾಗತಿಕ ಸಂಪರ್ಕ ಮಾಧ್ಯಮವಾಗಿ ಬೆಳೆದಿರುವ ಇಂಗ್ಲೀಷ್ ಭಾಷೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗದ ಸನ್ನಿವೇಶದಲ್ಲಿಯೂ ನಾವಿದ್ದೇವೆ. ಹೀಗಿರುವಾಗ ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳುವುದರ ಕುರಿತು ಮತ್ತು ಅದರ ಬೆಳವಣಿಗೆಯ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.
ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಪಾರ ಜ್ಞಾನ ಸಂಪತ್ತು ಹೊಂದಿರುವ ನಮ್ಮ ಕನ್ನಡ ಇಂದಿನ ಅಗತ್ಯಗಳನ್ನು ಪೋರೈಸದಷ್ಟು ಬಡವಲ್ಲ. ಆದರೆ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ಮನೆಯಿಂದಲೇ ಅದರ ಆರಂಭವಾಗಬೇಕು. ಹಾಗಾಗಿ ನಮ್ಮ ಮನೆಬಳಕೆಯಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಮಾತೃಭಾಷೆಯನ್ನು ಬಳಸಿದರೆ ಭಾಷೆಯ ಜೊತೆಗೆ ನಮ್ಮ ಸಂಪ್ರದಾಯಗಳೂ ಉಳಿಯಬಲ್ಲವು ಎನ್ನುವುದನ್ನು ನಾವು ಮನಗಾಣಬೇಕು.
ಇದನ್ನು ವ್ಯಾವಹಾರಿಕವಾಗಿ ಸಾಧಿಸುವುದು ಹೇಗೆ ಅಂದರೆ – ಬಹುಭಾಷಾ ಜ್ಞಾನ ಭಾರತೀಯರಿಗೆ ಸಾಮಾನ್ಯ. ಯಾವುದೇ ವಿಶೇಷ ಪ್ರಯತ್ನವಿಲ್ಲದೇ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾತನಾಡುವುದು ನಮ್ಮಲ್ಲಿ ವಿಶೇಷವಲ್ಲ. ಮಕ್ಕಳಲ್ಲಿಯೂ ಸಹ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಸುಲಭವಾಗಿ ಕಲಿಯುವ ಸಾಮಥ್ರ್ಯವಿರುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಜಗದ ನಡುವಿನ ಅಂತರ ಕಿರಿದಾಗಿರುವ ಇಂದಿನ ದಿನಗಳಲ್ಲಿ ಹಲವು ಭಾಷೆಗಳನ್ನು ತಿಳಿದಿರುವುದು ಅನಿವಾರ್ಯವೂ ಹೌದು. ಬೆಂಗಳೂರಿನಂತಹ ನಗರದಲ್ಲಿ ಒಂದು ನೂರಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳು ಆಡಲ್ಪಡುತ್ತವೆ ಎಂದು ಒಂದು ಅಧ್ಯಯನದಿಂದ ಕಂಡು ಬಂದಿದೆ. ಇಂತಹ ಸನ್ನಿವೇಶದಲ್ಲಿ ಇಂಗ್ಲೀಷ್‍ನಂತಹ ವಿದೇಶಿ ಭಾಷೆಯನ್ನು ಒಪ್ಪಿಕೊಳ್ಳುವುದರ ಜೊತೆಗೆ ನಮ್ಮ ಮಾತೃಭಾಷೆಯಾದ ಕನ್ನಡ, ಕರ್ನಾಟಕದಲ್ಲಿ ನಾವು ವಾಸಿಸುವ ಸ್ಥಳದ ವಿಶಿಷ್ಟ ಉಪಭಾಷೆಯನ್ನು ನಿತ್ಯದ ಬಳಕೆಯಲ್ಲಿ ಬಳಸಿ ಉಳಿಸುವುದು ಖಂಡಿತ ಕಷ್ಟವಲ್ಲ. ನಮ್ಮ ಮಾತೃಭಾಷೆ ಅದರಲ್ಲೂ ನಮ್ಮ ಸ್ಥಳೀಯ ಭಾಷೆ ಒಂದು ರೀತಿಯ ಆಪ್ತ ಭಾವನೆಯನ್ನು ಮೂಡಿಸುತ್ತದೆ ಎನ್ನುವುದು ಎಲ್ಲರ ಅನುಭವವಾಗಿದೆ.
ಇಂದು ಕನ್ನಡಕ್ಕೆ ಅಥವಾ ಯಾವುದೇ ಭಾರತೀಯ ಭಾಷೆಗೆ ಬೇಕಿರುವುದು ಪ್ರೀತಿಯೇ ಹೊರತು ಬೇರೆ ಭಾಷೆಯ ದ್ವೇಷವಲ್ಲ. ಕರ್ನಾಟಕದಲ್ಲಿ ನಡೆದಿರುವ ಪ್ರತಿ ಚಳುವಳಿಗಳು ಸಾತ್ವಿಕವಾಗಿ ಆರಂಭವಾಯಿತಾದರೂ, ನಂತರದಲ್ಲಿ ಕೆಲವು ಸ್ವಾರ್ಥ ಹಿತಾಸಕ್ತಿಗಳಿಂದಾಗಿ ಕನ್ನಡ ಹೋರಾಟ ಎಂದರೆ ಸಂಸ್ಕೃತವನ್ನು ವಿರೋಧಿಸುವ, ಹಿಂದಿಯನ್ನು ವಿರೋಧಿಸುವ ಕೆಲಸ ಎನ್ನುವಂತಾಗಿದೆ. ಆದರೆ ಯಾವುದೇ ಭಾಷೆಯಲ್ಲಿರುವ ಜ್ಞಾನ ಸಂಪತ್ತನ್ನು ಶೋಧಿಸಿ ಸಂಕಲನಗೊಳಿಸಿ ಪ್ರಸಾರಗೊಳಿಸುವುದು ನಿಜವಾಗಿ ಭಾಷೆಯ ಏಳಿಗೆಯ ಕಾರ್ಯ. ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜ್ಞಾನದ ಆಗರ. ಈ ಜ್ಞಾನವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದು ಭಾಷಾ ಹೋರಾಟದ ಮುಖ್ಯ ಕಾರ್ಯವಾಗಬೇಕು. ಕನ್ನಡದ ಅಸ್ಮಿತೆ ಎನ್ನುವುದ ದೇಶದ ಏಕತೆಗೆ ಹಾಗೂ ರಾಷ್ಟ್ರೀಯತೆಗೆ ವಿರೋಧವಾಗುವಂತಹ ಕೆಲಸವಲ್ಲ. ಕನ್ನಡದ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಬೇಕು. ಕನ್ನಡಾಂಬೆಯ ಸೇವೆ ಭಾರತಾಂಬೆಯ ಸೇವೆಗಿಂತ ಭಿನ್ನವಲ್ಲ. ಪ್ರಾದೇಶಿಕ ಹಿತಾಸಕ್ತಿಯನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಹಿತವನ್ನು ಉಳಿಸುವ ಕಾರ್ಯವನ್ನು ನಿರ್ವಹಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕತ್ವದ ವಿಕಾಸ’ ಪುಸ್ತಕದಲ್ಲಿ ಉಲ್ಲೇಖಿಸಿದ ಮಾತುಗಳು ನಮಗೆ ಮಾರ್ಗದರ್ಶಿಯಾಗಬಲ್ಲವು :