ಇಂದು ಜಯಂತಿ
ಸರ್ ಸಿ.ವಿ ರಾಮನ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ವೆಂಕಟರಾಮನ್ ಭಾರತೀಯ ವಿಜ್ಞಾನಿ. ಇವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿದರು. ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ಭೌತಶಾಸ್ತ್ರಜ್ಞ. ಇಂದು ಅವರ ಜಯಂತಿ.
ಪರಿಚಯ
ಚಂದ್ರಶೇಖರ್ ವೆಂಕಟರಾಮನ್ ಅವರು ನವೆಂಬರ್ 7, 1888 ರಂದು ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ ‘ತಿರುವನೈಕಾವಲ್’ ಎಂಬಲ್ಲಿ ಜನಿಸಿದರು. ಇವರ ತಂದೆ ಚಂದ್ರಶೇಖರ್ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿ ಪಾರ್ವತಿ ಅಮ್ಮಾಳ್. ಸಿ.ವಿ ರಾಮನ್ ಅವರ ಪ್ರಾಥಮಿಕ ಶಿಕ್ಷಣವನ್ನು ವಿಶಾಖಪಪಟ್ಟಣದಲ್ಲಿ ಮುಗಿಸಿದರು. ತಮ್ಮ 12ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಪಾಸಾದರು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಎಂ.ಎಸ್ಸಿ ಪದವಿ ಮುಗಿಸಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದರು.
ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಸಿ.ವಿ ರಾಮನ್ ಅವರು ಕೊಲ್ಕತ್ತಾದ ಸರ್ಕಾರದಲ್ಲಿ ವಿತ್ತ ಭಾಗದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ಇವರನ್ನು ಸರ್ಕಾರಿ ಕೆಲಸದ ನಿಮಿತ್ತ ಬರ್ಮದ ರಂಗೂನ್ ಗೆ ಕಳುಹಿಸಿಕೊಡಲಾಯಿತು. ನಾಗಪುರದಲ್ಲೂ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಅವರಿಗೆ ವಿಜ್ಞಾನದ ಕಡೆ ಹೆಚ್ಚು ಒಲವು ಹೊಂದಿದ್ದರು. ಹೀಗಾಗಿ ಅವರು ಕೊಲ್ಕತ್ತದಲ್ಲಿನ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಖಾಸಗಿ ವಿಜ್ಞಾನ ಸಂಶೋಧನೆ ಕೇಂದ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಇಲ್ಲಿದ್ದಾಗ ಮೇಲ್ಮೈಕರ್ಷಣ ಹಾಗೂ ಪ್ರಾಪಗೇಷನ್ ಆಫ್ ಲೈಟ್ ಕುರಿತು ಸಂಶೋಧನೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು.
1917ರಲ್ಲಿ ಇವರು ಸರ್ಕಾರಿ ಹುದ್ದೆಯಿಂದ ರಾಜೀನಾಮೆ ನೀಡಿ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. 1924ರಲ್ಲಿ ‘ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ’ಗೆ ರಾಮನ್ ಆಯ್ಕೆಯಾಗಿದ್ದರು.
ರಾಮನ್ ಎಫೆಕ್ಟ್
ವಿಜ್ಞಾನ ಕ್ಷೇತ್ರಕ್ಕೆ ಚಂದ್ರಶೇಖರ್ ವೆಂಕಟರಾಮನ್ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಆಕಾಶದ ನೀಲಿ ಬಣ್ಣ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡತೊಡಗಿತ್ತು. ಇವರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯೋಗ ನಡೆಸಲು ಶುರು ಮಾಡಿದ್ದರು. ಸಿ.ವಿ ರಾಮನ್ ಅವರು ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಈ ಬಣ್ಣದ ಬಗ್ಗೆ ತಿಳಿದುಕೊಳ್ಳವ ಕೂತುಹಲ ಅವರಿಗೆ ಮತ್ತಷ್ಟು ಹೆಚ್ಚಿಸಿದ್ದರಿಂದ ಸಂಶೋಧನೆಯಲ್ಲಿ ತೊಡಗಿದ್ದರು. ಅವರ ಪ್ರಶ್ನೆಗೆ ಉತ್ತರ ದೊರಕಿತು. ಪಾರದರ್ಶಕ ಮಾಧ್ಯಮದ ಮೂಲಕ ಹಾದುಹೋಗುವ ಮಾಧ್ಯಮದ ಅಣುಗಳಿಂದ ಅಂತರವರ್ತಿಸಿ ಶಕ್ತಿಯನ್ನು ಪಡೆಯುವುದರಿಂದ ಚದರಿದ ಬೆಳಕಿನ ಆವರ್ತಾಂಕದಲ್ಲಿ ಬದಲಾವಣೆಯಾಗಿ ಹೆಚ್ಚುವರಿ ರೋಹಿತ ರೇಖೆಗಳು ಕಾಣಿಸುತ್ತವೆ. ಈ ವಿದ್ಯಮಾನವನ್ನೇ ಮುಂದೆ ರಾಮನ್ ಎಫೆಕ್ಟ್ ಎಂದು ಕರೆಯಲಾಯಿತು. ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುತ್ತದೆ ಎಂದು ಕಂಡುಹಿಡಿದರು.
1933ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ನಂತರ ಅವರು ಇಂಡಿಯಾನ್ ಅಕಾಡೆಮಿ ಆಫ್ ಸೈನ್ಸ್‌ನನ್ನು ಸ್ಥಾಪಿಸಿದರು. ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಅಕಾಡೆಮಿ ಅನ್ನು ಸ್ಥಾಪಿಸಿದರು. ಬೆಂಗಳೂರಿನ ಹೆಬ್ಬಾಳದಲ್ಲಿ ವಿಜ್ಞಾನ ಮಂದಿರವನ್ನು ಕಟ್ಟಿದರು.
ಗೌರವ ಪ್ರಶಸ್ತಿ
ಚಂದ್ರಶೇಖರ್ ವೆಂಕಟರಾಮನ್ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. 1924ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ ನೀಡಿ ಗೌರವಿಸಲಾಗಿದೆ. ಸಿ.ವಿ.ರಾಮನ್‌ಗೆ ಭೌತಶಾಸ್ತ್ರಕ್ಕಾಗಿ 1930ರಲ್ಲಿ ನೋಬೆಲ್ ಪ್ರಶಸ್ತಿ, 1935ರಲ್ಲಿ ಮೈಸೂರು ಮಹಾರಾಜರಿಂದ ‘ರಾಜ ಸಭಾ ಭೂಷಣ ಗೌರವ ನೀಡಿದ್ದಾರೆ. ನಂತರ ಅವರಿಗೆ 1954ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಿ.ವಿ ರಾಮನ್ ಅವರು ನವೆಂಬರ್ 21, 1970 ರಂದು ನಿಧನರಾದರು.