ಇಂದು ಪುಣ್ಯಸ್ಮರಣೆ
ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್‌ ಅವರು ದೇಶ ಕಂಡ ಮಹಾನ್‌ ನಾಯಕ. ಅವರು ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಭಾರತದ ಶೋಷಿತ ವರ್ಗಗಳ ಉದ್ಧಾರಕ್ಕಾಗಿ ಅನವರತ ಶ್ರಮಿಸಿದವರು. ಭಾರತದಲ್ಲಿ ದೀನದಲಿತ ಜಾತಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಿರುವ ಕೊಡಗೆ ಅಪಾರ. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಡಾ. ಭೀಮರಾವ್‌ ಅಂಬೇಡ್ಕರ್‌ ಅವರು ಏಪ್ರಿಲ್‌ 14, 1891ರಂದು ಮಧ್ಯಪ್ರದೇಶದ ಮೋವ್‌ನಲ್ಲಿ ಜನಿಸಿದರು. ಇವರ ತಂದೆ ರಾಮ್‌ ಜೀ ಸಕ್ಪಾಲ್‌. ಅವರು ಮರಾಠಿ ಮತ್ತು ಇಂಗ್ಲೀಷ್‌ ನಲ್ಲಿ ವ್ಯಾಸಂಗ ಮಾಡಿದರು. ಅಂಬೇಡ್ಕರ್‌ ಅವರು 1908ರಲ್ಲಿ ಎಲ್ಫಿನ್ ಸ್ಟೋನ್ ಹೈಸ್ಕೂಲ್‌ನಿಂದ ಮೆಟ್ರಿಕ್ಯೂಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಉನ್ನತ ಶಿಕ್ಷಣವನ್ನು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. 1927 ರ ಜೂನ್‌ 8 ರಂದು ಕೊಲಂಬಿಯಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು.

ವೃತ್ತಿ ಜೀವನ
ಅಂಬೇಡ್ಕರ್‌ ಅವರು ಮುಂಬೈನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಇವರು ಓದಿದ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಇದರ ಜೊತೆಗೆ ಪ್ರತಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಬಾಂಬೆ ಹೈಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದು,1925ರಲ್ಲಿ ಆಲ್-ಯುರೋಪಿಯನ್ ಸೈಮನ್‌ ಆಯೋಗದೊಂದಿಗೆ ಕೆಲಸ ಮಾಡಲು ಅವರನ್ನು ಬಾಂಬೆ ಪ್ರೆಸಿಡೆನ್ಸಿ ಕಮಿಟಿಗೆ ನೇಮಿಸಲಾಯಿತು. 1927ರಲ್ಲಿ ಅಂಬೇಡ್ಕರ್‌ ಅವರು ಅಸ್ಪೃಶ್ಯತೆ ವಿರುದ್ಧ ಸಕ್ರಿಯವಾಗಿ ಚಳವಳಿಗಳನ್ನು ಪ್ರಾರಂಭಿಸಿದರು.
ಬಿ. ಆರ್. ಅಂಬೇಡ್ಕರ್ ಅವರು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು.

ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಮತ್ತು ಹಗಲಿರಳು ಶ್ರಮವಹಿಸಿ ಕೆಲಸ ಮಾಡಿದ ನಿಟ್ಟಿನಲ್ಲಿ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿತ್ತು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು.


ಸ್ವಾತಂತ್ರ್ಯ ಪೂರ್ವದಲ್ಲಿ ಅಂಬೇಡ್ಕರ್ ಅವರು ದಲಿತರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ನಂತರ 1942ರಲ್ಲಿ ಅವರು ಸಮುದಾಯದ ನಿರ್ದಿಷ್ಟ ಕಾಳಜಿಗಳನ್ನು ಪರಿಹರಿಸಲು ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ಸ್ಥಾಪಿಸಿದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ವಿಶಾಲ ಸನ್ನಿವೇಶದಲ್ಲಿ ದಲಿತರು ತಮ್ಮ ಕುಂದುಕೊರತೆಗಳನ್ನು ಹೇಳಲು ಮತ್ತು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದರು. 

ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ರಚನೆಯಲ್ಲಿ ಬಾಬಾಸಾಹೇಬರು ಕೂಡ ಮಹತ್ವದ ಪಾತ್ರ ವಹಿಸಿದ್ದರು. ಹಿಲ್ಟನ್ ಯಂಗ್ ಕಮಿಷನ್‌ಗೆ ಬಾಬಾಸಾಹೇಬ್ ಮಂಡಿಸಿದ ಪರಿಕಲ್ಪನೆಯ ಮೇಲೆ ಸೆಂಟ್ರಲ್ ಬ್ಯಾಂಕ್ ಅನ್ನು ರಚಿಸಲಾಯಿತು. ಅಂಬೇಡ್ಕರ್ ಅವರು ರಕ್ಷಣಾ ಸಲಹಾ ಸಮಿತಿಯಲ್ಲಿ ಮತ್ತು ವೈಸ್‌ರಾಯ್‌ನ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1951ರಂದು ಅಂಬೇಡ್ಕರ್ ಅವರು ನೆಹರೂ ಅವರ ಕ್ಯಾಬಿನೆಟ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಿದರು. 1952ರಲ್ಲಿ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಅವರ ಮಾಜಿ ಸಹಾಯಕ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ನಾರಾಯಣ್ ಸದೋಬಾ ಕಜ್ರೋಲ್ಕರ್ ವಿರುದ್ಧ ಸೋತರು.


ಪ್ರಶಸ್ತಿ
ಬಿ.ಆರ್‌ ಅಂಬೇಡ್ಕರ್‌ ಅವರಿಗೆ 1990ರಲ್ಲಿ ಮರಣೋತ್ತರವಾಗಿ ಭಾರತ ಸರ್ಕಾರ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


ಬಿ.ಆರ್‌ ಅಂಬೇಡ್ಕರ್‌ ಅವರು ಡಿಸೆಂಬರ್‌ 6, 1956ರಂದು ತಮ್ಮ 65ನೇ ವಯಸ್ಸಿನಲ್ಲಿ ವಿಧಿವಶರಾದರು..

Leave a Reply

Your email address will not be published.

This site uses Akismet to reduce spam. Learn how your comment data is processed.