ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಮೂರನೇ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವವನ್ನು ಹಿರಿಯ ರಂಗಕರ್ಮಿ ಹಾಗೂ ನಟ ಪ್ರಕಾಶ್ ಬೆಳವಾಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನೆಮಾ ಕ್ಷೇತ್ರಕ್ಕೆ ಮೈಸೂರು ನೀಡಿರುವ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಮೈಸೂರು ಅವಕಾಶಗಳ ಆಗರವಾಗಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದಲ್ಲಾಗುತ್ತಿರುವ ಬದಲಾವಣೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ನುಡಿದರು.
ಪ್ರತಿ ಕ್ಷೇತ್ರದಲ್ಲಿಯೂ ಬದಲಾವಣೆಗಳು ಆಗುತ್ತಿರುತ್ತವೆ. 2004ರ ಹೊತ್ತಿಗೆ ಡಿಜಿಟಲ್ ಸಿನೆಮಾ ಕಾಲಿಡುತ್ತಿದ್ದ ಸಮಯದಲ್ಲಿ ಸೆಲ್ಯುಲಾಯ್ಡ್ ಸಿನೆಮಾದ ಛಾಯಚಿತ್ರಗಾರರು ಅದಕ್ಕೆ ಒಗ್ಗಿಕೊಳ್ಳದ ಕಾರಣ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಮುಂದೆಯೂ ಇಂತಹ ಅನೇಕ ಆವಿಷ್ಕಾರಗಳು ಸಿನೆಮಾರಂಗದಲ್ಲಿ ಆಗಲಿದೆ. ಅದಕ್ಕೆ ಈಗಿನವರು ತಯಾರಿರಬೇಕು ಎಂದರು.
ಶ್ರೇಷ್ಠ ಚಲನಚಿತ್ರಗಳನ್ನು ಮತ್ತು ಗಮನಾರ್ಹ ವ್ಯಕ್ತಿಗಳನ್ನು ಪಾರಂಪರಿಕ ನಗರವಾದ ಮೈಸೂರು ಪೋಷಿಸಿದೆ. ಮುಂದಿನ ದಿನಗಳಲ್ಲಿ ಮೂವಿಂಗ್ ಇಮೇಜ್ ಮೀಡಿಯಾಕ್ಕಾಗಿ ಮೂಲಸೌಕರ್ಯವನ್ನು ನಿರ್ಮಿಸಲು ಗಮನವಹಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿನೆಮಾ ಇತಿಹಾಸಕಾರ ಮಾಣಿಕ್ ಪ್ರೇಮ್ ಚಂದ್, ಸಿನೆಮಾ ನಿರ್ದೇಶಕ ಪೃಥ್ವಿ ಕೊಣನೂರು, ಮೈಸೂರು ಸಿನೆಮಾ ಸೊಸೈಟಿಯ ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.
ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್, ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಗ್ರಾಮವಿಕಾಸ ಪ್ರಾಂತ ಸಂಯೋಜಕ ಅಕ್ಷಯ್, ಹಿರಿಯ ರಂಗಕರ್ಮಿ ಅದ್ದಂಡ ಕಾರ್ಯಪ್ಪ, ಚಿಂತಕ ಡಾ। ಸುಧಾಕರ ಹೊಸಳ್ಳಿ, ಸಿನಿಮಾ ಆಯಾಮದ ಪ್ರಮುಖರಾದ ಶ್ರೀರಾಜ್ ಗುಡಿ, ಸಹಪ್ರಮುಖರಾದ ಶೈಲೇಶ್ ಕುಲಕರ್ಣಿ ಉಪಸ್ಥಿತರಿದ್ದರು.