ಬೆಂಗಳೂರು: ಸ್ವಾಮಿ ವಿವೇಕಾನಂದರು ಯುವಕರನ್ನು ಕ್ರಿಯಾಶೀಲರನ್ನಾಗಿಸಲು ಅವತರಿಸಿದ ಪ್ರೇರಣಾದಾಯಿ ಯುವಕ. ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಯುವಕರು ಸಮರ್ಥರಾಗಬೇಕು. ಯುವಕರ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವಂತಹ ಕಾರ್ಯವಾಗಬೇಕು ಎಂದವರು ವಿವೇಕಾನಂದರು. ಈ ಎಲ್ಲಾ ಕಾರಣಕ್ಕಾಗಿ ಸ್ವಾಮಿ ವಿವೇಕಾನಂದರು ಸದಾ ಯುವಕರ ಹೃದಯದಲ್ಲಿ ನೆಲೆಸುತ್ತಾರೆ ಎಂದು ರಾಜಕೀಯ ಸಲಹೆಗಾರ್ತಿ ಸುರಭಿ ಹೊದಿಗೆರೆ ಹೇಳಿದರು.
ಸಮರ್ಥ ಭಾರತದ ವತಿಯಿಂದ 11ನೇ ವರ್ಷದ ‘ಬಿ ಗುಡ್ ಡು ಗುಡ್’ ಅಭಿಯಾನದ ನಿಮಿತ್ತ ಆಯೋಜಿಸಲಾಗಿರುವ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿ ನಿರ್ಮಾಣ ಮತ್ತು ಯುವಕರ ಸಬಲೀಕರಣಕ್ಕೆ ಶಿಕ್ಷಣ ಅತ್ಯಂತ ಶಕ್ತಿಶಾಲಿ ಅಸ್ತ್ರ ಎಂಬುದನ್ನು ಸ್ವಾಮಿ ವಿವೇಕಾನಂದರು ಅರಿತಿದ್ದರು. ಅವರು ಪದವಿ, ಪ್ರಮಾಣಪತ್ರ, ಸಾಕ್ಷರತೆಯನ್ನು ಶಿಕ್ಷಣವೆಂದು ಪರಿಗಣಿಸಲಿಲ್ಲ. ಅದಾಗಲೇ ವ್ಯಕ್ತಿಯಲ್ಲಿರುವ ಅದಮ್ಯ ಶಕ್ತಿಯನ್ನು ಅನಾವರಣಗೊಳಿಸುವ ಪ್ರಕ್ರಿಯೆಯನ್ನು ಶಿಕ್ಷಣವೆಂದು ತಿಳಿಸಿದರು. ಇಂದು ರಾಷ್ಟ್ರೀಯ ಶಿಕ್ಷಣ ನೀತಿ ವಿವೇಕಾನಂದರ ಈ ಚಿಂತನೆಯ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದರು.
ಸ್ವಾಮಿ ವಿವೇಕಾನಂದರ ಜೀವನಕ್ಕೆ ಸಂಬಂಧಿಸಿದ ಯಾವ ವಿಷಯವನ್ನೇ ಓದಿದರೂ, ಅದು ಪ್ರತಿಪಾದಿಸುವುದು ಶಕ್ತಿಯನ್ನೇ ಆಗಿದೆ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎನ್ನುವುದನ್ನು ಅವರ ಜೀವನದ ಮೂಲಕ ಸಾರಿದ್ದಾರೆ. ಧರ್ಮವನ್ನು ಯುಗಾನುಕೂಲಕ್ಕೆ ತಕ್ಕಂತೆ ಯುವಕರಿಗೆ ತಲುಪಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಎಂದು ನುಡಿದರು.
ಯುವಕರು ತಮ್ಮ ಬಗ್ಗೆ ತಿಳಿದುಕೊಳ್ಳುವ ಮೂಲಕ ಸಮಾಜದ ಔನತ್ಯಕ್ಕೆ ಶ್ರಮಿಸಬೇಕು. ಅದರ ಮೂಲಕ ಜೀವನದ ಮಹತ್ವದ ಗುರಿಯನ್ನು ಸ್ವೀಕರಿಸಲು ಸಿದ್ಧರಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಧರ್ಮ ಒಡೆಯುವ, ರಾಷ್ಟ್ರವನ್ನು ವಿಭಜಿಸುವ ಶಕ್ತಿಗಳು ಯುವಕರ ದಾರಿ ತಪ್ಪಿಸುತ್ತಿದೆ. ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಕುರಿತು ಯುವಕರು ಎಚ್ಚೆತ್ತುಕೊಂಡು, ಅದರ ಫಲವಾಗಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಗಳಿಸಬೇಕು. ಅಂತಹ ಶಕ್ತಿಯನ್ನು ಗಳಿಸುವುದಕ್ಕೆ ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಸಹಕಾರಿ ಎಂದು ಅಭಿಪ್ರಾಯಪಟ್ಟರು.