ಇಂದು ಜಯಂತಿ

ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಹಿತ್ಯವು ಪ್ರತಿಯೊಂದು ಭಾಷೆಯಲ್ಲೂ ಹೇರಳವಾಗಿ ಪ್ರಕಟವಾಗುತ್ತಿದೆ. ಆದರೆ ಈ ಮಹಾನ್ ಕಾರ್ಯದ ಪರಿಶ್ರಮದ ಹಿಂದೆ ಪ್ರಮುಖ ಪಾತ್ರ ವಹಿಸಿದವರಲ್ಲಿ ಶ್ರೀ ಹೊ. ವೆ. ಶೇಷಾದ್ರಿಯವರ ಹೆಸರು ಅಗ್ರಸ್ಥಾನದಲ್ಲಿದೆ.

ಮೇ 26, 1926 ರಂದು ಬೆಂಗಳೂರಿನಲ್ಲಿ ಜನಿಸಿದ ಶೇಷಾದ್ರಿಯುವರು 1943ರಲ್ಲಿ ಸಂಘದ ಸ್ವಯಂಸೇವಕರಾದರು. 1946ರಲ್ಲಿ ಶೇಷಾದ್ರಿಯವರು ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವಿ ಗಳಿಸಿದರು. ಮತ್ತು ಸಂಘದ ಪ್ರಚಾರಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು.

ಆರಂಭದಲ್ಲಿ ಅವರ ಕಾರ್ಯಕ್ಷೇತ್ರ ಮಂಗಳೂರು ವಿಭಾಗವಾಗಿತ್ತು. ಅನಂತರ ಅವರು ಕರ್ನಾಟಕ ಪ್ರಾಂತ ಮತ್ತು ಅನಂತರ ಇಡೀ ದಕ್ಷಿಣ ಭಾರತದಾದ್ಯಂತ ಸಕ್ರಿಯರಾಗಿ ಸಂಘದ ಕಾರ್ಯವನ್ನು 1986 ರವರೆಗೆ ನಿರ್ವಹಿಸಿದರು.

ಶ್ರೀ ಹೊ. ವೆ. ಶೇಷಾದ್ರಿಯವರು ಶ್ರೀ ಯಾದವರಾವ್ ಜೋಶಿ ಅವರಿಂದ ತುಂಬಾ ಪ್ರಭಾವಿತರಾಗಿದ್ದರು. ಅವರು 1987 ರಿಂದ 2000 ದವರೆಗೆ ಸಂಘದ ಸರಕಾರ್ಯವಾಹರಾಗಿದ್ದರು.

ಅವರ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಅವರು ಪ್ರತಿದಿನವೂ ಪತ್ರಿಕೆಗಳಿಗೆ ಬರೆಯಲು ಸಮಯವನ್ನು ಮೀಸಲಿಡುತ್ತಿದ್ದರು. ಅವರು ಕನ್ನಡದ ವಿಕ್ರಮ ವಾರಪತ್ರಿಕೆ, ಉತ್ಥಾನ ಮಾಸಪತ್ರಿಕೆ, ದೆಹಲಿಯ ಪಾಂಚಜನ್ಯ ಮತ್ತು ಆರ್ಗನೈಸರ್ ವಾರಪತ್ರಿಕೆ ಮತ್ತು ಲಕ್ನೋದ ರಾಷ್ಟ್ರಧರ್ಮ ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಓದುಗರು ಅವರ ಲೇಖನಗಳಿಗಾಗಿ ಕಾತರದಿಂದ ಕಾಯುತ್ತಿದ್ದರು. ಸಂಘದ ಕಾರ್ಯ ಚಟುವಟಿಕೆ ಮತ್ತು ಇತರ ಹಿಂದೂ ಸಾಹಿತ್ಯದ ಪ್ರಕಟಣೆಗಾಗಿ ಶ್ರೀ ಯಾದವರಾವ್ ಜೋಶಿ ಅವರ ನಿರ್ದೇಶನದಲ್ಲಿ ಬೆಂಗಳೂರಿನಲ್ಲಿ ‘ರಾಷ್ಟ್ರೋತ್ಥಾನ ಪರಿಷತ್’ ನ್ನು ಸ್ಥಾಪಿಸಿದರು. ಅವರು ಸೇವಾ ಕಾರ್ಯಗಳ ವಿಸ್ತರಣೆ ಮತ್ತು ಸಂಸ್ಕೃತದ ಉನ್ನತಿಗಾಗಿ ವ್ಯಾಪಕವಾಗಿ ಶ್ರಮಿಸಿದರು.

