ಇಂದು ಗೀತಾ ಜಯಂತಿ

ಲೇಖಕರು: ಶ್ರೀಮತಿ ಸರ್ವಮಂಗಳ

ಭಗವದ್ಗೀತೆ ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥಗಳಲ್ಲೊಂದು‌. ಇಡೀ ಮನುಕುಲವು ಲೌಕಿಕ ಜೀವನದಲ್ಲಿ ಅನುಭವಿಸುವ ಸವಾಲುಗಳನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸುವುದಕ್ಕೆ ಸಹಕಾರಿಯಾಗುವ ಪವಿತ್ರ ಮಾರ್ಗದರ್ಶಿ ಗ್ರಂಥ. ಜಗತ್ತಿನ ಆದ್ಯ ಮನೋವಿಜ್ಞಾನಿ ಎಂದು ಕರೆಯಲ್ಪಡುವ, ವಿಶ್ವದ ನಾನಾ ವಿಶ್ವವಿದ್ಯಾನಿಲಯಗಳು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗೆ ತೊಡಗಿಸಿಕೊಳ್ಳಲು ನೆರವಾದ ಮೌಲಿಕ ಗ್ರಂಥ. ಅಸಂಖ್ಯಾತ ಸಾಧಕರ ಯಶಸ್ಸಿನ ಹಿಂದಿರುವ ಪ್ರೇರಣಾ ಗ್ರಂಥ.

ಶ್ರೀ ಕೃಷ್ಣ ಪರಮಾತ್ಮನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಸರ್ವ ಜನಾಂಗಕ್ಕೂ, ಸಾರ್ವಕಾಲಿಕವಾಗಿ ದಾರಿದೀಪದಂತಿರುವ ಕೃತಿ. ಅಂತಹ ಗೀತೆಯನ್ನು ಬೋಧಿಸಿದ ದಿನವನ್ನು ‘ಗೀತಾಜಯಂತಿ’ ಎಂದು ಆಚರಿಸಲಾಗುತ್ತದೆ.

ಗೀತಾ ಜಯಂತಿಯ ನಿಮಿತ್ತ ಅರ್ಜುನನಲ್ಲಿ ಉಂಟಾದ ಗೊಂದಲ ಮತ್ತು ಅದಕ್ಕೆ ಭಗವಂತನು ನೀಡಿದ ಉತ್ತರವನ್ನು ಸಂಕ್ಷಿಪ್ತವಾಗಿ ಕೆಲವು ಶ್ಲೋಕಸಹಿತವಾಗಿ ಇಲ್ಲಿ ವಿವರಿಸಲಾಗಿದೆ‌.

ಭಗವದ್ಗೀತೆಯ ಎರಡನೆಯ ಅಧ್ಯಾಯವು ಸಂಜಯನಿಂದ ಆರಂಭಗೊಳ್ಳುತ್ತದೆ. ಬಿಲ್ಲುಬಾಣಗಳನ್ನು ತೆಗೆದಿಟ್ಟು ಯುದ್ಧ ಮಾಡುವುದಿಲ್ಲವೆಂದು ರಥದಲ್ಲಿ ಕುಸಿದು ಕುಳಿತ ಅರ್ಜುನನ ವಿಷಾದವು (ಮೊದಲನೆಯ ಅಧ್ಯಾಯದ ಕೊನೆಯ ಶ್ಲೋಕ)ಎರಡನೆಯ ಅಧ್ಯಾಯದಲ್ಲೂ ಮುಂದುವರೆದಿದೆ.

ಸಂಜಯನು ಹೇಳುತ್ತಾನೆ –

“ಕೃಪಯಾಪರಯಾವಿಷ್ಟಂ ಅಶ್ರುಪೂರ್ಣಾಕುಲೇಕ್ಷಣಮ್”/ದೈನ್ಯಸ್ಥಿತಿಯಿಂದ ಕೂಡಿ ಕಣ್ಣೀರಿನಿಂದ ಕೂಡಿದ ಅರ್ಜುನನನ್ನು ಶ್ರೀಕೃಷ್ಣನು ಮಾತಾಡಿಸಿದನು_

“ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್/ಅನಾರ್ಯಜುಷ್ಟಂ ಅಸ್ವರ್ಗ್ಯಂ ಅಕೀರ್ತಿಕರಮರ್ಜುನ//
ಕ್ಲೈಬ್ಯಂ ಮಾ ಸ್ಮ ಗಮ:ಪಾರ್ಥ ನೈತತ್ ತ್ವಯ್ಯುಪಪದ್ಯತೇ/ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ//” _

ಕ್ಷತ್ರೀಯರಿಗೆ ಉಚಿತವಲ್ಲದ ನರಕದ ಹಾದಿಯನ್ನು ತೋರಿಸುವ, ಅಕೀರ್ತಿಯನ್ನು ತಂದುಕೊಡುವ ಈ ಹೇಡಿತನವು ಯುದ್ಧ ಪ್ರಾರಂಭವಾಗುವ ಈ ನಿರ್ಣಾಯಕ ಘಟ್ಟದಲ್ಲಿ ಹೇಗೆ ಬಂದಿತು?ಹೇಯವಾದ ಹೃದಯದೌರ್ಬಲ್ಯವನ್ನು ಬಿಟ್ಟು ಮೇಲೇಳು,ಯುದ್ಧ ಮಾಡು”

ಶ್ರೀಕೃಷ್ಣನ ಎರಡು ಶ್ಲೋಕಗಳ ಈ ಮಾತುಗಳಿಗೆ ಅರ್ಜುನನು ಐದು ಶ್ಲೋಕಗಳಲ್ಲಿ ಉತ್ತರಿಸುತ್ತಾನೆಂದರೆ ಅವನ ಸ್ಥಿತಿಯನ್ನು ನಾವು ಊಹಿಸಬಹುದು. ಅವನು ತನ್ನ ದು:ಖಕ್ಕೆ ಈ ಕೆಳಕಂಡಂತೆ ಕಾರಣಗಳನ್ನು ಕೊಡುತ್ತಾ ಹೋಗುತ್ತಾನೆ.

1.ತಂದೆಯಾದ ಪಾಂಡುವಿನ ಮರಣದ ನಂತರ, ತಂದೆಯ ಪ್ರೀತಿಯ ಕೊರತೆಯನ್ನೂ ಮರೆಯುವಂತೆ ಎತ್ತಿ ಆಡಿಸಿ, ಎದೆಗಪ್ಪಿ ಬೆಳೆಸಿದ ಮುತ್ತಾತರಾದ ಭೀಷ್ಮರನ್ನೂ, ವಿದ್ಯೆ ಕೊಟ್ಟು ಬೆಳೆಸಿದ ದ್ರೋಣರನ್ನೂ ಬಾಣಗಳಿಂದ ಕೊಲ್ಲುವುದು ಹೇಗೆ? ಪೂಜ್ಯರಾದ ಅವರನ್ನು ಕೊಂದು ರಕ್ತಸಿಕ್ತವಾದ ಕೈಗಳಿಂದ ಭೂಮಿಯನ್ನು ಆಳುವುದಕ್ಕಿಂತಲೂ ಭಿಕ್ಷೆ ಬೇಡಿ ಬದುಕುವುದು ಲೇಸು. (2ನೇ ಅಧ್ಯಾಯ4ಮತ್ತು 5ನೇ ಶ್ಲೋಕ)

2.ನಾವೇ ಕೌರವರನ್ನು ಜಯಿಸುತ್ತೇವೋ, ಕೌರವರೇ ನಮ್ಮನ್ನು ಜಯಿಸುತ್ತಾರೋ ಗೊತ್ತಿಲ್ಲ. ಏನೇ ಆದರೂ, ಮನುಷ್ಯನು ದುಡಿಯುವುದು, ಹಣಸಂಪಾದನೆ ಮಾಡುವುದು ತನ್ನ ಕುಟುಂಬದವರಿಗಾಗಿ, ಬಂಧುಬಾಂಧವರಿಗಾಗಿ. ಯಾರನ್ನು ಕೊಂದು ಬದುಕುವುದೇ ಕನಸಿನ ಮಾತೋ (ಯಾನೇವ ಹತ್ವಾ ನ ಜಿಜೀವಿಷಾಮ:ತೇವಸ್ಥಿತಾ ಪ್ರಮುಖೇ ಧಾರ್ತರಾಷ್ಟ್ರಾ:) ಅಂತಹ ಕೌರವರೇ ಕಣ್ಣೆದುರಿಗೆ ನಿಂತಿದ್ದಾರೆ. ಇವರೆಲ್ಲರನ್ನೂ ಕೊಲ್ಲುವುದು ಹೇಗೆ?

