ಬೆಂಗಳೂರು: ಸ್ವಾಮಿ ವಿವೇಕಾನಂದರು ಈ ರಾಷ್ಟ್ರಕಂಡಂತಹ ಮಹಾನ್ ಶಿಕ್ಷಣತಜ್ಞ. ರಾಷ್ಟ್ರೀಯ ಶಿಕ್ಷಣ ನೀತಿ 2020 ಕೂಡ ಅವರ ಅನೇಕ ಚಿಂತನೆಗಳನ್ನು ಅಳವಡಿಸಿಕೊಂಡಿದೆ. ತಮ್ಮ ನಡೆ ನುಡಿಗಳ ಮೂಲಕ ದೇಶದ ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರಿಂದ ಹಿಡಿದು ಅಸಂಖ್ಯಾತ ಮಂದಿಗೆ ಅವರು ಪ್ರೇರಣೆಯಾಗಿದ್ದಾರೆ. ಅವರು ತಿಳಿಸಿಕೊಟ್ಟ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಶಿಕ್ಷಣ ತಜ್ಞ ಹಾಗೂ ಲೇಖಕ ಡಾ. ಟಿ.ಎನ್.ಲೋಕೇಶ್ ಹೇಳಿದರು.

ಸಮರ್ಥ ಭಾರತ ವತಿಯಿಂದ ನಡೆಯುತ್ತಿರುವ ಬಿ ಗುಡ್ ಡು ಗುಡ್ ಅಭಿಯಾನದ ಆನ್ಲೈನ್ ಉಪನ್ಯಾಸ ಸರಣಿಯ ಎರಡನೆಯ ದಿನದಂದು ಅವರು ಮಾತನಾಡಿದರು.

ತನ್ನ ಶ್ರೇಷ್ಠ ಸಂಸ್ಕೃತಿಯ ಕಾರಣಕ್ಕಾಗಿ ಇಂದಿಗೂ ವಿಶ್ವದ ಜನ ಭಾರತವನ್ನು ಗೌರವದಿಂದ ಕಾಣುತ್ತದೆ. ಅದರ ಭಾಗವಾಗಿರುವ ಗುರುಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಾರಿದವರು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು. ಪಾಶ್ಚ್ಯಾತರಲ್ಲಿ ಗುರುಶಿಷ್ಯರ ಪರಂಪರೆ ಯಾಂತ್ರಿಕವಾಗಿದ್ದು, ಭಾರತದಲ್ಲಿ ಭಾವನಾತ್ಮಕವಾಗಿ ಬೆಳೆದುಬಂದಿದೆ. ಇಂತಹ ಪರಂಪರೆಯ ಬೆಳಕಿನಲ್ಲಿ ಮುಂದಿನ ಯುವ ಪೀಳಿಗೆಯು ಸಮರ್ಥವಾಗಿ ಮುಂದುವರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಒಂದು ರಾಷ್ಟ್ರ ನಿರ್ಮಾಣವಾಗಬೇಕಿದ್ದರೆ ಅದರಲ್ಲಿ ವ್ಯಕ್ತಿ ನಿರ್ಮಾಣ ಎಂಬುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿನ ಆಚಾರ ವಿಚಾರಗಳನ್ನು, ದೇಶದ ಬೆನ್ನೆಲುಬಾದ ರೈತರನ್ನು, ಮಣ್ಣನ್ನು , ಪ್ರತಿಯೊಬ್ಬರನ್ನು ಗೌರವಿಸಬೇಕು. ಸ್ವಾಮಿ ವಿವೇಕಾನಂದರು ನೀಡಿರುವ ಉತ್ತಮನಾಗು, ಉಪಕಾರಿಯಾಗು ಸಂದೇಶವನ್ನು ಅಳವಡಿಸಿಕೊಂಡು, ಅವರು ಮಹತ್ವ ನೀಡಿದ ತ್ಯಾಗ, ಸೇವೆ, ಶ್ರದ್ಧೆ, ಏಕಾಗ್ರತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.