ಇಂದು ಅವರ ಜಯಂತಿ
ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿದ ಶಕುಂತಲಾ ದೇವಿ ಅವರು ಭಾರತೀಯ ಗಣಿತಶಾಸ್ತ್ರಜ್ಞೆ. ಇವರು ಗಣಿತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅಷ್ಟೇ ಅಲ್ಲದೆ ಶಕುಂತಲಾ ದೇವಿ ಅವರು ಜ್ಯೋತಿಷ್ಯಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು. ಇಂದು ಅವರ ಜಯಂತಿ.
ಪರಿಚಯ
ಶಕುಂತಲಾ ದೇವಿ ಅವರು 1929ರ ನವೆಂಬರ್ 4 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಸಿ.ವಿ. ಸುಂದರರಾಜರಾವ್ ಹಾಗೂ ತಾಯಿ ಸುಂದರಮ್ಮ. ಶಕುಂತಲಾ ದೇವಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಯಾವುದೇ ಔಪಚಾರಿಕ ಶಿಕ್ಷಣವಿಲ್ಲದೆ ತಮ್ಮ 6ನೆಯ ವಯಸ್ಸಿನಲ್ಲೇ ‘ಮೈಸೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಒಂದು ಚಿಕ್ಕ ಪ್ರದರ್ಶನ ನೀಡಿದರು. 13 ರಿಂದ 200ರ ವರೆಗಿನ ಸಂಖ್ಯೆಗಳನ್ನಿಟ್ಟುಕೊಂಡು ಗುಣಾಕಾರ, ಭಾಗಾಕಾರ, ವರ್ಗಮೂಲ, ಘನಮೂಲ ಮೊದಲಾದ ಯಾವುದೇ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದ್ದರು. ಈ ಚಿಕ್ಕವಯಸ್ಸಿನ ಬಾಲಕಿಯ ಪಾಂಡಿತ್ಯವನ್ನು ಕಂಡ ಜನ ಬೆರಗಾಗಿದ್ದರು. ಹೀಗೆ ಕಾಲಕ್ರಮೇಣವಾಗಿ ಅವರಿಗೆ ಗಣಿತ ಶಾಸ್ತ್ರದ ಆಸಕ್ತಿ ಮತ್ತಷ್ಟು ಹೆಚ್ಚಿತು. ಶಕುಂತಲಾದೇವಿ ಅವರು ತಮ್ಮ 15ನೇ ವಯಸ್ಸಿನಲ್ಲಿ ಲಂಡನ್ ಗೆ ತೆರಳಿ ಕೆಲವು ಕಾಲೇಜುಗಳಲ್ಲಿ ಗಣಿತ ಅಂಕಿಅಂಶಗಳನ್ನು ಸರಳವಾಗಿ ಬಿಡಿಸಿದ್ದರು. ಅವರು ಅಲ್ಲಿನ ಜನರಿಂದಲೂ ಗೌರವಕ್ಕೆ ಪಾತ್ರರಾದರು. 201 ಸಂಖ್ಯೆಗಳ ಅಂಕೆಯೊಂದರ 23ನೆ ವರ್ಗಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡು ಹಿಡಿದು, ಕಪ್ಪು ಹಲಿಗೆಯ ಮೇಲೆ ಬರೆದರು.ಅವರು ಲೆಕ್ಕವನ್ನು ಬಿಡಿಸುವುದಕ್ಕೆ ಕೇವಲ 50 ಸೆಕೆಂಡು ತೆಗೆದುಕೊಂಡಿದ್ದರು. ಆದರೆ ಅವರು ಬಿಡಿಸಿದಂತಹ ಲೆಕ್ಕವನ್ನು ಕಂಪ್ಯೂಟರ್ 62 ಸೆಕೆಂಡ್ ಕಾಲ ತೆಗೆದುಕೊಂಡಿತ್ತು. ಹೀಗಾಗಿ ಅವರು ಕಂಪ್ಯೂಟರ್‌ಗಿಂತಲೂ ಬಲು ವೇಗವಾಗಿ ಲೆಕ್ಕ ಬಿಡಿಸಬಲ್ಲ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಗಣಿತ ಪ್ರತಿಭೆಗಾಗಿ “ದಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ನಲ್ಲಿ ಸ್ಥಾನ ಪಡೆಯುವ ಮೂಲಕ ವಿಶ್ವದಾದ್ಯಂತ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದರು.
ಗಣಿತ ಕ್ಷೇತ್ರದಲ್ಲಿ ಮಾತ್ರ ಪರಿಣಿತಿ ಹೊಂದಿಲ್ಲದೆ ಅಡುಗೆಯಲ್ಲೂ ಸಹ ತುಂಬಾ ಆಸಕ್ತಿ ಹೊಂದಿದ್ದರು. ಅಡುಗೆ ವಿಷಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವಾರು ಹೊಸ ಉಪಯುಕ್ತ ಮಾಹಿತಿಗಳನ್ನು ಅವರು ತಮ್ಮ ಅಡುಗೆ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವೆಲ್ಲದರ ಜೊತೆಗೆ ಶಕುಂತಲಾ ದೇವಿ ಅವರು ಜ್ಯೋತಿಷ್ಯದಲ್ಲೂ ಆಸಕ್ತಿ ಹೊಂದಿದ್ದರು.
ಸಾಧನೆಗಳು
ಶಕುಂತಲಾ ದೇವಿ ಅವರು ಎಸ್.ಐ.ಐ.ಎಮ್.ಎಸ್ ಅಂಡ್ ಪಿಯು ಕಾಲೇಜ್ ಸ್ಥಾಪಿಸಿದ್ದರು. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಪಿಯು ಕಾಲೇಜ್’ ಎಂಬ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ, ಅದರ ಸ್ಥಾಪಕ ವಿಶ್ವಸ್ಥರೂ ಆಗಿದ್ದರು.
ಪ್ರಶಸ್ತಿ
ಶಕುಂತಲಾ ದೇವಿ ಅವರಿಗೆ ಫಿಲಿಪೈನ್ಸ್ ವಿಶ್ವವಿದ್ಯಾಲಯದಿಂದ ‘ಅತಿ ಮಹತ್ವದ ಮಹಿಳೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ‘ರಾಮಾನುಜಮ್ ಮ್ಯಾಥೆಮೆಟಿಕಲ್ ಜೀನಿಯಸ್’ ಪ್ರಶಸ್ತಿ ನೀಡಲಾಗಿದೆ.
ಶಕುಂತಲಾ ದೇವಿ ಅವರು ಏಪ್ರಿಲ್ 21, 2013 ರಂದು ತಮ್ಮ 83ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.