ಬೆಂಗಳೂರಿನ ಪುರಾತನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಾಂಡವ್ಯ ಋಷಿಗಳ ಪಾದಸ್ಪರ್ಶದಿಂದ ಪುನೀತವಾದ ಶ್ರೀ ಹನುಮಗಿರಿ ಕ್ಷೇತ್ರದ ಹನುಮಗಿರಿ ಬೆಟ್ಟದಲ್ಲಿ (ಅರೇಹಳ್ಳಿ ಗ್ರಾಮ)15 ನವೆಂಬರ್ 2024 ಕಾರ್ತಿಕ ಮಾಸದ ಹುಣ್ಣಿಮೆಯಂದು ಐತಿಹಾಸಿಕ ಕಾರ್ತಿಕ ಮಹಾದೀಪೋತ್ಸವ ಕಾರ್ಯಕ್ರಮ ಹನುಮಗಿರಿ ಸೇವಾ ಸಮಿತಿ ವತಿಯಿಂದ ನಡೆಯಿತು. ಈ ಕಾರ್ತಿಕ ಮಹಾದೀಪೋತ್ಸವಕ್ಕಾಗಿ ಸುಮಾರು ನಾಲ್ಕು ತಿಂಗಳುಗಳಿಂದಲೇ ಪೂರ್ವಭಾವಿ ಸಿದ್ಧತೆಗಳು ಪ್ರಾರಂಭವಾದವು. ಕ್ಷೇತ್ರದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಬಡಾವಣೆಗಳ ಭಕ್ತರು, ಆಸ್ತಿಕ ಬಂಧುಗಳು ಈ ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಿದರು. ಈ ದೀಪೋತ್ಸವಕ್ಕೆ ಸುತ್ತ ಮುತ್ತಲಿನ ಹಲವಾರು ದೇವಸ್ಥಾನಗಳ ಸಮಿತಿಗಳ ಪದಾಧಿಕಾರಿಗಳನ್ನು ಸಂಪರ್ಕಿಸಿ ದೀಪೋತ್ಸವದ ಯಶಸ್ಸಿಗಾಗಿ ಸಹಕಾರವನ್ನು ಕೋರಲಾಯಿತು. ಅದರಂತೆ ಎಲ್ಲಾ ದೇವಸ್ಥಾನಗಳ ಸಹಭಾಗಿತ್ವ ಮತ್ತು ಬಡಾವಣೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ದೀಪೋತ್ಸವವು ಕರ್ನಾಟಕದಲ್ಲಿಯೇ ಪ್ರಪ್ರಥಮ ಎನ್ನುವಂತೆ ಬೆಂಗಳೂರಿನ ಅರೇಹಳ್ಳಿ ಗ್ರಾಮದ ಹನುಮಗಿರಿಯಲ್ಲಿ ಅಭೂತಪೂರ್ವ ರೀತಿಯಲ್ಲಿ ಯಶಸ್ವಿಯಾಯಿತು.

ಈ ಮಹಾದೀಪೋತ್ಸವಕ್ಕಾಗಿ ತಿರುವಣ್ಣಾಮಲೈನಲ್ಲಿ ತಯಾರಿಸಿದ ಸುಮಾರು 200 ಕೆಜಿ ತೂಕದ ತಾಮ್ರದ ಬೃಹತ್ ದೀಪ ಸ್ತಂಭ ತರಲಾಯಿತು. ತಿರುವಣ್ಣಾಮಲೈನಿಂದ ಸುಮಾರು 20 ಕಾರ್ಯಕರ್ತ ಭಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಭಾನುವಾರ, 10 ನವಂಬರ್ ದಿನದಂದು ದೀಪಸ್ತಂಭವನ್ನು ಅರೇಹಳ್ಳಿಯ ನಂದೀಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶ್ರದ್ಧಾ ಭಕ್ತಿಗಳಿಂದ ಸ್ವಾಗತಿಸಿದ ನಂತರ ಸ್ಥಾಪಿಸಲಾಯಿತು.

