ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಶ್ರೀ ಎಸ್ ಎಂ ಕೃಷ್ಣ (92) ಅವರು ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸಿದೆ.

ಆರ್ ಎಸ್ ಎಸ್ ಶ್ರದ್ಧಾಂಜಲಿ ಸಂದೇಶ

ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

ಭಾವಪೂರ್ಣ ಶ್ರದ್ಧಾಂಜಲಿ

ಶ್ರೀ ಎಸ್.ಎಂ. ಕೃಷ್ಣ

(01. 05. 1932 – 10. 12. 2024)

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರಸಚಿವ, ಮಾಜಿ ರಾಜ್ಯಪಾಲ ಪದ್ಮವಿಭೂಷಣ ಶ್ರೀ ಎಸ್. ಎಂ. ಕೃಷ್ಣ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನುಂಟುಮಾಡಿದೆ.

ಮತ್ಸದ್ಧಿ ರಾಜಕಾರಣಿಯಾಗಿ, ನಾಡಿನ ಜನಪ್ರಿಯ ಮುಖ್ಯಮಂತ್ರಿಯಾಗಿ, ರಾಷ್ಟ್ರದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕರ್ನಾಟಕ ವಿಧಾನ ಪರಿಷತ್ ಸ್ಪೀಕರ್ ಆಗಿ ರಾಜಕೀಯ ರಂಗದಲ್ಲಿ ಮೇರು ವ್ಯಕ್ತಿತ್ವವಾಗಿದ್ದಎಸ್ ಎಂ ಕೃಷ್ಣ ಅವರು ಸರಳ ವ್ಯಕ್ತಿತ್ವ ಹಾಗೂ ಆತ್ಮೀಯತೆಯ ಸ್ವಭಾವದಿಂದ ಅಪಾರ ಜನಮನ್ನಣೆಗಳಿಸಿದ್ದರು. ಹೊಸಚಿಂತನೆಗಳ ಅನೇಕ ಜನಸ್ನೇಹಿ ಅಭಿವೃದ್ಧಿ ಯೋಜನೆಗಳ ಮೂಲಕ ನಾಡಿನ ವಿಕಾಸಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ಸುಮಾರು ಆರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ತಮ್ಮ ದೂರದೃಷ್ಟಿತ್ವ, ನಾಯಕತ್ವ, ದಕ್ಷ ಆಡಳಿತದಿಂದ ಎಲ್ಲರಿಗೂ ಮಾದರಿಯಾದವರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ.

ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ

ಡಾ. ಪಿ.ವಾಮನ್ ಶೆಣೈ
ಕ್ಷೇತ್ರೀಯ ಸಂಘಚಾಲಕ

10-12-2024
ಬೆಂಗಳೂರು

2020 ಅಕ್ಟೋಬರ್ 25ರಂದು ಸದಾಶಿವನಗರದಲ್ಲಿ ನಡೆದ ಆರ್ ಎಸ್ ಎಸ್ ವಿಜಯದಶಮಿ ಉತ್ಸವದಲ್ಲಿ ಶ್ರೀ ಎಸ್ ಎಂ ಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು. ಅದರ ಸಂಕ್ಷಿತ್ತ ರೂಪ ಇಲ್ಲಿದೆ.

‘ಗ್ಲೋಬಲ್ ವಿಲೇಜ್’ ಸಂಘದ ಸಿದ್ಧಾಂತ

ದೇಶದ ಚರಿತ್ರೆ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈತಿಕ ನೀತಿಗಳೇ ನಮ್ಮ ದೇಶಕ್ಕೆ ಅಡಿಪಾಯ. ಈ ಅಡಿಪಾಯವನ್ನೇ ಇಟ್ಟುಕೊಂಡು ಸಹಸ್ರಾರು ವರ್ಷಗಳಿಂದ ಹಿಂದು ಧರ್ಮ ವಸುಧೈವ ಕುಟುಂಬಕಂ ಎಂಬುದನ್ನು ಪ್ರತಿಪಾದಿಸಿದೆ. ಇಡೀ ವಿಶ್ವವೆಲ್ಲ ಒಂದು ದೊಡ್ಡ ಕುಟುಂಬ ಎನ್ನುವುದನ್ನು ಸಾರಿದೆ.

