ಬೆಂಗಳೂರು:ನಮ್ಮ ರಾಷ್ಟ್ರದಲ್ಲಿನ ಯುವಕರಿಗೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಅವರ ಚಿಂತನೆಗಳನ್ನು ಅಧ್ಯಯನ ಮಾಡುವುದು ಬಹಳ ಮುಖ್ಯವಾಗಿದೆ. ರಾಷ್ಟ್ರದ ಮೇಲೆ ಅವರಿಗಿರುವ ಭಕ್ತಿ, ಅದರ ಉನ್ನತಿಗಾಗಿ ಅವರು ಮಾಡಿರುವ ತ್ಯಾಗವನ್ನು ಪ್ರೇರಣೆಯಾಗಿರಿಸಿಕೊಂಡು ರಾಷ್ಟ್ರಕ್ಕಾಗಿ ಸ್ವಲ್ಪ ಸಮಯವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಯುವ ಬರಹಗಾರ ಕಿರಣ್ ಕುಮಾರ್ ವಿವೇಕವಂಶಿ ಹೇಳಿದರು.
ಸಮರ್ಥ ಭಾರತ ವತಿಯಿಂದ ನಡೆಯುತ್ತಿರುವ ಬಿ ಗುಡ್ ಡು ಗುಡ್(ಉತ್ತಮಾನಾಗು ಉಪಕಾರಿಯಾಗು)ಅಭಿಯಾನದ ಆನ್ಲೈನ್ ಉಪನ್ಯಾಸ ಸರಣಿಯ ಐದನೆಯ ದಿನದಂದು ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ತರುಣರಾದವರು ಶ್ರದ್ಧೆ, ವಿಧೇಯತೆ, ಆದರ್ಶ, ಚಾರಿತ್ರ್ಯ, ತ್ಯಾಗ, ಸೇವೆ, ರಾಷ್ಟ್ರಪ್ರೇಮ, ಸಂಘಬದ್ಧತೆ ಇವೆಲ್ಲವನ್ನೂ ಹೊಂದಿ ರಾಷ್ಟ್ರದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಮ್ಮದೇ ಚಿಂತನೆಯ ಮೂಲಕ ತಿಳಿಸಿಕೊಟ್ಟವರು. ಜಗತ್ತಿನಲ್ಲಿ ಶ್ರದ್ಧೆ ಇದ್ದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಅದರಲ್ಲೂ ರಾಷ್ಟ್ರದ ಮಹಾನ್ ಪುರುಷರ ಕಾರ್ಯದ ಕುರಿತಾದ ಶ್ರದ್ಧೆ ರಾಷ್ಟ್ರವನ್ನು ಅದ್ಭುತವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದು ನುಡಿದರು.
ಆದರ್ಶ ಮತ್ತು ಅನುಷ್ಠಾನ ಇವೆರಡೂ ಜೊತೆ ಜೊತೆಯಾಗಿ ಹೋಗುವಂತಹದ್ದು. ಮೊದಲಿಗೆ ಆದರ್ಶಗಳನ್ನು ತಿಳಿದುಕೊಂಡು ಅದನ್ನು ನಮ್ಮಲ್ಲಿ ಇರಿಸಿ ನಂತರ ಅನುಷ್ಠಾನಕ್ಕೆ ತರಬೇಕು. ನಮ್ಮ ಜೀವನವು ಶುಭ್ರವಾಗಿರುವಂತೆ ನೋಡಿಕೊಂಡರೆ ಜಗತ್ತು ಶುಭ್ರವಾಗಿರುತ್ತದೆ. ಯಾವುದೇ ಸಮಸ್ಯೆಗಳನ್ನು ಟೀಕಿಸುವ ಬದಲಿಗೆ ಅವುಗಳನ್ನು ಸರಿಪಡಿಸುವಂತಹ ಮನಸ್ಥಿತಿಯನ್ನು ಹೊಂದಿರಬೇಕು. ಇಂತಹ ಚಾರಿತ್ರ್ಯವಂತರಿಗೆ ಸೋಲಿರುವುದಿಲ್ಲ. ನಮ್ಮಲ್ಲಿರುವ ಅಸೂಯೆಯನ್ನು ತ್ಯಜಿಸಿ ಆಶಿಷ್ಟರು, ದೃಢಿಷ್ಟರು,ಬಲಿಷ್ಠರು ಆಗಿರುವ ಯುವಕರು ನಮ್ಮ ದೇಶಕ್ಕೆ ಬೇಕು ಎಂಬ ಸ್ವಾಮಿ ವಿವೇಕಾನಂದರ ಆಸೆಯಂತೆ ನಾವಾಗೋಣ ಎಂದು ಹೇಳಿದರು.
ಮನೋ ದೌರ್ಬಲ್ಯ, ಹೃದಯ ದೌರ್ಬಲ್ಯ ನಮ್ಮ ಮನಸ್ಸನ್ನು ಆವರಿಸಲು ಬಿಡದಂತೆ ನಾವು ನೋಡಿಕೊಳ್ಳಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನಮ್ಮ ಮನಸ್ಸು ,ಚಿತ್ತ, ಹೃದಯ ಯಾವುದರ ಬಗ್ಗೆ ಯೋಚಿಸುತ್ತದೆಯೋ ಅದೇ ನಾವಾಗುತ್ತೇವೆ. ಕೆಟ್ಟದ್ದನ್ನು ಯೋಚಿಸದೆ ಒಳಿತನ್ನು ಯೋಚಿಸುವಂತಹ ಮನಸ್ಥಿತಿಗಳು ನಮ್ಮದಾಗಬೇಕು. ರಾಷ್ಟ್ರಕ್ಕಾಗಿ ತ್ಯಾಗ ಹಾಗೂ ಸೇವಾ ಮನೋಭಾವವನ್ನು ಹೊಂದಿ ಸಂಘಟಿತವಾಗಿ ಕೆಲಸ ಮಾಡುವಂತಹ ಆಲೋಚನೆಗಳನ್ನು ತರುಣರು ಬೆಳೆಸಿಕೊಳ್ಳಬೇಕು. ಇದು ವಿವೇಕಾನಂದರು ಯುವಕರಿಗೆ ನೀಡಿದ ಕರೆಯಾಗಿದೆ ಎಂದು ಹೇಳಿದರು.