3.ಒಂದು ರೀತಿಯ ಮಬ್ಬು ಕವಿದ (ಕಾರ್ಪಣ್ಯದೋಷೋಪಹತಸ್ವಭಾವ:)ಬುದ್ಧಿಯಿಂದ ಕೂಡಿದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ನನಗೆ ಯಾವುದರಿಂದ ಶ್ರೇಯಸ್ಸಾಗುವುದೋ, ಏಳಿಗೆಯಾಗುವುದೋ ಅದನ್ನು ತಿಳಿಸಿ ಹೇಳು. ನನಗೆ ಮಾರ್ಗದರ್ಶನ ಮಾಡು. ನಾನು ನಿನ್ನ ಶಿಷ್ಯನಾಗಿ ಶರಣಾಗಿದ್ದೇನೆ. ಈ ರೀತಿಯಾಗಿ ಹೇಳಿದ ಅರ್ಜುನನು ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಹೇಳಿ ಸುಮ್ಮನಾಗಿಬಿಟ್ಟ. ‘ತಮುವಾಚ ಹೃಷೀಕೇಶ:ಪ್ರಹಸನ್ನಿವ ಭಾರತ/ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚ://

ಈ ಸಮಯದಲ್ಲಿ ಭಗವಂತನು ನಕ್ಕನಂತೆ. ನಗು ಎಂದರೆ ಪೂರಾ ನಗುವೂ ಅಲ್ಲ.’ಪ್ರಹಸನ್ನಿವ’ – ನಕ್ಕಂತೆ ಕಾಣಿಸಿದನಂತೆ. ಈ ನಗುವನ್ನು ಎರಡು ರೀತಿಯಲ್ಲಿ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ:

1.ಮನೋವೈಜ್ಞಾನಿಕ 2.ಆಧ್ಯಾತ್ಮಿಕ.

ಮನೋವೈಜ್ಞಾನಿಕ ವಿಶ್ಲೇಷಣೆ: ಮನುಷ್ಯನು ತನ್ನ ಸಮಸ್ಯೆಯನ್ನು ಎರಡು ಕಾರಣಗಳಿಗಾಗಿ ಮತ್ತೊಬ್ಬರಲ್ಲಿ ಹೇಳಿಕೊಳ್ಳುತ್ತಾನೆ.

1.ಪರಿಹಾರ ಅಥವಾ ಸಹಾಯವನ್ನು ಬಯಸಿ

2.ಕನಿಷ್ಠಪಕ್ಷ ತನ್ನ ಒಳಗುದಿಯನ್ನು ಹೇಳಿಕೊಂಡ ನಂತರ ಸಿಗುವ ಸಮಾಧಾನಕ್ಕಾಗಿ.

