ಬೆಂಗಳೂರು, ನ. 26: ರಾಷ್ಟ್ರೀಯತೆ ಎನ್ನುವುದು ನಮ್ಮ ತನವನ್ನ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಅತ್ಯಂತ ಮುಖ್ಯವಾಗಿ ಬೇಕಾದ ಸಂಗತಿ. ಜಾಗತೀಕರಣದ ಈ ಸಂದರ್ಭದಲ್ಲಿ ನಮ್ಮ ಮೂಲ ಏನು ಎಂಬುದನ್ನು ಅರ್ಥಮಾಡಿಕೊಂಡಾಗ ಮಾತ್ರ ಇಂದಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ‌. ಸಂಸ್ಕೃತಿಯ ಉಳಿವಿಗೆ ರಾಷ್ಟ್ರಭಾವ ಜಾಗರಣ ಅತ್ಯಗತ್ಯ ಎಂದು ಇಸ್ರೇಲ್ ನ ಹರ್ಜ್ಲ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಡಾ.ಯೋರಾಮ್ ಹಜೋನಿ ಅಭಿಪ್ರಾಯ ವ್ಯಕ್ತಪಡಿಸಿದರು.


ಬೆಂಗಳೂರಿನ ನೃಪತುಂಗ ರಸ್ತೆಯ ಬಳಿಯಿರುವ ದಿ ಮಿಥಿಕ್ ಸೊಸೈಟಿಯಲ್ಲಿ ಸಂವಾದ ವರ್ಲ್ಡ್ ವತಿಯಿಂದ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ಪುನರುಜ್ಜೀವನ: ಗುರುತು ಮತ್ತು ಪರಂಪರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ರಾಷ್ಟ್ರೀಯತೆಯ ಪಾತ್ರ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಹೂದಿಗಳ ರಾಷ್ಟ್ರೀಯತೆಯ ಕುರಿತು ಅವರು ವಿವರಿಸುತ್ತಾ, 1948ರಲ್ಲಿ ಯಹೂದಿಗಳು ಇಸ್ರೇಲ್‌ ದೇಶವನ್ನು ಸ್ಥಾಪಿಸಿದರು. ಈ ರಾಷ್ಟ್ರ ಸ್ಥಾಪನೆಗೆ ಯಹೂದಿಗಳ ಒಗ್ಗೂಡುವಿಕೆ ಒಂದು ಮುಖ್ಯ ಅಂಶವಾಗಿದೆ. ಇಸ್ರೇಲ್‌ ಸ್ಥಾಪನೆಯಲ್ಲಿ ಜಿಯೋನಿಸ್ಟ್‌ ಚಳವಳಿಯು  ಮುಖ್ಯವಾಗಿದೆ. ಒಂದು ದೇಶಕ್ಕೆ ರಾಷ್ಟ್ರೀಯತೆಯ ಭಾವನೆ ಎಷ್ಟು ಮುಖ್ಯ ಎಂಬುದಕ್ಕೆ ಇಸ್ರೇಲ್‌ ರಾಷ್ಟ್ರದ ಸ್ಥಾಪನೆಯೇ ಸಾಕ್ಷಿ ಎಂದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿ ಇಸ್ರೇಲ್ ನ ಹರ್ಜ್ಲ್ ಇನ್ಸ್ಟಿಟ್ಯೂಟ್ ನ ಉಪಾಧ್ಯಕ್ಷ ಡಾ. ಓಫಿರ್‌ ಹೈವ್ರಿ ಇಂದು ಇಸ್ರೇಲ್‌ ನ ರಾಜಕೀಯ ವ್ಯಾಪ್ತಿ ತುಂಬಾ ಸಂಕೀರ್ಣವಾಗಿದೆ. ಅಲ್ಲಿನ ಧಾರ್ಮಿಕ ಗಲಭೆ, ಭದ್ರತೆಗೆ ಇರುವ ಆತಂಕ ನಿರಂತರವಾದದ್ದು. ಸಾವಿರಾರು ವರ್ಷಗಳ ಕಾಲ ನಿರಾಶ್ರಿತರಾಗಿದ್ದ ಯಹೂದ್ಯರಿಗೆ ಆಶ್ರಯವನ್ನು ನೀಡಿದ್ದು ಭಾರತ ಮಾತ್ರ. ನಂತರದ ದಿನಗಳಲ್ಲಿ ನಾವು ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಮತ್ತು ದೇಶವನ್ನು ಉಳಿಸಿಕೊಳ್ಳಲು ಯಶಸ್ವಿಗಳಾದೆವು. ಆದರೆ ಇಂದಿಗೂ ನಮ್ಮ ದೇಶವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದರು.

ನಾವು ಒಳ್ಳೆಯವರು, ಎಲ್ಲರೊಂದಿಗೂ ಸ್ನೇಹದಿಂದಿರುತ್ತೇವೆ ಎಂದಾಕ್ಷಣ ಉಳಿದವರು ನಿಮ್ಮೊಂದಿಗೆ ಗೆಳೆತನ ಬೆಳೆಸುತ್ತಾರೆ ಮತ್ತು ಶಾಂತಿಯಿಂದಿರುತ್ತಾರೆ ಎನ್ನುವುದು ತಪ್ಪುಕಲ್ಪನೆ. ಬಲಿಷ್ಠರಾದವರ ಜೊತೆಗೆ ಮಾತ್ರ ಜನ ಶಾಂತಿಯಿಂದ ಸ್ನೇಹವನ್ನು ಬಯಸುತ್ತಾರೆ. ಹಾಗಾಗಿ ನಾವು ಬಲಿಷ್ಠರಾಗಿರಬೇಕು. ಶತ್ರುಗಳ ನಡುವೆ ಬದುಕುಳಿಯುವ ಅಗತ್ಯವು ಯಹೂದಿಗಳಿಗೆ ವೈಯಕ್ತಿಕ ಅಗತ್ಯಗಳಿಗಿಂತ ಸಮುದಾಯದ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಕಲಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಸಂವಾದ ವರ್ಲ್ಡ್ ಸಂಪಾದಕ ಪ್ರಶಾಂತ್ ವೈದ್ಯರಾಜ್, ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್, ಉಪಾಧ್ಯಕ್ಷೆ ಡಾ.ಅನುರಾಧಾ ಉಪಸ್ಥಿತರಿದ್ದರು.

.

Leave a Reply

Your email address will not be published.

This site uses Akismet to reduce spam. Learn how your comment data is processed.