ಇಂದು ಜಯಂತಿ
ದೇಶಬಂಧು ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಚಿತ್ತರಂಜನ್ ದಾಸ್ ಅವರು ರಾಜಕೀಯ ಹಾಗೂ ಸ್ವಾತಂತ್ರ್ಯ ಹೋರಾಟಗಾರ. ಭಾರತೀಯ ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ಅವರು ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಪ್ಪಟ್ಟ ಗುರುಗಳಾಗಿದ್ದ ಚಿತ್ತರಂಜನ್ ದಾಸ್ ಅವರ ಜಯಂತಿ ಇಂದು.
ಪರಿಚಯ
ಚಿತ್ತರಂಜನ್ ದಾಸ್ ಅವರು ನವೆಂಬರ್ ನವೆಂಬರ್ 5, 1870 ರಂದು ಬಾಂಗ್ಲಾದೇಶದ ಬಿಕ್ರಮ್ಪುರ ಜಿಲ್ಲೆಯ ತೇಲಿರ್ಬಾಗ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಭುವನ್ ಮೋಹನ್ ದಾಸ್ ಅವರು ವಕೀಲರು ಮತ್ತು ಪತ್ರಕರ್ತರಾಗಿದ್ದರು. ಅವರ ತಾಯಿ ನಿಸ್ತರಿಣಿ ದೇಬಿ. ಚಿತ್ತರಂಜನ್ ದಾಸ್ ಅವರ ಚಿಕ್ಕಪ್ಪ ದುರ್ಗಾ ಮೋಹನ್ ದಾಸ್ ಬ್ರಹ್ಮ ಸಮಾಜದಲ್ಲಿ ತೊಡಗಿಸಿಕೊಂಡಿದ್ದರು.
ಚಿತ್ತರಂಜನ್ ದಾಸ್ ಅವರು ಪ್ರಾಥಮಿಕ ಶಿಕ್ಷಣವನ್ನು ತೇಲಿರ್ ಬಾಗ್ ನಲ್ಲಿ ಮುಗಿಸಿದರು. ನಂತರ ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ಹೋದರು. ಅವರು ಇಂಗ್ಲೆಂಡ್ ನಲ್ಲಿ ಕಾನೂನು ಅಧ್ಯಯನವನ್ನು ಮುಗಿಸಿದರು. ಚಿತ್ತರಂಜನ್ ದಾಸ್ ಅವರು ಕೊಲ್ಕತ್ತಾ ಹೈಕೋರ್ಟ್ ನಲ್ಲಿ ಅನೇಕ ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದರು. ಅವರು ಅರಬಿಂದೋ ಮತ್ತು ಬಿಪಿನ್ ಚಂದ್ರ ಪಾಲ್ ಅವರೊಂದಿಗೆ ಇಂಗ್ಲಿಷ್ ವಾರಪತ್ರಿಕೆ ‘ವಂದೇ ಮಾತರಂ’ ಗೆ ಕೊಡುಗೆ ನೀಡಿದರು. ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಬಂಗಾಳಿ ಭಾಷೆಯ ಬಳಕೆಯನ್ನು ಸಕ್ರಿಯವಾಗಿ ಪ್ರತಿಪಾದಿಸಿದರು. ಖಾದಿ ಮತ್ತು ಗುಡಿ ಕೈಗಾರಿಕೆಗಳ ಉದ್ದೇಶಕ್ಕಾಗಿ ಹೋರಾಡಿದರು. ಅವರು ಮಹಾತ್ಮ ಗಾಂಧಿ ನೇತೃತ್ವದ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಚಿತ್ತರಂಜನ್ ದಾಸ್ ಅವರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು.
1909ರಲ್ಲಿ ಅಲಿಪುರ ಬಾಂಬ್ ಪ್ರಕರಣದಲ್ಲಿ ಅರಬಿಂದೋ ಘೋಷ್ ಅವರನ್ನು ಬಂಧಿಸಿದಾಗ ದಾಸ್ ನ್ಯಾಯಾಲಯದಲ್ಲಿ ಘೋಷ್ ಅವರನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಅಲಿಪೋರ್ ಬಾಂಬ್ ಪ್ರಕರಣವನ್ನು ಮುರಾರಿಪುಕರ್ ಪಿತೂರಿ ಎಂದೂ ಕರೆಯುತ್ತಾರೆ. ಚಿತ್ತರಂಜನ್ ದಾಸ್ ಅವರು ಬ್ರಿಟಿಷ್ ನೀತಿಗಳ ವಿರುದ್ಧ ಹೋರಾಡಲು ಫಾರ್ವರ್ಡ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು . ನಂತರ ಅವರು ಪತ್ರಿಕೆಯ ಹೆಸರನ್ನು ಲಿಬರ್ಟಿ ಎಂದು ಬದಲಾಯಿಸಿದರು.
ರಾಜಕೀಯ
ಚಿತ್ತರಂಜನ್ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರು ತಮ್ಮ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘ ಸ್ಥಾಪಿಸಿದರು. ನಂತರ ಅವರು ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರು ಕಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ನ ಮೊದಲ ಮೇಯರ್ ಆಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ನಂತರ ಅವರು ಮೋತಿಲಾಲ್ ನೆಹರೂ ಅವರೊಂದಿಗೆ ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು.
ಚಿತ್ತರಂಜನ್ ದಾಸ್ ಅವರು ಜೂನ್ 16, 1925 ರಂದು ಅನಾರೋಗ್ಯದಿಂದ ನಿಧನರಾದರು.