ಅದೇ ಇಂಗ್ಲೀಷ್‌ನಲ್ಲಿ ಪ್ರಸ್ತುತ ಗ್ಲೋಬಲ್ ವಿಲೇಜ್ ಆಗಿದೆ. ವಿಶ್ವ ಕುಟುಂಬದ ಸಿದ್ಧಾಂತವನ್ನು ನಮ್ಮ ದೇಶದ ಮುಂದೆ ಇಟ್ಟವರು ಆರ್‌ಎಸ್‌ಎಸ್‌ ಸಂಸ್ಥಾಪಕರು. ಅವರಿಗೆ ನಮ್ಮ ಕೋಟಿ ಪ್ರಣಾಮಗಳನ್ನು ಅರ್ಪಿಸಬೇಕಾಗಿರುವುದು ನಮ್ಮ ಧರ್ಮ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಅವರು ಉಪನ್ಯಾಸದಲ್ಲಿ ಹೇಳಿದರು.

ಸಂಘದ ಅಗತ್ಯತೆ ಈಗ ಹೆಚ್ಚಿದೆ

ನಾನು ಬಹಳಷ್ಟು ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಅನ್ಯಾನ್ಯ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಆದರೆ ಅಂತಿಮವಾಗಿ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಗತ್ಯತೆಯನ್ನು ಕಂಡುಕೊಂಡಿದ್ದೇನೆ. ಹಿಂದೆಂದಿಗಿಂತಲೂ ಈಗ ಸಂಘದ ಅಗತ್ಯ ಬಹು ಪ್ರಾಮುಖ್ಯವಾಗಿದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬ. ನನ್ನ ಈ ನಂಬಿಕೆಯ ಹಿಂದೆ ಬಹುದೊಡ್ಡ ಅನುಭವವಿದೆ.

ಮೈಸೂರಿನ ರಾಮಕೃಷ್ಣಾಶ್ರಮದ ನಾಲ್ಕು ಗೋಡೆಗಳ ಮಧ್ಯೆ ಬೆಳೆದವನು ನಾನು. ರಾಮ-ಕೃಷ್ಣರ ಸಂದೇಶಗಳಿಂದ ಉತ್ತೇಜಿತನಾದವನು. ಸ್ವಾಮಿ ವಿವೇಕಾಂದರ ಅಮೆರಿಕ ದೇಶದಲ್ಲಿನ ಭಾಷಣ ಯಾವ ಭಾರತೀಯರಲ್ಲಿ ತಾನೇ ದೇಶಪ್ರೇಮದ ಗಂಟೆಯನ್ನು ಬಡಿಯುವುದಿಲ್ಲ? ಅಂತಹ ಹಿನ್ನೆಲೆಯಿಂದ ಬಂದವನು ನಾನು ಎಂದು ತಮ್ಮ ಬಾಲ್ಯವನ್ನು ಎಸ್‌ಎಂ ಕೃಷ್ಣ ನೆನಪಿಸಿಕೊಂಡರು.

ಗೌರವ ಅರ್ಪಣೆಗೆ ಬಂದಿದ್ದೇನೆ

ಇಂತಹ ದೇಶಭಕ್ತಿಯ ಸಂಘಕ್ಕೆ ನನ್ನ ಗೌರವವನ್ನು ಅರ್ಪಣೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿಯೊಬ್ಬರೂ ದೇಶಕ್ಕೋಸ್ಕರ ಎರಡು ವರ್ಷಗಳ ಕಾಲ ತಮ್ಮ ಜೀವನ ಮೀಸಲಾಗಿಡಬೇಕು. ನಮ್ಮ ದೇಶದಲ್ಲಿಯೂ ಕೂಡ ಎರಡು ವರ್ಷಗಳ ಕಾಲ ನಮ್ಮನ್ನು ನಾವು ಅರ್ಪಿಸಿಕೊಳ್ಳುವಂತಾಗಬೇಕು. ನಮ್ಮನ್ನು ನಾವು ದೇಶಕ್ಕೆ ಅರ್ಪಣೆ ಮಾಡಿಕೊಳ್ಳುವುದರಿಂದ ನಮ್ಮ ರಾಷ್ಟ್ರಾಭಿಮಾನ ಅಭಿವ್ಯಕ್ತವಾಗುತ್ತದೆ ಎಂದರು.

