ಶಿಕ್ಷಣವು ವ್ಯಕ್ತಿಯ ಜ್ಞಾನ, ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿದ್ದ ಡಾ. ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರು ತಮ್ಮ ಆಡಳಿತವಾಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚುವಂತೆ ಮಾಡುವುದು ಈ ದಿನದ ಉದ್ದೇಶವಾಗಿದೆ. ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಈ ವರ್ಷದ ರಾಷ್ಟ್ರೀಯ ಶಿಕ್ಷಣ ದಿನದ ಥೀಮ್‌ “Digital Learning and Equal Access”.


ಪರಿಚಯ
ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರು ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಪತ್ರಕರ್ತ ಮತ್ತು ಬರಹಗಾರರಾಗಿದ್ದರು. ಸಮಾಜವನ್ನು ಪರಿವರ್ತಿಸಲು ಮತ್ತು ಜನಸಾಮಾನ್ಯರನ್ನು ಸಬಲಗೊಳಿಸಲು ಶಿಕ್ಷಣ ಅವಶ್ಯಕವೆಂದು ಅರಿತು ಇವರು ದೇಶದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಿದರು. ಅವರು ನವೆಂಬರ್‌ 11, 1888ರಂದು ಮೆಕ್ಕಾದಲ್ಲಿ ಜನಿಸಿದರು. ಇವರ ತಂದೆ ಮೌಲಾನಾ ಸಯ್ಯಿದ್ ಹಾಗೂ ತಾಯಿ ಶೇಖಾ ಆಲಿಯಾಸ್‌. ಮನೆಯಲ್ಲೇ ಆಜಾದ್ ರವರಿಗೆ ಶಿಕ್ಷಣ ದೊರಕಿತು. ಉರ್ದು, ಹಿಂದಿ, ಅರೇಬಿಕ್, ಪರ್ಶಿಯನ್, ಇಂಗ್ಲಿಷ್ ಭಾಷೆಗಳನ್ನು ಕಲಿತರು. ಗಣಿತ, ತತ್ತ್ವಶಾಸ್ತ್ರ, ಇತಿಹಾಸ, ಶರಿಯಾತ್ ಮತ್ತು ವಿಜ್ಞಾನ ಸೇರಿದಂತೆ ಮುಂತಾದ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಖಿಲಾಫತ್ ಚಳವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಗಾಂಧಿ ಅವರ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಡಾ. ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಅವರು 12ನೇ ವಯಸ್ಸಿನಲ್ಲಿಯೇ ಅಲ್-ಮಿಸ್ಬಾಹ್ ಎಂಬ ಸಾಪ್ತಾಹಿಕ ಪತ್ರಿಕೆ ಸಂಪಾದಿಸುತ್ತಿದ್ದರು. 1903ರಲ್ಲಿ ಲಿಸ್ಸನ್-ಉಸ್-ಸಿದ್ಕ್ ಎಂಬ ಮಾಸಿಕ ಪತ್ರಿಕೆಯನ್ನು ಹೊರತಂದು ಪ್ರಸಿದ್ಧಿ ಪಡೆದರು. ಅವರು ಉರ್ದು ವಿದ್ವಾಂಸರಾಗಿದ್ದು, ತಮ್ಮ ಬರವಣಿಗೆಯಿಂದಲೇ ಆಜಾದ್‌ ಎಂಬ ಹೆಸರು ಬಂದಿತ್ತು. ಭಾರತ ಸ್ವಾತಂತ್ರ್ಯ ಪಡೆದುಕೊಂಡ ನಂತರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ನೇಮಕಗೊಂಡರು. ತಮ್ಮ ಅಧಿಕಾರಾವಧಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಿ, ಶಿಕ್ಷಣವನ್ನು ದೊರೆಯುವಂತೆ ಮಾಡಿದವರು.


ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ’ರಾಷ್ಟ್ರೀಯ ಶಿಕ್ಷಣ ನೀತಿ’ ಯನ್ನು ಜಾರಿಗೆ ತಂದಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್ (ICSSR), ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR), ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ICCR), ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್ ಮತ್ತು ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ಸ್(UGC) ಅನ್ನು ಸ್ಥಾಪಿಸಿದರು.


ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ
ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರು ನೀಡಿರುವ ಕೊಡುಗೆಯನ್ನು ಗೌರವಿಸುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2008 ರಲ್ಲಿ ಆಜಾದ್ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.


ಮಹತ್ವ
• ಶಿಕ್ಷಣವನ್ನು ಪ್ರತಿಯೊಬ್ಬರು ಕಲಿಯುವ ಅವಕಾಶವನ್ನು ಹೊಂದಿರಬೇಕು ಎನ್ನುವ ಜಾಗೃತಿಯನ್ನು ಮೂಡಿಸುತ್ತದೆ.
• ಮಹಿಳೆಯರಿಗೂ ಸಹ ಉಚಿತ ಶಿಕ್ಷಣದ ಬಗ್ಗೆ ಈ ದಿನ ತಿಳಿಸಲು ಸಹಾಯಕವಾಗಿದೆ.
• ಶಿಕ್ಷಣದ ಮೂಲಕ ಸುಸ್ಥಿರ ಸಮಾಜವನ್ನು ರೂಪಿಸಲು ಸಾಧ್ಯ.
• ಜನರಿಗೆ ಶಿಕ್ಷಣದ ಮೌಲ್ಯದ ಬಗ್ಗೆ ನಾಟಕ, ಹಾಡು, ಹೀಗೆ ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಲು ಈ ದಿನ ಸೂಕ್ತವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.