ಹೀಗೆ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದ ವ್ಯಕ್ತಿಯೊಂದಿಗೆ ನಾವು ಹೇಗೆ ವ್ಯವಹರಿಸಬೇಕು? ತನ್ನದೇ ಸಾಕಷ್ಟು ಸಮಸ್ಯೆಗಳಿದ್ದಾಗ ಅವುಗಳನ್ನು ಹೇಳುತ್ತಾ ಅವನಿಗಿಂತ ಜೋರಾಗಿ ಅಳಲು ಸಾಧ್ಯವಿಲ್ಲ. ಬಂದ ವ್ಯಕ್ತಿ ಇದರಿಂದ ಮತ್ತಷ್ಟು ಕಕ್ಕಾಬಿಕ್ಕಿಯಾಗುತ್ತಾನೆ, ಗಾಬರಿಗೊಳ್ಳುತ್ತಾನೆ. ಇದು ಸರಿಯಾದ ನಿಲುವಲ್ಲ. ಹಾಗಾದರೆ ಅವನನ್ನು ನೋಡಿ ಅಪಹಾಸ್ಯ ಮಾಡುತ್ತಾ, ಗೇಲಿ ಮಾಡುತ್ತಾ ಗಹಗಹಿಸಿ ನಕ್ಕರೆ? ಇದು ಇನ್ನೊಂದು ಅತಿರೇಕದ ವರ್ತನೆ. ಇದರಿಂದ ಆ ವ್ಯಕ್ತಿ ಮತ್ತಷ್ಟು ಕುಗ್ಗಿಹೋಗುತ್ತಾನೆ, ಖಿನ್ನತೆಗೊಳಗಾಗುತ್ತಾನೆ. ಸರಿಯಾದ ಕ್ರಮವೆಂದರೆ,’ಪ್ರಹಸನ್ನಿವ’ ಮುಖದ ಮೇಲಿನ ಮಂದಹಾಸ. ಆ ಮಂದಹಾಸವು ಆ ವ್ಯಕ್ತಿಯಲ್ಲಿ ಭರವಸೆಯನ್ನು ತುಂಬುವ,’ನಿನ್ನೊಂದಿಗೆ ನಾನಿದ್ದೇನೆ’ಎಂದು ಧೈರ್ಯ ತುಂಬುವಂತಹದ್ದಾಗಿರಬೇಕು. ಹೀಗೆ ಶ್ರೀಕೃಷ್ಣನು ಮನೋಚಿಕಿತ್ಸಕನಂತೆ (Psychotherapist)ಶಿಷ್ಯನಾಗಿ ಬಂದ ಅರ್ಜುನನಿಗೆ ಭರವಸೆಯನ್ನು ನೀಡುತ್ತಿದ್ದಾನೆ.


ಆಧ್ಯಾತ್ಮಿಕ ವಿಶ್ಲೇಷಣೆ:
ಶ್ರೀಕೃಷ್ಣನ ನಗು ಎಂತಹುದು? ಭಾಗವತದಲ್ಲಿ ತಾಯಿಯಾದ ದೇವಹೂತಿಗೆ ಕಪಿಲನಾಮಕ ಭಗವಂತನು ಭಗವದ್ಧ್ಯಾನವನ್ನು ಹೇಗೆ ಮಾಡುವುದೆಂದು ತಿಳಿಸುತ್ತಾ ಅಡಿಯಿಂದ ಮುಡಿಯವರೆಗೂ ಆಯುಧಗಳ ಸಹಿತಾದ ಉಪಾಸನಾಕ್ರಮವನ್ನು ಉಪದೇಶಿಸುತ್ತಾನೆ. ಆ ಸಂದರ್ಭದಲ್ಲಿ
‘ಹಾಸಂ ಹರೇರವನತಾಖಿಲೋಕ ತೀವ್ರಶೋಕಾಶ್ರುಸಾಗರವಿಶೋಷಣಮತ್ಯುದಾರಮ್/’ ಎಂದು ಹೇಳುತ್ತಾನೆ. ಶರಣಾಗಿಬಂದವರ ಶೋಕಾಶ್ರುವೆಂಬ ಸಾಗರವನ್ನೇ ಒಣಗಿಸುವ ಶಕ್ತಿ ಭಗವಂತನ ಮುಗುಳ್ನಗೆಗಿದೆ ಎಂದ ಮೇಲೆ, ಏನು ಮಾಡಬೇಕೆಂದು ತಿಳಿಯದೇ ಶರಣಾಗಿ ಬಂದ ಅರ್ಜುನನ ಧರ್ಮಸಂಕಟವನ್ನು ಕಳೆದ, ಭಕ್ತರ ದು:ಖಸಾಗರವನ್ನು ಒಣಗಿಸುವ ಶ್ರೀಕೃಷ್ಣನ ಭರವಸೆಯ ನಗು ನಮ್ಮೆಲ್ಲರನ್ನೂ ಕಾಪಾಡಲಿ.

Leave a Reply

Your email address will not be published.

This site uses Akismet to reduce spam. Learn how your comment data is processed.