ಇಂದು ಪುಣ್ಯಸ್ಮರಣೆ
ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು ಭಾರತೀಯ ವಕೀಲ, ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದವರು. ಇವರು ಭಾರತದ 9ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದವರು. ನರಸಿಂಹ ರಾವ್ ಅವರು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ದಿವಾಳಿಯತ್ತ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಪರಿಹರಿಸಲು ಮನಮೋಹನ್ ಸಿಂಗ್ ಅವರನ್ನು ಹಣಕಾಸು ಮಂತ್ರಿಯಾಗಿ ನೇಮಕ ಮಾಡಿದ್ದರು. ಅವರು ಅನೇಕ ಆರ್ಥಿಕ ಸುಧಾರಣಾ ನೀತಿಗಳನ್ನು ಜಾರಿಗೊಳಿಸಿದ್ದರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು ಜೂನ್ 28, 1921 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಲಕ್ನೆಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸೀತಾರಾಮ ರಾವ್ ಹಾಗೂ ತಾಯಿ ರುಕ್ಮಾಬಾಯಿ. ಪಿ.ವಿ ನರಸಿಂಹ್ ರಾವ್ ಅವರು ಪ್ರಾಥಮಿಕ ಶಿಕ್ಷಣವನ್ನು ಹನಮಕೊಂಡ ಜಿಲ್ಲೆಯ ಭೀಮದೇವರಪಲ್ಲಿ ಮುಗಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದರು. ನಂತರ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಶಿಕ್ಷಣ ಮುಗಿಸಿದರು. ಅವರು ಸಾಹಿತ್ಯ ಹಾಗೂ ಕಂಪ್ಯೂಟರ್ ಸಾಫ್ಟ್‌ವೇರ್ ಸೇರಿದಂತೆ ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದು, 17 ಭಾಷೆಗಳನ್ನು ಮಾತನಾಡುತ್ತಿದ್ದರು.
ರಾಜಕೀಯ ಜೀವನ
ಪಿ.ವಿ ನರಸಿಂಹ ರಾವ್ ಅವರು ಸ್ವಾತಂತ್ರ್ಯಚಳವಳಿಯಲ್ಲಿ ಭಾಗವಹಿಸಿದ ವ್ಯಕ್ತಿ. ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿ ಪೂರ್ಣ ಸಮಯದ ರಾಜಕೀಯಕ್ಕೆ ಸೇರಿದರು. ಅವರು ಆಂಧ್ರಪ್ರದೇಶ ರಾಜ್ಯ ವಿಧಾನಸಭೆ ಚುನಾಯಿತ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರು 1971ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. ಆಡಳಿತಾವಧಿಯಲ್ಲಿ ಭೂ ಸುಧಾರಣೆಗಳು ಮತ್ತು ಭೂ ಸೀಲಿಂಗ್ ಕಾಯಿದೆಗಳನ್ನು ಜಾರಿಗೊಳಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿಭಜಿಸುವ ಮೂಲಕ ಹೊಸ ಕಾಂಗ್ರೆಸ್ ಪಕ್ಷದ ರಚನೆಯಲ್ಲಿ ಇಂದಿರಾ ಗಾಂಧಿಯನ್ನು ಬೆಂಬಲಿಸಿದರು. ನಂತರ 1978ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮರುಸಂಘಟಿಸಲಾಯಿತು. ಅವರು ಆಂಧ್ರಪ್ರದೇಶದಿಂದ ಸಂಸತ್ತಿನ, ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 1988ರಲ್ಲಿ ಪಿ.ವಿ ನರಸಿಂಹ ರಾವ್ ಅವರು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.
ಅವರು 1991ರಲ್ಲಿ ರಾಜಕೀಯದಿಂದ ನಿವೃತ್ತರಾದರು. ಸ್ವಲ್ಪ ಸಮಯದ ಬಳಿಕ ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ನರಸಿಂಹ ರಾವ್ ಅವರು ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಪಿ.ವಿ ನರಸಿಂಹ ರಾವ್ ಅವರು ರಾಜಕೀಯ ಕ್ಷೇತ್ರ ಮಾತ್ರವಲ್ಲದೆ, ಸಂಗೀತ, ಸಿನಿಮಾ ಹಾಗೂ ರಂಗಭೂಮಿ, ಸಾಹಿತ್ಯದಲ್ಲೂ ಸಹ ಆಸಕ್ತಿ ಹೊಂದಿದ್ದರು. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ವಿಶ್ವನಾಥ ಸತ್ಯನಾರಾಯಣ ಅವರ ಪ್ರಸಿದ್ಧ ತೆಲುಗು ಕಾದಂಬರಿ ‘ವೇಯಿ ಪದಗಳು’ ಇದರ ಹಿಂದಿ ಭಾಷಾಂತರವಾದ ‘ಸಹಸ್ರಫಾನ್’ ಪ್ರಕಟಿಸಿದರು.
ಹರಿ ನಾರಾಯಣ ಆಪ್ಟೆ ಅವರ ಪ್ರಸಿದ್ಧ ಮರಾಠಿ ಕಾದಂಬರಿಯ ತೆಲುಗು ಅನುವಾದ, “ಪಾನ್ ಲಕ್ಷತ್ ಕೋನ್ ಘೆತೋ”, ಎಂಬ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿಸಲಾಯಿತು. ಅವರು ಇತರ ಪ್ರಸಿದ್ಧ ಕೃತಿಗಳನ್ನು ಮರಾಠಿ, ತೆಲುಗು ಮತ್ತು ಹಿಂದಿಯಿಂದ ಅನುವಾದಿಸುತ್ತಿದ್ದರು. ಅವರು ಯುಎಸ್ಎ ಮತ್ತು ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ವಿಷಯಗಳ ಕುರಿತು ಉಪನ್ಯಾಸ ನೀಡುತ್ತಿದ್ದರು.
ಪ್ರಶಸ್ತಿ
ಪಿ.ವಿ ನರಸಿಂಹ ಅವರು ಫೆಬ್ರವರಿ 9, 2024 ರಂದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಪಿ.ವಿ ನರಸಿಂಹ ಅವರು ಡಿಸೆಂಬರ್ 23, 2004 ರಂದು ತಮ್ಮ 83ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.