ಶ್ರೀ ಹೊ. ವೆ. ಶೇಷಾದ್ರಿಯವರು ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪುಸ್ತಕಗಳನ್ನು ಬರೆದಿದ್ದಾರೆ. ಎರಡನೇ ಸರಸಂಘಚಾಲಕ ಶ್ರೀ ಗುರೂಜಿಯವರ ಭಾಷಣಗಳನ್ನು ‘ಬಂಚ್ ಆಫ್ ಥಾಟ್ಸ್’ ಎಂಬ ಶೀರ್ಷಿಕೆಯ ರೂಪದಲ್ಲಿ ಸಂಕಲಿಸಿದವರಲ್ಲಿ ಅವರು ಮೊದಲಿಗರು. ಇಂದಿಗೂ ಅದರ ಆವೃತ್ತಿಗಳು ಪ್ರತಿ ವರ್ಷವೂ ಮುದ್ರಣವಾಗುತ್ತಿದೆ. ಇದಲ್ಲದೇ ಅವರ ಪ್ರಮುಖ ಕೃತಿಗಳು : ಕನ್ನಡದಲ್ಲಿ ಕೃತಿ ರೂಪ ಸಂಘ ದರ್ಶನ, ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ವಿಭಜನೆಯ ದುರಂತ ಕಥೆ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ‘ಭುಗಿಲು’, ಲಲಿತ ಪ್ರಬಂಧಗಳ ಸಂಗ್ರಹ ‘ತೋರ್ಬೆರಳು,’ ಇಂಗ್ಲಿಷ್‌ನಲ್ಲಿ-ಬಂಚ್ ಆಫ್ ಥಾಟ್ಸ್, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್, ಆರ್‌ಎಸ್‌ಎಸ್ – ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ-ಎ ಸೋಷಿಯಲ್ ಇಂಪರೆಟಿವ್ ಮುಂತಾದುವು. ಹಿಂದಿ ಮತ್ತು ಮರಾಠಿಯಲ್ಲಿ ಕೃತಿ ರೂಪ ಸಂಘ ದರ್ಶನ, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಮುಂತಾದವು ಪ್ರಮುಖವೆನಿಸಿವೆ. ಕೃತಿರೂಪ್ ಸಂಘ ದರ್ಶನ್, ಯುಗಾವತಾರ್, ಔರ್ ದೇಶ್ ಬನುತ್ ಗಯಾ, ನಾನ್ಯಾಹ್ ಪಂಥ, ವೈಶ್ಯಾನ್, ದಿ ವೇ, ಹಿಂದೂಸ್ ಅಬ್ರಾಡ್, ಉಜಾಲೆ ಕಿ ಓರ್ ಹೀಗೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. 1982 ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ‘ತೋರ್ಬೆರಳು’ ಗೆ ಪ್ರಶಸ್ತಿ ಲಭಿಸಿತು.

ಶೇಷಾದ್ರಿಯವರ ಭಾಷಣ ಶೈಲಿಯೂ ಅದ್ಭುತವಾಗಿತ್ತು. ಅವರು ಸರಳ ಮತ್ತು ಆಸಕ್ತಿದಾಯಕ ಉದಾಹರಣೆಗಳನ್ನು ನೀಡುವ ಮೂಲಕ ಕೇಳುಗರಿಗೆ ತಮ್ಮ ಸಂದೇಶವನ್ನು ತಿಳಿಸುತ್ತಿದ್ದರು. 1984ರಲ್ಲಿ, ಅವರನ್ನು ನ್ಯೂಯಾರ್ಕ್ (ಯುಎಸ್ಎ) ನಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನ ಮತ್ತು ಬ್ರಾಡ್ಫೋರ್ಡ್ (ಯುಕೆ) ನಲ್ಲಿ ನಡೆದ ಹಿಂದೂ ಸಂಗಮಕ್ಕೆ ವಿಶೇಷವಾಗಿ ಆಹ್ವಾನಿಸಲಾಯಿತು. ಅಲ್ಲಿನ ಜನರು ಅವರ ಭಾಷಣಗಳಿಂದ ತುಂಬಾ ಪ್ರಭಾವಿತರಾದರು.