ಹುಣ್ಣಿಮೆಯ ದಿನ ಸಂಜೆ 5:50ಕ್ಕೆ ಮೂವರು ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ದೀಪ ಪ್ರಜ್ವಲನೆ ಮಾಡಲಾಯಿತು ಬೇಲಿ ಮಠದ ಪೂಜ್ಯ ಶ್ರೀ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಗದಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಶ್ರೀ ಸ್ವಾಮಿ ನಿರ್ಭಯಾನಂದರು ಮತ್ತು ಓಂಕಾರಾಶ್ರಮದ ಶ್ರೀ ಶ್ರೀ ಮಧುಸೂದನಾನಂದಪುರಿಗಳ ದಿವ್ಯಹಸ್ತದಿಂದ ಸಮಾಜ ಬಾಂಧವರಿಗೆ ಹಸ್ತಾಂತರಿಸುವ ಮೂಲಕ ದೀಪ ಪ್ರಜ್ವಲನೆ ಮಾಡಲಾಯಿತು. ಈ ಮೂರು ದಿನಗಳ ದೀಪೋತ್ಸವ ಪ್ರಜ್ವಲನೆಗಾಗಿ ಸುಮಾರು ಸಾವಿರ ಕೆಜಿ ತುಪ್ಪವನ್ನು ಮನೆಮನೆಗಳಿಂದ ಸಂಗ್ರಹಿಸಲಾಯಿತು.

ಈ ದೀಪಸ್ತಂಭವು ಸುಮಾರು ಐದು ಅಡಿ ಎತ್ತರ, ಮೂರು ಅಡಿ ವ್ಯಾಸದ ಸುಮಾರು 200 ಕೆಜಿ ಭಾರದ ದೀಪ ಸ್ತಂಭವಾಗಿತ್ತು ನವಂಬರ್ 14ರ ಸಂಜೆ ಪವಿತ್ರ ಗೋಧೂಳಿ ಲಗ್ನದಲ್ಲಿ ಶ್ರೀ ಗುರು, ಗಣಪತಿಯ ಪ್ರಾರ್ಥನೆ ಹಾಗೂ ಗೋಪೂಜೆಯೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಮರುದಿನ ಬೆಳಿಗ್ಗೆ 8:00 ಗಂಟೆಗೆ ಅರೇಹಳ್ಳಿಯ ಶ್ರೀ ನಂದೀಶ್ವರ ದೇವಸ್ಥಾನದಿಂದ ಸಂಭ್ರಮದ ಶೋಭಾ ಯಾತ್ರೆಯೊಂದಿಗೆ ಬೃಹತ್ ದೀಪವನ್ನು ಹನುಮಗಿರಿಗೆ ತರಲಾಯಿತು.

ಮಹಾ ದೀಪೋತ್ಸವದ ನಿಮಿತ್ತ ಹನುಮಗಿರಿ ಕ್ಷೇತ್ರದಲ್ಲಿ ಹಲವಾರು ದಾರ್ಮಿಕ ಕಾರ್ಯಕ್ರಮಗಳು ನಡೆದವು. ಕಂಕಣಬದ್ಧ ಕಾರ್ಯಕರ್ತರು ದೀಕ್ಷಾಕಂಕಣ‌ ತೊಟ್ಟು ಮೊದಲಿನಿಂದ ಕೊನೆವರೆಗೂ ಕಾರ್ಯಕ್ರಮದ ಭಾಗವಾಗಿದ್ದರು. ಪೂರ್ವಭಾವಿಯಾಗಿ 140 ಜನ ಋತ್ವಿಜರು ರುದ್ರ ಪಾರಾಯಣ ದೊಂದಿಗೆ ಏಕಾದಶವಾರು (ಹನ್ನೊಂದು ಬಾರಿ) ಮಹಾನ್ಯಾಸ ಪೂರ್ವಕವಾಗಿ ಮಹಾರುದ್ರಾಭಿಷೇಕ ಮಾಡಿದ್ದು ದೈವಿಕ ಶಕ್ತಿಯ ಕ್ರೋಡಿಕರಣಕ್ಕೆ ಮೊದಲುಗೊಂಡು ಯಶಸ್ವಿಯಾಗಿದ್ದು ಹನುಮಗಿರಿಯ ದಾರ್ಮಿಕ ಕಾರ್ಯಕ್ರಮ ಗಳಿಗೆ ನಾಂದಿಯಾಗಿ ಪ್ರಾರಂಭಿಕ ಯಶಸ್ಸಾದರೆ, ನಂತರದಲ್ಲಿ ಕಾರ್ಯಕ್ರಮದ ಮುನ್ನಾದಿನ
▪️ ಗುರುಗಣಪತಿ ಪ್ರಾರ್ಥನೆ
▪️ಸ್ಥಳ ಶುದ್ಧೀಕರಣ
▪️ಪುಣ್ಯಾಹ
▪️ದೇವತಾ ನಾಂದಿ
▪️ರಕ್ಷೋಜ್ಞ ಹೋಮ

ಕಾರ್ಯಕ್ರಮಗಳು ನಡೆದು ಕಾರ್ತೀಕ ಪೌರ್ಣಮಿ, ನವೆಂಬರ್ 15 ರಂದು ಶುಭ ಮೂಹೂರ್ತದಲ್ಲಿ:

▪️ ಷೋಡಶ ಕಲಶ ಸ್ಥಾಪನೆ
▪️ಗಣಪತಿ ಹೋಮ
▪️ರುದ್ರ ಹೋಮ
▪️ಮೃತ್ಯುಂಜಯ ಹೋಮ
▪️ಪವಮಾನ ಹೋಮ
▪️ನವಗ್ರಹ ಹೋಮ

ಹಾಗೂ ಇನ್ನಿತರ ಹೋಮಗಳು ನಡೆದು ಶ್ರೀ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಪೂರ್ಣಾಹುತಿ ಹಾಗೂ ಕುಂಭಾಭಿಷೇಕ, ಅರ್ಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಶ್ರೀ ಅರ್ಕೇಶ್ವರ ಸ್ವಾಮಿಗೆ ಶ್ರೀ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರಿಂದ ರೈತರು ನೀಡಿದ ಕಡಲೇಕಾಯಿ ಅಭಿಷೇಕ ಮಾಡಲಾಯಿತು. ಇದು ಕೂಡ ಚರಿತ್ರಾರ್ಹ ಘಟನೆಗೆ ನಾಂದಿಯಾಯಿತು. ನಂತರದಲ್ಲಿ ಶ್ರೀ ಅರ್ಕೇಶ್ವರ, ಶ್ರೀ ಪ್ರಸನ್ನ ವೀರಾಂಜನೇಯ ದೇವರ ಉತ್ಸವ ಮೂರ್ತಿ ಹಾಗೂ ಶ್ರೀರಾಮ ಪಾದುಕೆ ಮತ್ತು ಪಲ್ಲಕ್ಕಿಯೊಂದಿಗೆ ದೀಪೋತ್ಸವ ಪ್ರಾರಂಭವಾಯಿತು.

ಉಲ್ಲೇಖನೀಯ ಸಂಗತಿಗಳು:

  • ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ.
  • 700ಕ್ಕೂ ಹೆಚ್ಚು ಮನೆಗಳಿಂದ ತುಪ್ಪ ಸಂಗ್ರಹ.
  • 20ಕ್ಕೂ ಹೆಚ್ಚು ಬಡಾವಣೆಗಳ ಸಹಭಾಗಿತ್ವ.
  • ನಿರಂತರ 3 ದಿನಗಳ ಕಾಲ ಪ್ರಜ್ವಲಿಸಿದ ದೀಪ.
  • ಸುಮಾರು 10000ಕ್ಕೂ ಮೀರಿ ಭಕ್ತಾದಿಗಳ ಭೇಟಿ.
  • ಬೆಂಗಳೂರಿನ ಹಲವಾರು ಪ್ರದೇಶಗಳಿಂದ ಭಕ್ತರ ಭೇಟಿ.
  • ಮೂರು ದಿನಗಳ ಪರ್ಯಂತ ಹಲವಾರು ಭಜನಾ ತಂಡಗಳಿಂದ ನಿರಂತರ ಭಜನೆ.
  • ಯಾವುದೇ ಅವಘಡ ಸಂಭವಿಸದ ರೀತಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮತ್ತು ಎಲ್ಲರ ಸಹಕಾರ.
  • ದೀಪೋತ್ಸವಕ್ಕೆ ಬಂದ ಎಲ್ಲ ಭಕ್ತರಿಗೂ ಪ್ರಸಾದದ ವ್ಯವಸ್ಥೆ.
  • ಸುರಿತ್ತಿರುವ ಮಳೆಯಲ್ಲಿಯೂ ಸಹ ಭಕ್ತರ ಸ್ಪಂದನೆ, ಭೇಟಿ.
  • ಬೆಟ್ಟ ಮತ್ತು ಸುತ್ತಲಿನ ಬಡಾವಣೆಗಳಲ್ಲಿ ಹಬ್ಬದ, ಜಾತ್ರೆಯ ವಾತಾವರಣ.
    •ದೀಪೋತ್ಸವದ ಹಲವಾರು ವ್ಯವಸ್ಥೆಯನ್ನು ದಾನಿಗಳು, ಭಕ್ತರು ಸ್ವತಃ ಮುಂದೆ ಬಂದು ನಿರ್ವಹಣೆ ಮಾಡಿದ್ದಾರೆ.

ಸಂಘಟಿತ ಸಮಾಜದಿಂದ ಸಾಮರಸ್ಯ ಸಾರುವ ಒಂದು ಅತ್ಯುತ್ತಮ ಧಾರ್ಮಿಕ ಕಾರ್ಯಕ್ರಮ.

Leave a Reply

Your email address will not be published.

This site uses Akismet to reduce spam. Learn how your comment data is processed.