ನಮ್ಮ ದೇಶ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ನಾವು ಭಾರತೀಯರು ಎಂದು ತಲೆ ಎತ್ತಿ ಹೇಳಿಕೊಳ್ಳುವ ಸ್ಥಿತಿಯನ್ನು ನಾವು ತಲುಪಿದ್ದೇವೆ ಎಂದು ಮಾಜಿ ಸಿಎಂ ಎಸ್‌ಎಂಕೆ ಉಪನ್ಯಾಸದಲ್ಲಿ ಹೇಳಿದರು.

ನಾವು ಯಾವುದಕ್ಕೂ ಅಂಟಿಕೊಳ್ಳಬಾರದು

ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಹಿಂದು ಧರ್ಮದಲ್ಲಿಯೇ ಇದೆ. ಉದಾಹರಣೆಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಅಧಿಕಾರ ಹಸ್ತಾಂತರ ಮಾಡುತ್ತೀರಾ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕೇಳಿದರೆ, ನೋಡೋಣ ಎನ್ನುತ್ತಾರೆ. ಆದರೆ ನಮ್ಮ ದೇಶದಲ್ಲಿ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 13 ದಿನಗಳ ಮಾತ್ರ ಪ್ರಧಾನಿ ಆಗಿದ್ದರು.

ಅವರು ಅಳಲಿಲ್ಲ ಅವರು ರಾಷ್ಟ್ರಪತಿಭವನಕ್ಕೆ ತೆರಳಿ ರಾಜೀನಾಮೆ ಕೊಟ್ಟು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. ನಾವು ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಧರ್ಮದಲ್ಲಿಯೇ ಇದೆ. ಅಧಿಕಾರಕ್ಕೂ ಕೂಡ ನಾವು ಅಂಟಿಕೊಳ್ಳಬಾರದು ಎಂದರು.

ರಾಷ್ಟ್ರಪ್ರೇಮ ಎಂಬ ಲಸಿಕೆ

ನಮ್ಮ ಹೆಂಡತಿ-ಮಕ್ಕಳಿಗಾಗಿ, ನಮಗಾಗಿ ಪ್ರಾಣಾಯಾಮ-ಯೋಗ ಸಾಧನೆ ಮಾಡಲು ನಾವು ಕಾಲವನ್ನು ವಿನಿಯೋಗಿಸುತ್ತೇವೆ. ಆದರೆ ದೇಶವನ್ನೇ ದೇವರು ಎಂದು ನಂಬಿರುವ ನಾವು ದೇಶಕ್ಕಾಗಿಯೇ ಎಷ್ಟು ಕಾಲ ವಿನಿಯೋಗಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ತಮ್ಮಷ್ಟಕ್ಕೆ ತಾವೇ ಹಾಕಿಕೊಳ್ಳಬೇಕಾಗಿದೆ. ನಮ್ಮ ದೇಶದ ಶೈಕ್ಷಣಿಕ ಪದ್ಧತಿ ಬದಲಾಗಬೇಕಿದೆ. ನಮ್ಮ ದೇಶದಲ್ಲಿ ಆಂಗ್ಲ ಪದ್ಧತಿಯಿಂದ ಪ್ರೇರಿತ ವಿದ್ಯಾಭ್ಯಾಸದ ಪದ್ಧತಿಯಿದೆ ಎಂದರು.


ಇಂತಹ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಎಂಬ ಲಸಿಕೆಯನ್ನು ನಾವು ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕಾಗಿದೆ. ಆಗ ಮುಂದೆ ಅವರು ರಾಷ್ಟ್ರಪ್ರೇಮದ ವೈಶಾಲ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. 1925ರಲ್ಲಿ ಆರ್‌ಎಸ್ಎಸ್ ಸ್ಥಾಪನೆ ಆಗಿದೆ. ಸಂಘದ ಸಂಸ್ಥಾಪಕರೊಂದಿಗೆ ಲೋಸಭೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ನಮ್ಮ ಮಂಡ್ಯದ ಜನರು ಕಲ್ಪಿಸಿಕೊಟ್ಟಿದ್ದರು ಎಂದು ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣಾ ಅವರು ಉಪನ್ಯಾಸದಲ್ಲಿ ನೆನಪಿಸಿಕೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.