ಅವರು ಒಬ್ಬ ಧ್ಯೇಯಯಾತ್ರಿಯೂ ಹೌದು; ಧ್ಯೇಯಮಾರ್ಗದ ಪಥಿಕರಿಗೆ ಮಾರ್ಗದರ್ಶಿ ಮತ್ತು ದಾರಿದೀಪವೂ ಹೌದು. ಅವರಿಂದ ಕಲಿತಿದ್ದು ಪಡೆದಿದ್ದು ಅಪಾರ. ಈ ಬದುಕಿನಲ್ಲಿ ತೀರಿಸಲಾಗದ ಋಣ ಅದು. ಅವರ ಸ್ಮೃತಿಗಿದೋ ಶತನಮನ  – ಶ್ರೀ ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹರು, ರಾಷ್ಟ್ರೀಯ ಸ್ವಯಂಸೇವಕ ಸಂಘ

ಅತಿಯಾದ ದೈಹಿಕ ಮತ್ತು ಮಾನಸಿಕ ಶ್ರಮದಿಂದಾಗಿ, ಅವರ ದೇಹವು ಬಹಳ ಆಯಾಸಗೊಂಡಿತ್ತು. ಸಂಘದ ನಾಲ್ಕನೇ ಸರಸಂಘಚಾಲಕ ರಾಜು ಭಯ್ಯಾರ ಅನಾರೋಗ್ಯದ ಕಾರಣ ಅವರು ನಿವೃತ್ತಿ ಹೊಂದಲು ಬಯಸಿದಾಗ, ಎಲ್ಲಾ ಹಿರಿಯ ಕಾರ್ಯಕರ್ತರು ಶ್ರೀಶೇಷಾದ್ರಿಯವರೇ ಸರಸಂಘಚಾಲಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಬಯಸಿದ್ದರು. ಆದರೆ ಅವರು ತಮ್ಮ ಅನಾರೋಗ್ಯದ ಕಾರಣದಿಂದಾಗಿ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಲಿಲ್ಲ. ಆದ್ದರಿಂದ ಈ ಜವಾಬ್ದಾರಿಯನ್ನು ಯಾರಾದರೂ ಸಮರ್ಥರಿಗೆ ನೀಡಬೇಕೆಂದು ಹೇಳಿದರು. ಅಂತಿಮವಾಗಿ ಈ ಜವಾಬ್ದಾರಿಯನ್ನು ಅಂದು ಸಹ-ಸರಕಾರ್ಯವಾಹರಾಗಿದ್ದ ಶ್ರೀ ಸುದರ್ಶನ್ ಜೀಯವರಿಗೆ ನೀಡಲಾಯಿತು. ಶ್ರೀ ಶೇಷಾದ್ರಿಯವರು ಸಹ-ಸರಕಾರ್ಯವಾಹರಾಗಿ ಅನಂತರ ಅಖಿಲ ಭಾರತೀಯ ಪ್ರಚಾರ ಪ್ರಮುಖರಾಗಿ ನಿರಂತರವಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು.

ತಮ್ಮ ಕೊನೆಯ ದಿನಗಳಲ್ಲಿ ಅವರು ಬೆಂಗಳೂರಿನ ಕಾರ್ಯಾಲಯದಲ್ಲಿ ವಾಸಿಸುತ್ತಿದ್ದರು. ಅವರು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಈ ದೇಹದಿಂದ ಸಂಘದ ಕೆಲಸ ಇನ್ನು ಮುಂದೆ ಸಾಧ್ಯವಿಲ್ಲ ಎಂದು ಅವರಿಗೆ ಅನಿಸಿದಾಗ, ಅವರು ಎಲ್ಲಾ ಜೀವರಕ್ಷಕ ಸಾಧನಗಳನ್ನು ತೆಗೆದುಹಾಕಿರೆಂದು ಹೇಳಿದರು. ಅವರ ಆಶಯವನ್ನು ಗೌರವಿಸಿ, ಅವರನ್ನು ಸಂಘದ ಕಾರ್ಯಾಲಯಕ್ಕೆ ಕರೆತರಲಾಯಿತು. ಅವರು ಆಗಸ್ಟ್ 14, 2005 ರ ಸಂಜೆ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.