ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ವಿಶ್ವ ಶ್ರೇಷ್ಠ ಸಂವಿಧಾನವಾದ ಭಾರತ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್‌ 26 ರಂದು ಭಾರತದಲ್ಲಿ ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ. ನವೆಂಬರ್ 26, 1949ರಂದು ಸಂವಿಧಾನ ಅಂಗಿಕಾರವಾಯಿತು. ಹೀಗಾಗಿ ಈ ದಿನವನ್ನು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲಾಗುತ್ತದೆ. ಅಂತಿಮವಾಗಿ ಜನವರಿ 26, 1950ರಂದು ಸಂವಿಧಾನ ಜಾರಿಗೆ ಬಂದಿತ್ತು. ಹೀಗಾಗಿ ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.

ನಮ್ಮ ಸಂವಿಧಾನವು ಈ ರಾಷ್ಟ್ರದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅದು ನಮ್ಮ ಮಾರ್ಗದರ್ಶಿ ತತ್ತ್ವಗಳಾಗಿ ಕಾರ್ಯನಿರ್ವಹಿಸುತ್ತದೆ. ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸ್ಥಾಪಿಸಿ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ತತ್ತ್ವಗಳನ್ನು ಪ್ರತಿಬಿಂಬಿಸುವ ಕಾರ್ಯ ಮಾಡುತ್ತದೆ. ಸಂವಿಧಾನವು ದೇಶದ ಬಹುತ್ವದ ಸ್ವರೂಪವನ್ನು ಗುರುತಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಮತ್ತು ರಾಷ್ಟ್ರಮೊದಲು ಎಂಬ ಏಕತೆಯ ಭಾವವನ್ನು ಜಾಗೃತಗೊಳಿಸುವ ಮೂಲಕ ವಿವಿಧತೆಯನ್ನು ಸಂಭ್ರಮಿಸುತ್ತದೆ. ಇದರ ಮಹತ್ವವು ಪ್ರಜಾಸತ್ತಾತ್ಮಕ ಆಡಳಿತಕ್ಕೆ ದೃಢವಾದ ಚೌಕಟ್ಟನ್ನು ಒದಗಿಸುವುದು, ವೈಯಕ್ತಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯುವುದು ಮತ್ತು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಕಡೆಗೆ ರಾಷ್ಟ್ರವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗುತ್ತದೆ.

ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬ ಪ್ರಜೆಗಳಿಗೆ ಸಮಾನತೆಯ ಹಕ್ಕು ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಎಲ್ಲಾ ಕಾನೂನುಗಳಿಗಿಂತಲೂ ಸಂವಿಧಾನವೇ ಮೇಲು. ಹೀಗಾಗಿ ಸಂವಿಧಾನದ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.

ಇತಿಹಾಸ
1946ರಲ್ಲಿ ಭಾರತದ ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಂವಿಧಾನ ರಚನಾ ಸಭೆಯು ಎರಡು ವರ್ಷಗಳ ಕಾಲ ಸಭೆ ಸೇರಿ ಸಂವಿಧಾನವನ್ನು ರಚಿಸಿತು. ಇದರ ಮೊದಲ ಸಭೆ 1946 ರ ಡಿ. 9 ರಂದು ನವದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು, ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು. ಭಾರತದ ಸಂವಿಧಾನವನ್ನು 1949 ಜನವರಿ 26ರಂದು ಅಂಗೀಕರಿಸಲಾಯಿತು. 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂತು. 2015ರಿಂದ ನವೆಂಬರ್‌ 26 ದಿನವನ್ನು ಸಂವಿಧಾನ ದಿನ ಎಂದು ಆಚರಿಸಲು ಪ್ರಾರಂಭಿಸಲಾಯಿತು. ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.


ಮಹತ್ವ
• ಸಾಂವಿಧಾನಿಕ ಮೌಲ್ಯಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಈ ದಿನ ಸೂಕ್ತವಾಗಿದೆ.
• ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವವನ್ನು ತಿಳಿಸಲು ಈ ದಿನ ಸಹಾಯಕವಾಗಿದೆ.
• ರಾಷ್ಟ್ರದ ಪರಿವರ್ತನಾತ್ಮಕ ಪ್ರಯಾಣವನ್ನು ಪ್ರತಿಬಿಂಬಿಸುವ ಮತ್ತು ಭಾರತದ ವೈವಿಧ್ಯಮಯ ರಚನೆಯನ್ನು ಬಂಧಿಸುವ ತತ್ತ್ವಗಳಿಗೆ ಬದ್ಧತೆಯನ್ನು ಪುನರುಚ್ಚರಿಸಲು ಈ ದಿನ ಸೂಕ್ತವಾಗಿದೆ.
• ಈ ದಿನ ಪ್ರಜಾಪ್ರಭುತ್ವದ ಆದರ್ಶಗಳನ್ನು ಬಲಪಡಿಸಲು ಸಹಾಯಕವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.